Sonia Gandhi Health: ಕಾಂಗ್ರೆಸ್‌ ಮುಖ್ಯಸ್ಥೆ ಆರೋಗ್ಯ ಸ್ಥಿತಿ ಗಂಭೀರ, ಶ್ವಾಸನಾಳ ಸೋಂಕು ಹೆಚ್ಚಳ

By Sharath Sharma  |  First Published Jun 17, 2022, 2:59 PM IST

Sonia Gandhi health updates: ಸೋನಿಯಾ ಗಾಂಧಿ ದೆಹಲಿಯ ಗಂಗಾರಾಮ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಶ್ವಾಸನಾಳ ಸೋಂಕು ಹೆಚ್ಚುತ್ತಿದೆ ಎಂದು ಕಾಂಗ್ರೆಸ್‌ ಪಕ್ಷದ ಅಧಿಕೃತ ಪ್ರಕಟಣೆ ತಿಳಿಸಿದೆ. ಸೋನಿಯಾ ಗಾಂಧಿ ಕಳೆದ ಐದು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಚಿಕ್ಕ ಶಸ್ತ್ರಚಿಕಿತ್ಸೆಗೂ ಅವರು ಒಳಗಾಗಿದ್ದಾರೆ.


ನವದೆಹಲಿ: ಕಾಂಗ್ರೆಸ್‌ ಮುಖ್ಯಸ್ಥೆ ಸೋನಿಯಾ ಗಾಂಧಿ ಕೋವಿಡ್‌ ಪಾಸಿಟಿವ್‌ ಆದ ಬೆನ್ನಲ್ಲೇ ಆಸ್ಪತ್ರೆಗೆ ದಾಖಲಾಗಿದ್ದರು. ಅವರ ಆರೋಗ್ಯದಲ್ಲಿ ಈಗ ಸಮಸ್ಯೆ ಕಾಣಿಸಿಕೊಂಡಿದ್ದು ಶ್ವಾಸನಾಳ ಸೋಂಕು ಹೆಚ್ಚಿದೆ ಎಂದು ಕಾಂಗ್ರೆಸ್ ಪಕ್ಷ ತಿಳಿಸಿದೆ. ಕೋವಿಡ್‌ ನಂತರದ ಸಿಂಪ್‌ಟಮ್ಸ್‌ ಅವರಲ್ಲಿ ಹೆಚ್ಚಾಗಿದ್ದು, ಅವರಿಗೆ ಚಿಕಿತ್ಸೆ ಮುಂದುವರೆಸಲಾಗಿದೆ. ಇದೇ ಕಾರಣಕ್ಕೆ ರಾಹುಲ್‌ ಗಾಂಧಿ ಕೂಡ ಜಾರಿ ನಿರ್ದೇಶನಾಲಯದ ವಿಚಾರಣೆಗೆ ಇಂದು ಹಾಜರಾಗಲು ಸಾಧ್ಯವಿಲ್ಲ ಎಂದು ಮನವಿ ಮಾಡಿದ್ದರು. ಈಗ ಪಕ್ಷ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದ್ದು, ಸೋನಿಯಾ ಗಾಂಧಿ ಚೇತರಿಕೆಯಾಗಿಲ್ಲ ಎಂದು ತಿಳಿಸಿದೆ. ಜೂನ್‌ 12ರಂದು ಸೋನಿಯಾ ಗಾಂಧಿ ನವದೆಹಲಿಯ ಗಂಗಾರಾಮ್‌ ಆಸ್ತ್ರೆಗೆ ದಾಖಲಾಗಿದ್ದರು. ಜೂನ್‌ 1ರಂದು ಕೊರೋನಾ ವೈರಸ್‌ ಪರೀಕ್ಷೆಯಲ್ಲಿ ಅವರಿಗೆ ಪಾಸಿಟಿವ್‌ ಫಲಿತಾಂಶ ಬಂದಿತ್ತು. ನಂತರ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಆರೋಗ್ಯ ಸಮಸ್ಯೆ ಹೆಚ್ಚಾದ ಹಿನ್ನೆಲೆ ಆಸ್ಪತ್ರೆಗೆ ದಾಖಲಾದರು. 

ಆಸ್ಪತ್ರೆ ವೈದ್ಯಾಧಿಕಾರಿಗಳ ಮಾಹಿತಿ ಪ್ರಕಾರ ಅವರ ಮೂಗಿನಲ್ಲಿ ರಕ್ತ ಬರುತ್ತಿತ್ತು, ಈ ಹಿನ್ನೆಲೆ ಅವರಿಗೆ ಆಪರೇಷನ್‌ ಕುಡ ಮಾಡಲಾಗಿದೆ. ಜೂನ್‌ 23ರಂದು ಜಾರಿ ನಿರ್ದೇಶನಾಲಯ ಸೋನಿಯಾ ಗಾಂಧಿಯವರಿಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್‌ ನೀಡಿದೆ. ನ್ಯಾಷನಲ್‌ ಹೆರಾಲ್ಡ್‌ ಪ್ರಕರಣದಲ್ಲಿ ರಾಹುಲ್‌ ಗಾಂಧಿ ಮತ್ತು ಸೋನಿಯಾ ಇಬ್ಬರಿಗೂ ಇ.ಡಿ. ಸಮನ್ಸ್‌ ಜಾರಿ ಮಾಡಿತ್ತು. ಆದರೆ ಸೋನಿಯಾ ಗಾಂಧಿಯವರಿಗೆ ಕೊರೋನಾ ಬಂದ ಕಾರಣ ರಾಹುಲ್‌ ಗಾಂಧಿ ಮಾತ್ರ ಹಾಜರಾಗಿದ್ದರು. ಮೂರು ದಿನಗಳ ಕಾಲ ಜಾರಿ ನಿರ್ದೇಶನಾಲಯ ರಾಹುಲ್‌ ಗಾಂಧಿ ಅವರ ವಿಚಾರಣೆ ನಡೆಸಿದೆ. 

Latest Videos

ಇದನ್ನೂ ಓದಿ: ರಾಹುಲ್‌ ವಿಚಾರಣೆ: ದೇಶಾದ್ಯಂತ ರಾಜಭವನ ಚಲೋ- ಇಡಿ, ಪೊಲೀಸ್‌ ವಿರುದ್ಧ ಕಾಂಗ್ರೆಸ್‌ ರೋಷಾವೇಷ

ರಾಹುಲ್‌ ಇ.ಡಿ. ವಿಚಾರಣೆ:
ನ್ಯಾಷನಲ್‌ ಹೆರಾಲ್ಡ್‌ ಅಕ್ರಮ ಹಣ ವರ್ಗಾವಣೆ ಆರೋಪದ ಪ್ರಕರಣ ಸಂಬಂಧ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಸತತ ಮೂರನೇ ದಿನವಾದ ಬುಧವಾರ ಕೂಡಾ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರನ್ನು ಸುದೀರ್ಘ 10 ತಾಸುಗಳ ಕಾಲ ವಿಚಾರಣೆಗೆ ಒಳಪಡಿಸಿದ್ದರು. ಇದರೊಂದಿಗೆ ಕಳೆದ ಸೋಮವಾರ ಆರಂಭವಾಗಿದ್ದ ವಿಚಾರಣೆ ಮೂರು ದಿನ ಪೂರೈಸಿದ್ದು, ಒಟ್ಟಾರೆ 30 ತಾಸುಗಳ ಕಾಲ ಇ.ಡಿ. ಅಧಿಕಾರಿಗಳ ಪ್ರಶ್ನೆಗೆ ರಾಹುಲ್‌ ಗಾಂಧಿ ಉತ್ತರ ನೀಡಿದ್ದಾರೆ.

ಇನ್ನೂ ವಿಚಾರಣೆ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಗುರುವಾರ ಕೂಡಾ ವಿಚಾರಣೆಗೆ ಬರುವಂತೆ ರಾಹುಲ್‌ಗೆ ಇ.ಡಿ. ಅಧಿಕಾರಿಗಳು ಸೂಚಿಸಿದ್ದರು. ಆದರೆ ಗುರುವಾರ ಒಂದು ದಿನ ವಿನಾಯ್ತಿ ನೀಡುವಂತೆ ರಾಹುಲ್‌ ಮುಂದಿಟ್ಟಕೋರಿಕೆ ಮಾನ್ಯ ಮಾಡಿದ ಇ.ಡಿ. ಅಧಿಕಾರಿಗಳು, ಶುಕ್ರವಾರ ವಿಚಾರಣೆಗೆ ಮರಳುವಂತೆ ಸೂಚಿಸಿದ್ದಾರೆ.

ಇದನ್ನೂ ಓದಿ: News Hour: ನ್ಯಾಷನಲ್‌ ಹೆರಾಲ್ಡ್‌ ಪ್ರಕರಣ: ನಾಳೆಯ ವಿಚಾರಣೆಗೆ ವಿನಾಯಿತಿ ಕೇಳಿದ ರಾಹುಲ್‌ ಗಾಂಧಿ

10 ತಾಸು ಪ್ರಶ್ನೋತ್ತರ:

ಬುಧವಾರ ಬೆಳಗ್ಗೆ 11.30ಕ್ಕೆ ಇ.ಡಿ. ಕಚೇರಿಗೆ, ಸೋದರಿ ಪ್ರಿಯಾಂಕಾ ಜೊತೆ ಆಗಮಿಸಿದ ರಾಹುಲ್‌ ಮಧ್ಯಾಹ್ನದವರೆಗೂ ಹಾಜರಿದ್ದರು. ಬಳಿಕ ಭೋಜನಕ್ಕಾಗಿ ಮನೆಗೆ ತೆರಳಿ 4.30ಕ್ಕೆ ಇ.ಡಿ. ಕಚೇರಿಗೆ ಮರಳಿ ರಾತ್ರಿ 9.30ರವರೆಗೂ ಹಾಜರಿದ್ದು ಅಧಿಕಾರಿಗಳ ಪ್ರಶ್ನೆಗೆ ಉತ್ತರ ನೀಡಿದರು. ಕಳೆದ ಮೂರು ದಿನಗಳಿಂದಲೂ ನಿತ್ಯವೂ ರಾಹುಲ್‌ರ ಆಡಿಯೋ ಮತ್ತು ವಿಡಿಯೋ ಹೇಳಿಕೆಗಳನ್ನು ಅಧಿಕಾರಿಗಳು ದಾಖಲಿಸಿಕೊಳ್ಳುತ್ತಿದ್ದಾರೆ. ವಿಚಾರಣೆ ಪೂರ್ಣಗೊಂಡ ಬಳಿಕ ಎ4 ಸೈಜ್‌ನ ಕಾಗದದಲ್ಲಿ ದಾಖಲಾದ ತಮ್ಮ ಹೇಳಿಕೆಗಳನ್ನು ಕೂಲಂಕಷವಾಗಿ ಪರಿಶೀಲಿಸುತ್ತಿರುವ ರಾಹುಲ್‌ ಮತ್ತು ಅವರ ಬಳಗ, ಏನಾದರೂ ಬದಲಾವಣೆ ಇದ್ದರೆ ಅದನ್ನು ತಕ್ಷಣವೇ ತಿದ್ದುವಂತೆ ಸೂಚಿಸುತ್ತಿದೆ ಎಂದು ಇ.ಡಿ. ಕಚೇರಿ ಮೂಲಗಳು ತಿಳಿಸಿವೆ.

ಇದನ್ನೂ ಓದಿ: 3 ದಿನ, 30 ತಾಸು ರಾಹುಲ್‌ಗೆ ಡ್ರಿಲ್‌: ನಾಳೆ ಮತ್ತೆ ಬುಲಾವ್‌!

ಏನೇನು ಪ್ರಶ್ನೆ?:

ನ್ಯಾಷನಲ್‌ ಹೆರಾಲ್ಡ್‌ ಪತ್ರಿಕೆ, ಸದ್ಯ ನ್ಯಾಷನಲ್‌ ಹೆರಾಲ್ಡ್‌ ಪತ್ರಿಕೆಯ ಮಾಲಿಕತ್ವ ಹೊಂದಿರುವ ಯಂಗ್‌ ಇಂಡಿಯಾದಲ್ಲಿ ನಿಮ್ಮ ಪಾತ್ರ ಏನು? ಎಜೆಎಲ್‌ಗೆ ಕಾಂಗ್ರೆಸ್‌ನಿಂದ 90 ಕೋಟಿ ರು. ಸಾಲ ನೀಡಿಕೆ ವಿಷಯ, ಕಾಂಗ್ರೆಸ್‌ ನೀಡಿದ ಸಾಲವನ್ನು ಯಂಗ್‌ ಇಂಡಿಯಾಕ್ಕೆ ವರ್ಗಾಯಿಸಿದ್ದು ಏಕೆ? ಕೋಲ್ಕತಾ ಮೂಲದ ಶೆಲ್‌ ಕಂಪನಿಯೊಂದರಿಂದ ಯಂಗ್‌ ಇಂಡಿಯಾ 2011ರಲ್ಲಿ 1 ಕೋಟಿ ಸಾಲ ಪಡೆದಿದ್ದು ಏಕೆ? ಎಜೆಎಲ್‌ ಹೊಂದಿರುವ 800 ಕೋಟಿ ರು. ಆಸ್ತಿಯ ಮಾಹಿತಿ ಮತ್ತು ಲಾಭೇತರ ಸಂಸ್ಥೆಯಾದ ಯಂಗ್‌ ಇಂಡಿಯಾ, ನ್ಯಾಷನಲ್‌ ಹೆರಾಲ್ಡ್‌ಗೆ ಸಂಬಂಧಿಸಿದ ಭೂಮಿ ಮತ್ತು ಕಟ್ಟಡಗಳನ್ನು ಬಾಡಿಗೆಗೆ ನೀಡುವ ಮೂಲಕ ವಾಣಿಜ್ಯ ಚಟುವಟಿಕೆ ನಡೆಸುತ್ತಿರುವುದಾದರೂ ಏಕೆ ಎಂಬಿತ್ಯಾದಿ ಪ್ರಶ್ನೆಗಳನ್ನು ಇ.ಡಿ. ಅಧಿಕಾರಿಗಳು ರಾಹುಲ್‌ ಮುಂದಿಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.

click me!