70 ಸಾವಿರ ಅಂತರದಿಂದ ಗೆದ್ದ ಕ್ಷೇತ್ರದಲ್ಲೇ ಸ್ಟಾಲಿನ್‌ಗೆ ಸೋಲು, ಸಿಎಂಗೆ ಗುನ್ನ ಇಟ್ಟ ಹಳೇ ಆಪ್ತ

Published : May 04, 2026, 05:06 PM IST
mk stalin

ಸಾರಾಂಶ

70 ಸಾವಿರ ಅಂತರದಿಂದ ಗೆದ್ದ ಕ್ಷೇತ್ರದಲ್ಲೇ ಸ್ಟಾಲಿನ್‌ಗೆ ಸೋಲು, ಸಿಎಂಗೆ ಗುನ್ನ ಇಟ್ಟ ಹಳೇ ಆಪ್ತ, ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್ ಅವರು ಕೊಳತ್ತೂರು ಕ್ಷೇತ್ರದಲ್ಲಿ ಅನಿರೀಕ್ಷಿತ ಸೋಲು ಕಂಡಿದ್ದಾರೆ. 

ಚೆನ್ನೈ (ಮೇ.04) ತಮಿಳುನಾಡು ಚುನಾವಣೆಯಲ್ಲಿ ಅಚ್ಚರಿ ಜೊತೆ ಬಿರುಗಾಳಿ ಎದ್ದಿದೆ. ಡಿಎಂಕೆ ಪಾತಾಳಕ್ಕೆ ಕುಸಿದಿದ್ದರೆ, ನಟ ವಿಜಯ್ ಜೊಸೆಫ್ ಅವರ ಟಿವಿಕೆ ಪಕ್ಷ ಸರ್ಕಾರ ರಚಿಸುವತ್ತ ಹೆಜ್ಜೆ ಇಟ್ಟಿದೆ. ಡಿಎಂಕೆಗೆ ವಿಜಯ್ ಅವರ ಟಿವಿಕೆ ನೀಡಿದ ಹೊಡೆತದಿಂದ ಮೇಲೇಳಲು ಸದ್ಯಕ್ಕೆ ಸಾಧ್ಯವಿಲ್ಲ. ಕಾರಣ ಅಬ್ಬರಿಸಿ ಬೊಬ್ಬಿರಿದ್ದ ಮುಖ್ಯಮಂತ್ರಿ, ಡಿಎಂಕೆ ನಾಯಕ ಎಂಕೆ ಸ್ಟಾಲಿನ್ ಕೊಳತ್ತೂರು ಕ್ಷೇತ್ರದಲ್ಲಿ ಸೋಲು ಕಂಡಿದ್ದಾರೆ. ಇದೇ ಕ್ಷೇತ್ರದಲ್ಲಿ ಕಳೆದ ಬಾರಿ ಬರೋಬ್ಬರಿ 70 ಸಾವಿರ ಮತಗಳ ಅಂತರದಿಂದ ಸ್ಟಾಲಿನ್ ಗೆದ್ದು ಬೀಗಿದ್ದರು. ಆದರೆ ಈ ಬಾರಿ ಸ್ಟಾಲಿನ್ ಹಳೇ ಆಪ್ತನೇ ಇಲ್ಲಿ ಗೆಲುವು ದಾಖಲಿಸಿದ್ದಾರೆ.

ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಡಿಎಂಕೆ ಅಧ್ಯಕ್ಷ ಹಾಗೂ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಕೊಳತ್ತೂರು ಕ್ಷೇತ್ರದಲ್ಲಿ ಅಚ್ಚರಿಯ ಸೋಲು ಕಂಡಿದ್ದಾರೆ. ನಟ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಅಭ್ಯರ್ಥಿ ವಿ.ಎಸ್. ಬಾಬು ಭರ್ಜರಿ ಗೆಲುವು ದಾಖಲಿಸಿದ್ದು ಮಾತ್ರವಲ್ಲ, ಸ್ಟಾಲಿನ್‌ರನ್ನು ಸೋಲಿಸಿ ಇತಿಹಾಸ ಬರೆದಿದ್ದಾರೆ. 2021ರಲ್ಲಿ ಇದೇ ಕ್ಷೇತ್ರದಲ್ಲಿ 70,000ಕ್ಕೂ ಹೆಚ್ಚು ಮತಗಳ ಭರ್ಜರಿ ಅಂತರದಿಂದ ಗೆದ್ದಿದ್ದ ಸ್ಟಾಲಿನ್‌ಗೆ ಈ ಸೋಲು ಭಾರೀ ಮುಖಭಂಗ ತಂದಿದೆ. ಸ್ವತಃ ಮುಖ್ಯಮಂತ್ರಿಯ ಸೋಲು ತಮಿಳುನಾಡು ರಾಜಕೀಯ, ಡಿಎಂಕೆ ವಲಯ ಹಾಗೂ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ.

ಸ್ಟಾಲಿನ್ ರಾಜಕೀಯ ಜೀವನದಲ್ಲಿ ನಾಲ್ಕನೇ ಸೋಲು

ಸ್ಟಾಲಿನ್ ರಾಜಕೀಯ ಜೀವನದ ನಾಲ್ಕನೇ ಚುನಾವಣಾ ಸೋಲಾಗಿದೆ. ಅಚ್ಚರಿ ಎಂದರೆ, ಈ ಬಾರಿ ಸ್ಟಾಲಿನ್‌ರನ್ನು ಸೋಲಿಸಿದ್ದು ಅವರದೇ ಮಾಜಿ ಆಪ್ತ ಹಾಗೂ ಡಿಎಂಕೆಯ ಮಾಜಿ ಶಾಸಕ ವಿ.ಎಸ್. ಬಾಬು. 2011ರಲ್ಲಿ ಸ್ಟಾಲಿನ್ ಮೊದಲ ಬಾರಿಗೆ ಕೊಳತ್ತೂರಿನಿಂದ ಸ್ಪರ್ಧಿಸಿದಾಗ, ಬಾಬು ಅವರು ಡಿಎಂಕೆ ಉತ್ತರ ಚೆನ್ನೈ ಕಾರ್ಯದರ್ಶಿಯಾಗಿ ಕ್ಷೇತ್ರದ ಚುನಾವಣಾ ಉಸ್ತುವಾರಿ ಹೊತ್ತಿದ್ದರು. ಆದರೆ, ಆ ಚುನಾವಣೆಯಲ್ಲಿ ಸ್ಟಾಲಿನ್ ಕೇವಲ 2,700 ಮತಗಳ ಅಂತರದಿಂದ ಗೆದ್ದಿದ್ದರಿಂದ, ಬಾಬು ಅವರನ್ನು ಹುದ್ದೆಯಿಂದ ತೆಗೆದುಹಾಕಲಾಗಿತ್ತು. ಸ್ಟಾಲಿನ್ ಅಸಮಾಧಾನಕ್ಕೆ ಗುರಿಯಾದ ನಂತರ ಬಾಬು ಡಿಎಂಕೆ ತೊರೆದು ಎಐಎಡಿಎಂಕೆಗೆ ಸೇರಿದ್ದರು. ನಂತರ, ಇದೇ ಫೆಬ್ರವರಿಯಲ್ಲಿ ಅವರು ವಿಜಯ್ ಅವರ ಪಕ್ಷಕ್ಕೆ ಸೇರ್ಪಡೆಯಾಗಿದ್ದರು. ಇದೀಗ ಸ್ಟಾಲಿನ್‌ರನ್ನು ಸೋಲಿಸುವ ಮೂಲಕ ಬಾಬು ಅವರು ವಿಧಾನಸಭೆಗೆ ಕಾಲಿಡುತ್ತಿದ್ದು, ಇದು ಅವರ 'ಮಧುರ ಸೇಡು' ಎಂದೇ ಬಣ್ಣಿಸಲಾಗುತ್ತಿದೆ.

ಜನನಾಯಕನಾದ ವಿಜಯ್

ಇನ್ನೊಂದೆಡೆ, ತಮಿಳುನಾಡಿನಲ್ಲಿ ನಟ ವಿಜಯ್ ಅವರ ಟಿವಿಕೆ ಪಕ್ಷ ಅಧಿಕಾರದತ್ತ ದಾಪುಗಾಲಿಡುತ್ತಿದೆ. ಲಭ್ಯವಾದ ಇತ್ತೀಚಿನ ಮಾಹಿತಿಯ ಪ್ರಕಾರ, ಒಟ್ಟು 234 ಸ್ಥಾನಗಳ ಪೈಕಿ 108 ಸ್ಥಾನಗಳಲ್ಲಿ ಟಿವಿಕೆ ಅಭ್ಯರ್ಥಿಗಳು ಗೆಲುವು ಅಥವಾ ಮುನ್ನಡೆ ಸಾಧಿಸಿದ್ದಾರೆ. ಡಿಎಂಕೆ 60 ಸ್ಥಾನಗಳಿಗೆ ಕುಸಿದಿದ್ದರೆ, ಎಐಎಡಿಎಂಕೆ 65 ಸ್ಥಾನಗಳಲ್ಲಿ ಮುನ್ನಡೆಯಲ್ಲಿದೆ. ಮೊದಲ ಸುತ್ತಿನಿಂದಲೇ ಟಿವಿಕೆ ಭಾರೀ ಮುನ್ನಡೆ ಸಾಧಿಸುತ್ತಿದ್ದಂತೆ, ಡಿಎಂಕೆ ಕೇಂದ್ರ ಕಚೇರಿ ಬಿಕೋ ಎನ್ನಲಾರಂಭಿಸಿತು. ಚೆನ್ನೈನಲ್ಲಿರುವ ಡಿಎಂಕೆ ಪ್ರಧಾನ ಕಚೇರಿ 'ಅಣ್ಣಾ ಅರಿವಾಲಯಂ'ನಲ್ಲಿ ಅನಿರೀಕ್ಷಿತ ಸೋಲಿನಿಂದಾಗಿ, ಬೆಳಿಗ್ಗೆ ವಿಜಯೋತ್ಸವಕ್ಕೆ ಸಿದ್ಧಪಡಿಸಿದ್ದ ಪೆಂಡಾಲ್‌ಗಳು ಮತ್ತು ಕುರ್ಚಿಗಳನ್ನು ತೆರವುಗೊಳಿಸುವ ದೃಶ್ಯ ಕಂಡುಬಂತು.

ಸಾಮಾನ್ಯವಾಗಿ ಚುನಾವಣಾ ಫಲಿತಾಂಶದ ದಿನದಂದು ಜನರಿಂದ ಗಿಜಿಗುಡುತ್ತಿದ್ದ ಪಕ್ಷದ ಕಚೇರಿ ಈಗ ಬಹುತೇಕ ಖಾಲಿಯಾಗಿದೆ.. ಮೊದಲ ಚುನಾವಣೆಯಲ್ಲೇ ನಟ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ ಪಕ್ಷವು ತಮಿಳುನಾಡಿನ ಸಾಂಪ್ರದಾಯಿಕ ದ್ರಾವಿಡ ಪಕ್ಷಗಳನ್ನು ಹಿಂದಿಕ್ಕಿರುವುದು ರಾಜಕೀಯ ಪಂಡಿತರ ಲೆಕ್ಕಾಚಾರವನ್ನೇ ಉಲ್ಟಾಪಲ್ಟಾ ಮಾಡಿದೆ. ನಗರ ಪ್ರದೇಶಗಳಲ್ಲಿ ವಿಜಯ್ ಅವರ ಪಕ್ಷಕ್ಕೆ ಸಿಕ್ಕಿರುವ ದೊಡ್ಡ ಮಟ್ಟದ ಬೆಂಬಲ, ಡಿಎಂಕೆಯ ಮತ ಬ್ಯಾಂಕ್‌ಗೆ ದೊಡ್ಡ ಹೊಡೆತ ನೀಡಿದೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಹಂಬ ಹಂಬ ರಂಬ ರಂಬ ಚೊಂಬು ಚೊಂಬು, ಬಂಗಾಳದಲ್ಲಿ ಬಿಜೆಪಿ ಮುನ್ನೆಡೆ ಬೆನ್ನಲ್ಲೇ ದೀದಿ ಟ್ರೋಲ್
ತಮಿಳುನಾಡು: ನಟ ವಿಜಯ್ ಟಿವಿಕೆ ಪಕ್ಷ ಐತಿಹಾಸಿಕ ಮುನ್ನಡೆಗೆ ಪ್ರಮುಖ ಕಾರಣಗಳಿವು, ಬದಲಾವಣೆ ಬಯಸಿದ್ದು ಇವರೇ..!