
ನವದೆಹಲಿ(ಜ.8) ಬಿಲ್ಕಿಸ್ ಬಾನೋ ಅತ್ಯಾಚಾರ ಪ್ರಕರಣ ಮತ್ತೆ ಭಾರಿ ಸಂಚಲನ ಸೃಷ್ಟಿಸಿದೆ.ಸನ್ನಡತೆ ಆಧಾರದಲ್ಲಿ ಗುಜರಾತ್ ಸರ್ಕಾರ ಬಿಲ್ಕಿಸ್ ಬಾನು ಪ್ರಕರಣದ 11 ಅಪರಾಧಿಗಳನ್ನು ಅವಧಿಪೂರ್ವ ಬಿಡುಗಡೆ ಮಾಡಿತ್ತು. ಈ ಆದೇಶ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಅಪರಾಧಿಗಳ ಅವಧಿಪೂರ್ವ ಬಿಡುಗಡೆಗೊಳಿಸಿದ ಗುಜರಾತ್ ಸರ್ಕಾರದ ಆದೇಶವನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ. ಹೀಗಾಗಿ ಬಿಡುಗಡೆಯಾಗಿರುವ 11 ಅತ್ಯಾಚಾರಿಗಳು ಮತ್ತೆ ಜೈಲು ಸೇರಬೇಕಾದ ಅನಿವಾರ್ಯತೆ ಎದುರಾಗಿದೆ. ಇಷ್ಟೇ ಅಲ್ಲ ಈ ಪ್ರಕರಣ ಗುಜರಾತ್ ಸರ್ಕಾರಕ್ಕೆ ತೀವ್ರ ಹಿನ್ನಡೆ ತಂದಿದೆ.
11 ಮಂದಿ ಆರೋಪಿಗಳನ್ನು ಬಿಡುಗಡೆ ಮಾಡಿದ ಕ್ರಮವನ್ನು ಪ್ರಶ್ನಿಸಿ ಬಿಲ್ಕಿಸ್ ಬಾನೋ ವಕೀಲರು ಹಾಗೂ ಹಲವು ಸಾರ್ವಜನಿಕ ಹಿಸಾಸಕ್ತಿ ಅರ್ಜಿಗಳು ಸಲ್ಲಿಕೆಯಾಗಿದ್ದವು. ಈ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾ।ಬಿ.ವಿ.ನಾಗರತ್ನ ಮತ್ತು ನ್ಯಾ।ಉಜ್ಜಲ್ ಭುಯಾನ್ ಅವರಿದ್ದ ಪೀಠ ತೀರ್ಪು ನೀಡಿದೆ. ಪ್ರಕರಣದ ವಿಚಾರಣೆ ಸಂಪೂರ್ಣವಾಗಿ ನಡೆದಿರುವುದು ಮಹಾರಾಷ್ಟ್ರದಲ್ಲಿ. ಹೀಗಾಗಿ ಅಪರಾಧಿಗಳಿಗೆ ಕ್ಷಮಾಧಾನ, ಸನ್ನಡತೆ ಆಧಾರದಲ್ಲಿ ಬಿಡುಗಡೆ ಮಾಡುವ ಅಧಿಕಾರ ಇರುವುದು ಮಹಾರಾಷ್ಟ್ರ ಸರ್ಕಾರಕ್ಕೆ ಮಾತ್ರ. ಆದರೆ ಇಲ್ಲಿ ಗುಜರಾತ್ ಸರ್ಕಾರ ಅಪರಾಧಿಗಳ ಬಿಡುಗಡೆ ಮಾಡಿದೆ. ಗುಜರಾತ್ ಸುಪರ್ದಿಯಲ್ಲಿ ಇಲ್ಲದೆ ಇರುವ ಪ್ರಕರಣಕ್ಕೆ ಸರ್ಕಾರ ಕೈಹಾಕಿದೆ. ಇದು ಕಾನೂನು ಬಾಹಿರ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಬಿಲ್ಕಿಸ್ ಅತ್ಯಾಚಾರಿಗಳ ಬಿಡುಗಡೆಗೆ ಸುಪ್ರೀಂ ತೀವ್ರ ತರಾಟೆ
ಅಪರಾಧಿಗಳನ್ನು ಬಿಡುಗಡೆ ಮಾಡುವ ಮೊದಲು ನ್ಯಾಯಾಲಯದ ಅನುಮತಿ ಪಡೆಯಬೇಕಿತ್ತು. ಘಟನೆ ನಡೆದಿರುವುದು ಹಾಗೂ ಅಪರಾಧಿಗಳು ಶಿಕ್ಷೆ ಅನುಭವಿಸಿರುವುದು ಗುಜರಾತ್‌ನಲ್ಲಿ ಸರಿ. ಆದರೆ ಪ್ರಕರಣದ ವಿಚಾರಣೆ ನಡೆದಿರುವುದು ಮಹಾರಾಷ್ಟ್ರದಲ್ಲಿ. ಅಪರಾಧ ಎಲ್ಲಿ ನಡೆಯಿತು, ಶಿಕ್ಷೆ ಎಲ್ಲಿ ಆಗಿದೆ ಅನ್ನೋದಕ್ಕಿಂತ ವಿಚಾರಣೆ ನಡೆದ ರಾಜ್ಯಗಳೇ ಮುಖ್ಯ. ಅಪರಾಧ ಸಂಭವಿಸಿದ ರಾಜ್ಯ ಕ್ಷಮಾಧಾನ, ಅವಧಿಪೂರ್ವ ಬಿಡುಗಡೆ ಮಾಡುವ ಸಂಪೂರ್ಣ ಅಧಿಕಾರ ಹೊಂದಿಲ್ಲ. ಹೀಗಾಗಿ ಗುಜರಾತ್ ಸರ್ಕಾರದ ಆದೇಶ ರದ್ದುಗೊಳಿಸುವುದಾಗಿ ಸುಪ್ರೀಂ ಕೋರ್ಟ್ ಹೇಳಿದೆ.
ಗುಜರಾತ್ ಸರ್ಕಾರ ಬಿಲ್ಕಿಸ್ ಬಾನು ಪ್ರಕರಣದ ಎಲ್ಲಾ 11 ದೋಷಿಗಳು ಜೈಲಿನಲ್ಲಿ ಉತ್ತಮ ನಡತೆ ತೋರಿದ್ದಾರೆ ಮತ್ತು ಈಗಾಗಲೇ 14 ವರ್ಷ ಜೈಲು ಶಿಕ್ಷೆ ಅನುಭವಿಸಿರುವ ಕಾರಣ ಅವರನ್ನು ಅವಧಿಪೂರ್ವ ಬಿಡುಗಡೆ ಮಾಡಬಹುದು ಎಂದು ಗುಜರಾತ್ ಸರ್ಕಾರದ ಸಮಿತಿಯೊಂದು ಸರ್ಕಾರಕ್ಕೆ ಶಿಫಾರಸು ಮಾಡಿತ್ತು. ಆ ಶಿಫಾರಸಿನ ಅನ್ವಯ, 11 ದೋಷಿಗಳನ್ನು ಕಳೆದ ವರ್ಷ ಕ್ಷಮಾದಾನ ನೀಡಿ ಆಗಸ್ಟ 15, 2023ರಂದು ಗುಜರಾತ್ ಸರ್ಕಾರ ಬಿಡುಗಡೆ ಮಾಡಿತ್ತು.
"ಅವರು ಅತ್ಯಾಚಾರಿಗಳ ಜೊತೆಗಿದ್ದಾರೆ": Bilkis Bano ಅತ್ಯಾಚಾರಿಗಳ ಬಿಡುಗಡೆ, ಮೋದಿ ಟೀಕಿಸಿದ ರಾಹುಲ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ