ಬ್ಯಾಂಕ್ ವಂಚನೆ ಆರೋಪಿ ವಿಜಯ್ ಮಲ್ಯಗೆ 4 ತಿಂಗಳ ಜೈಲು , 2 ಸಾವಿರ ರೂ ದಂಡ!

By Suvarna News  |  First Published Jul 11, 2022, 11:47 AM IST
  • ಬರೋಬ್ಬರಿ 9,000 ಕೋಟಿ ರೂಪಾಯಿ ವಂಚಿಸಿ ಪರಾರಿ
  • ಇಂಗ್ಲೆಂಡ್‌ನಲ್ಲಿ ನೆಲೆಸಿರುವ ಉದ್ಯಮಿ ವಿಜಯ್ ಮಲ್ಯ
  • ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಶಿಕ್ಷೆ ವಿಧಿಸಿದ ಕೋರ್ಟ್

ದೆಹಲಿ(ಜು.11): ಭಾರತದ ಬ್ಯಾಂಕ್‌ಗಳಿಗೆ  ಬರೋಬ್ಬರಿ 9,000 ಕೋಟಿ ರೂಪಾಯಿ ವಂಚಿಸಿ ವಿದೇಶಕ್ಕೆ ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ ವಿರುದ್ಧ ಸುಪ್ರೀಂ ಕೋರ್ಟ್ ಶಿಕ್ಷೆ ಪ್ರಕಟಿಸಿದೆ. 2017ರ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ವಿಜಯ್ ಮಲ್ಯ ದೋಷಿ ಎಂದು ಸಾಬೀತಾಗಿದ್ದು, 4 ತಿಂಗಳು ಜೈಲು ಹಾಗೂ 2,000 ರೂಪಾಯಿ ದಂಡ ವಿಧಿಸಿದೆ. 

2017ರಲ್ಲಿ ಕರ್ನಾಟಕ ಹೈಕೋರ್ಟ್ ಆದೇಶ ಉಲ್ಲಂಘಿಸಿ ಡಿಯಾಗೋ ಒಪ್ಪಂದದಿಂದ ಬಂದ 40 ಮಿಲಿಯನ್ ಅಮೆರಿಕನ್ ಡಾಲರ್ ಹಣವನ್ನು ತಮ್ಮ ಮಕ್ಕಳ ಹೆಸರಿಗೆ ವರ್ಗಾಯಿಸಿದ್ದರು. ಮಕ್ಕಳಾದ ಸಿದ್ದಾರ್ಥ್ ಮಲ್ಯ, ಲೀನಾ ಮಲ್ಯ ಹಾಗೂ ತಾನ್ಯ ಮಲ್ಯ ಖಾತೆಗೆ ಈ ಹಣ ವರ್ಗಾಯಿಸಿದ್ದರು. ಬ್ಯಾಂಕ್ ವಂಚನೆ ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್ ಮಲ್ಯ ಆಸ್ತಿ, ಖಾತೆಗಳನ್ನು ಮುಟ್ಟುಗೋಲು ಹಾಕಿತ್ತು. ಆದರೆ ಇದರು ನಡುವೆ ಕಿಂಗ್‌ಫಿಶರ್ ಸೇರಿದಂತೆ ಇತರ ಸಂಸ್ಥೆಗಳನ್ನು ಡಿಯಾಗೋ ಜೊತೆ ಮಾರಾಟ ಒಪ್ಪಂದ ಮಾಡಿಕೊಂಡಿದ್ದರು. ಈ ಒಪ್ಪಂದದಲ್ಲಿ ಬಂದ 40 ಮಿಲಿಯನ್ ಅಮೆರಿಕನ್ ಡಾಲರ್ ಹಣವನ್ನು ನೇರವಾಗಿ ಮಕ್ಕಳ ಹೆಸರಿಗೆ ವರ್ಗಾಯಿಸಿದ್ದರು. ಇದು ಕೋರ್ಟ್ ಆದೇಶದ ಉಲ್ಲಂಘನೆಯಾಗಿತ್ತು.

Tap to resize

Latest Videos

ವಿಜಯ್ ಮಲ್ಯ ಜೀವನ ಶೀಘ್ರದಲ್ಲೇ ಸಿನಿಮಾ

ಬ್ಯಾಂಕ್‌ಗಳಿಗೆ ಬಾಕಿ ಪಾವತಿ ಮಾಡುವಂತೆ ಕೋರ್ಚ್‌ ಈ ಹಿಂದೆ ತೀರ್ಪು ನೀಡಿದ್ದ ಹೊರತಾಗಿಯೂ ಮಲ್ಯ ತಮ್ಮ ಖಾತೆಯಿಂದ ಪುತ್ರನ ಖಾತೆಗೆ ಅಕ್ರಮವಾಗಿ ಅಂದಾಜು 300 ಕೋಟಿ ವರ್ಗ ಮಾಡಿದ್ದರು. ಈ ಕೇಸಲ್ಲಿ ಮಲ್ಯ ದೋಷಿ ಎಂದು 2017ರಲ್ಲೇ ಕೋರ್ಚ್‌ ತೀರ್ಪು ನೀಡಿತ್ತು. ಶಿಕ್ಷೆಯ ಪ್ರಮಾಣ ಕುರಿತ ವಾದ-ಪ್ರತಿವಾದಕ್ಕೆ ಮಲ್ಯ ವಕೀಲರು ಗೈರಾಗಿದ್ದರು. ಹೀಗಾಗಿ ಇಂದು ಸುಪ್ರೀಂ ಕೋರ್ಟ್ ಶಿಕ್ಷೆ ಪ್ರಕಟಿಸಿದೆ.

ಮಲ್ಯ ನಡೆ ವಿರುದ್ಧ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕೋರ್ಟ್ ಮೆಟ್ಟಿಲೇರಿತ್ತು. ತಮಗೆ ಬರಬೇಕಿದ್ದ ಹಣವನ್ನು ಮಲ್ಯ ತಮ್ಮ ಮಕ್ಕಳ ಹೆಸರಿಗೆ ವರ್ಗಾಯಿಸಿದ್ದಾರೆ. ಇದು ಕೋರ್ಟ್ ಆದೇಶ ಉಲ್ಲಂಘನೆಯಾಗಿದೆ ಎಂದು ವಾದಿಸಿತ್ತು. ಪ್ರಕರಣ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಕಾನೂನು ಪೀಠದ ಜಸ್ಟೀಸ್ ಯುಯು ಲಲಿತ್, ಎಸ್ ರವೀಂದ್ರ ಭಟ್ ಹಾಗೂ ಪಿಎಸ್ ನರಸಿಂಹ ಅವರ ಪೀಠ ಮಹತ್ವದ ತೀರ್ಪು ನೀಡಿದೆ. ಮಲ್ಯ ನ್ಯಾಯಾಂಗ ನಿಂದನೆ ಮಾಡಿದ್ದಾರೆ. ಹೀಗಾಗಿ  4 ತಿಂಗಳ ಜೈಲು ಶಿಕ್ಷೆ ಜೊತೆಗೆ 2,000 ರೂಪಾಯಿ ದಂಡ ವಿಧಿಸಿದೆ.

 

ಟೆಸ್ಟ್ ಪಂದ್ಯದ ವೇಳೆ ಸೆರೆ ಸಿಕ್ಕ ವಿಜಯ್ ಮಲ್ಯ!

ವಿಜಯ್ ಮಲ್ಯ ಭಾರತದ ಬ್ಯಾಂಕ್‌ಗಳಲ್ಲಿ ಒಟ್ಟು 9,000 ಕೋಟಿ ರೂಪಾಯಿ ವಂಚಿಸಿದ ಆರೋಪವಿದೆ. ಬಂಧನ ಭೀತಿಯಿಂದ ಪಾರಾಗಲು ವಿಜಯ್ ಮಲ್ಯ ರಾತ್ರೋರಾತ್ರಿ ವಿದೇಶಕ್ಕೆ ಪರಾರಿಯಾಗಿದ್ದರು. ಬಳಿಕ ಮಲ್ಯ ಇಂಗ್ಲೆಂಡ್‌ನಲ್ಲಿ ನೆಲೆಸಿದ್ದಾರೆ ಅನ್ನೋದನ್ನು ತನಿಖಾ ಸಂಸ್ಥೆಗಳು ಪತ್ತೆಹಚ್ಚಿತ್ತು. ಸದ್ಯ ಮಲ್ಯ ಭಾರತಕ್ಕೆ ಗಡೀಪಾರು ಮಾಡಲು ಕೇಂದ್ರ ಸರ್ಕಾರ ಇಂಗ್ಲೆಂಡ್ ಜೊತೆ ಕಾನೂನು ಹೋರಾಟ ಮಾಡುತ್ತಿದೆ. 

52 ಕೋಟಿ ರೂಗೆ ಹರಾಜಾಗಿದೆ ಕಿಂಗ್‌ಫಿಶರ್ ಮುಖ್ಯಕಚೇರಿ
ಮುಂಬೈನ ವಿಲೆ ಪಾರ್ಲೆ ಪ್ರದೇಶದಲ್ಲಿರುವ ಕಿಂಗ್‌ಫಿಶರ್‌ ಹೌಸ್‌ ಅನ್ನು ಹೈದರಾಬಾದ್‌ ಮೂಲದ ಸ್ಯಾಟರ್ನ್‌ ರಿಯಲ್ಟ​ರ್‍ಸ್ ಕಂಪನಿ 52.25 ಕೋಟಿ ರು.ಗಳಿಗೆ ಸಾಲ ವಸೂಲಾತಿ ಪ್ರಾಧಿಕಾರ ಹರಾಜು ಹಾಕಿದೆ. ಹಿಂದೊಮ್ಮೆ ಇದು ಕಿಂಗ್‌ಫಿಶರ್‌ ಏರ್‌ಲೈನ್ಸ್‌ನ ಮುಖ್ಯ ಕಚೇರಿ ಆಗಿತ್ತು. ಮುಂಬೈ ವಿಮಾನ ನಿಲ್ದಾಣದ ಹೊರವಲಯದಲ್ಲಿರುವ 2401.70 ಚದರ ಮೀಟರ್‌ನಲ್ಲಿ ನಿರ್ಮಾಣ ಆಗಿರುವ ಕಿಂಗ್‌ ಫಿಶರ್‌ ಹೌಸ್‌ ಅನ್ನು 2016ರಿಂದ ಹರಾಜು ಹಾಕಲಾಗುತ್ತಿದೆ. ಆರಂಭದಲ್ಲಿ ಇದಕ್ಕೆ 135 ಕೋಟಿ ರು. ದರವನ್ನು ನಿಗದಿ ಮಾಡಲಾಗಿತ್ತು. ಆದರೆ, ದರ ಹೊಂದಾಣಿಕೆ ಆಗದ ಕಾರಣ ಅದನ್ನು ಕೊಳ್ಳಲು ಯಾರೂ ಮುಂದೆ ಬರುತ್ತಿರಲಿಲ್ಲ. ಮಲ್ಯರಿಂದ ಬಾಕಿ ಬರಬೇಕಿರುವ ಸಾಲವನ್ನು ವಸೂಲಿ ಮಾಡುವ ನಿಟ್ಟಿನಿಂದ ಸಾಲ ಮರುಪಾವತಿ ನ್ಯಾಯಮಂಡಳಿ 9 ಯತ್ನದಲ್ಲಿ ಕಿಂಗ್‌ಫಿಶರ್‌ ಹೌಸ್‌ ಅನ್ನು ಮಾರಾಟ ಮಾಡುವಲ್ಲಿ ಯಶಸ್ವಿ ಆಗಿದೆ.

 

click me!