
ಚೆನ್ನೈ (ಜೂ.30): ಮಹತ್ವದ ಬೆಳವಣಿಗೆಯೊಂದರಲ್ಲಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೊಳಪಟ್ಟಿದ್ದ ಸಚಿವ ಸೆಂಥಿಲ್ ಬಾಲಾಜಿ ಅವರನ್ನು ತಮಿಳುನಾಡು ರಾಜ್ಯಪಾಲ ಆರ್.ಎನ್. ರವಿ ಗುರುವಾರ ವಜಾಗೊಳಿಸಿದ್ದರು. ರಾಜ್ಯಪಾಲರ ಈ ಕ್ರಮಕ್ಕೆ ಡಿಎಂಕೆ ಮತ್ತು ವಿಪಕ್ಷಗಳು ಭಾರಿ ಆಕ್ಷೇಪ ವ್ಯಕ್ತಪಡಿಸಿದ ಬೆನ್ನಲ್ಲೇ ತಮ್ಮ ನಿರ್ಧಾರಕ್ಕೆ ತಡೆ ನೀಡಿರುವುದಾಗಿ ರಾಜ್ಯಪಾಲರು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರಿಗೆ ಮಾಹಿತಿ ನೀಡಿದ್ದಾರೆ. ಅಲ್ಲದೆ ಅಟಾರ್ನಿ ಜನರಲ್ ಅಭಿಪ್ರಾಯ ಪಡೆದು ಮುಂದಿನ ನಿರ್ಧಾರ ತಿಳಿಸುವುದಾಗಿ ಮುಖ್ಯಮಂತ್ರಿಗೆ ಮಾಹಿತಿ ನೀಡಿದ್ದಾರೆ.
ದಿಢೀರ್ ವಜಾ: ಹಲವು ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿರುವುದರಿಂದ ಸೆಂಥಿಲ್ ಬಾಲಾಜಿ ಅವರನ್ನು ವಜಾ ಮಾಡಿರುವುದಾಗಿ ರಾಜ್ಯಪಾಲರು ಘೋಷಣೆ ಮಾಡಿದ್ದರು. ಈ ಕುರಿತಾಗಿ ಹೇಳಿಕೆ ಬಿಡುಗಡೆ ಮಾಡಿದ್ದ ರಾಜಭವನ, ‘ಸೆಂಥಿಲ್ ಬಾಲಾಜಿ ಅವರು ಹಲವು ಗಂಭೀರ ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ಇದರಲ್ಲಿ ಭ್ರಷ್ಟಾಚಾರ ಮತ್ತು ಅಕ್ರಮ ಹಣ ವರ್ಗಾವಣೆ ಪ್ರಕರಣಗಳು ಸೇರಿವೆ. ಇದು ಅವರ ಸಚಿವ ಸ್ಥಾನಕ್ಕೆ ಕುಂದು ತರುವ ಹಿನ್ನೆಲೆಯಲ್ಲಿ, ಅಲ್ಲದೇ ಅವರನ್ನು ಸಚಿವ ಸ್ಥಾನದಲ್ಲಿ ಮುಂದುವರೆಸುವುದು ನ್ಯಾಯಯುತ ತನಿಖೆ ಸೇರಿದಂತೆ ಕಾನೂನು ಪ್ರಕ್ರಿಯೆಗಳ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗಲಿದೆ. ಇದು ಅಂತಿಮವಾಗಿ ರಾಜ್ಯದಲ್ಲಿ ಸಾಂವಿಧಾನಿಕ ಪ್ರಕ್ರಿಯೆಯ ತೊಡಕಿಗೆ ಕಾರಣವಾಗಬಹುದು. ಈ ಎಲ್ಲಾ ಅಂಶಗಳ ಹಿನ್ನೆಯಲ್ಲಿ ಅವರನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ವಜಾ ಮಾಡಲಾಗಿದೆ’ ಎಂದು ತಿಳಿಸಿತ್ತು.
ಬಂಧಿತ ಸೆಂಥಿಲ್ ಬಾಲಾಜಿಗೆ ಮತ್ತೊಂದು ಶಾಕ್, ಮಂತ್ರಿ ಮಂಡಲದಿಂದ ವಜಾಗೊಳಿಸಿದ ರಾಜ್ಯಪಾಲ!
ರಾಜ್ಯಪಾಲರ ಈ ನಡೆಯ ವಿರುದ್ಧ ಕಿಡಿಕಾರಿದ್ದ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್, ಸಂಪುಟದಿಂದ ಸಚಿವರನ್ನು ವಜಾ ಮಾಡುವ ಯಾವುದೇ ಅಧಿಕಾರ ರಾಜ್ಯಪಾಲರಿಗಿಲ್ಲ. ಈ ನಿರ್ಧಾರದ ವಿರುದ್ಧ ಕಾನೂನು ಹೋರಾಟ ನಡೆಸುವುದಾಗಿ ಹೇಳಿದರು. ಇದಲ್ಲದೇ ರಾಜ್ಯಪಾಲರ ನಡೆಯ ವಿರುದ್ಧ ವಿರೋಧಪಕ್ಷ ಬಿಜೆಪಿ ಸೇರಿದಂತೆ ಹಲವು ಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿದ್ದು, ಇದು ಸಂವಿಧಾನಬಾಹಿರ ಕ್ರಮ ಮತ್ತು ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ಆರೋಪಿಸಿದವು. ಕಳೆದ ಮೂರ್ನಾಲ್ಕು ದಶಕದಲ್ಲಿ ಸಚಿವರನ್ನು ರಾಜ್ಯಪಾಲರು ಸರ್ಕಾರದ ನಿರ್ದೇಶನ ಇಲ್ಲದೇ ವಜಾ ಮಾಡಿದ್ದನ್ನು ನಾವು ನೋಡೆ ಇಲ್ಲ. ಇದೊಂದು ಅಪರೂಪದ ಪ್ರಕರಣ ಎಂದು ರಾಜಕೀಯ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಇನ್ನು ಕೆಲವು ಕಾನೂನು ತಜ್ಞರು, ಮುಖ್ಯಮಂತ್ರಿಗಳ ಜೊತೆ ಸಮಾಲೋಚಿಸದೆಯೇ ಹೀಗೆ ಸಚಿವರ ವಜಾ ಅಧಿಕಾರ ರಾಜ್ಯಪಾಲರಿಗೆ ಇದೆ. ಆದರೆ ಅದು ತೀರಾ ಅಪರೂಪದ ಪ್ರಕರಣದಲ್ಲಿ ಮಾತ್ರ ಎಂದಿದ್ದಾರೆ.
ಬಂಧನಕ್ಕೆ ಒಳಪಟ್ಟ ಕೆಲವೇ ಗಂಟೆಗಳಲ್ಲಿ ತಮಿಳುನಾಡು ಸಚಿವನಿಗೆ ತುರ್ತು ಶಸ್ತ್ರಚಿಕಿತ್ಸೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ