Hijab Verdict ಹಿಜಾಬ್‌ ನಿಷೇಧ ಪ್ರಶ್ನಿಸಿದ್ದ ಅರ್ಜಿ ವಿಚಾರಣೆಗೆ ಸುಪ್ರೀಂ ಸಮ್ಮತಿ!

Published : Apr 27, 2022, 04:54 AM IST
Hijab Verdict ಹಿಜಾಬ್‌ ನಿಷೇಧ ಪ್ರಶ್ನಿಸಿದ್ದ ಅರ್ಜಿ ವಿಚಾರಣೆಗೆ ಸುಪ್ರೀಂ ಸಮ್ಮತಿ!

ಸಾರಾಂಶ

ಹೈಕೋರ್ಟ್‌ ತೀರ್ಪು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿ ಶೀಘ್ರ ವಿಚಾರಣೆ  ಶಾಲಾ ಕೊಠಡಿಯೊಳಗೆ ಹಿಜಾಬ್‌ ಧರಿಸಲು ಅನುಮತಿ ನಿರಾಕರಣೆ ಕರ್ನಾಟಕ ಹೈಕೋರ್ಟ್ ಬಳಿಕ ಇದೀಗ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ  

ನವದೆಹಲಿ(ಏ.27): ಶಾಲೆಯೊಳಗೆ ಹಿಜಾಬ್‌ ಧರಿಸಲು ಅನುಮತಿ ನಿರಾಕರಿಸಿದ ಕರ್ನಾಟಕ ಹೈಕೋರ್ಚ್‌ ತೀರ್ಪು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಯನ್ನು ವಿಚಾರಣೆಗೆ ಸ್ವೀಕರಿಸಲು ಸುಪ್ರೀಂಕೋರ್ಚ್‌ ಸಮ್ಮತಿಸಿದೆ.

ತುರ್ತು ವಿಚಾರಣೆ ಕೋರಿ ಅರ್ಜಿದಾರರ ಪರ ವಕೀಲರು ಮಾಡಿದ ಮನವಿ ಬಗ್ಗೆ ಪ್ರತಿಕ್ರಿಯಿಸಿದ ಮುಖ್ಯ ನ್ಯಾಯಮೂರ್ತಿ ಎನ್‌.ವಿ.ರಮಣ, ‘ಎರಡು ದಿನ ಕಾಯಿರಿ. ನಿಮ್ಮ ಅರ್ಜಿಯನ್ನು ಲಿಸ್ಟ್‌ ಮಾಡಲಾಗುವುದು’ ಎಂದು ಭರವಸೆ ನೀಡಿದರು. ನ್ಯಾ.ಕೃಷ್ಣ ಮುರಾರಿ ಮತ್ತು ನ್ಯಾ. ಹಿಮಾ ಕೊಹ್ಲಿ ಪೀಠದಲ್ಲಿನ ಇತರೆ ಇಬ್ಬರು ನ್ಯಾಯಮೂರ್ತಿಗಳಾಗಿದ್ದಾರೆ.

ಹಿಜಾಬ್‌ ಧಾರಣೆ ಇಸ್ಲಾಂನಲ್ಲಿ ಅತ್ಯಗತ್ಯ ಧಾರ್ಮಿಕ ಆಚರಣೆಗಳ ಭಾಗವಲ್ಲ. ಹೀಗಾಗಿ ಅದನ್ನು ಸಂವಿಧಾನದ 25ನೇ ವಿಧಿಯಡಿ ಪರಿಗಣಿಸಲು ಬರುವುದಿಲ್ಲ ಎಂದು ಹೇಳಿದ್ದ ಕರ್ನಾಟಕ ಹೈಕೋರ್ಚ್‌, ಶಾಲಾ ಕೊಠಡಿಯೊಳಗೆ ಹಿಜಾಬ್‌ ಧರಿಸಲು ಅನುಮತಿ ನಿರಾಕರಿಸಿತ್ತು. ಜೊತೆಗೆ ಈ ಬಗ್ಗೆ ಉಡುಪಿ ಪದವಿ ಪೂರ್ವ ಕಾಲೇಜಿನ ಕೆಲ ವಿದ್ಯಾರ್ಥಿನಿಯರು ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿತ್ತು.

ಮತ್ತೆ ಪರೀಕ್ಷೆಗೆ ಗೈರಾದ ಹಿಜಾಬ್ ಹೋರಾಟಗಾರ್ತಿಯರು

ಇದನ್ನು ಸುಪ್ರೀಂಕೋರ್ಚ್‌ನಲ್ಲಿ ಪ್ರಶ್ನಿಸಿರುವ ಅರ್ಜಿದಾರರು, ‘ಧಾರ್ಮಿಕ ಸ್ವಾತಂತ್ರ್ಯ ಮತ್ತು ಆತ್ಮಸಾಕ್ಷಿಯ ಸ್ವಾತಂತ್ರ್ಯ ಇವೆರಡರ ನಡುವಿನ ವ್ಯತ್ಯಾಸವನ್ನು ಗುರುತಿಸುವಲ್ಲಿ ಕೋರ್ಟು ತಪ್ಪು ಮಾಡಿದೆ. ಈ ಮೂಲಕ ಧರ್ಮವನ್ನು ಪಾಲನೆ ಮಾಡುವವರು, ಆತ್ಮಸಾಕ್ಷಿಯ ಸ್ವಾತಂತ್ರ ಹೊಂದಬೇಕಿಲ್ಲ ಎಂದು ಊಹಿಸಿದೆ. ಹಿಜಾಬ್‌ ಧಾರಣೆಯ ಹಕ್ಕು, ಸಂವಿಧಾನದ 21ನೇ ವಿಧಿಯಡಿ ಬರುವ ಖಾಸಗಿತನ ಹಕ್ಕಿನ ವ್ಯಾಪ್ತಿಗೆ ಬರುತ್ತದೆ. ಇದನ್ನು ಪರಿಗಣಿಸುವಲ್ಲಿ ಹೈಕೋರ್ಚ್‌ ವಿಫಲವಾಗಿದೆ. ಆತ್ಮಸಾಕ್ಷಿಯ ಸ್ವಾತಂತ್ರವು ಖಾಸಗಿತನ ಹಕ್ಕಿನ ಭಾಗ’ ಎಂದು ವಾದಿಸಿದ್ದಾರೆ.

ಹಿಜಾಬ್‌ ತೆಗೆಯಲು ನಿರಾಕರಿಸಿ ಮೂವರು ವಿದ್ಯಾರ್ಥಿನಿಯರು ಗೈರು
ಹಿಜಾಬ್‌ ತೆಗೆಯಲು ನಿರಾಕರಿಸಿ ಮೂವರು ವಿದ್ಯಾರ್ಥಿನಿಯರು ಗಣಿತ ವಿಷಯದ ಪರೀಕ್ಷೆಗೆ ಗೈರಾದ ಘಟನೆ ನಗರದ ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಶನಿವಾರ ಬೆಳಗ್ಗೆ ನಡೆದಿದೆ.

ಈಗಾಗಲೇ ದ್ವಿತೀಯ ಪಿಯು ಪರೀಕ್ಷೆ ಆರಂಭವಾಗಿದ್ದು, ಎರಡು ದಿನದ ಹಿಂದೆ ನಡೆದ ಇಂಗ್ಲೀಷ್‌ ವಿಷಯದ ಪರೀಕ್ಷೆಯಲ್ಲಿ ಹಿಜಾಬ್‌ ವಿವಾದ ಕೇಳಿಬಂದಿರಲಿಲ್ಲ. ಆದರೆ, ಮತ್ತೆ ಹಿಜಾಬ್‌ ವಿವಾದ ಕೇಳಿಬಂದಿದೆ.

Udupi ಪರೀಕ್ಷೆ ಬರೆಯಲು ಬಂದ ಹಿಜಾಬ್ ಹೋರಾಟಗಾರ್ತಿಯರ ಹೈಡ್ರಾಮಾ

ಕನ್ನಡಪ್ರಭ ಪತ್ರಿಕೆಯೊಂದಿಗೆ ಮಾತನಾಡಿದ ಡಿಡಿಪಿಯು ಚಂದ್ರಶೇಖರ ಹಿಳ್ಳಿ, ಯಾದಗಿರಿ ಜಿಲ್ಲೆಯಲ್ಲಿ ಎಲ್ಲೂ ಹಿಜಾಬ್‌ ಪ್ರಕರಣ ಕಂಡು ಬಂದಿಲ್ಲ. ಸುರಪುರ ನಗರದ ಬಾಲಕರ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಹಿಜಾಬ್‌ ತೆಗೆಯಲು ಒಪ್ಪದೆ ಮೂವರು ವಿದ್ಯಾರ್ಥಿನಿಯರು ಗೈರಾಗಿರುವ ಮಾಹಿತಿಯನ್ನು ಕಾಲೇಜಿನ ಪ್ರಾಂಶುಪಾಲರು ನೀಡಿದ್ದಾರೆ.

ಗಣಿತ ವಿಷಯ ಪರೀಕ್ಷಾ ಸಮಯವಾಗುತ್ತಿದ್ದಂತೆ ವಿದ್ಯಾರ್ಥಿಗಳ ಕುರಿತು ಪ್ರಾಂಶುಪಾಲರು ಹಿಜಾಬ್‌ ತೆಗೆದಿಡಲು ಪ್ರತ್ಯೇಕ ಕೊಠಡಿಯಿದ್ದು, ಅಲ್ಲಿ ಇಟ್ಟು ಬರುವಂತೆ ತಿಳಿಸಿದ್ದಾರೆ. ಬಳಿಕ ಹಿಜಾಬ್‌ ಧರಿಸಿ ಬಂದ ವಿದ್ಯಾರ್ಥಿನಿಯರು ಬಹುತೇಕರು ಅಲ್ಲಿಯ ಬಿಚ್ಚಿಟ್ಟು ಪರೀಕ್ಷೆ ಎದುರಿಸಿದರೆ ಮೂವರು ವಿದ್ಯಾರ್ಥಿನಿಯರು ಹಿಜಾಬ್‌ ತೆಗೆಯದೆ ಹೊರಟು ಹೋಗಿದ್ದಾರೆ. ಈ ಮೂವರು ವಿದ್ಯಾರ್ಥಿನಿಯರು ರಂಗಂಪೇಟೆಯ ಕರ್ನಾಟಕ ಪಬ್ಲಿಕ್‌ ಶಾಲೆಯವರೆಂದು ಪರೀಕ್ಷಾ ನೋಂದಣಿ ತೆಗೆದುಕೊಳ್ಳುವಾಗ ತಿಳಿದಿದೆ. ಒಟ್ಟು 12 ವಿದ್ಯಾರ್ಥಿಗಳು ಗೈರಾಗಿದ್ದಾರೆ ಎಂದು ತಿಳಿಸಿದ್ದಾರೆ.

ಸುರಪುರ ನಗರ ವ್ಯಾಪ್ತಿಯಲ್ಲಿ ದ್ವಿತೀಯ ಪಿಯು ಪರೀಕ್ಷೆ ಬರೆಯಲು ನಾಲ್ಕು ಕೇಂದ್ರಗಳಿಗೆ ಅವಕಾಶ ನೀಡಿದ್ದು, 406 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದು, 380 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದಾರೆ. ಬಾಲಕರ ಸರಕಾರಿ ಪದವಿ ಪೂರ್ವ ಕಾಲೇಜಿನ ಪರೀಕ್ಷಾ ಕೇಂದ್ರದ 262 ವಿದ್ಯಾರ್ಥಿಗಳಲ್ಲಿ 12 ಗೈರಾಗಿದ್ದಾರೆ. ಶ್ರೀಪ್ರಭು ಕಾಲೇಜಿನಲ್ಲಿ 40 ವಿದ್ಯಾರ್ಥಿಗಳಲ್ಲಿ ಒಬ್ಬರು ಗೈರಾಗಿದ್ದರು. ಅಂಬೇಡ್ಕರ್‌ ಪದವಿ ಪೂರ್ವ ಕಾಲೇಜಿನಲ್ಲಿ 79 ವಿದ್ಯಾರ್ಥಿಗಳಲ್ಲಿ 70 ವಿದ್ಯಾರ್ಥಿಗಳು ಹಾಜರಾಗಿದ್ದು, 9 ಗೈರಾಗಿದ್ದಾರೆ. ಸಂಯುಕ್ತ ಪದವಿ ಪೂರ್ವ ಕಾಲೇಜ್‌ ರಂಗಂಪೇಟೆ 25 ವಿದ್ಯಾರ್ಥಿಗಳಲ್ಲಿ 21 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ನಾಲ್ವರು ಗೈರಾಗಿದ್ದಾರೆ ಎಂದು ತಿಳಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

15 ವರ್ಷಗಳಿಂದ ನಾಪತ್ತೆ: ವಿಡಿಯೋ ವೈರಲ್ ಬಳಿಕ ಮರಳಿ ಕುಟುಂಬ ಸೇರಿದ ಮಾಜಿ ಯೋಧ
ಪೌರತ್ವ ಸಿಗುವ ಮುನ್ನವೇ ವೋಟರ್‌ ಲಿಸ್ಟ್‌ನಲ್ಲಿ ಹೆಸರು, ಸೋನಿಯಾ ಗಾಂಧಿಗೆ ನೋಟಿಸ್‌ ಕೊಟ್ಟ ದೆಹಲಿ ಕೋರ್ಟ್!