
ನವದೆಹಲಿ: ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶಕ್ಕೆ ರಾಜ್ಯದ ಸ್ಥಾನಮಾನವನ್ನು ಯಾವಾಗ ನೀಡುತ್ತೀರಿ ಎಂದು ಕೇಂದ್ರ ಸರ್ಕಾರವನ್ನು ಪ್ರಶ್ನಿಸಿರುವ ಸುಪ್ರೀಂಕೋರ್ಟ್, ಈ ಬಗ್ಗೆ ಆ.31ರಂದು ನೀಲನಕ್ಷೆ ಹಾಜರುಪಡಿಸುವಂತೆ ಸೂಚನೆ ನೀಡಿದೆ. ಈ ವೇಳೆ ಕೇಂದ್ರ ಸರ್ಕಾರವು ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿರುವ ಕೇಂದ್ರಾಡಳಿತ ಪ್ರದೇಶದ ಸ್ಥಾನಮಾನ ಶಾಶ್ವತವಲ್ಲ, ಅದು ತಾತ್ಕಾಲಿಕ ಎಂದು ಮಾಹಿತಿ ನೀಡಿದೆ.
2019ರಲ್ಲಿ ಸಂವಿಧಾನದ 370ನೇ ಪರಿಚ್ಛೇದ ರದ್ದುಪಡಿಸಿ ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಹಿಂಪಡೆಯುವ ವೇಳೆ ಕೇಂದ್ರ ಸರ್ಕಾರವು ರಾಜ್ಯವನ್ನು ವಿಭಾಗಿಸಿ ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಎಂಬ ಎರಡು ಕೇಂದ್ರಾಡಳಿತ ಪ್ರದೇಶಗಳನ್ನು ರಚಿಸಿತ್ತು. ಅದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ಹಲವಾರು ಅರ್ಜಿಗಳು ಸಲ್ಲಿಕೆಯಾಗಿದ್ದು, ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ಪಂಚ ಸದಸ್ಯ ಸಂವಿಧಾನ ಪೀಠವು ಅವುಗಳ ವಿಚಾರಣೆ ನಡೆಸುತ್ತಿದೆ.
ಕಾಶ್ಮೀರದ ವಿಶೇಷ ಸ್ಥಾನ ರದ್ದತಿ ಪ್ರಶ್ನಿಸಿದ ಲೆಕ್ಚರರ್ ಅಮಾನತು: ಸುಪ್ರೀಂಕೋರ್ಟ್ ಆಕ್ಷೇಪ
ಮಂಗಳವಾರದ ವಿಚಾರಣೆ ವೇಳೆ ನ್ಯಾಯಪೀಠವು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಬಳಿ, ‘ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನ ಮರಳಿಸಲು ನಿರ್ದಿಷ್ಟಕಾಲಮಿತಿ ನಿಗದಿಪಡಿಸಬೇಕು. ಅದಕ್ಕಾಗಿ ನೀಲನಕ್ಷೆ ರೂಪಿಸಬೇಕು. ರಾಜ್ಯ ಸ್ಥಾನಮಾನ ಯಾವಾಗ ಮರಳಿಸುತ್ತೀರಿ? ಈ ಬಗ್ಗೆ ಕೇಂದ್ರ ಸರ್ಕಾರದ ಜತೆ ಮಾತನಾಡಿ ಆ.31ರಂದು ನೀಲನಕ್ಷೆ ಹಾಜರುಪಡಿಸಿ’ ಎಂದು ಸೂಚಿಸಿತು.
ವಿಚಾರಣೆಯ ವೇಳೆ ತುಷಾರ್ ಮೆಹ್ತಾ, ‘ಜಮ್ಮು ಮತ್ತು ಕಾಶ್ಮೀರವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿದ ಕ್ರಮ ತಾತ್ಕಾಲಿಕವಾಗಿದೆ. ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನವನ್ನು ಮರಳಿಸಲಾಗುತ್ತದೆ. ಲಡಾಖ್ ಕೇಂದ್ರಾಡಳಿತ ಪ್ರದೇಶವಾಗಿ ಉಳಿಯಲಿದೆ’ ಎಂದು ಹೇಳಿದರು. ‘ಹಾಗಿದ್ದರೆ ಅದಕ್ಕೆ ನಿರ್ದಿಷ್ಟಕಾಲಮಿತಿ ಹಾಗೂ ನೀಲನಕ್ಷೆಯನ್ನು ನಮಗೆ ನೀಡಬೇಕು. ಪ್ರಜಾಪ್ರಭುತ್ವವನ್ನು ಮರುಸ್ಥಾಪನೆ ಮಾಡುವುದು ಬಹಳ ಮುಖ್ಯ. ಈಗ ಅಲ್ಲಿ ಶಾಂತಿ ಮತ್ತು ಸಹಜ ಸ್ಥಿತಿ ಮರಳಿದೆ’ ಎಂದು ಸುಪ್ರೀಂಕೋರ್ಟ್ ಹೇಳಿತು.
ಬದಲಾದ ಭಾರತ: ಕಾಶ್ಮೀರದಲ್ಲಿ ತಿರಂಗಾ ಹಾರಿಸಿದ ಉಗ್ರನ ಕುಟುಂಬ: ಹರ್ ಘರ್ ತಿರಂಗಾ ಅಭಿಯಾನಕ್ಕೆ ಸಾಥ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ