ಸೇನೆಯ ನೈತಿಕತೆ ಕುಗ್ಗಿಸಬೇಡಿ: ಪಹಲ್ಗಾಮ್‌ ನ್ಯಾಯಾಂಗ ತನಿಖೆ ಅರ್ಜಿ ವಜಾ ಮಾಡಿದ ಸುಪ್ರೀಂ!

Published : May 01, 2025, 04:02 PM ISTUpdated : May 01, 2025, 04:16 PM IST
ಸೇನೆಯ ನೈತಿಕತೆ ಕುಗ್ಗಿಸಬೇಡಿ: ಪಹಲ್ಗಾಮ್‌ ನ್ಯಾಯಾಂಗ ತನಿಖೆ ಅರ್ಜಿ ವಜಾ ಮಾಡಿದ ಸುಪ್ರೀಂ!

ಸಾರಾಂಶ

ಪಹಲ್ಗಾಮ್ ದಾಳಿ ನ್ಯಾಯಾಂಗ ತನಿಖೆ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ಸೇನಾ ನೈತಿಕತೆ ಕುಗ್ಗುತ್ತದೆ ಎಂದು ಅಭಿಪ್ರಾಯಪಟ್ಟ ನ್ಯಾಯಾಲಯ, ಅರ್ಜಿದಾರರ "ಬೇಜವಾಬ್ದಾರಿ"ಯನ್ನು ಖಂಡಿಸಿ, ವಿಷಯದ ಸೂಕ್ಷ್ಮತೆ ಅರಿಯುವಂತೆ ತಾಕೀತು ಮಾಡಿತು. ಕಾಶ್ಮೀರಿ ವಿದ್ಯಾರ್ಥಿಗಳ ಸುರಕ್ಷತಾ ಕ್ರಮ ಕೋರಿದ್ದನ್ನೂ ನ್ಯಾಯಾಲಯ ತಳ್ಳಿಹಾಕಿತು.

ನವದೆಹಲಿ (ಮೇ.1): ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕೆಂದು ಕೋರಿ ಸಲ್ಲಿಸಲಾದ ಅರ್ಜಿಯನ್ನು ಗುರುವಾರ ವಿಚಾರಣೆಗೆ ತೆಗೆದುಕೊಳ್ಳಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಹಾಗೇನಾದರೂ ನ್ಯಾಯಾಂಗ ತನಿಖೆಗೆ ಆದೇಶ ಮಾಡಿದಲ್ಲಿ ಅದು ಸೇನೆಯ ನೈತಿಕತೆ ಕುಗ್ಗಿಸುವ ಕೆಲಸವಾಗುತ್ತದೆ ಎಂದು ಹೇಳಿದೆ. ಇದೇ ವೇಳೆ ಅರ್ಜಿದಾರರನ್ನು ತರಾಟೆಗೆ ತೆಗೆದುಕೊಂಡ ಸುಪ್ರೀಂ ಕೋರ್ಟ್, ಅಂತಹ ಅರ್ಜಿಯನ್ನು ಸಲ್ಲಿಸುವ ಮೊದಲು ವಿಷಯದ "ಸೂಕ್ಷ್ಮತೆ"ಯನ್ನು ಪರಿಶೀಲಿಸಬೇಕಾಗಿತ್ತು ಎಂದು ಹೇಳಿದೆ.

"ಇಂತಹ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಸಲ್ಲಿಸುವ ಮೊದಲು ಜವಾಬ್ದಾರರಾಗಿರಿ. ನಿಮ್ಮ ದೇಶದ ಬಗ್ಗೆಯೂ ನಿಮಗೂ ಸ್ವಲ್ಪ ಕರ್ತವ್ಯವಿದೆ. ಪ್ರತಿಯೊಬ್ಬ ಭಾರತೀಯನು ಭಯೋತ್ಪಾದನೆಯ ವಿರುದ್ಧ ಹೋರಾಡಲು ಕೈಜೋಡಿಸಿದ ನಿರ್ಣಾಯಕ ಸಮಯ ಇದು. ಸೇನಾಪಡೆಗಳ ಸ್ಥೈರ್ಯ ಕುಗ್ಗಿಸಬೇಡಿ. ಈ ವಿಷಯದ ಸೂಕ್ಷ್ಮತೆಯನ್ನು ನೋಡಿ" ಎಂದು ನ್ಯಾಯಮೂರ್ತಿ ಸೂರ್ಯಕಾಂತ್ ಹೇಳಿದ್ದಾರೆ.

ಪಹಲ್ಗಾಮ್‌ನ ಬೈಸರನ್ ಕಣಿವೆಯಲ್ಲಿ ಪಾಕಿಸ್ತಾನ ಮೂಲದ ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ 26 ಜನರು ಸಾವನ್ನಪ್ಪಿದ ಘಟನೆಯ ತನಿಖೆಗಾಗಿ ನ್ಯಾಯಾಂಗ ಆಯೋಗವನ್ನು ರಚಿಸುವಂತೆ ಅರ್ಜಿಯಲ್ಲಿ ಕೋರಲಾಗಿತ್ತು. ನ್ಯಾಯಾಧೀಶರ ಕೆಲಸವು ವಿವಾದಗಳನ್ನು ನಿರ್ಧರಿಸುವುದು ಮತ್ತು ವಿಚಾರಣೆ ನಡೆಸುವುದಲ್ಲ ಎಂದು ನ್ಯಾಯಾಲಯ ಹೇಳಿದೆ.

"ನಾವು ಯಾವಾಗಿನಿಂದ ತನಿಖಾ ಪರಿಣತಿಯನ್ನು ಪಡೆದುಕೊಂಡಿದ್ದೇವೆ? ನೀವು ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಾಧೀಶರನ್ನು ತನಿಖೆ ಮಾಡಲು ಕೇಳುತ್ತಿದ್ದೀರಿ. ಅವರು ತೀರ್ಪು ನೀಡಬಹುದು. ನಮಗೆ ಆದೇಶ ಹೊರಡಿಸಲು ಹೇಳಬೇಡಿ" ಎಂದು ನ್ಯಾಯಾಲಯವು ಅರ್ಜಿದಾರರನ್ನು ತರಾಟೆಗೆ ತೆಗೆದುಕೊಂಡಿತು.

ಜಮ್ಮು ಮತ್ತು ಕಾಶ್ಮೀರದ ಹೊರಗೆ ಅಧ್ಯಯನ ಮಾಡುತ್ತಿರುವ ಕಾಶ್ಮೀರಿ ವಿದ್ಯಾರ್ಥಿಗಳನ್ನು ರಕ್ಷಿಸಲು ನಿರ್ದೇಶನಗಳನ್ನು ಕೋರಿದ ನಂತರ ಅರ್ಜಿದಾರರನ್ನು ನ್ಯಾಯಾಲಯ ಮತ್ತೆ ತರಾಟೆಗೆ ತೆಗೆದುಕೊಂಡಿತು. ಪಹಲ್ಗಾಮ್ ದಾಳಿಯ ನಂತರ ಕಾಶ್ಮೀರಿ ವಿದ್ಯಾರ್ಥಿಗಳ ಮೇಲೆ ದಾಳಿ ನಡೆಯುತ್ತಿದೆ ಎಂದು ಅರ್ಜಿದಾರರು ಹೇಳಿಕೊಂಡಿದ್ದಾರೆ.

"ನೀವು ಮಾಡುತ್ತಿರುವ ಮನವಿಯ ಬಗ್ಗೆ ನಿಮಗೆ ಖಚಿತವಾಗಿದೆಯೇ? ಮೊದಲು ನೀವು ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಾಧೀಶರನ್ನು ತನಿಖೆ ಮಾಡಲು ಕೇಳುತ್ತೀರಿ. ಅವರು ತನಿಖೆ ನಡೆಸಲು ಸಾಧ್ಯವಿಲ್ಲ. ನಂತರ ನೀವು ಮಾರ್ಗಸೂಚಿಗಳು, ಪರಿಹಾರ, ನಂತರ ಪತ್ರಿಕಾ ಮಂಡಳಿಗೆ ನಿರ್ದೇಶನಗಳನ್ನು ಕೇಳುತ್ತೀರಿ. ರಾತ್ರಿಯಲ್ಲಿ ಇದನ್ನೆಲ್ಲಾ ಓದಲು ನೀವು ನಮ್ಮನ್ನು ಒತ್ತಾಯಿಸುತ್ತೀರಿ, ಮತ್ತು ಈಗ ನೀವು ವಿದ್ಯಾರ್ಥಿಗಳ ಪರವಾಗಿ ಮಾತನಾಡುತ್ತೀರಿ" ಎಂದು ನ್ಯಾಯಾಲಯ ಹೇಳಿದೆ. ಅರ್ಜಿಯನ್ನು ಹಿಂಪಡೆಯಲು ಅನುಮತಿ ನೀಡುತ್ತಾ, ಅರ್ಜಿದಾರರು ಜಮ್ಮು ಮತ್ತು ಕಾಶ್ಮೀರದ ವಿದ್ಯಾರ್ಥಿಗಳು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಸಂಬಂಧಪಟ್ಟ ಹೈಕೋರ್ಟ್ ಅನ್ನು ಸಂಪರ್ಕಿಸಬಹುದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಕಾಶ್ಮೀರದಲ್ಲಿ ನಡೆದ ಅತ್ಯಂತ ಭೀಕರ ಭಯೋತ್ಪಾದಕ ಘಟನೆಗಳಲ್ಲಿ ಒಂದಾದ ಈ ದಾಳಿಯು ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನತೆಯನ್ನು ಹೆಚ್ಚಿಸಿದ್ದು, ಈ ಹತ್ಯಾಕಾಂಡಕ್ಕೆ ಪಾಕಿಸ್ತಾನವೇ ಕಾರಣ ಎಂದು ಆರೋಪಿಸಲಾಗಿದೆ. ಇಬ್ಬರು ಲಷ್ಕರ್ ಭಯೋತ್ಪಾದಕರು ಮತ್ತು ಸ್ಥಳೀಯ ಭಯೋತ್ಪಾದಕನೊಬ್ಬ ನಡೆಸಿದ ದಾಳಿಯ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ನಡೆಸುತ್ತಿದೆ.

ಏಪ್ರಿಲ್ 22 ರಂದು ಕಾಶ್ಮೀರದ ಪಹಲ್ಗಾಮ್‌ನಲ್ಲಿರುವ ಬೈಸರನ್ ಕಣಿವೆಯಲ್ಲಿ ಭಯೋತ್ಪಾದಕ ದಾಳಿ ನಡೆದಿತ್ತು. ಇದರಲ್ಲಿ 26 ಪ್ರವಾಸಿಗರು ಸಾವನ್ನಪ್ಪಿದ್ದರು. ಅವರಲ್ಲಿ ನೇಪಾಳದ ಪ್ರವಾಸಿಯೂ ಸೇರಿದ್ದರು. ಪ್ರವಾಸಿಗರ ಧರ್ಮವನ್ನು ಕೇಳಿದ ನಂತರ ಭಯೋತ್ಪಾದಕರು ಅವರ ಮೇಲೆ ಗುಂಡು ಹಾರಿಸಿದ್ದಾರೆ.. ರೆಸಿಸ್ಟೆನ್ಸ್ ಫ್ರಂಟ್ (ಟಿಆರ್‌ಎಫ್) ಈ ದಾಳಿಯ ಜವಾಬ್ದಾರಿಯನ್ನು ಈ ಹಿಂದೆ ವಹಿಸಿಕೊಂಡಿತ್ತು, ಆದರೆ ನಂತರ ಅದನ್ನು ನಿರಾಕರಿಸಿತು. ಪಹಲ್ಗಾಮ್ ದಾಳಿ ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ತನಿಖೆ ನಡೆಸುತ್ತಿದೆ. ಎನ್‌ಐಎ ಏಪ್ರಿಲ್ 27 ರಂದು ಜಮ್ಮುವಿನಲ್ಲಿ ಪ್ರಕರಣ ದಾಖಲಿಸಿತ್ತು.

 


 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಇಂಡಿಗೋ ವಿಮಾನ ರದ್ದಾಗಿ ಪರದಾಡುತ್ತಿರುವ ಪ್ರಯಾಣಿಕರ ನೆರವಿಗೆ ಧಾವಿಸಿದ ಭಾರತೀಯ ರೈಲ್ವೆ
ಅಫೀಸ್‌ ಸಮಯ ಬಳಿಕ ಕರೆ-ಇಮೇಲ್ ಮಾಡಂಗಿಲ್ಲ, ಡಿಸ್‌ಕನೆಕ್ಟ್ ಬಿಲ್ ಲೋಕಸಭೆಯಲ್ಲಿ ಮಂಡನೆ