
ಭಾರತದ ರಾಜಕೀಯ ಮತ್ತು ಸಾಮಾಜಿಕ ಹೋರಾಟದ ಇತಿಹಾಸದಲ್ಲಿ 'ಉಪವಾಸ ಸತ್ಯಾಗ್ರಹ' ಎಂಬುದು ಕೇವಲ ಒಂದು ಪ್ರತಿಭಟನೆಯಲ್ಲ, ಅದೊಂದು ಆತ್ಮಶಕ್ತಿಯ ಅಸ್ತ್ರ. ಆದರೆ, ಒಂದೇ ಕುಟುಂಬದ ಎರಡು ತಲೆಮಾರುಗಳು ದೇಶದ ಬೇರೆ ಬೇರೆ ದಶಕಗಳಲ್ಲಿ, ವಿಭಿನ್ನ ಗುರಿಗಳಿಗಾಗಿ ಅದೇ ಹಸಿವಿನ ಅಸ್ತ್ರ ಹಿಡಿದು ನಿಲ್ಲುವುದುಂಟೇ? ಲಡಾಖ್‌ನ ಪ್ರಸಿದ್ಧ ವಾಂಗ್ಚುಕ್ ಕುಟುಂಬದಲ್ಲಿ ಇಂದು ಈ ಅಪರೂಪದ ಹೋರಾಟದ ಪರಂಪರೆ ಮರುಕಳಿಸಿದೆ. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ.
ಅಂದು 1984 ರಲ್ಲಿ ತಂದೆ ಸೋನಮ್ ವಾಂಗ್ಯಾಲ್ ಅವರು ಲಡಾಖ್‌ನ ಭವಿಷ್ಯಕ್ಕಾಗಿ ಉಪವಾಸ ಕುಳಿತಿದ್ದರೆ, ಇಂದು 2026 ರಲ್ಲಿ ಅವರ ಮಗ, ಪ್ರಸಿದ್ಧ ಶಿಕ್ಷಣ ಸುಧಾರಕ ಸೋನಂ ವಾಂಗ್ಚುಕ್ ಅವರು ದೇಶದ ಯುವಜನತೆ ಭವಿಷ್ಯಕ್ಕಾಗಿ ದೆಹಲಿ ಜಂತರ್ ಮಂತರ್‌ನಲ್ಲಿ ಆಮರಣಾಂತ ಉಪವಾಸ ನಿರತರಾಗಿದ್ದಾರೆ. ಇಪ್ಪತ್ತು ದಿನಗಳನ್ನು ಪೂರೈಸಿರುವ ಈ ಉಪವಾಸದ ಹಿಂದೆ ಒಂದು ರೋಚಕ ಇತಿಹಾಸ ಮತ್ತು ತಲೆಮಾರುಗಳ ಹೋರಾಟದ ನಂಟಿದೆ.
ಅಂದು ಲಡಾಖ್ ಗೆದ್ದಿದ್ದ ಅಪ್ಪನಾಲ್ಕು ದಶಕಗಳ ಹಿಂದೆ, ಅಂದರೆ 1982 ಮತ್ತು 1984 ರ ಅವಧಿಯಲ್ಲಿ ಲಡಾಖ್‌ನ ಬುಡಕಟ್ಟು ಸಮುದಾಯಗಳಿಗೆ ಸಾಂವಿಧಾನಿಕ ರಕ್ಷಣೆ ಮತ್ತು ಪರಿಶಿಷ್ಟ ಪಂಗಡ (ST) ಸ್ಥಾನಮಾನ ಸಿಗಬೇಕೆಂದು ಅಲ್ಲಿನ ಪ್ರಮುಖ ನಾಯಕರಾಗಿದ್ದ ಸೋನಮ್ ವಾಂಗ್ಯಾಲ್ ಅವರು ಕಠಿಣ ಉಪವಾಸ ಸತ್ಯಾಗ್ರಹ ಆರಂಭಿಸಿದ್ದರು. ಲೇಹ್‌ನಲ್ಲಿ ನಡೆದ ಈ ಪ್ರತಿಭಟನೆಯ ತೀವ್ರತೆ ಎಷ್ಟಿತ್ತೆಂದರೆ, ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರು ಸ್ವತಃ ವಿಶೇಷ ವಿಮಾನದ ಮೂಲಕ ಲಡಾಖ್‌ಗೆ ಧಾವಿಸಿದ್ದರು.
ವಾಂಗ್ಯಾಲ್ ಅವರ ಛಲಕ್ಕೆ ಮಣಿದ ಪ್ರಧಾನಿ, ಬೇಡಿಕೆಯನ್ನು ಈಡೇರಿಸುವ ಭರವಸೆ ನೀಡಿ, ಸ್ವತಃ ಜ್ಯೂಸ್ ಕುಡಿಸುವ ಮೂಲಕ ಆ ಐತಿಹಾಸಿಕ ಉಪವಾಸ ಕೊನೆಗೊಳಿಸಿದ್ದರು. ಅದರ ಫಲವಾಗಿಯೇ 1989 ರಲ್ಲಿ ಲಡಾಖ್‌ಗೆ ಅಧಿಕೃತವಾಗಿ ಎಸ್‌ಟಿ ಸ್ಥಾನಮಾನ ಲಭಿಸಿತು. ಆ ಮೂಲಕ ಅಪ್ಪ ಅಂದು ಇಡೀ ಲಡಾಖ್‌ಗೆ ಹೊಸ ಭಾಗ್ಯವನ್ನು ತಂದುಕೊಟ್ಟಿದ್ದರು.
ಅಪ್ಪ ಇತಿಹಾಸ ಸೃಷ್ಟಿಸಿದ 42 ವರ್ಷಗಳ ಬಳಿಕ, ಇಂದು ಮಗ ಸೋನಂ ವಾಂಗ್ಚುಕ್ ಅವರ ರಕ್ತದಲ್ಲೂ ಅದೇ ಹೋರಾಟದ ಕಿಚ್ಚು ಜಾಗೃತಗೊಂಡಿದೆ. ಜೂನ್ 28 ರಿಂದ ದೆಹಲಿಯ ಜಂತರ್ ಮಂತರ್‌ನಲ್ಲಿ ಕೇವಲ ಉಪ್ಪುನೀರು ಕುಡಿದು ವಾಂಗ್ಚುಕ್ ಆಮರಣಾಂತ ಉಪವಾಸ ನಡೆಸುತ್ತಿದ್ದಾರೆ. ಆದರೆ ಈ ಬಾರಿ ಅವರ ಹೋರಾಟ ಕೇವಲ ಲಡಾಖ್‌ಗೆ ಸೀಮಿತವಾಗಿಲ್ಲ. ಇದು ದೇಶದ ಕೋಟ್ಯಂತರ ಜೆನ್-ಜಿ ಯುವಕರ ಪರವಾದ ಧ್ವನಿಯಾಗಿದೆ.
ದೇಶದ ಪ್ರತಿಷ್ಠಿತ ನೀಟ್ ಪರೀಕ್ಷೆಯ ಪೇಪರ್ ಲೀಕ್ ಹಗರಣದಿಂದಾಗಿ ಕಂಗೆಟ್ಟಿರುವ ಯುವಜನತೆ ಆರಂಭಿಸಿದ ವಿಶಿಷ್ಟ 'ಕಾಕ್ರೋಚ್ ಜನತಾ ಪಾರ್ಟಿ' (CJP) ಆಂದೋಲನಕ್ಕೆ ಸಾಥ್ ನೀಡಿರುವ ವಾಂಗ್ಚುಕ್, ಶಿಕ್ಷಣ ವ್ಯವಸ್ಥೆಯ ಪಾರದರ್ಶಕತೆ ಮತ್ತು ಶಿಕ್ಷಣ ಸಚಿವರ ರಾಜೀನಾಮೆಗೆ ಪಟ್ಟು ಹಿಡಿದಿದ್ದಾರೆ.ಇಪ್ಪತ್ತು ದಿನಗಳ ಹಸಿವು ಮತ್ತು ಸರ್ಕಾರದ ಮೌನಇಂದಿಗೆ ವಾಂಗ್ಚುಕ್ ಅವರ ಉಪವಾಸ ಇಪ್ಪತ್ತನೇ ದಿನಕ್ಕೆ ಕಾಲಿಟ್ಟಿದೆ.
ಈಗಾಗಲೇ ಅವರು 9 ಕೆಜಿಗೂ ಹೆಚ್ಚು ತೂಕ ಕಳೆದುಕೊಂಡಿದ್ದು, ಅವರ ದೇಹದ ಪ್ರಮುಖ ಅಂಗಾಂಗಗಳ ಮೇಲೆ ಪರಿಣಾಮ ಬೀರುವ ಭೀತಿಯಿದೆ ಎಂದು ವೈದ್ಯರು ಎಚ್ಚರಿಸಿದ್ದಾರೆ. ಆದರೂ, ಬಾಹ್ಯವಾಗಿ ದಣಿದಿದ್ದರೂ, ಒಳಗಿನಿಂದ ನಾನು ಸದೃಢನಾಗಿದ್ದೇನೆ. ಬರುವ ಜುಲೈ 20 ರ ಸಂಸತ್ ಮಾರ್ಚ್‌ವರೆಗೂ ನಾನು ಹೇಗಾದರೂ ಮಾಡಿ ಜೀವ ಉಳಿಸಿಕೊಳ್ಳುತ್ತೇನೆ ಎಂಬ ವಾಂಗ್ಚುಕ್ ಅವರ ಮಾತುಗಳು ಅವರಲ್ಲಿರುವ ತಂದೆಯದ್ದೇ ಛಲವನ್ನು ನೆನಪಿಸುತ್ತವೆ.
ಅಂದು ತಂದೆಯ ಸತ್ಯಾಗ್ರಹಕ್ಕೆ ಇಂದಿರಾ ಗಾಂಧಿಯವರು ತಕ್ಷಣವೇ ಸ್ಪಂದಿಸಿದ್ದರೆ, ಇಂದು ಇಪ್ಪತ್ತು ದಿನಗಳು ಕಳೆದರೂ ಕೇಂದ್ರ ಸರ್ಕಾರದ ಮೌನ ಮತ್ತು ದೆಹಲಿ ಪೊಲೀಸರ ತೀವ್ರ ಕಣ್ಗಾವಲು ಪ್ರಜಾಪ್ರಭುತ್ವದ ವಿಭಿನ್ನ ಮುಖಗಳನ್ನು ತೋರ್ಪಡಿಸುತ್ತಿದೆ. ವಾಂಗ್ಚುಕ್ ಕುಟುಂಬದ ಡಿಎನ್‌ಎಯಲ್ಲೇ ಈ ಸತ್ಯಾಗ್ರಹದ ಶಕ್ತಿ ಅಡಗಿದೆ. ಅಂದು ಅಪ್ಪ ತಂದಿದ್ದ ಎಸ್‌ಟಿ ಸ್ಥಾನಮಾನ ಲಡಾಖ್‌ನ ಅಸ್ಮಿತೆಯನ್ನು ಉಳಿಸಿತ್ತು. ಇಂದು ಮಗ ದೇಶದ ಯುವಕರ ಭವಿಷ್ಯಕ್ಕಾಗಿ ಜಂತರ್ ಮಂತರ್‌ನ ಕಡು ಬಿಸಿಲಿನಲ್ಲಿ ಪ್ರಾಣವನ್ನೇ ಪಣಕ್ಕಿಟ್ಟು ಕುಳಿತಿದ್ದಾರೆ. ಇತಿಹಾಸದ ಚಕ್ರ ಉರುಳಿದೆ; ಅಂದು ಅಪ್ಪ ಯಶಸ್ವಿಯಾದಂತೆ, ಇಂದು ಮಗನ ಈ ಸುದೀರ್ಘ 'ಹಸಿವಿನ ಅಸ್ತ್ರ'ಕ್ಕೆ ದೆಹಲಿಯ ರಾಜಕಾರಣ ಬಾಗುವುದೇ ಮತ್ತು ದೇಶದ ಯುವಜನತೆಗೆ ನ್ಯಾಯ ಸಿಗುವುದೇ ಎಂಬುದನ್ನು ಇಡೀ ದೇಶ ಕುತೂಹಲದಿಂದ ನೋಡುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ