ನ್ಯಾ. ಗವಾಯಿ ನೇತೃತ್ವದ ಸುಪ್ರೀಂ ಕೋರ್ಟ್ ತಂಡ ಮಣಿಪುರದ ಚುರಾಚಂದ್‌ಪುರಕ್ಕೆ ಭೇಟಿ ನೀಡಿ, ಸಂಘರ್ಷದಿಂದ ನಿರಾಶ್ರಿತರಾದವರೊಂದಿಗೆ ಸಂವಾದ ನಡೆಸಿದೆ. ಹಿಂಸೆಯಿಂದ ತತ್ತರಿಸಿರುವ ಜನರ ವಿಶ್ವಾಸ ಹೆಚ್ಚಿಸಲು ನ್ಯಾಯಾಲಯದ ತಂಡವು ಪರಿಹಾರ ಕೇಂದ್ರಗಳಿಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದೆ.
ಇಂಫಾಲ್: 2 ವರ್ಷದಿಂದ ನಲುಗಿರುವ ಜನಾಂಗೀಯ ಸಂಘರ್ಷಪೀಡಿತ ಮಣಿಪುರದ ಚುರಾಚಂದ್‌ಪುರ ಜಿಲ್ಲೆಗೆ ನ್ಯಾಯಮೂರ್ತಿ ಬಿ.ಆರ್. ಗವಾಯಿ ನೇತೃತ್ವದ ಸುಪ್ರೀಂ ಕೋರ್ಟ್ ನ್ಯಾಯಾಧೀಶರ ತಂಡ ಶನಿವಾರ ಭೇಟಿ ನೀಡಿ, ಹಿಂಸಾಚಾರದಿಂದ ನಿರಾಶ್ರಿತರಾದ ಜನರ ಜತೆ ಸಂವಾದ ನಡೆಸಿದೆ. ಈ ಮೂಲಕ ಹಿಂಸೆಯಿಂದ ಎದೆಗುಂದಿರುವ ಜನರ ವಿಶ್ವಾಸ ವರ್ಧನೆಗೆ ಯತ್ನಿಸಿದೆ.
ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಗವಾಯಿ, ವಿಕ್ರಮ್ ನಾಥ್, ಎಂ.ಎಂ. ಸುಂದರೇಶ್, ಕೆ.ವಿ. ವಿಶ್ವನಾಥನ್ ಮತ್ತು ಮಣಿಪುರ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಡಿ. ಕೃಷ್ಣಕುಮಾರ್ ಹಾಗೂ ನ್ಯಾ. ಗೋಲ್ಮೆಯ್ ಗೈಫುಲ್ಶಿಲು ಅವರು ಕಾನೂನು ಸೇವಾ ಶಿಬಿರಗಳು, ಕಾನೂನು ನೆರವು ಘಟಕಗಳು ಮತ್ತು ತಾತ್ಕಾಲಿಕ ವೈದ್ಯಕೀಯ ಸೌಲಭ್ಯಗಳನ್ನು ಆನ್‌ಲೈನ್‌ನಲ್ಲಿ ಉದ್ಘಾಟಿಸಿದರು. ಬಳಿಕ ಸದ್ಭಾವನಾ ಮಂಟಪ ಪರಿಹಾರ ಕೇಂದ್ರಕ್ಕೆ ಭೇಟಿ ನೀಡಿ ಆಂತರಿಕವಾಗಿ ಸ್ಥಳಾಂತರಗೊಂಡ ವ್ಯಕ್ತಿಗಳೊಂದಿಗೆ ಸಂವಹನ ನಡೆಸಿ, ಪರಿಸ್ಥಿತಿ ಕುರಿತು ಅವಲೋಕಿಸಿದರು.
ಮೇ 2023ರಿಂದ ಇಂಫಾಲ್ ಕಣಿವೆಯ ಮೈತೇಯಿ ಮತ್ತು ಕುಕಿ ಸಮುದಾಯಗಳ ನಡುವಿನ ಸಂಘರ್ಷದಲ್ಲಿ ಈವರೆಗೂ 250ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದು, ಸಾವಿರಾರು ಜನ ನಿರಾಶ್ರಿತರಾಗಿದ್ದಾರೆ.
ಇದನ್ನೂ ಓದಿ: ನಾಗ್ಪುರ ಗಲಭೆಯಲ್ಲಿನ ಆಸ್ತಿ ನಷ್ಟವನ್ನು ದಂಗೆಕೋರರಿಂದಲೇ ವಸೂಲಿ: ಸಿಎಂ ಫಡ್ನವಿಸ್
ದೇಶಭ್ರಷ್ಟ ಚೋಕ್ಸಿ ಬೆಲ್ಜಿಯಂನಲ್ಲಿ ಪ್ರತ್ಯಕ್ಷ
ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ (ಪಿಎನ್‌ಬಿ) 13,850 ಕೋಟಿ ರೂ. ವಂಚನೆ ಮಾಡಿ ವಿದೇಶಕ್ಕೆ ಪರಾರಿ ಆಗಿದ್ದ ಉದ್ಯಮಿ ಮೇಹುಲ್ ಚೋಕ್ಸಿ ಬೆಲ್ಜಿಯಂನ ಆಂಟ್‌ವೆರ್ಪ್‌ನಲ್ಲಿ ಪತ್ನಿ ಪ್ರೀತಿ ಚೋಕ್ಸಿ ಜತೆ ವಾಸಿಸುತ್ತಿದ್ದಾನೆ ಎಂದು ಗೊತ್ತಾಗಿದೆ. ಹೀಗಾಗಿ ಅಲ್ಲಿಂದ ಈತನನ್ಉ ಭಾರತಕ್ಕೆ ಕರೆತರಲು ಭಾರತೀಯ ಅಧಿಕಾರಿಗಳು ಬ್ರೆಜಿಲ್ ಸಹವರ್ತಿಗಳನ್ನು ಸಂಪರ್ಕಿಸಿದ್ದಾರೆ. ಈ ಮುನ್ನ ಆತ ಕೆರಿಬಿಯನ್ ದ್ವೀಪ ರಾಷ್ಟ್ರ ಆಂಟಿಗುವಾ ಮತ್ತು ಬಾರ್ಬುಡಾದಲ್ಲಿ ವಾಸಿಸುತ್ತಿದ್ದ. ಈಗ ಚಿಕಿತ್ಸೆಗಾಗಿ ಬೆಲ್ಜಿಯಂಗೆ ಆಗಮಿಸಿದ್ದಾನೆ ಎನ್ನಲಾಗಿದೆ.
ಇದನ್ನೂ ಓದಿ: ಕೇಂದ್ರ ಸರ್ಕಾರದ ಪ್ರಸ್ತಾವಿತ ಲೋಕಸಭಾ ಕ್ಷೇತ್ರ ಮರು ವಿಂಗಡಣೆ ವಿರುದ್ಧ ದಕ್ಷಿಣ ರಾಜ್ಯಗಳ ರಣಕಹಳೆ