ಹೊಸ ವಕ್ಫ್‌ ಕಾನೂನು ಜಾರಿಗೆ ಸುಪ್ರೀಂ ಬ್ರೇಕ್‌ : ಏನಿದು ವಿವಾದ?

Published : Apr 18, 2025, 04:52 AM ISTUpdated : Apr 18, 2025, 05:15 AM IST
ಹೊಸ ವಕ್ಫ್‌ ಕಾನೂನು ಜಾರಿಗೆ ಸುಪ್ರೀಂ ಬ್ರೇಕ್‌ : ಏನಿದು ವಿವಾದ?

ಸಾರಾಂಶ

ಇತ್ತೀಚೆಗೆ ಜಾರಿಗೆ ತಂದ ವಕ್ಫ್ ತಿದ್ದುಪಡಿ ಕಾಯ್ದೆ-2025ರ ಹಲವು ನಿಬಂಧನೆಗಳಿಗೆ ಸುಪ್ರೀಂ ಕೋರ್ಟ್ ಗುರುವಾರ ಮೇ 5ರವರೆಗೆ ತಡೆ ನೀಡಿದೆ ಮತ್ತು ಅಲ್ಲಿಯವರೆಗೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಅಲ್ಲದೆ, 1 ವಾರದಲ್ಲಿ ಈ ಕುರಿತು ನಿಲುವು ತಿಳಿಸುವಂತೆ ಕೇಂದ್ರಕ್ಕೆ ತಾಕೀತು ಮಾಡಿದೆ.

ಪಿಟಿಐ ನವದೆಹಲಿ (ಏ.18): ಇತ್ತೀಚೆಗೆ ಜಾರಿಗೆ ತಂದ ವಕ್ಫ್ ತಿದ್ದುಪಡಿ ಕಾಯ್ದೆ-2025ರ ಹಲವು ನಿಬಂಧನೆಗಳಿಗೆ ಸುಪ್ರೀಂ ಕೋರ್ಟ್ ಗುರುವಾರ ಮೇ 5ರವರೆಗೆ ತಡೆ ನೀಡಿದೆ ಮತ್ತು ಅಲ್ಲಿಯವರೆಗೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಅಲ್ಲದೆ, 1 ವಾರದಲ್ಲಿ ಈ ಕುರಿತು ನಿಲುವು ತಿಳಿಸುವಂತೆ ಕೇಂದ್ರಕ್ಕೆ ತಾಕೀತು ಮಾಡಿದೆ.

‘ಮುಂದಿನ ವಿಚಾರಣೆವರೆಗೆ ವಕ್ಫ್ ಮಂಡಳಿಗಳಿಗೆ ಯಾವುದೇ ಹೊಸ ನೇಮಕಾತಿ ಮಾಡಬಾರದು. ಈ ಹಿಂದಿನ ‘ವಕ್ಫ್‌-ಬೈ-ಯೂಸರ್‌’ (ವಕ್ಫ್‌ ಮಂಡಳಿಯ ಅನುಭೋಗದಲ್ಲಿ ಹಿಂದಿನಿಂದಲೂ ಇರುವುದು) ನಿಯಮ ಬಳಸಿಕೊಂಡು ವಕ್ಫ್‌ ಮಂಡಳಿಗಳು ಸ್ವಾಧೀನಪಡಿಸಿಕೊಂಡ ಜಮೀನಿನಲ್ಲಿ ಬದಲಾವಣೆ ಮಾಡಬಾರದು. ಅಂದರೆ ಯಾವುದೇ ಜಮೀನನ್ನು ಡಿ-ನೋಟಿಫೈ ಮಾಡಬಾರದು’ ಎಂದು ಕೋರ್ಟ್‌ ತಾಕೀತು ಮಾಡಿದೆ.
ವಕ್ಫ್‌ ತಿದ್ದುಪಡಿ ಕಾಯ್ದೆ ಪ್ರಶ್ನಿಸಿದ್ದ ಸುಮಾರು 75 ಅರ್ಜಿಗಳ ವಿಚಾರಣೆಯನ್ನು ಸತತ 2ನೇ ದಿನವಾದ ಗುರುವಾರ ಕೂಡ ಮುಂದುವರಿಸಿದ ಮುಖ್ಯ ನ್ಯಾಯಾಧೀಶ ನ್ಯಾ। ಸಂಜೀವ್ ಖನ್ನಾ ಮತ್ತು ನ್ಯಾ। ಸಂಜಯ್ ಕುಮಾರ್ ಹಾಗೂ ನ್ಯಾ। ಕೆ.ವಿ. ವಿಶ್ವನಾಥನ್ ಅವರ ಪೀಠ ಈ ಮೇಲಿನಂತೆ ಆದೇಶ ನೀಡಿದೆ.

ಇದನ್ನೂ ಓದಿ: ರಾಷ್ಟ್ರಪತಿಗೆ ಆದೇಶಿಸುವುದು ಸರಿಯೆ? ಸುಪ್ರೀಂ ವಿರುದ್ಧ ಉಪರಾಷ್ಟ್ರಪತಿ ಕಟುಟೀಕೆ

ಸರ್ಕಾರದ ಭರವಸೆ:

ಮಧ್ಯಾಹ್ನ 2 ಗಂಟೆಗೆ ವಿಚಾರಣೆ ಆರಂಭವಾದ ನಂತರ ವಾದ ಮಂಡಿಸಿದ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ, ‘ಮುಂದಿನ ವಿಚಾರಣೆವರೆಗೆ 2025ರ ವಕ್ಫ್ ತಿದ್ದುಪಡಿ ಕಾಯ್ದೆಯ ಪ್ರಕಾರ ಕೇಂದ್ರ ವಕ್ಫ್ ಕೌನ್ಸಿಲ್ ಮತ್ತು ವಕ್ಫ್‌ ಮಂಡಳಿಗಳಿಗೆ ಸರ್ಕಾರ ನೇಮಕಾತಿಗಳನ್ನು ಮಾಡುವುದಿಲ್ಲ ಮತ್ತು ಈಗಾಗಲೇ ‘ಬಳಕೆದಾರರಿಂದ ವಕ್ಫ್’ ಎಂದು ಘೋಷಿಸಲ್ಪಟ್ಟ ಮತ್ತು ಮೂಲ 1995ರ ಕಾಯ್ದೆಯಡಿಯಲ್ಲಿ ನೋಂದಾಯಿಸಲಾದ ಆಸ್ತಿಗಳಿಗೆ ತೊಂದರೆ ಮಾಡುವುದಿಲ್ಲ. ಅರ್ಜಿದಾರರ ಆಕ್ಷೇಪಗಳಿಗೆ ಉತ್ತರಿಸಲು ನಮಗೆ 1 ವಾರ ಸಮಯ ಬೇಕು’ ಎಂದು ಕೋರಿದರು.

ಪೀಠದ ಸಮ್ಮತಿ, ಯಥಾಸ್ಥಿತಿಗೆ ಸೂಚನೆ:

ಸರ್ಕಾರದ ವಾದಕ್ಕೆ ಉತ್ತರಿಸಿದ ನ್ಯಾಯಪೀಠ, ‘ಸಾಕಷ್ಟು ಅರ್ಜಿಗಳು ಸಲ್ಲಿಕೆ ಆಗಿರುವ ಕಾರಣ ಬೇಗ ವಿಚಾರಣೆ ಸಾಧ್ಯವಿಲ್ಲ. ಮುಂದಿನ ವಿಚಾರಣೆಯನ್ನು ಮೇ 5ರಂದು ನಡೆಸಲಾಗುವುದು. ಈ ನಡುವೆ 1 ವಾರದಲ್ಲಿ ಸರ್ಕಾರ ಉತ್ತರ ನೀಡಬೇಕು. ಸರ್ಕಾರ ತನ್ನ ನಿಲುವು ತಿಳಿಸಿದ 5 ದಿನದಲ್ಲಿ ಅರ್ಜಿದಾರರು ಆಕ್ಷೇಪ ಸಲ್ಲಿಸಬಹುದು’ ಎಂದು ಹೇಳಿತು. ಅಲ್ಲದೆ, ‘ಸರ್ಕಾರ ಕೆಲವು ತಾತ್ಕಾಲಿಕ ಪ್ರಸ್ತಾವಗಳನ್ನು ನಮ್ಮ ಮುಂದೆ ಇಟ್ಟಿದೆ. ಅದಕ್ಕೆ ನಮ್ಮ ಸಮ್ಮತಿ ಇದೆ’ ಎಂದು 3 ಮಹತ್ವದ ಸೂಚನೆಗಳನ್ನು ಕೇಂದ್ರ ಸರ್ಕಾರಕ್ಕೆ ನೀಡಿತು. ಅವು..

1. ಮುಂದಿನ ವಿಚಾರಣೆಯವರೆಗೆ ಯಥಾಸ್ಥಿತಿ ಕಾಯ್ದುಕೊಳ್ಳಬೇಕು. ಮುಂದಿನ ವಿಚಾರಣೆ ಮೇ 5ಕ್ಕೆ ನಡೆಯಲಿದೆ.

2. ಅಧಿಸೂಚನೆ ಅಥವಾ ನೋಂದಣಿ ಮೂಲಕ ಘೋಷಿಸಲಾದ ವಕ್ಫ್-ಬೈ-ಯೂಸರ್ ಸೇರಿದಂತೆ ವಕ್ಫ್‌ ಆಸ್ತಿಗಳನ್ನು ಮುಂದಿನ ವಿಚಾರಣೆಯ ದಿನಾಂಕದವರೆಗೆ ಡಿ-ನೋಟಿಫೈ ಮಾಡಬಾರದು.3. ಕೇಂದ್ರ ವಕ್ಫ್ ಮಂಡಳಿಗಳು ಮತ್ತು ರಾಜ್ಯ ವಕ್ಫ್ ಮಂಡಳಿಗಳಿಗೆ ಯಾವುದೇ ಹೊಸ ನೇಮಕ ಮಾಡಬಾರದು. ಅರ್ಥಾತ್‌ 2025ರ ವಕ್ಫ್ ತಿದ್ದುಪಡಿ ಕಾಯ್ದೆಯಲ್ಲಿ ಜಾರಿಗೆ ತರಲಾಗಿದ್ದ ‘ವಕ್ಫ್‌ ಮಂಡಳಿಗಳಲ್ಲಿ ಮುಸ್ಲಿಮೇತರರಿಗೂ (ಹಿಂದುಗಳಿಗೂ) ಅವಕಾಶ’ ಎಂಬ ನಿಯಮಕ್ಕೆ ಬ್ರೇಕ್‌.

ಇದನ್ನೂ ಓದಿ: ವಕ್ಫ್ ಕಾಯ್ದೆ ತಿದ್ದುಪಡಿಗೆ ತಡೆ ನೀಡಲು ಸುಪ್ರೀಂ ನಕಾರ

ವಿವಾದ ಸೃಷ್ಟಿಸಿದ್ದ ಕಾಯ್ದೆ:

ಹೊಸ ವಕ್ಫ್‌ ಕಾನೂನು ವಕ್ಫ್ ಮಂಡಳಿಗಳ ಹಾಲಿ ಸಂಯೋಜನೆಯನ್ನು ಮಾರ್ಪಡಿಸುತ್ತದೆ ಹಾಗೂ ಮುಸ್ಲಿಮೇತರರನ್ನು ಅದರ ಸದಸ್ಯರನ್ನಾಗಿ ಮಾಡುವುದು ಕಡ್ಡಾಯಗೊಳಿಸುತ್ತದೆ. ಹಳೆಯ ವಕ್ಫ್‌ ಆಸ್ತಿಗಳನ್ನು ಡಿ-ನೋಟಿಫೈ ಮಾಡಲು ಅವಕಾಶ ನೀಡುತ್ತದೆ. ಇದು ಮುಸ್ಲಿಮರ ಮೂಲಭೂತ ಹಕ್ಕಿಗೆ ಧಕ್ಕೆ ತರುತ್ತದೆ ಎಂದು ಪ್ರಶ್ನಿಸಿ ಹಲವು ರಾಜಕೀಯ ಪಕ್ಷಗಳು, ಮುಖಂಡರು ಹಾಗೂ ಮುಸ್ಲಿಂ ಮಂಡಳಿಗಳು ಸುಪ್ರೀಂ ಕೋರ್ಟ್‌ ಕದತಟ್ಟಿದ್ದವು. ಬುಧವಾರ ಇದರ ವಿಚಾರಣೆ ಆರಂಭಿಸಿದ್ದ ಪೀಠ, ಇದರ ವಿಚಾರಣೆ ಮುಗಿಯಲು 5ರಿಂದ 8 ತಿಂಗಳು ಹಿಡಿಯಬಹುದು ಎಂದಿತ್ತು ಹಾಗೂ ಮುಸ್ಲಿಮರ ವಕ್ಫ್‌ ಮಂಡಳಿಗಳಲ್ಲಿ ಹಿಂದೂಗಳ ನೇಮಕವನ್ನು ಪ್ರಶ್ನಿಸಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕಾರ್‌ನಲ್ಲಿ ಜೋಡಿ 'ಸರಸ' ಸೆರೆಹಿಡಿದ ಟೋಲ್‌ ಮ್ಯಾನೇಜರ್‌, ಸಿಸಿಟಿವಿ ವಿಡಿಯೋ ತೋರಿಸಿ ಬ್ಲ್ಯಾಕ್‌ಮೇಲ್‌!
ವಿಶ್ವದ ಟಾಪ್ 10 ಬೊಟಾನಿಕಲ್ ಗಾರ್ಡನ್ ಲಿಸ್ಟ್‌ನಲ್ಲಿ ನಂ.1 ನಮ್ಮ ಲಾಲ್‌ಬಾಗ್