
ಭುವನೇಶ್ವರ(ಮಾ.13): ಒಡಿಶಾದ ಚಿಲಿಕಾ ಕ್ಷೇತ್ರದ ಶಾಸಕ ಪ್ರಶಾಂತ್ ಜಗದೇವ್ ಪ್ರಯಾಣಿಸುತ್ತಿದ್ದ ವಾಹನ, ಜನರ ಗುಂಪಿನ ಮೇಲೆ ಹರಿದ ಪರಿಣಾಮ ಓರ್ವ ಮಹಿಳೆ ಸಾವನ್ನಪ್ಪಿ, 7 ಪೊಲೀಸರು ಸೇರಿದಂತೆ ಇತರೆ 22 ಜನರು ಗಾಯಗೊಂಡ ಘಟನೆ ಖುರ್ದಾ ಜಿಲ್ಲೆಯ ಬನಪುರ್ ಎಂಬಲ್ಲಿ ನಡೆದಿದೆ. ಗಾಯಗೊಂಡವರ ಪೈಕಿ ಪೊಲೀಸ್ ಇನ್‌ಸ್ಟೆಕ್ಟರ್ ಸೇರಿದಂತೆ 5 ಜನರ ಸ್ಥಿತಿ ಗಂಭೀರವಾಗಿದೆ.
ಸ್ಥಳೀಯ ಸಂಸ್ಥೆಯೊಂದರ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಹಿನ್ನೆಲೆಯಲ್ಲಿ ಬನಪುರ್ ಬಿಡಿಒ ಕಚೇರಿ ಮುಂದೆ ಬಿಜೆಪಿ ಕಾರ್ಯಕರ್ತರು ಜಮಾವಣೆಗೊಂಡಿದ್ದರು. ಈ ವೇಳೆ ವೇಗವಾಗಿ ಬಂದ ಶಾಸಕರ ಕಾರು ಜನರ ಗುಂಪಿನ ಮೇಲೆ ಹರಿದಿದೆ. ಘಟನೆಯಿಂದ ಉದ್ರಿಕ್ತಗೊಂಡ ಗುಂಪು ಶಾಸಕರ ಮೇಲೆ ಹಲ್ಲೆ ಮಾಡಿದೆ. ಹಲ್ಲೆಯಲ್ಲಿ ಶಾಸಕ ಪ್ರಶಾಂತ್‌ಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಭುವನೇಶ್ವರದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಘಟನೆಯಲ್ಲಿ ಬಿಜೆಪಿಯ 15ಜನ ಕಾರ್ಯಕರ್ತರು ಗಾಯಗೊಂಡಿದ್ದು, ಈ ಬಗ್ಗೆ ತನಿಖೆ ಆರಂಭಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಶಾಸಕ ಪ್ರಶಾಂತ್ ಜಗದೇವ್ ಅವರನ್ನು ಕಳೆದ ವರ್ಷ ಪಕ್ಷ ವಿರೋಧಿ ಚಟುವಟಿಕೆಯ ಹಿನ್ನೆಲೆಯಲ್ಲಿ ಅಮಾನತು ಗೊಳಿಸಲಾಗಿತ್ತು.
ಇತ್ತೀಚೆಗೆ ಉತ್ತರಪ್ರದೇಶದ ವಿಧಾನಸಭಾ ಚುನಾವಣೆ ವೇಳೆ ಲಖೀಂಪುರ ಖೇರಿಯಲ್ಲೂ ಇಂಥದ್ದೇ ಘಟನೆ ನಡೆದು ನಾಲ್ವರು ಸಾವನ್ನಪ್ಪಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ