
2004 ರಲ್ಲಿ ಜಪಾನ್, ಇಂಡೋನೇಷ್ಯಾ, ಭಾರತ ಸೇರಿದಂತ ವಿವಿಧ ದೇಶಗಳ ಕರಾವಳಿಗೆ ಬಡಿದ ಸುನಾಮಿಯನ್ನು ಯಾರೂ ಮರೆಯಲು ಸಾಧ್ಯವಿಲ್ಲ, ಅದೊಂದು ಆ ದಶಕದ ದೊಡ್ಡ ಪ್ರಾಕೃತಿಕ ವಿಕೋಪವೆನಿಸಿತು. ಅನೇಕರು ಈ ದುರಂತದಲ್ಲಿ ತಮ್ಮವರನ್ನು ಕಳೆದುಕೊಂಡರು ಭಾರತದಲ್ಲಿ ಸುಮಾರು 10 ಸಾವಿರಕ್ಕೂ ಹೆಚ್ಚು ಜನ ಈ ದುರಂತದಲ್ಲಿ ಪ್ರಾಣ ಕಳೆದುಕೊಂಡಿದ್ದರು. ದಕ್ಷಿಣದ ರಾಜ್ಯದ ತಮಿಳುನಾಡಿನ ಕರಾವಳಿಗೆ ಇದು ಭಾರಿ ಆಘಾತ ನೀಡಿತ್ತು. 20 ವರ್ಷಗಳ ಹಿಂದೆ ಸಂಭವಿಸಿದಂತಹ ಈ ಸುನಾಮಿಯಲ್ಲಿ ಐಎಎಸ್ ಅಧಿಕಾರಿಯೊಬ್ಬರು ಪುಟ್ಟ ಹುಡುಗಿಯೊಬ್ಬಳನ್ನು ರಕ್ಷಣೆ ಮಾಡಿದ್ದರು. ಆ ಹುಡುಗಿ ಇಂದು ಮದುವೆ ವಯಸ್ಸಿಗೆ ಬಂದು ನಿಂತಿದ್ದು, ತಾವು ರಕ್ಷಿಸಿದ ಆ ಹುಡುಗಿಯನ್ನು ಸ್ವತಃ ಆ ಐಎಎಸ್ ಅಧಿಕಾರಿ ಮದುವೆ ಮಾಡಿ ಕೊಡುವ ಮೂಲಕ ಕನ್ಯಾದಾನದಂತಹ ಮಹತ್ಕಾರ್ಯ ಮಾಡಿದ್ದಾರೆ.
ಇದೊಂದು ಹೃದಯವನ್ನು ಬೆಚ್ಚಗಾಗಿಸುವ ಭಾವುಕ ಕತೆ. ಐಎಎಸ್ ಅಧಿಕಾರಿ ರಾಧಾಕೃಷ್ಣನ್ ಅವರು 2004 ಸುನಾಮಿಯಲ್ಲಿ ಬದುಕುಳಿದ ತಮಿಳುನಾಡಿನ ಮೀನಾ ಎಂಬಾಕೆಯ ವಿವಾಹವನ್ನು ತಂದೆ ತಾಯಿಯಂತೆ ತಾನೇ ಮುಂದೆ ನಿಂತು ನೆರವೇರಿಸಿದ್ದಾರೆ. 2004 ರ ಡಿಸೆಂಬರ್ 26 ರಂದು ತಮಿಳುನಾಡಿ ಕರಾವಳಿಗೆ ಅಪ್ಪಳಿಸಿದ ಸುನಾಮಿ ಅಲ್ಲಿ ಸುಮಾರು 6,000 ಕ್ಕೂ ಹೆಚ್ಚು ಜೀವಗಳನ್ನು ಬಲಿ ಪಡೆದಿತ್ತು. ಈ ವೇಳೆ ಜಿಲ್ಲಾಧಿಕಾರಿಯಾಗಿ ಐಎಎಸ್ ಅಧಿಕಾರಿ ರಾಧಾಕೃಷ್ಣನ್ ಅಲ್ಲಿ ಪರಿಹಾರ ಕಾರ್ಯಗಳಲ್ಲಿ ಪ್ರಮುಖ ಪಾತ್ರ ವಹಿಸಿದರು. ಇದೇ ವೇಳೆ ಅಲ್ಲಿನ ಕೀಚನ್‌ಕುಪ್ಪಂ ಪ್ರದೇಶದ ಅವಶೇಷಗಳ ಬಳಿ ಪುಟ್ಟ ಮಗು ಮೀನಾ ಅಳುವುದು ಕೇಳಿಸಿ ಸ್ಥಳಕ್ಕೆ ತೆರಳಿದ ಅವರು ಆಕೆಯ ರಕ್ಷಣೆ ಮಾಡಿದ್ದರು.
ಈ ದುರಂತದಲ್ಲಿ ಎಲ್ಲವನ್ನು ಎಲ್ಲರನ್ನು ಕಳೆದುಕೊಂಡಿದ್ದ ಮೀನಾಳನ್ನು ನಾಗಪಟ್ಟಣಂನಲ್ಲಿರುವ 'ಅನ್ನೈ ಸತ್ಯ' ಸರ್ಕಾರಿ ಮಕ್ಕಳ ಮನೆಯಲ್ಲಿ ಇರಿಸಲಾಗಿತ್ತು. ಪುಟ್ಟ ಬಾಲಕಿ ಮೀನಾಗೆ ಅಧಿಕಾರಿ ರಾಧಾಕೃಷ್ಣನ್ ಮತ್ತು ಅವರ ಪತ್ನಿ ಕೃತಿಕಾ ಅವರಿಂದ ಒಳ್ಳೆಯ ಬೆಂಬಲ ಸಿಕ್ಕಿತ್ತು. ಆ ಪ್ರದೇಶದಿಂದ ವರ್ಗಾವಣೆಯಾದ ನಂತರವೂ ಅಧಿಕಾರಿ ದಂಪತಿ ಮೀನಾ ಅವರಿಗೆ ಶಿಕ್ಷಣ ಹಾಗೂ ವೃತ್ತಿ ಮಾರ್ಗದರ್ಶನ ನೀಡುವುದನ್ನು ಮುಂದುವರೆಸಿದರು, ಆಕೆಯ ಪ್ರತಿಯೊಂದು ಪ್ರಮುಖ ಮೈಲಿಗಲ್ಲುಗಳಲ್ಲೂ ಅವರು ಹಾಜರಿರುವುದನ್ನು ಖಚಿತಪಡಿಸಿಕೊಂಡರು. ಹೀಗಾಗಿ ಮೀನಾ ಇಂದು ನರ್ಸ್ ಆಗಿ ಬದುಕು ಕಂಡುಕೊಂಡಿದ್ದಾರೆ.
ಘಟನೆ ನಡೆದು 20 ವರ್ಷಗಳೇ ಕಳೆದಿವೆ. ಪುಟ್ಟ ಬಾಲಕಿಯಾಗಿದ್ದ ಮೀನಾ ಹರೆಯದ ಯುವತಿಯಾಗಿದ್ದು, ಮದುವೆಯಾಗಲು ನಿರ್ಧರಿಸಿದಾಗ, ರಾಧಾಕೃಷ್ಣನ್ ಅವರು ಶ್ರೀ ನೆಲ್ಲುಕ್ಕಡೈ ಮಾರಿಯಮ್ಮನ್ ದೇವಸ್ಥಾನದಲ್ಲಿ ಆಕೆಯ ವಿವಾಹವನ್ನು ನೆರವೇರಿಸಲು ನಾಗಪಟ್ಟಣಂಗೆ ಪ್ರಯಾಣ ಬೆಳೆಸಿದರು. ಮಕ್ಕಳ ಮನೆಯಲ್ಲಿ ಮೀನಾ ಅವರೊಂದಿಗೆ ವಾಸಿಸುತ್ತಿದ್ದ ಮತ್ತು ಅಧ್ಯಯನ ಮಾಡಿದ ಹಲವಾರು ಈ ಸಮಾರಂಭದಲ್ಲಿ ಭಾಗವಹಿಸಿ ನವಜೋಡಿಗೆ ಶುಭ ಹಾರೈಸಿದರು.
ಇನ್ಸ್ಟಾಗ್ರಾಮ್‌ನಲ್ಲಿ ಮೀನಾಳ ಮದುವೆ ಫೋಟೋಗಳನ್ನು ಹಂಚಿಕೊಂಡ ಐಎಎಸ್ ಅಧಿಕಾರಿ, 'ಇಂದು ನಾಗಪಟ್ಟಣಂನಲ್ಲಿ ಮೀನಾ ಮತ್ತು ಮಣಿಮಾರನ್ ಅವರ ವಿವಾಹದ ಭಾಗವಾಗಲು ಸಂತೋಷವಾಗಿದೆ. ನಾಗೈ ಮಕ್ಕಳೊಂದಿಗೆ ನಮ್ಮ ಸುನಾಮಿ ನಂತರದ ಪ್ರಯಾಣವು ಯಾವಾಗಲೂ ಭರವಸೆಯದ್ದಾಗಿದೆ ಮತ್ತು ಮೀನಾ ಹಾಗೂ ಸೌಮ್ಯ ಬದುಕುಳಿಯುವಿಕೆಯ ಉಜ್ವಲ ಉದಾಹರಣೆಗಳಾಗಿವೆ. ಅವರು ಬೆಳೆದು, ಅಧ್ಯಯನ ಮಾಡಿ, ಪದವಿ ಪಡೆದು, ಈಗ ಸುಂದರ ಜೀವನದಲ್ಲಿ ನೆಲೆಗೊಳ್ಳುವುದನ್ನು ನೋಡುವುದು ಆನಂದದ ಕಣ್ಣೀರನ್ನು ತರುತ್ತದೆ. ಮರೆಯಲಾಗದ ದಿನ, ರಕ್ತಸಂಬಂಧಗಳನ್ನು ಮೀರಿ ಬೆಳೆದ ಕುಟುಂಬ. ಇಂದಿನ ಕ್ಷಣಗಳನ್ನು ಮತ್ತು ನಾವೆಲ್ಲರೂ ಎಷ್ಟು ದೂರ ಬಂದಿದ್ದೇವೆ ಎಂಬುದನ್ನು ನೆನಪಿಸುವ ಹಿಂದಿನ ಕ್ಷಣಗಳನ್ನು ಹಂಚಿಕೊಳ್ಳುತ್ತಿದ್ದೇನೆ ಎಂದು ಬರೆದಿರುವ ಅವರು ತಾವು ಪುಟ್ಟ ಮೀನಾಳನ್ನು ಎತ್ತಿಕೊಂಡಿರುವ ಹಳೆಯ ಫೋಟೋಗಳನ್ನು ಸಹ ಇನ್ಸ್ಟಾದಲ್ಲಿ ಶೇರ್ ಮಾಡಿದ್ದಾರೆ.
ಐಎಎಸ್ ಅಧಿಕಾರಿಯ ಈ ಕಾರ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಶ್ಲಾಘನೆ ವ್ಯಕ್ತವಾಗಿದೆ ಅನೇಕರು ಐಎಎಸ್ ಅಧಿಕಾರಿಗೆ ನಿಜವಾದ ಹೀರೋ ಎಂದು ಶ್ಲಾಘಿಸಿದ್ದಾರೆ. ಮಾನವೀಯತೆ ಬೆಳಗುತ್ತಿರುವುದಕ್ಕೆ ಒಂದು ಉತ್ತಮ ಉದಾಹರಣೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ