ಕೇಂದ್ರ ಸರ್ಕಾರದ ಪ್ರಸ್ತಾವಿತ ಲೋಕಸಭಾ ಕ್ಷೇತ್ರ ಮರು ವಿಂಗಡಣೆ ವಿರುದ್ಧ ದಕ್ಷಿಣ ರಾಜ್ಯಗಳ ರಣಕಹಳೆ

ಚೆನ್ನೈನಲ್ಲಿ ನಡೆದ 6 ರಾಜ್ಯಗಳ ಸಭೆಯಲ್ಲಿ ಕ್ಷೇತ್ರ ಮರುವಿಂಗಡಣೆ ವಿರುದ್ಧ ನಿರ್ಣಯ ಕೈಗೊಳ್ಳಲಾಗಿದೆ. ಜನಸಂಖ್ಯೆ ಆಧಾರದ ಮೇಲೆ ಮರುವಿಂಗಡಣೆ ಮಾಡಿದರೆ ದಕ್ಷಿಣ ಭಾರತಕ್ಕೆ ಅನ್ಯಾಯವಾಗಲಿದೆ ಎಂದು ಸಭೆ ಅಭಿಪ್ರಾಯಪಟ್ಟಿದೆ.

Meeting in Chennai and seven resolutions against the Central Government's proposed Lok Sabha constituency redistribution mrq

ಚೆನ್ನೈ :  ಕೇಂದ್ರ ಸರ್ಕಾರದ ಪ್ರಸ್ತಾವಿತ ಲೋಕಸಭಾ ಕ್ಷೇತ್ರ ಮರುವಿಂಗಡಣೆ ವಿರುದ್ಧ ಚೆನ್ನೈನಲ್ಲಿ ಶನಿವಾರ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌ ನೇತೃತ್ವದಲ್ಲಿ ನಡೆದ 6 ರಾಜ್ಯಗಳ ಸಮಾನ ಮನಸ್ಕ ಪಕ್ಷಗಳ ಮೊದಲ ಜಂಟಿ ಕಾರ್ಯ ಸಮಿತಿ (ಜೆಎಸಿ) ಸಭೆಯು ಮರುವಿಂಗಡಣೆ ವಿರುದ್ಧ ಕಹಳೆ ಮೊಳಗಿಸಿದೆ. ‘ಜನಸಂಖ್ಯೆ ಆಧರಿಸಿ ಕ್ಷೇತ್ರ ಮರುವಿಂಗಡಣೆ ನಡೆಸಿದರೆ ಲೋಕಸಭೆಯಲ್ಲಿ ದಕ್ಷಿಣ ಭಾರತದ ಪ್ರಾತಿನಿಧ್ಯ ತಗ್ಗಲಿದೆ.  

ಜನಗಣತಿ ಆಧರಿಸಿ ಇನ್ನೂ 25 ವರ್ಷ ಕ್ಷೇತ್ರ ಮರುವಿಂಗಡಣೆ ಮಾಡಬಾರದು’ ಎಂದು ಕೇಂದ್ರವನ್ನು ಒತ್ತಾಯಿಸುವ ಒಕ್ಕೊರಲ ಗೊತ್ತುವಳಿ ಸೇರಿ 7 ಠರಾವುಗಳನ್ನು ಸಭೆ ಪಾಸು ಮಾಡಿದೆ.ಆದರೆ ಇದೇ ವೇಳೆ, ‘ಕ್ಷೇತ್ರ ಮರುವಿಂಗಡಣೆ ಪ್ರಕ್ರಿಯೆಗೆ ನಮ್ಮ ವಿರೋಧ ಇಲ್ಲ. ಅದು ಪಾರದರ್ಶಕವಾಗಿ ಹಾಗೂ ನ್ಯಾಯಸಮ್ಮತವಾಗಿರಬೇಕು. ಜನಸಂಖ್ಯಾ ನಿಯಂತ್ರಣ ನೀತಿಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತಂದ ರಾಜ್ಯಗಳಿಗೆ ಅದರಿಂದ ಅನ್ಯಾಯವಾಗುವಂತಿರಬಾರದು’ ಎಂದೂ ಒತ್ತಾಯಿಸಲಾಗಿದೆ. 

Latest Videos

ಶನಿವಾರ ಇಡೀ ದಿನ ನಡೆದ ಸಭೆಗೆ ಚಾಲನೆ ನೀಡಿ ಮಾತನಾಡಿದ ಸ್ಟಾಲಿನ್‌, ‘ಸಂಸತ್ತಿನಲ್ಲಿ ನ್ಯಾಯಯುತ ಪ್ರಾತಿನಿಧ್ಯಕ್ಕಾಗಿ ನಡೆಯುತ್ತಿರುವ ರಾಷ್ಟ್ರೀಯ ಚಳವಳಿ ಇದು’ ಎಂದು ಬಣ್ಣಿಸಿದರು. ‘ಕ್ಷೇತ್ರ ಮರುವಿಂಗಡಣೆ ವಿರೋಧಿ ಹೋರಾಟವನ್ನು ಕಾನೂನು ಮಾರ್ಗದಲ್ಲೂ ಮುನ್ನಡೆಸಲಾಗುವುದು. ಈ ಸಂಬಂಧ ಸಮಗ್ರ ಕಾನೂನು ತಂತ್ರ ರೂಪಿಸಲು ಕಾನೂನು ತಜ್ಞರ ಸಮಿತಿಯೊಂದನ್ನೂ ರಚಿಸಲಾಗುವುದು. 

ಮುಂದಿನ ಸಭೆಯನ್ನು ಹೈದರಾಬಾದ್‌ನಲ್ಲಿ ನಡೆಸಲಾಗುವುದು’ ಎಂದರು.ಸಭೆಯಲ್ಲಿ ಕರ್ನಾಟಕ ಡಿಸಿಎಂ ಡಿ.ಕೆ. ಶಿವಕುಮಾರ್‌, ತೆಲಂಗಾಣ ಸಿಎಂ ರೇವಂತ್‌ ರೆಡ್ಡಿ, ಬಿಆರ್‌ಎಸ್‌ ನಾಯಕ ಕೆ.ಟಿ. ರಾಮರಾವ್‌, ಕೇರಳ ಸಿಎಂ ಪಿಣರಾಯಿ ವಿಜಯನ್‌, ಪಂಜಾಬ್‌ ಸಿಎಂ ಭಗವಂತ್‌ ಮಾನ್‌, ಒಡಿಶಾ ಕಾಂಗ್ರೆಸ್‌ ಅಧ್ಯಕ್ಷ ಭಕ್ತ ಚರಣ್‌ ದಾಸ್‌ ವರ್ಮಾ ಮತ್ತಿತರರು ಪಾಲ್ಗೊಂಡಿದ್ದರು.ಒಡಿಶಾದ ಮಾಜಿ ಸಿಎಂ ನವೀನ್‌ ಕುಮಾರ್‌ ಪಟ್ನಾಯಕ್‌ ಅವರು ವರ್ಚುವಲ್‌ ಆಗಿ ಪಾಲ್ಗೊಂಡಿದ್ದರು. ಆದರೆ, ತೃಣಮೂಲ ಕಾಂಗ್ರೆಸ್‌ ಮಾತ್ರ ಈ ಸಭೆಯಿಂದ ದೂರವುಳಿದಿತ್ತು. ಇದೇ ವೇಳೆ, ಸಭೆಯಲ್ಲಿ 7 ಮಹತ್ವದ ನಿರ್ಣಯ ಕೈಗೊಳ್ಳಲಾಯಿತು.

7 ನಿರ್ಣಯ:
1.
ಪಾರದರ್ಶಕತೆ ಇರಲಿಪ್ರಜಾಪ್ರಭುತ್ವದ ಸುಧಾರಣೆಗೆ ಕೇಂದ್ರ ಸರ್ಕಾರ ಜಾರಿಗೊಳಿಸಲು ಮುಂದಾಗಿರುವ ಕ್ಷೇತ್ರ ಮರುವಿಂಗಡಣೆಯು ಪಾರದರ್ಶಕವಾಗಿರಬೇಕು ಮತ್ತು ಎಲ್ಲಾ ರಾಜ್ಯಗಳ ರಾಜಕೀಯ ಪಕ್ಷಗಳು, ರಾಜ್ಯ ಸರ್ಕಾರಗಳು ಸೇರಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಈ ನಿರ್ಧಾರ ಕೈಗೊಳ್ಳಬೇಕು.

2. 25 ವರ್ಷ ಮರುವಿಂಗಡಣೆ ಬೇಡಸಂವಿಧಾನದ 42, 84 ಮತ್ತು 87ನೇ ತಿದ್ದುಪಡಿಯ ಉದ್ದೇಶ ಜನಸಂಖ್ಯಾ ನಿಯಂತ್ರಣವನ್ನು ಪರಿಣಾಮಕಾರಿಯಾಗಿ ಜಾರಿಗೆ ತಂದ ರಾಜ್ಯಗಳ ರಕ್ಷಣೆ ಮತ್ತು ಪ್ರೋತ್ಸಾಹ ನೀಡುವುದೇ ಆಗಿತ್ತು. ಆದರೆ ರಾಷ್ಟ್ರೀಯ ಜನಸಂಖ್ಯಾ ನಿಯಂತ್ರಣದ ಗುರಿ ಇನ್ನೂ ಈಡೇರಿಲ್ಲ. ಪರಿಸ್ಥಿತಿ ಹೀಗಿರುವಾಗ 1971ರ ಜನಸಂಖ್ಯೆಗೆ ಅನುಗುಣವಾಗಿ ರಚನೆಗೊಂಡ ಲೋಕಸಭಾ ಕ್ಷೇತ್ರದ ವ್ಯಾಪ್ತಿಯನ್ನು ಮುಂದಿನ 25 ವರ್ಷಗಳವರೆಗೆ ಬದಲಾವಣೆ ಮಾಡಬಾರದು.

3. ‘ದಂಡ’ ವಿಧಿಸಬಾರದುಜನಸಂಖ್ಯಾ ನಿಯಂತ್ರಣ ಕ್ರಮಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿದ ಪರಿಣಾಮ ಜನಸಂಖ್ಯೆ ಇಳಿಮುಖವಾದ ರಾಜ್ಯಗಳಿಗೆ ‘ದಂಡ’ ವಿಧಿಸುವಂತಾಗಬಾರದು. ಈ ಸಂಬಂಧ ಕೇಂದ್ರ ಸರ್ಕಾರ ಅಗತ್ಯ ಸಂವಿಧಾನ ತಿದ್ದುಪಡಿ ಮಾಡಬೇಕು.

4 ಸಂಸದೀಯ ರಣನೀತಿಕೇಂದ್ರ ಸರ್ಕಾರವೇನಾದರೂ ನಮ್ಮ ವಿರುದ್ಧವಾಗಿ ಲೋಕಸಭಾ ಕ್ಷೇತ್ರಗಳ ವಿಕೇಂದ್ರೀಕರಣಕ್ಕೆ ಮುಂದಾದರೆ ಈ ಜೆಎಸಿ ಸಭೆಯಲ್ಲಿ ಪಾಲ್ಗೊಂಡಿರುವ ರಾಜ್ಯಗಳ ಸಂಸದರನ್ನೊಳಗೊಂಡ ಕೋರ್‌ ಕಮಿಟಿಯು ಸಂಸದೀಯ ರಣನೀತಿ ರೂಪಿಸುವ ಮೂಲಕ ಅದನ್ನು ವಿರೋಧಿಸಬೇಕು.

5 ಮೋದಿಗೆ ಮನವಿಹಾಲಿ ನಡೆಯುತ್ತಿರುವ ಸಂಸತ್‌ ಅಧಿವೇಶದ ಸಮಯದಲ್ಲೇ ಜೆಎಸಿಯಲ್ಲಿ ಪಾಲ್ಗೊಂಡ ಪಕ್ಷಗಳ ಸಂಸದರ ಕೋರ್‌ ಕಮಿಟಿಯು ತನ್ನ ಜಂಟಿ ಮನವಿಯನ್ನು ಪ್ರಧಾನಿ ನರೇಂದ್ರ ಮೋದಿ ಮುಂದೆ ಸಲ್ಲಿಸಬೇಕು.

6 ನಿರ್ಣಯ ಮಂಡಿಸಬೇಕುಈ ಸಭೆಯಲ್ಲಿ ಪಾಲ್ಗೊಂಡಿರುವ ವಿವಿಧ ರಾಜ್ಯಗಳ ರಾಜಕೀಯ ಪಕ್ಷಗಳು ತಮ್ಮ ರಾಜ್ಯಗಳಲ್ಲಿ ಈ ವಿಚಾರಕ್ಕೆ ಸಂಬಂಧಿಸಿ ಸೂಕ್ತ ನಿರ್ಣಯಗಳನ್ನು ಕೈಗೊಳ್ಳಬೇಕು ಮತ್ತು ಕೇಂದ್ರ ಸರ್ಕಾರಕ್ಕೆ ಆ ನಿರ್ಣಯಗಳನ್ನು ಕಳುಹಿಸಿಕೊಡಬೇಕು.

7 ಜನಜಾಗೃತಿಈ ಹಿಂದಿನ ವಿಕೇಂದ್ರೀಕರಣ ಪ್ರಕ್ರಿಯೆಯ ಇತಿಹಾಸ ಮತ್ತು ಉದ್ದೇಶ ಹಾಗೂ ಕೇಂದ್ರ ಸರ್ಕಾರ ಜಾರಿಗೊಳಿಸಲುದ್ದೇಶಿಸಿರುವ ಪ್ರಸ್ತಾಪಿದ ವೀಕೇಂದ್ರೀಕರಣದ ಪರಿಣಾಮದ ಕುರಿತು ತಮ್ಮ ತಮ್ಮ ರಾಜ್ಯಗಳಲ್ಲಿ ಜನಜಾಗೃತಿ ಮೂಡಿಸುವ ಕೆಲಸ ಮಾಡಬೇಕು.

ಉತ್ತರ ಭಾರತದ ಸೀಟು ಹೆಚ್ಚಲಿವೆ
ಲೋಕಸಭಾ ಕ್ಷೇತ್ರದ ಪುನರ್‌ ವಿಂಗಡಣೆ ದಕ್ಷಿಣ ರಾಜ್ಯಗಳ ಪಾಲಿಗೆ ತೂಗುಗತ್ತಿಯಾಗಿದೆ. ಬಿಜೆಪಿ ಸರ್ಕಾರ ಯಾವುದೇ ಚರ್ಚೆ ಇಲ್ಲದೆ ಕ್ಷೇತ್ರ ಮರುವಿಂಗಡಣೆಗೆ ಮುಂದಾಗಿದೆ. ಇದು ಸಂವಿಧಾನದ ತತ್ವಗಳು ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ವಿರುದ್ಧವಾಗಿದೆ. ಇದರಿಂದ ದಕ್ಷಿಣದಲ್ಲಿ ಲೋಕಸಭಾ ಕ್ಷೇತ್ರಗಳ ಸಂಖ್ಯೆ ಕಡಿಮೆಯಾಗಿ ಉತ್ತರ ಭಾರತದಲ್ಲಿ ಹೆಚ್ಚಾಗಲಿದೆ. ಈ ಮೂಲಕ ಬಿಜೆಪಿಗೆ ಅನುಕೂಲ ಆಗಲಿದೆ ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್ ಹೇಳಿದ್ದಾರೆ.

ಬಿಜೆಪಿ ಹುನ್ನಾರಬಿಜೆಪಿಯು ತಾನು ಗೆಲ್ಲುವ ರಾಜ್ಯಗಳಲ್ಲಿ ಸೀಟುಗಳನ್ನು ಹೆಚ್ಚಿಸಲು ಉದ್ದೇಶಿಸಿದ್ದು, ಸೋಲುವ ಸಾಧ್ಯತೆ ಇರುವಲ್ಲಿ ಸೀಟು ಕಡಿಮೆ ಮಾಡಲು ಹೊರಟಿದೆ. ಪಂಜಾಬ್‌ನಲ್ಲಿ ಬಿಜೆಪಿ ಗೆಲ್ಲುವುದಿಲ್ಲ. ಪಂಜಾಬ್‌ನ 13 ಕ್ಷೇತ್ರಗಳಲ್ಲಿ ಅವರು ಒಂದೇ ಒಂದು ಸ್ಥಾನ ಗೆದ್ದಿಲ್ಲ ಎಂದು ಸುಎಂ ಭಗವಂತ್‌ ಮಾನ್‌ ಹೇಳಿದ್ದಾರೆ.

ದಕ್ಷಿಣ ಭಾರತದ ದನಿ ನಷ್ಟ
ಕೇಂದ್ರ ಸರ್ಕಾರದ ಪ್ರಸ್ತಾವಿತ ಕ್ಷೇತ್ರ ಮರುವಿಂಗಡಣೆಯಿಂದ ದಕ್ಷಿಣ ಭಾರತ ತನ್ನ ರಾಜಕೀಯ ಧ್ವನಿ ಕಳೆದುಕೊಳ್ಳಲಿದೆ. ಉತ್ತರ ಭಾರತೀಯರು ನಮ್ಮನ್ನು ಎರಡನೇ ದರ್ಜೆ ನಾಗರಿಕರನ್ನಾಗಿ ಮಾಡಲಿದ್ದಾರೆ. ಜನಸಂಖ್ಯೆ ಆಧಾರಿತ ಕ್ಷೇತ್ರ ಮರುವಿಂಗಡಣೆಯನ್ನು ದಕ್ಷಿಣ ಭಾರತ ಒಪ್ಪುವುದಿಲ್ಲ.- '

ಎ.ರೇವಂತ್‌ ರೆಡ್ಡಿ, ತೆಲಂಗಾಣ ಸಿಎಂ

 ದಕ್ಷಿಣದ ದನಿ ಅಡಗಿಸಲು ಬಿಡೆವುಕೇಂದ್ರ ಸರ್ಕಾರವು ಕ್ಷೇತ್ರ ಮರುವಿಂಗಡಣೆ ಮೂಲಕ ದಕ್ಷಿಣ ರಾಜ್ಯಗಳ ಸಂಸದೀಯ ಪ್ರಾತಿನಿಧ್ಯವನ್ನು ಕಡಿತಗೊಳಿಸಲು ಉದ್ದೇಶಿಸಿದೆ. ಜನಸಂಖ್ಯಾ ನಿಯಂತ್ರಣ ಮತ್ತು ಸಾಕ್ಷರತಾ ಪ್ರಯತ್ನಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ದಕ್ಷಿಣ ಭಾರತವು ಬಹಳ ಹಿಂದಿನಿಂದಲೂ ರಾಷ್ಟ್ರೀಯ ಹಿತಾಸಕ್ತಿಗಳನ್ನು ಎತ್ತಿಹಿಡಿದಿದೆ. ನಮ್ಮ ಸೀಟುಗಳು ಕಡಿಮೆಯಾಗಲು ನಾವು ಬಿಡುವುದಿಲ್ಲ. ಆರ್ಥಿಕವಾಗಿ ಮತ್ತು ಸಾಕ್ಷರತೆಯ ವಿಷಯದಲ್ಲಿ, ನಾವು ದೇಶವನ್ನು ನಿರಂತರವಾಗಿ ಮುನ್ನಡೆಸಿದ್ದೇವೆ.- ಡಿ.ಕೆ. ಶಿವಕುಮಾರ್‌, ಕರ್ನಾಟಕ ಡಿಸಿಎಂ

ಭಾಗಿಯಾದ ರಾಜ್ಯಗಳು
ತಮಿಳುನಾಡು, ಕರ್ನಾಟಕ, ತೆಲಂಗಾಣ, ಪಂಜಾಬ್‌, ಕೇರಳ, ಒಡಿಶಾ

vuukle one pixel image
click me!