
ಭಾರತದ ಪ್ರಸಿದ್ಧ ಬೀಡಿ ಬ್ರಾಂಡ್ ದಿನೇಶ್ ಬೀಡಿಯ ಸ್ಥಾಪಕ, ಬೀಡಿ ಉದ್ಯಮಿಯನ್ನು ಅವರ ಮಗನೇ ಗುಂಡಿಕ್ಕಿ ಹತ್ಯೆ ಮಾಡಿದಂತಹ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಮಥುರಾದ ವೃಂದಾವನ ನಗರದಲ್ಲಿ ನಡೆದಿದೆ. ಮಗ ಮದ್ಯ ಸೇವಿಸುತ್ತಿದ್ದಿದ್ದಕ್ಕೆ ತಂದೆ ಆಕ್ಷೇಪಿಸಿದ್ದೇ ಈ ಕೊಲೆಗೆ ಕಾರಣ ಎಂದು ತಿಳಿದು ಬಂದಿದೆ. 68 ವರ್ಷದ ಉದ್ಯಮಿ ಸುರೇಶ್ ಚಂದ್ ಅಗರ್ವಾಲ್ ಹೀಗೆ ಮಗನ ಕೈಯಲ್ಲೇ ಕೊಲೆಯಾದ ಉದ್ಯಮಿ. ಅವರ 45 ವರ್ಷದ ಪ್ರಾಯದ ಮಗ ನರೇಶ್ ಕುಡಿದ ಮತ್ತಿನಲ್ಲೇ ತಂದೆಗೆ ಗುಂಡಿಟ್ಟಿದ್ದು, ಬಳಿಕ ತಾನು ಸಾವಿಗೆ ಶರಣಾಗಿದ್ದಾನೆ. ಶುಕ್ರವಾರ ರಾತ್ರಿ ಈ ಘಟನೆ ನಡೆದಿದೆ. ಸುರೇಶ್ ಚಂದ್ ಅಗರ್ವಾಲ್ ಅವರು ತಮ್ಮ ಇಬ್ಬರು ಕಿರಿಯ ಪುತ್ರರಾದ ನರೇಶ್ ಹಾಗೂ ಮಹೇಶ್ ಅಗರ್ವಾಲ್ ಜೊತೆ ಮಥುರಾದಲ್ಲಿ ವಾಸಿಸುತ್ತಿದ್ದರು.
ಮಥುರಾದ ವೃಂದಾವನ ನಗರದಲ್ಲಿರುವ ಉದ್ಯಮಿಯ ಮನೆಯಲ್ಲಿಯೇ ಈ ಘಟನೆ ನಡೆದಿದೆ. ಕುಡಿದ ಮತ್ತಿನಲ್ಲಿ ತಾಳ್ಮೆ ಕಳೆದುಕೊಂಡ ಮಗ ತನ್ನ ತಂದೆಗೆ ಗುಂಡಿಕ್ಕಿದ್ದು, ಬಳಿಕ ತಂದೆಯ ಸಾವಿನ ಅರಿವಾಗುತ್ತಿದ್ದಂತೆ ತಾನು ಅದೇ ಗನ್‌ನಲ್ಲಿ ಗುಂಡು ಹಾರಿಸಿಕೊಂಡು ಸಾವಿಗೆ ಶರಣಾಗಿದ್ದಾನೆ. ಗುಂಡಿನ ಸದ್ದು ಕೇಳಿ ನೆರೆಹೊರೆಯ ಮನೆಯವರು ಅಲ್ಲಿಗೆ ಓಡಿ ಬಂದಿದ್ದು, ಈ ವೇಳೆ ಇಬ್ಬರು ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡು ಬಂದಿದೆ. ಕೂಡಲೇ ಸುರೇಶ್ ಚಂದ್ ಹಾಗೂ ಅವರ ಮಗನನ್ನು ಹತ್ತಿರದ ಆಸ್ಪತ್ರೆಗೆ ತಲುಪುವಷ್ಟರಲ್ಲಿ ಉದ್ಯಮಿ ಮತ್ತು ಅವರ ಮಗ ಇಬ್ಬರೂ ಮೃತಪಟ್ಟಿದ್ದಾರೆಂದು ವೈದ್ಯರು ಘೋಷಿಸಿದ್ದಾರೆ. ಕೆಲವು ವರದಿಗಳ ಪ್ರಕಾರ ಸುರೇಶ್ ತನ್ನ ಮಗ ನರೇಶ್ ಕುಡಿತಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದು, ಇದು ನರೇಶ್ ಅವರನ್ನು ಕೆರಳಿಸಿತು ಮತ್ತು ಇಬ್ಬರ ಮಧ್ಯೆ ಗಲಾಟೆಗೆ ಕಾರಣವಾಯ್ತು ಎಂದು ತಿಳಿದು ಬಂದಿದೆ.
ಬೀಡಿ ಉದ್ಯಮಿ ಸುರೇಶ್ ಚಂದ್ ಅಗರ್ವಾಲ್ ಅವರ ಭೀಕರ ಹತ್ಯೆಗೆ ವ್ಯವಹಾರ ವಿವಾದಗಳೇ ಕಾರಣ ಎಂದು ಆರಂಭದಲ್ಲಿ ಹೇಳಲಾಗಿತ್ತು, ಅವರನ್ನು ಅವರ ಮಗ ನರೇಶ್ ಕುಮಾರ್ ಅಗರ್ವಾಲ್ ಅವರೇ ಗುಂಡಿಕ್ಕಿ ಕೊಂದಿದ್ದರು. ಈ ಬಗ್ಗೆ ಕುಟುಂಬ ಸದಸ್ಯರು ಯಾರೂ ದೂರು ನೀಡಿಲ್ಲ ಮತ್ತು ವೈದ್ಯರು ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಮೃತ ದೇಹಗಳನ್ನು ಕುಟುಂಬಕ್ಕೆ ಹಸ್ತಾಂತರಿಸಿದ್ದಾರೆ ಎಂದು ಮಥುರಾದ ವೃತ್ತ ಅಧಿಕಾರಿ ಸಂದೀಪ್ ಕುಮಾರ್ ಸಿಂಗ್ ಹೇಳಿದ್ದಾರೆ.
ಕೋಲ್ಕತ್ತಾದಲ್ಲಿ ವಾಸಿಸುತ್ತಿರುವ ಹಿರಿಯ ಪುತ್ರ:
ಪೊಲೀಸರು ಈ ವಿಷಯದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಮತ್ತು ನಂತರವೇ ನಿಖರವಾದ ಕಾರಣವನ್ನು ಕಂಡುಹಿಡಿಯಲು ಸಾಧ್ಯ ಎಂದು ಅವರು ಹೇಳಿದರು. ಈ ಕುಟುಂಬವು ನಗರದಲ್ಲಿ ಚಿರಪರಿಚಿತವಾಗಿದ್ದು, ಹೆಚ್ಚಾಗಿ ಕೋಲ್ಕತ್ತಾದ ಕಾರ್ಮಿಕರನ್ನು ನೇಮಿಸಿಕೊಂಡು ಬೀಡಿ ತಯಾರಿಸುವ ವ್ಯವಹಾರದಲ್ಲಿ ತೊಡಗಿಸಿಕೊಂಡಿತ್ತು. ಈ ಕಂಪನಿಯು ಸುರೇಶ್ ಅವರ ಹಿರಿಯ ಮಗ ದಿನೇಶ್ ಅವರ ಹೆಸರಿನಲ್ಲಿದ್ದು, ಅವರು ಕೋಲ್ಕತ್ತಾದಲ್ಲಿ ವಾಸ ಮಾಡ್ತಿದ್ದಾರೆ ಎಂದು ವರದಿಯಾಗಿದೆ.
ಕ್ಯಾನ್ಸರ್ ಗೆದ್ದರೂ ಸಾವು ಗೆಲ್ಲಲಾಗಲಿಲ್ಲ: 1977ರಲ್ಲಿ ಆರಂಭಿಸಿದ ಬೀಡಿ ಉದ್ಯಮದಿಂದ ಕೋಟ್ಯಾಧಿಪತಿಯಾಗಿದ್ದ ಸುರೇಶ್ ಅಗರ್ವಾಲ್
ಶಾಲಿಗಂ ದೇವಸ್ಥಾನದ ಕೆಳಗೆ ಒಂದು ಸಣ್ಣ ಹಿಟ್ಟಿನ ಗಿರಣಿಯಿಂದ ತಮ್ಮ ವೃತ್ತಿಜೀವನವನ್ನು ಆರಂಭಿಸಿದ್ದ ಸುರೇಶ್ 1977ರಲ್ಲಿ ತಾವು ಸ್ಥಾಪಿಸಿದ ಬೀಡಿ ವ್ಯವಹಾರದಿಂದ ಸಾವಿರಾರು ಕೋಟಿ ಗಳಿಸಿದರು. 'ದಿನೇಶ್ ಬೀಡಿ' ಎಂಬ ಹೆಸರಿನಲ್ಲಿ, ಅವರು ಬಿಹಾರ, ಜಾರ್ಖಂಡ್, ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶದ ಹಲವು ರಾಜ್ಯಗಳಲ್ಲಿ ತಮ್ಮ ವ್ಯವಹಾರವನ್ನು ವಿಸ್ತರಿಸಿದ ಅವರು ಹಿಂದೊಮ್ಮೆ ಕ್ಯಾನ್ಸರ್‌ಗೆ ತುತ್ತಾಗಿ ಬಹಳ ಸಮಯ ಕ್ಯಾನ್ಸರ್ ವಿರುದ್ಧ ಹೋರಾಡಿ ಚೇತರಿಸಿಕೊಂಡಿದ್ದರು. ಆದರೆ ಕ್ಯಾನ್ಸರ್ ಗೆದ್ದರು ಅವರಿಗೆ ಮಗನ ಕೈಯಿಂದಲಲೇ ಸಾವು ಬಂದಿದ್ದು ಮಾತ್ರ ವಿಪರ್ಯಾಸವೇ ಸರಿ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ