ಸಂಗೀತ ಉಪಕರಣಕ್ಕೆ ಬೆಂಕಿ ಇಟ್ಟ ತಾಲಿಬಾನ್‌... ಅಳುತ್ತಾ ನಿಂತ ಸಂಗೀತಗಾರ

By Suvarna News  |  First Published Jan 16, 2022, 5:13 PM IST
  • ಅಫ್ಘಾನಿಸ್ತಾನದಲ್ಲಿ ಅಟ್ಟಹಾಸ ಮೆರೆಯುತ್ತಿರುವ ಉಗ್ರರು
  • ಸಂಗೀತಗಾರನ ಎದುರೇ ಮ್ಯೂಸಿಕ್‌ ಉಪಕರಣ ಸುಟ್ಟ ತಾಲಿಬಾನ್‌
  • ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್‌
     

ಕಾಬೂಲ್‌(ಜ.16) ಸಂಗೀತ ಸಾಧನವನ್ನು ಸಂಗೀತಗಾರನ ಎದುರೇ ಬೆಂಕಿ ಇಟ್ಟು ಸುಟ್ಟು ತಾಲಿಬಾನ್‌  ಉಗ್ರರು ಅಟ್ಟಹಾಸ ಮೆರೆದಿದ್ದಾರೆ. ಅಪ್ಘಾನಿಸ್ತಾನದ ಪಕ್ತಿಯಾ ಪ್ರಾಂತ್ಯದಲ್ಲಿ ಈ ಘಟನೆ ನಡೆದಿದೆ. ಈ ಘಟನೆಯ ದೃಶ್ಯಾವಳಿಯನ್ನು ಅಪ್ಘಾನ್‌ ಪತ್ರಕರ್ತರೊಬ್ಬರು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದು ಉಗ್ರರ ಕೃತ್ಯಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಆತನ ಸಂಗೀತ ಉಪಕರಣ ಬೆಂಕಿಯಲ್ಲಿ ಹೊತ್ತಿ ಉರಿಯುತ್ತಿರುವುದನ್ನು ನೋಡಿ ಸಂಗೀತಗಾರ ಅಳುತ್ತಿರುವ ದೃಶ್ಯ ವಿಡಿಯೋದಲ್ಲಿದೆ. 

ಅಫ್ಘಾನಿಸ್ತಾನದ ಹಿರಿಯ ಪತ್ರಕರ್ತ ಅಬ್ದುಲ್ಹಕ್ ಒಮೆರಿ (Abdulhaq Omeri) ಅವರು ಪೋಸ್ಟ್ ಮಾಡಿದ ವಿಡಿಯೋ ಇದಾಗಿದೆ. ವೈರಲ್ ವೀಡಿಯೊದಲ್ಲಿ ಬಂದೂಕು ಹಿಡಿದು ನಿಂತ ವ್ಯಕ್ತಿಯೊಬ್ಬ ಅಳುತ್ತಿರುವ ಸಂಗೀತಗಾರನನ್ನು ನೋಡಿ  ನಗುತ್ತಿರುವ ದೃಶ್ಯವಿದೆ. ಹಾಗೆಯೇ ಮತ್ತೊಬ್ಬ, ಸಂಗೀತಗಾರನ ದಯನೀಯ ಸ್ಥಿತಿಯನ್ನು ವೀಡಿಯೊ ಮಾಡುತ್ತಿದ್ದಾರೆ.

Video : Taliban burn musician's musical instrument as local musicians weeps. This incident happened in District Province . pic.twitter.com/zzCp0POeKl

— Abdulhaq Omeri (@AbdulhaqOmeri)

Tap to resize

Latest Videos

 

ಸ್ಥಳೀಯ ಸಂಗೀತಗಾರನ ಅಳುವಿಗೂ ಕರಗದೇ ತಾಲಿಬಾನ್ ಸಂಗೀತಗಾರನ ಸಂಗೀತ ವಾದ್ಯವನ್ನು ಸುಟ್ಟುಹಾಕಿದೆ.  ಈ ಘಟನೆಯು  ಅಫ್ಘಾನಿಸ್ತಾನದ ಝಜೈಅರುಬ್ (ZazaiArub) ಜಿಲ್ಲೆಯ  ಪಕ್ತಿಯಾ(Paktia) ಪ್ರಾಂತ್ಯದಲ್ಲಿ ಸಂಭವಿಸಿದೆ ಎಂದು ಒಮೆರಿ ಟ್ವೀಟ್‌ನಲ್ಲಿ ತಿಳಿಸಿದ್ದಾರೆ. ಈ ಹಿಂದೆ ತಾಲಿಬಾನ್‌ಗಳು ವಾಹನಗಳಲ್ಲಿ ಸಂಗೀತವನ್ನು ನಿಷೇಧಿಸಿದ್ದರು. ಇದಲ್ಲದೆ, ತಾಲಿಬಾನ್‌ ಗುಂಪು, ಮದುವೆಗಳಲ್ಲಿ ಲೈವ್‌ ಸಂಗೀತವನ್ನು ನಿಷೇಧಿಸಿದೆ ಮತ್ತು ಪುರುಷರು ಮತ್ತು ಮಹಿಳೆಯರು ಪ್ರತ್ಯೇಕ ಹಾಲ್‌ಗಳಲ್ಲಿ ಮದುವೆಯ ಸಂಭ್ರಮವನ್ನು ಪ್ರತ್ಯೇಕವಾಗಿ ಆಚರಿಸಲು ಆದೇಶಿಸಿದೆ ಎಂದು ಅಕ್ಟೋಬರ್‌ನಲ್ಲಿ ಅಫ್ಘಾನಿಸ್ತಾನದ ಹೋಟೆಲ್‌ ಮಾಲೀಕರೊಬ್ಬರು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದರು.

ಅಫ್ಘಾನಿಸ್ತಾನದಲ್ಲಿ ಏರ್‌ಲಿಫ್ಟ್‌ ವೇಳೆ ಬೇರ್ಪಟ್ಟ ಹಾಲುಗಲ್ಲದ ಕಂದ ಮತ್ತೆ ಪೋಷಕರ ಮಡಿಲಿಗೆ

ತಾಲಿಬಾನ್ ಅಫ್ಘಾನಿಸ್ತಾನದಲ್ಲಿ ತನ್ನ ದಮನಕಾರಿ ನಡೆಯನ್ನು ಮುಂದುವರೆಸಿದ್ದು, ಅಫ್ಘಾನಿಸ್ತಾನದ ಹೆರಾತ್ ಪ್ರಾಂತ್ಯದ ಬಟ್ಟೆ ಅಂಗಡಿಗಳಲ್ಲಿ ಬಟ್ಟೆಗಳ ಪ್ರದರ್ಶನಕ್ಕೆ ಬಳಸುವ ಗೊಂಬೆಗಳ ಶಿರಚ್ಛೇದ ಮಾಡಲು ತಾಲಿಬಾನ್ ಆದೇಶಿಸಿದೆ ಎಂದು ಆಫ್ಘನ್ ಮಾಧ್ಯಮವನ್ನು ಉಲ್ಲೇಖಿಸಿ ಸ್ಪುಟ್ನಿಕ್ ನ್ಯೂಸ್ ಏಜೆನ್ಸಿ ವರದಿ ಮಾಡಿದೆ.  ಬಟ್ಟೆ ಅಂಗಡಿಗಳಲ್ಲಿ ಬಳಸುವ (ಗೊಂಬೆ)ಮನೆಕ್ವಿನ್ (mannequins) ಗಳು ಷರಿಯಾ ಕಾನೂನಿನ ಉಲ್ಲಂಘನೆ ಎಂದು ತಾಲಿಬಾನ್ ಹೇಳಿದೆ.

Afghans Amid Harsh Winter: ಕೊನೆಗೂ ವಿಶ್ವದ ಮುಂದೆ ಕೈಚಾಚಿದ ತಾಲಿಬಾನಿ ನಾಯಕರು

ಕಾಬೂಲ್‌ನ ಬೀದಿಗಳಲ್ಲಿ ಇಂತಹ ದಮನಕಾರಿ ಘಟನೆಗಳ ಚಿಹ್ನೆಗಳು ಮತ್ತೆ ಕಾಣಿಸಿಕೊಳ್ಳಲಾರಂಭಿಸಿವೆ. ತಾಲಿಬಾನ್‌ನ  ಪ್ರಚಾರ ಸಚಿವಾಲಯವು ಧಾರ್ಮಿಕ ಮಾರ್ಗಸೂಚಿಗಳನ್ನು ನೀಡಿದ್ದು,  ಅಫ್ಘಾನಿಸ್ತಾನದ ಟಿವಿ ಚಾನೆಲ್‌ಗಳಿಗೆ ನಾಟಕಗಳು ಮತ್ತು ಧಾರವಾಹಿಗಳಲ್ಲಿ ಮಹಿಳೆಯರನ್ನು ತೋರಿಸುವುದನ್ನು ನಿಲ್ಲಿಸುವಂತೆ ಕರೆ ನೀಡಿದೆ.

ಅದಾಗ್ಯೂ ಈ ಹೊಸ ಮಾರ್ಗಸೂಚಿಗಳನ್ನು ಕಾರ್ಯಗತಗೊಳಿಸಲಾಗುವುದಿಲ್ಲ ಎಂದು ತಾಲಿಬಾನ್‌ ಗುಂಪು ಹೇಳಿದ್ದರೂ, ಈ ಗುಂಪು ತಮ್ಮ ಕಠಿಣವಾದ ಷರಿಯಾ ಕಾನೂನನ್ನು ದೇಶದಲ್ಲಿ ಜಾರಿಗೆ ತರಲು ಬದ್ಧವಾಗಿದೆ ಎಂದು ಇತಿಹಾಸವು ತೋರಿಸಿದೆ ಎಂದು ಡಾನ್ ನ್ಯೂಸ್ ವರದಿ ಮಾಡಿದೆ. 20 ವರ್ಷಗಳ ನಂತರ ತಾಲಿಬಾನ್ ಮತ್ತೊಮ್ಮೆ ಅಫ್ಘಾನಿಸ್ತಾನದ ಮೇಲೆ ಹಿಡಿತ ಸಾಧಿಸಿರುವುದರಿಂದ, ಭಯೋತ್ಪಾದಕ ಗುಂಪಿನ ಆಡಳಿತದಲ್ಲಿ ಅಫ್ಘಾನ್ ಮಹಿಳೆಯರು (Afghan women) ಅನಿಶ್ಚಿತ ಭವಿಷ್ಯವನ್ನು ಎದುರಿಸುವ ಸಾಧ್ಯತೆಯಿದೆ ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗಷ್ಟೇ ತನ್ನ ಸೈನಿಕ ಬಲವನ್ನು ಹೆಚ್ಚಿಸಿಕೊಳ್ಳಲು ಮತ್ತು ವೈರಿ ಐಸಿಸ್‌ ಸಂಘಟನೆಯಿಂದ ಇರುವ ದಾಳಿಯ ಸಾಧ್ಯತೆಯನ್ನು ತಡೆಗಟ್ಟಲು ಅಫ್ಘಾನಿಸ್ತಾನದ ತಾಲಿಬಾನ್‌ ಸರ್ಕಾರ ಆತ್ಮಾಹುತಿ ಬಾಂಬರ್‌ಗಳನ್ನು ಅಧಿಕೃತವಾಗಿ ಸೈನ್ಯಕ್ಕೆ ಸೇರಿಸಿಕೊಳ್ಳಲು ಆರಂಭಿಸಿದೆ. ಅಮೆರಿಕ ಮತ್ತು ಆಫ್ಘನ್‌ ಸೇನೆಯೊಂದಿಗೆ ನಡೆದ 20 ವರ್ಷಗಳ ಹೋರಾಟದಲ್ಲಿ ಆತ್ಮಾಹುತಿ ಬಾಂಬರ್‌ಗಳನ್ನು ತಾಲಿಬಾನ್‌ ಬಳಸಿಕೊಂಡಿತ್ತು.

click me!