
ಡೆಹ್ರಾಡೂನ್: ಉತ್ತರಾಖಂಡ್ ಉದ್ಧಮ್ ಸಿಂಗ್ ನಗರ ಜಿಲ್ಲೆಯ ಖಾಸಗಿ ಶಾಲೆಯೊಂದರಲ್ಲಿ ಆಘಾತಕಾರಿ ಘಟನೆ ನಡೆದಿದೆ. ತರಗತಿಯಲ್ಲಿ ಎಲ್ಲರ ಮುಂದೆ ಕೆನ್ನೆಗೆ ಬಾರಿಸಿದರು ಎಂದು ಆಕ್ರೋಶಗೊಂಡ ವಿದ್ಯಾರ್ಥಿಯೊಬ್ಬ ಪಾಠ ಮಾಡುತ್ತಿದ್ದ ಶಿಕ್ಷಕನಿಗೆ ಗುಂಡಿಕ್ಕಿದ್ದಾನೆ. ಈ ವಾರದ ಆರಂಭದಲ್ಲಿ ಭೌತಶಾಸ್ತ್ರ(physics)ಪಾಠ ಮಾಡುತ್ತಿದ್ದ ಗಂಗಾದೀಪ್ ಸಿಂಗ್ ಕೊಹ್ಲಿ ಎಂಬ ಶಿಕ್ಷಕರು ತರಗತಿಯಲ್ಲಿ ಬಾಲಕನೋರ್ವನ ಕೆನ್ನೆಗೆ ಬಾರಿಸಿದ್ದರು. ಇದರಿಂದ ತೀವ್ರ ಅಸಮಾಧಾನಕ್ಕೊಳಗಾದ ಆ ಬಾಲಕ ಶಾಲೆಗೆ ತರುವ ಬುತ್ತಿಯಲ್ಲಿ ಗನ್ ಹಿಡಿದುಕೊಂಡು ಬಂದಿದ್ದು, ಶಿಕ್ಷಕ ಗಂಗಾದೀಪ್ ಸಿಂಗ್ ಕೊಹ್ಲಿ ಅವರಿಗೆ ಹಿಂದಿನಿಂದ ಗುಂಡಿಕ್ಕಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಫಿಸಿಕ್ಸ್ ಪಾಠ ಮಾಡುತ್ತಿದ್ದ ಶಿಕ್ಷಕನ ಮೇಲೆ ಗುಂಡಿನ ದಾಳಿ
ಈ ಗುಂಡಿನ ದಾಳಿಯಿಂದ ಶಿಕ್ಷಕ ಗಂಗಾದೀಪ್ ಸಿಂಗ್ ಕೊಹ್ಲಿ ಅವರಿಗೆ ಗಂಭೀರ ಗಾಯಗಳಾಗಿದ್ದೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹಿಂದಿನಿಂದ ಬಂದ ಗುಂಡು ಅವರ ಹಿಂಬದಿ ಕತ್ತಿಗೆ ತಾಗಿದ್ದು, ಕೂಡಲೇ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ಅವರಿಗೆ ತುರ್ತು ಶಸ್ತ್ರಚಿಕಿತ್ಸೆ ನಡೆಸಿ ಗುಂಡನ್ನು ಹೊರೆತೆಗೆಯಲಾಗಿದೆ. ಇವರಿಗೆ ಚಿಕಿತ್ಸೆ ನೀಡಿದ ವೈದ್ಯ ಡಾ ಮಯಾಂಕ್ ಅಗರ್ವಾಲ್ ಅವರು, ಕತ್ತಿನಲ್ಲಿ ಸಿಲುಕಿದ್ದ ಗುಂಡನ್ನು ಶಸ್ತ್ರಚಿಕಿತ್ಸೆ ನಡೆಸಿ ಹೊರತೆಗೆಯಲಾಗಿದೆ ಎಂಬ ಮಾಹಿತಿ ನೀಡಿದ್ದಾರೆ.
ಲಂಚ್‌ಬಾಕ್ಸ್‌ನಲ್ಲಿ ಗನ್ ತುಂಬಿಕೊಂಡು ಬಂದಿದ್ದ ವಿದ್ಯಾರ್ಥಿ
ಶಿಕ್ಷಕ ಗಂಗಾದೀಪ್ ಅವರ ಆರೋಗ್ಯ ಪ್ರಸ್ತುತ ಸ್ಥಿರವಾಗಿದ್ದು, ಅವರನ್ನು ಹೆಚ್ಚಿನ ಮೇಲ್ವಿಚಾರಣೆಗಾಗಿ ಐಸಿಯುಗೆ ಶಿಫ್ಟ್ ಮಾಡಲಾಗಿದೆ. ಹೀಗೆ ಪಾಠ ಮಾಡುವ ಶಿಕ್ಷಕರನ್ನೇ ಹತ್ಯೆ ಮಾಡಲು ಮುಂದಾದ ಯುವಕನನ್ನು ಸಮರ್ಥ್ ಬಜ್ವಾ ಎಂದು ಗುರುತಿಸಲಾಗಿದೆ. ಈತ ಲಂಚ್ ಬಾಕ್ಸ್‌ನಲ್ಲಿ ಪಿಸ್ತೂಲ್ ತುಂಬಿಸಿ ತಂದಿದ್ದ ಈತ ಅದನ್ನು ತರಗತಿ ಕೋಣೆಯವರೆಗೂ ತಂದಿದ್ದ. ಕ್ಲಾಸ್‌ರೂಮ್‌ನಲ್ಲೇ ಲಂಚ್‌ಬಾಕ್ಸ್‌ನಿಂದ ಗನ್ ತೆಗೆದ ಬಾಲಕ ಶಿಕ್ಷಕನ ಮೇಲೆ ಗುಂಡಿಕ್ಕಿದ್ದಾನೆ. ಘಟನೆಯ ಬಳಿಕ ಆರೋಪಿ ಸಮರ್ಥ್ ಓಡಿ ಹೋಗಲು ಯತ್ನಿಸಿದ್ದು, ಕೂಡಲೇ ಇತರ ಶಿಕ್ಷಕರು ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಉದ್ಧಮ್ ಸಿಂಗ್ ನಗರದ ಗುರು ನಾನಕ್ ಶಾಲೆಯಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 109ರ ಅಡಿ ಆರೋಪಿ ವಿದ್ಯಾರ್ಥಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ವಿದ್ಯಾರ್ಥಿ ಅಪ್ರಾಪ್ತನಾಗಿರುವುದರಿಂದ ಆತನ ಕೈಗೆ ಗನ್ ಹೇಗೆ ಸಿಕ್ಕಿತ್ತು ಎಂದು ಪೊಲೀಸರು ತನಿಖೆ ಮಾಡುತ್ತಿದ್ದಾರೆ ಹಾಗೂ ಕೃತ್ಯಕ್ಕೆ ಬಳಸಿದ್ದ ಗನ್ ಅನ್ನು ಜಪ್ತಿ ಮಾಡಲಾಗಿದೆ.
10ನೇ ಕ್ಲಾಸ್ ವಿದ್ಯಾರ್ಥಿಗೆ ಇರಿದಿದ್ದ 8ನೇ ಕ್ಲಾಸ್ ಬಾಲಕ
ಎರಡು ದಿನಗಳ ಹಿಂದಷ್ಟೇ ಗುಜರಾತ್‌ನ ಅಹ್ಮದಾಬಾದ್‌ನ ಶಾಲೆಯೊಂದರಲ್ಲಿ 10ನೇ ತರಗತಿ ವಿದ್ಯಾರ್ಥಿಯೊಬ್ಬನನ್ನು 8ನೇ ಕ್ಲಾಸ್ ವಿದ್ಯಾರ್ಥಿಯೋರ್ವ ಚಾಕುವಿನಿಂದ ಇರಿದು ಕೊಂದ ಆಘಾತಕಾರಿ ಘಟನೆ ನಡೆದಿತ್ತು. ಜೂನಿಯರ್ ವಿದ್ಯಾರ್ಥಿಯಿಂದ ಇರಿತಕ್ಕೊಳಗಾದ 10ನೇ ಕ್ಲಾಸ್ ವಿದ್ಯಾರ್ಥಿ ಗಂಭೀರ ಗಾಯಗೊಂಡಿದ್ದು, ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಆತ ಒಂದು ದಿನದ ನಂತರ ಮೃತಪಟ್ಟಿದ್ದ. ಶಾಲೆಯಲ್ಲಿ ನಡೆದ ಈ ಘಟನೆಗೆ ಪೋಷಕರು ಹಾಗೂ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ್ದರು. ಅಹಮದಾಬಾದ್‌ನ ಖೋಖ್ರಾದ ಸೆವೆಂತ್-ಡೇ ಅಡ್ವೆಂಟಿಸ್ಟ್ ಹೈಯರ್ ಸೆಕೆಂಡರಿ ಶಾಲೆಯ ಆವರಣದ ಹೊರಗೆ ಈ ಘಟನೆ ನಡೆದಿತ್ತು.
ಮಂಗಳವಾರ ಶಾಲೆಯ ಗಂಟೆ ಬಾರಿಸುತ್ತಿದ್ದಂತೆ 10 ನೇ ತರಗತಿಯ ವಿದ್ಯಾರ್ಥಿ ನಯನ್ ತನ್ನ ಬ್ಯಾಗ್ ಪ್ಯಾಕ್ ಮಾಡಿ ಮನೆಗೆ ಹೊರಟಿದ್ದ ಅವನು ಶಾಲಾ ಕಟ್ಟಡದಿಂದ ಹೊರಬರುತ್ತಿದ್ದಂತೆ 8 ನೇ ತರಗತಿಯ ಜೂನಿಯರ್ ವಿದ್ಯಾರ್ಥಿ ಹಾಗೂ ಇತರ ಕೆಲವು ಹುಡುಗರು ಅವನನ್ನು ಸುತ್ತುವರೆದರು. ಮಾತಿನ ಚಕಮಕಿ ಶೀಘ್ರದಲ್ಲೇ ದೈಹಿಕ ಹಲ್ಲೆಯಾಗಿ ಬದಲಾಯಿತು. ಈ ವೇಳೆ 8 ನೇ ತರಗತಿಯ ಹುಡುಗ ಚಾಕುವನ್ನು ತೆಗೆದುಕೊಂಡು, ತನ್ನ ಹಿರಿಯ ವಿದ್ಯಾರ್ಥಿಗೆ ಇರಿದು ಸ್ಥಳದಿಂದ ಪರಾರಿಯಾಗಿದ್ದನು. ಸಿಸಿಟಿವಿ ದೃಶ್ಯಾವಳಿಯಲ್ಲಿ, ನಯನ ತನ್ನ ಹೊಟ್ಟೆಯ ಮೇಲೆ ಕೈ ಇಟ್ಟುಕೊಂಡು ಗಾಯವನ್ನು ಮುಚ್ಚಿಕೊಂಡು ಶಾಲೆಯೊಳಗೆ ನಡೆದುಕೊಂಡು ಹೋಗುತ್ತಿರುವುದನ್ನು ವೀಡಿಯೋದಲ್ಲಿ ಕಾಣಬಹುದು. ವಿದ್ಯಾರ್ಥಿಯನ್ನು ಕೂಡಲೇ ಮಣಿನಗರದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ತೀವ್ರ ಗಾಯಗಳಿಂದಾಗಿ ಚಿಕಿತ್ಸೆ ಫಲಕಾರಿಯಾಗದೇ ಆತ ಸಾವನ್ನಪ್ಪಿದ್ದ.
ಇದನ್ನೂ ಓದಿ: ಭಾರತೀಯ ಟ್ರಕ್ ಚಾಲಕನ ಅಪಘಾತದ ನಂತರ ವಿದೇಶಿ ಚಾಲಕರಿಗೆ ವೀಸಾ ನಿಷೇಧಿಸಿದ ಅಮೆರಿಕಾ
ಇದನ್ನೂ ಓದಿ: ಪೋಷಕರ ವರ್ಕ್ ಫ್ರಮ್ ಹೋಮ್ ಮಿಮಿಕ್ ಮಾಡಿದ ಬಾಲಕ: ವೀಡಿಯೋ ಭಾರಿ ವೈರಲ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ