ಶಬರಿಮಲೆ, ರಫೇಲ್, ರಾಹುಲ್: ಸುಪ್ರೀಂನಲ್ಲಿಂದು 3 ಮಹಾ ತೀರ್ಪು!

By Web DeskFirst Published Nov 14, 2019, 10:00 AM IST
Highlights

ನ.17ರಂದು ನಿವೃತ್ತಿಯಾಗುತ್ತಿರುವ ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ರಂಜನ್‌ ಗೋಗೋಯ್‌, ಅದಕ್ಕೂ ಮುನ್ನ ತಾವು ವಿಚಾರಣೆ ನಡೆಸಿದ ಪ್ರಕರಣಗಳ ತೀರ್ಪನ್ನು ಸರಣಿಯಾಗಿ ಪ್ರಕಟಿಸುತ್ತಿದ್ದಾರೆ. ಈಗಾಗಲೇ ಅಯೋಧ್ಯೆ, ಮಾಹಿತಿ ಹಕ್ಕು ಕಾಯ್ದೆ ವ್ಯಾಪ್ತಿಗೆ ಸಿಜೆಐ ಕಚೇರಿ ಕುರಿತ ತೀರ್ಪು ಪ್ರಕಟಿಸಿರುವ ನ್ಯಾ.ಗೊಗೋಯ್‌ ಅವರನ್ನೊಳಗೊಂಡ ಪೀಠ ಗುರುವಾರ ಶಬರಿಮಲೆ, ರಫೇಲ್‌ ಮತ್ತು ರಾಹುಲ್‌ ಗಾಂಧಿ ಆರೋಪಿಯಾಗಿರುವ ಪ್ರಕರಣಗಳ ಕುರಿತು ಮಹತ್ವದ ತೀರ್ಪು ಪ್ರಕಟಿಸಲಿದೆ.

1) ಶಬರಿಮಲೆಗೆ ಮಹಿಳೆಯರ ಪ್ರವೇಶ ಪ್ರಶ್ನಿಸಿದ್ದ ಅರ್ಜಿ ಬಗ್ಗೆ ಸುಪ್ರೀಂ ತೀರ್ಪು, 65 ಅರ್ಜಿಗಳನ್ನು ಒಂದುಗೂಡಿಸಿ ವಿಚಾರಣೆ ನಡೆಸಿರುವ ಸಾಂವಿಧಾನಿಕ ಪೀಠ

ನವದೆಹಲಿ: ಕೇರಳದ ಶಬರಿಮಲೆ ದೇಗುಲಕ್ಕೆ ಎಲ್ಲಾ ವಯೋಮಾನದ ಮಹಿಳೆಯರ ಪ್ರವೇಶಕ್ಕೆ ಅವಕಾಶ ಕಲ್ಪಿಸಿ 2018ರ ಸೆ.28ರಂದು ನೀಡಲಾಗಿದ್ದ ತೀರ್ಪನ್ನು ಮರುಪರಿಶೀಲಿಸುವಂತೆ ಕೋರಲಾಗಿದ್ದ ಅರ್ಜಿಗಳ ಕುರಿತ ತೀರ್ಪನ್ನು ಸುಪ್ರೀಂಕೋರ್ಟ್‌ ಗುರುವಾರ ಪ್ರಕಟಿಸಲಿದೆ. ಕಳೆದ ವರ್ಷ ನೀಡಿದ್ದ ತೀರ್ಪು ಐತಿಹಾಸಿಕ ಎಂದು ಬಣ್ಣಿತವಾಗಿರುವ ಹಿನ್ನೆಲೆಯಲ್ಲಿ ಮೇಲ್ಮನವಿ ಅರ್ಜಿಗಳ ಕುರಿತು ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೋಯ್‌ ಅವರನ್ನೊಳಗೊಂಡ ನ್ಯಾಯಪೀಠ ಯಾವ ತೀರ್ಮಾನ ಕೈಗೊಳ್ಳಲಿದೆ ಎಂಬ ಕುತೂಹಲವಿದೆ.

ಅಯ್ಯಪ್ಪ ದರ್ಶನ ಪಡೆದ ಕನಕ ಮನೆಯಿಂದ ಔಟ್‌!

ತೀರ್ಪು ಪ್ರಕಟಣೆ ಹಿನ್ನೆಲೆಯಲ್ಲಿ ಶಬರಿಮಲೆ ಸೇರಿದಂತೆ ಕೇರಳದ ಸೂಕ್ಷ್ಮ ಪ್ರದೇಶಗಳಲ್ಲಿ ಭಾರೀ ಬಿಗಿಬಂದೋಬಸ್‌್ತ ಏರ್ಪಡಿಸಲಾಗಿದೆ.

ಶಬರಿಮಲೆ ದೇಗುಲಕ್ಕೆ 10-50ರ ವಯೋಮಾನದ ಮಹಿಳೆಯರ ಪ್ರವೇಶಕ್ಕಿದ್ದ ನಿರ್ಬಂಧವನ್ನು ತೆಗೆದುಹಾಕಿದ್ದ ಸುಪ್ರೀಂಕೋರ್ಟ್‌ನ 5 ಸದಸ್ಯರ ನ್ಯಾಯಪೀಠ 2018ರ ಸೆ.28ರಂದು 4-1ರ ಬಹುಮತದಲ್ಲಿ ನೀಡಿದ್ದ ತೀರ್ಪಿನಲ್ಲಿ ಎಲ್ಲಾ ವಯೋಮಾನದ ಮಹಿಳೆಯರು ದೇಗುಲ ಪ್ರವೇಶ ಮಾಡಬಹುದು ಎಂದು ತೀರ್ಪು ನೀಡಿತ್ತು. ಈ ರೀತಿಯ ನಿರ್ಬಂಧ ಹೇರಿಕೆಯು ಅಕ್ರಮ ಮತ್ತು ಅಸಾಂವಿಧಾನಿಕ ಎಂದಿತ್ತು. ಈ ತೀರ್ಪು ಸಂಪ್ರದಾಯವಾದಿಗಳ ತೀವ್ರ ಆಕ್ರೋಶಕ್ಕೆ ಕಾರಣವಾಗಿ, ಕೇರಳದಲ್ಲಿ ಭಾರೀ ಹಿಂಸಾಚಾರ ಕೂಡಾ ಸಂಭವಿಸಿತ್ತು. ಈ ತೀರ್ಪನ್ನು ಪುನರ್‌ ಪರಿಶೀಲನೆ ಮಾಡಬೇಕೆಂದು ಸುಪ್ರೀಂಕೋರ್ಟ್‌ಗೆ 56 ಅರ್ಜಿಗಳು, 4 ರಿಟ್‌ ಅರ್ಜಿಗಳು ಸಲ್ಲಿಕೆಯಾಗಿದ್ದವು. ಅಲ್ಲದೆ ತೀರ್ಪು ಪ್ರಕಟಗೊಂಡ ನಂತರ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದ 5 ಅರ್ಜಿಗಳನ್ನು ಒಂದುಗೂಡಿಸಿ ಸುಪ್ರೀಂಕೋರ್ಟ್‌ ವಿಚಾರಣೆ ನಡೆಸಿತ್ತು. ಈ ಎಲ್ಲಾ ಅರ್ಜಿಗಳ ಕುರಿತು ಅದು ಗುರುವಾರ ತೀಪು ಪ್ರಕಟಿಸಲಿದೆ.

ಶಬರಿಗೆಮಲೆಗೆ ಮೂರಲ್ಲ 10 ಮಹಿಳೆಯರ ಪ್ರವೇಶ!

ಒಂದೆಡೆ ಧರ್ಮನಿಷ್ಠೆಯ ಪ್ರಶ್ನೆಯಾಗಿದ್ದರೆ, ಮತ್ತೊಂದೆಡೆ ಲಿಂಗಾ ಸಮಾನತೆಯ ಬೇಡಿಕೆ. ಇವರೆಡರ ನಡುವೆ ಸುಪ್ರೀಂಕೋರ್ಟ್‌ ಯಾವುದಕ್ಕೆ ಮನ್ನಣೆ ನೀಡಲಿದೆ ಎಂಬುದು ಗುರುವಾರ ಪ್ರಕಟಗೊಳ್ಳಲಿದೆ

2) ರಫೇಲ್ ಯುದ್ಧವಿಮಾನ ಖರೀದಿ ಕುರಿತು ತೀರ್ಪು

ವಿವಾದಾತ್ಮಕ ರಫೇಲ್‌ ಯುದ್ಧವಿಮಾನ ಖರೀದಿ ಕುರಿತಾದ ಮಹತ್ವದ ತೀರ್ಪನ್ನು ಸುಪ್ರೀಂ ಕೋರ್ಟ್‌ ಗುರುವಾರ ಪ್ರಕಟಿಸಲಿದೆ.

‘ಫ್ರಾನ್ಸ್‌ ಜತೆಗಿನ ರಫೇಲ್‌ ಯುದ್ಧವಿಮಾನ ಖರೀದಿ ಸರಿ ಇದೆ’ ಎಂದು ಮೋದಿ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ಕ್ಲೀನ್‌ಚಿಟ್‌ ನೀಡಿತ್ತು. ಆದರೆ ಈ ತೀರ್ಪಿನ ವಿರುದ್ಧ ಮಾಜಿ ಕೇಂದ್ರ ಸಚಿವರಾದ ಯಶವಂತ ಸಿನ್ಹಾ, ಅರುಣ್‌ ಶೌರಿ, ವಕೀಲ ಪ್ರಶಾಂತ ಭೂಷಣ್‌, ಆಮ್‌ ಆದ್ಮಿ ಪಾರ್ಟಿ ಸಂಸದ ಸಂಜಯ ಸಿಂಗ್‌ ಹಾಗೂ ಇನ್ನೂ ಕೆಲವರು ಮರುಪರಿಶೀಲನಾ ಅರ್ಜಿ ಸಲ್ಲಿಸಿದ್ದರು. ಇದರ ವಿಚಾರಣೆ ನಡೆಸಿದ್ದ ಸರ್ವೋಚ್ಚ ನ್ಯಾಯಾಲಯ ಮೇ 10ರಂದು ತೀರ್ಪು ಕಾಯ್ದಿರಿಸಿತ್ತು.

ಬಹು ವಿವಾದಿತ ರಫೇಲ್ ಯುದ್ಧವಿಮಾನಕ್ಕೆ ಸಂಬಂಧಿಸಿದ ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಈ ಬಗ್ಗೆ ಗುರುವಾರ ಮುಖ್ಯ ನ್ಯಾಯಾಧೀಶ ನ್ಯಾ| ರಂಜನ್‌ ಗೊಗೋಯ್‌, ನ್ಯಾ| ಎಸ್‌.ಕೆ. ಕೌಲ್‌ ಹಾಗೂ ನ್ಯಾ| ಜೆ.ಎಂ. ಜೋಸೆಫ್‌ ಅವರ ಪೀಠ ತೀರ್ಪು ನೀಡಲಿದೆ.

‘ಸುಮಾರು 58 ಸಾವಿರ ಕೋಟಿ ರು. ನೀಡಿ ಫ್ರಾನ್ಸ್‌ನಿಂದ 36 ರಫೇಲ್‌ ಯುದ್ಧವಿಮಾನ ಖರೀದಿಸಲಾಗುತ್ತಿದೆ. ಈ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದ್ದು, ತನಿಖೆಗೆ ಆದೇಶಿಸಬೇಕು’ ಎಂದು ಕೋರಲಾಗಿದ್ದ ಅರ್ಜಿಗಳನ್ನು 2018ರ ಡಿ.14ರಂದು ಸುಪ್ರೀಂ ಕೋರ್ಟ್‌ ವಜಾ ಮಾಡಿತ್ತು.

3] ಚೌಕೀದಾರ ಚೋರ: ರಾಹುಲ್‌ ಆರೋಪದ ಬಗ್ಗೆ ಇಂದು ತೀರ್ಪು

‘ಚೌಕೀದಾರ್‌ ಚೋರ್‌ ಹೈ ಎಂದು ಸುಪ್ರೀಂ ಕೋರ್ಟೇ ಹೇಳಿದೆ’ ಎಂಬ ಕಾಂಗ್ರೆಸ್‌ ಹಿಂದಿನ ಅಧ್ಯಕ್ಷ ರಾಹುಲ್‌ ಗಾಂಧಿ ಅವರ ಆರೋಪಕ್ಕೆ ಸಂಬಂಧಿಸಿದ ತೀರ್ಪನ್ನು ಸುಪ್ರೀಂ ಕೋರ್ಟ್‌ ಗುರುವಾರ ಪ್ರಕಟಿಸಲಿದೆ.

ಪ್ರಧಾನಿ ನರೇಂದ್ರ ಮೋದಿ ಅವರನ್ನು ಗುರಿಯಾಗಿಸಿ ರಾಹುಲ್‌ ನೀಡಿದ ಈ ಹೇಳಿಕೆ ವಿರುದ್ಧ ಬಿಜೆಪಿ ಸಂಸದೆ ಮೀನಾಕ್ಷಿ ಲೇಖಿ ಅವರು ಮಾನಹಾನಿ ದಾವೆ ದಾಖಲಿಸಿದ್ದರು. ‘ಸುಪ್ರೀಂ ಕೋರ್ಟು ಯಾವತ್ತೂ ಮೋದಿ ಅವರನ್ನು ‘ಚೋರ’ ಎಂದಿಲ್ಲ’ ಎಂದು ಲೇಖಿ ಪರ ವಕೀಲ ಮುಕುಲ್‌ ರೋಹಟಗಿ ವಾದಿಸಿದ್ದರು.

ಲೋಕ ಅಖಾಡದಲ್ಲಿ ಕಿಕ್ಕೇರಿಸಿದ ಡೈಲಾಗ್ ಸಮರ: ಇಲ್ಲಿವೆ 'ಪಂಚ್' ಡೈಲಾಗ್ಸ್!

ಇದರ ವಿಚಾರಣೆ ನಡೆಸಿದ್ದ ಮುಖ್ಯ ನ್ಯಾ| ರಂಜನ್‌ ಗೊಗೋಯ್‌ ಅವರ ಪೀಠ, ‘ಈ ಬಗ್ಗೆ ಕ್ಷಮೆ ಕೇಳಿ. ಇಲ್ಲವೇ ವಿಚಾರಣೆ ಎದುರಿಸಿ’ ಎಂದು ಸೂಚಿಸಿತ್ತು. ಬಳಿಕ ತಮ್ಮ ಹೇಳಿಕೆ ಬಗ್ಗೆ ರಾಹುಲ್‌ ‘ವಿಷಾದ’ ವ್ಯಕ್ತಪಡಿಸಿದ್ದರು.

ಆದರೆ, ‘ವಿಷಾದ ವ್ಯಕ್ತಪಡಿಸುವಿಕೆ ಸಲ್ಲದು. ಬೇಷರತ್‌ ಕ್ಷಮೆಯಾಚಿಸಬೇಕು. ಹೀಗಾಗಿ ರಾಹುಲ್‌ ವಿಷಾದಕ್ಕೆ ಬೆಲೆ ಇಲ್ಲ. ಅವರ ವಿರುದ್ಧ ಕ್ರಮ ಜರುಗಿಸಬೇಕು’ ಎಂದು ರೋಹಟಗಿ ವಾದಿಸಿದ್ದರು. ಇದಕ್ಕೆ ಸಂಬಂಧಿಸಿದ ತೀರ್ಪನ್ನು ಗುರುವಾರ ನ್ಯಾ| ಗೊಗೋಯ್‌ ಅವರ ಪೀಠ ಪ್ರಕಟಿಸಲಿದೆ.

click me!