
ನವದೆಹಲಿ[ನ.14]: ಬಿಜೆಪಿ ಅಧ್ಯಕ್ಷರೂ ಆದ ಕೇಂದ್ರ ಸಚಿವ ಅಮಿತ್ ಶಾ ಅವರು ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟಿನ ಬಗ್ಗೆ ಹಾಗೂ ‘ಮುಖ್ಯಮಂತ್ರಿ ಸ್ಥಾನದ ಸಮಾನ ಅವಧಿ ಹಂಚಿಕೆಗೆ ಶಾ ವಾಗ್ದಾನ ಮಾಡಿದ್ದರು’ ಎಂಬ ಶಿವಸೇನೆ ಅಧ್ಯಕ್ಷ ಉದ್ಧವ್ ಠಾಕ್ರೆ ಹೇಳಿಕೆಗೆ ಇದೇ ಮೊದಲ ಬಾರಿ ಮೌನ ಮುರಿದು ಪ್ರತಿಕ್ರಿಯೆ ನೀಡಿದ್ದಾರೆ. ‘ತಲಾ 2.5 ವರ್ಷ ಮುಖ್ಯಮಂತ್ರಿ ಅವಧಿ ಹಂಚಿಕೆ ಕುರಿತಂತೆ ಶಿವಸೇನೆಗೆ ಯಾವುದೇ ವಚನವನ್ನು ನಾನು ನೀಡಿರಲಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.
ಮಹಾ ಹೈ ಡ್ರಾಮಾ : ಶಿವಸೇನೆ ಭಾರೀ ಕನಸಿಗೆ ಮುಖಭಂಗ
ಎಎನ್‌ಐ ಸುದ್ದಿಸಂಸ್ಥೆ ಜತೆ ಗುರುವಾರ ಮಾತನಾಡಿದ ಅವರು, ‘ಬಿಜೆಪಿ-ಮೈತ್ರಿಕೂಟ ಗೆದ್ದರೆ ದೇವೇಂದ್ರ ಫಡ್ನವೀಸ್ ಅವರೇ ಮತ್ತೆ ಮುಖ್ಯಮಂತ್ರಿಯಾಗುತ್ತಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹಾಗೂ ನಾನು ಅನೇಕ ಸಲ ಸಾರ್ವಜನಿಕ ಸಭೆಗಳಲ್ಲಿ ಹೇಳಿದ್ದೆವು. ಆಗ ಯಾರೂ ಇದಕ್ಕೆ ಆಕ್ಷೇಪ ಎತ್ತಲಿಲ್ಲ. ಆದರೆ ಈಗ ಅವರು (ಶಿವಸೇನೆ) ಹೊಸ ಬೇಡಿಕೆಗಳೊಂದಿಗೆ (ಸಿಎಂ ಸ್ಥಾನದ ೨.೫ ವರ್ಷ ಸಮಾನ ಹಂಚಿಕೆ) ಬಂದಿದ್ದಾರೆ. ಇದು ನಮಗೆ ಸ್ವೀಕಾರಾರ್ಹವಲ್ಲ’ ಎಂದು ಖಂಡತುಂಡವಾಗಿ ಹೇಳಿದರು.
ಇದೇ ವೇಳೆ, ಸರ್ಕಾರ ರಚನೆ ಬಿಕ್ಕಟ್ಟು ಹಾಗೂ ರಾಷ್ಟ್ರಪತಿ ಆಳ್ವಿಕೆ ಬಗ್ಗೆಯೂ ಪ್ರತಿಕ್ರಿಯೆ ನೀಡಿದ ಅವರು, ‘ಸರ್ಕಾರ ರಚನೆಗೆ ಯಾವ ರಾಜ್ಯದಲ್ಲೂ ನೀಡಲಾಗದಷ್ಟು ಸಾಕಷ್ಟು ಕಾಲಾವಕಾಶವನ್ನು ಮಹಾರಾಷ್ಟ್ರದಲ್ಲಿ ನೀಡಲಾಗಿತ್ತು. ಫಲಿತಾಂಶ ಘೋಷಣೆ ಆದ ನಂತರ 15 ದಿನ ಸಮಯವಿತ್ತು. ಆದರೆ ವಿಧಾನಸಭೆ ಅವಧಿ ಮುಗಿವವರೆಗೂ ಯಾರೂ ಸರ್ಕಾರ ರಚನೆಗೆ ಮುಂದಾಗಲಿಲ್ಲ. ವಿಧಾನಸಭೆ ಅವಧಿ ಮುಗಿದ ನಂತರ ರಾಜ್ಯಪಾಲರು ಪಕ್ಷಗಳನ್ನು ಸರ್ಕಾರ ರಚನೆಗೆ ಆಹ್ವಾನಿಸಿದರು. ಆಗ ನಾವಾಗಲಿ (ಬಿಜೆಪಿ), ಶಿವಸೇನೆ ಆಗಲಿ, ಕಾಂಗ್ರೆಸ್-ಎನ್‌ಸಿಪಿ ಆಗಲಿ ಸರ್ಕಾರ ರಚನೆಗೆ ಹಕ್ಕು ಮಂಡಿಸಲಿಲ್ಲ’ ಎಂದರು.
ಮಹಾ ಹೈಡ್ರಾಮ : ಸರ್ಕಾರ ರಚಿಸಲ್ಲ ಎಂದ ಬಿಜೆಪಿ
‘ಯಾರಿಗೆ ಬಹುಮತ ಇದೆಯೋ ಅವರು ಈಗಲೂ ಹೋಗಿ ಸರ್ಕಾರ ರಚನೆ ಹಕ್ಕು ಮಂಡಿಸಲು ಅವಕಾಶವಿದೆ. ಯಾರಿಗೂ ರಾಜ್ಯಪಾಲರು ಅವಕಾಶ ನಿರಾಕರಿಸಿಲ್ಲ. ಆದರೆ ವಿದ್ಯಾವಂತ ವಕೀಲರಾದ ಕಪಿಲ್ ಸಿಬಲ್‌ರಂಥವರು, ‘ಸರ್ಕಾರ ರಚನೆ ಅವಕಾಶವನ್ನು ನಾವು ನಿರಾಕರಿಸಿದೆವು’ ಎಂದು ನಮ್ಮ ಮೇಲೆ ಬಾಲಿಶ ಆರೋಪ ಮಾಡುತ್ತಿದ್ದಾರೆ’ ಎಂದು ಶಾ ಕಿಡಿಕಾರಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ