
ಲಖನೌ(ಮಾ.13):ಉತ್ತರ ಪ್ರದೇಶದಲ್ಲಿ ಬಿಜೆಪಿ ಗೆದ್ದಿರುವುದಕ್ಕೆ ರಾಮಮಂದಿರ ಹಾಗೂ ಹಿಂದುತ್ವ ಕಾರಣ ಎಂಬ ಸಾಮಾನ್ಯ ನಂಬಿಕೆಯನ್ನು ಚುನಾವಣೋತ್ತರ ಸಮೀಕ್ಷೆಯೊಂದು ಹುಸಿಯಾಗಿಸಿದೆ. ಜನರು ಮಂದಿರ ಅಥವಾ ಹಿಂದುತ್ವಕ್ಕಿಂತ ಹೆಚ್ಚಾಗಿ ಅಭಿವೃದ್ಧಿ ಮತ್ತು ಸರ್ಕಾರದ ವೈಖರಿ ನೋಡಿ ಬಿಜೆಪಿಗೆ ಮತ ಹಾಕಿದ್ದಾರೆ ಎಂದು ಲೋಕನೀತಿ-ಸಿಎಸ್‌ಡಿಎಸ್ ಸಮೀಕ್ಷೆ ತಿಳಿಸಿದೆ. ಮತದಾನ ಪೂರ್ಣಗೊಂಡ ನಂತರ ಮತ ಎಣಿಕೆ ನಡೆದ ಮಾ.10ರ ನಡುವಿನ ಅವಧಿಯಲ್ಲಿ ಮತದಾರರ ಮನೆಗೆ ತೆರಳಿ ಈ ಸಮೀಕ್ಷೆ ನಡೆಸಲಾಗಿದೆ.
ಸಮೀಕ್ಷೆಯಲ್ಲಿ ಉತ್ತರ ಪ್ರದೇಶದ ಜನರು ಮುಖ್ಯಮಂತ್ರಿ ಯೋಗಿ ಆದಿತ್ಯನಾಥರ ಸರ್ಕಾರಕ್ಕಿಂತ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಕಾರ್ಯವೈಖರಿ ಬಗ್ಗೆ ಮೂರು ಪಟ್ಟು ಹೆಚ್ಚು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಚುನಾವಣೆಯಲ್ಲಿ ಮೋದಿ ಮ್ಯಾಜಿಕ್ ಕೆಲಸ ಮಾಡಿರುವುದು ನಿಶ್ಚಿತ ಎನ್ನಲಾಗಿದೆ.
ಸಮೀಕ್ಷೆಯಲ್ಲಿ ವ್ಯಕ್ತವಾದ ಸಂಗತಿಗಳು ಇಂತಿವೆ:
- 38% ಜನ ಅಭಿವೃದ್ಧಿಗೆ ಮತ ಹಾಕಿದ್ದಾಗಿ, 12% ಜನ ಸರ್ಕಾರ ಬದಲಿಸಲು ಮತ ಹಾಕಿದ್ದಾಗಿ, 10% ಜನ ಇದೇ ಸರ್ಕಾರ ಉಳಿಸಲು ಮತ ಹಾಕಿದ್ದಾಗಿ ಹೇಳಿದ್ದಾರೆ.
- ಕೇವಲ 2% ಜನರು ರಾಮಮಂದಿರ ಹಾಗೂ ಹಿಂದುತ್ವದ ಕಾರಣಕ್ಕೆ ಬಿಜೆಪಿಗೆ ಮತ ಹಾಕಿದ್ದಾಗಿ ಹೇಳಿದ್ದಾರೆ.
- ರೈತರು, ಬ್ರಾಹ್ಮಣರು ಹಾಗೂ ಪರಿಶಿಷ್ಟಜಾತಿಗಳ ಬೆಂಬಲ ಬಿಜೆಪಿಗೆ ಹೆಚ್ಚು ದೊರೆತಿದೆ. ಮಾಯಾವತಿಯ ವೋಟ್‌ಬ್ಯಾಂಕ್ ಆಗಿರುವ ಜಾಟವರೂ ಬಿಜೆಪಿಗೆ ಮತ ಹಾಕಿದ್ದಾರೆ.
- ಬ್ರಾಹ್ಮಣರು ಯೋಗಿ ಬಗ್ಗೆ ಸಿಟ್ಟಾಗಿದ್ದಾರೆ, ಸ್ವಾಮಿ ಪ್ರಸಾದ್ ಮೌರ‍್ಯ, ದಾರಾಸಿಂಗ್ ಚೌಹಾಣ್, ಧರಮ್ ಸಿಂಗ್ ಸೈನಿಯಂಥವರು ಬಿಜೆಪಿ ಬಿಟ್ಟನಂತರ ಒಬಿಸಿ ಮತ ಎಸ್‌ಪಿಗೆ ಹೋಗಿದೆ ಎಂಬುದು ಸುಳ್ಳು.
- 89% ಬ್ರಾಹ್ಮಣರು ಬಿಜೆಪಿಗೆ ಮತ ಹಾಕಿದ್ದಾರೆ. ಇದು 2017ಕ್ಕಿಂತ 6% ಹೆಚ್ಚು. 21% ಜಾಟವರು ಬಿಜೆಪಿಗೆ ಮತ ಹಾಕಿದ್ದಾರೆ. ಇದು 2017ಕ್ಕಿಂತ 8% ಹೆಚ್ಚು. ಮಾಯಾವತಿಗೆ ದೊರೆತ ಜಾಟವರ ಮತ 87%ನಿಂದ 65%ಗೆ ಇಳಿಕೆಯಾಗಿದೆ.
- ಬಿಜೆಪಿಗೆ ದೊರೆತ ಪರಿಶಿಷ್ಟಜಾತಿಗಳ ಮತ 2017ರ 32%ನಿಂದ ಈ ಬಾರಿ 41%ಗೆ ಏರಿಕೆಯಾಗಿದೆ.
- ಎಸ್‌ಪಿಗೆ ದೊರೆತ ರೈತರ ಮತಕ್ಕಿಂತ ಶೇ.13ರಷ್ಟುಹೆಚ್ಚು ರೈತರ ಮತ ಬಿಜೆಪಿಗೆ ದೊರೆತಿದೆ.
- 2017ಕ್ಕಿಂತ 2022ರಲ್ಲಿ ಯುಪಿ ಸರ್ಕಾರದ ಬಗ್ಗೆ ಜನರ ಮೆಚ್ಚುಗೆ 7% ಹೆಚ್ಚಾಗಿದೆ. ಕೇಂದ್ರದ ಬಗ್ಗೆ ಇದೇ ಅವಧಿಯಲ್ಲಿ ಮೆಚ್ಚುಗೆ ಶೇ.24ರಷ್ಟುಹೆಚ್ಚಾಗಿದೆ.
- ಜಾತಿ ಹಾಗೂ ಧರ್ಮಕ್ಕಿಂತ ಹೆಚ್ಚಾಗಿ ಜನರು ಕಿಸಾನ್ ಸಮ್ಮಾನ್ ನಿಧಿ, ಉಜ್ವಲಾ ಯೋಜನೆ, ಪಿಎಂ ಆವಾಸ್ ಯೋಜನೆ ಹಾಗೂ ಉಚಿತ ಪಡಿತರಕ್ಕೆ ಬೆಲೆ ನೀಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ