ಅಪ್ಪನ ಚಿತೆಗೆ ಕೊಳ್ಳಿ ಇಡೋಕೆ ಎರಡೂವರೆ ಲಕ್ಷ ಕೇಳಿದ ಮಗ- ಅಮ್ಮ ಗೋಳಾಡಿ ಬೇಡಿಕೊಂಡ್ರೂ ಕೇಳದ ಮಗ

By Mahmad Rafik  |  First Published Oct 2, 2024, 3:45 PM IST

ಪುತ್ರನೋರ್ವ ತಂದೆಯ ಚಿತೆಗೆ ಬೆಂಕಿ ಇಡಲು 2.5 ಲಕ್ಷ ರೂಪಾಯಿ ಬೇಡಿಕೆ ಇಟ್ಟ ಹೃದಯ ವಿದ್ರಾವಕ ಘಟನೆ ನಡೆದಿದೆ. ಮಗನ ನಿರ್ಧಾರದಿಂದ ತಾಯಿ ಸ್ವತಃ ಚಿತೆಗೆ ಬೆಂಕಿ ಇಟ್ಟಿದ್ದಾರೆ.


ಭೋಪಾಲ್: ಮಧ್ಯಪ್ರದೇಶದ ಶಾದೋಲ್ ಎಂಬಲ್ಲಿ ಪುತ್ರನೋರ್ವ ತಂದೆಯ ಚಿತೆಗೆ ಬೆಂಕಿ ಇಡಲು ನಿರಾಕರಿಸಿದ್ದಾನೆ.  ತಂದೆಯ ಚಿತೆಗೆ ಕೊಳ್ಳಿ ಇಡಬೇಕಾದರೆ 2.5 ಲಕ್ಷ ರೂಪಾಯಿ ನೀಡಬೇಕೆಂದು ಮಗ ಡಿಮ್ಯಾಂಡ್ ಮಾಡಿದ್ದನು. ಊರಿಗೆ ಬಂದು ತಂದೆಯ ಅಂತಿಮ ವಿಧಿವಿಧಾನಗಳನ್ನು ಪೂರ್ಣಗೊಳಿಸು ಎಂದು ತಾಯಿ ಫೋನ್‌ನಲ್ಲಿ ಗೊಗರೆದು ಕೇಳಿಕೊಂಡರೂ ಮಗ ಕೇಳಿಲ್ಲ. ಎಷ್ಟೇ ಮನವಿ ಮಾಡಿಕೊಂಡರೂ ಮಗ ಬರಲು ಒಪ್ಪದಿದ್ದಾಗ ಪತ್ನಿಯೇ ಚಿತೆಗೆ ಬೆಂಕಿ ಇರಿಸಿದ್ದಾರೆ. 

ವರದಿಗಳ ಪ್ರಕಾರ, ಮಧ್ಯಪ್ರದೇಶದ ಬ್ಯೌಹಾರಿ ಪೊಲೀಸ್ ಠಾಣಾ ವ್ಯಾಪ್ತಿಯ ಕಛಿಯಾನಾ ಟೋಲಾ 11ನೇ ವಾರ್ಡ್‌ನಲ್ಲಿ ಘಟನೆ ನಡೆದಿದೆ. 10 ದಿನಗಳ ಹಿಂದೆ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. 10 ದಿನದ ಹಿಂದೆ ರಾಮ್ ಸ್ವರೂಪ್ ಬರ್ಮನ್ ಎಂಬವರು ಸಾವನ್ನಪ್ಪಿದ್ದರು. ಮಗನಿಗೆ ಕರೆ ಮಾಡಿದ ತಾಯಿ, ನಿಮ್ಮ ತಂದೆ ಮೃತರಾಗಿದ್ದು, ಬಂದು ಅಂತ್ಯಕ್ರಿಯೆ ನೆರವೇರಿಸು ಎಂದು ಹೇಳಿದ್ದರು. ಇದಕ್ಕೆ ಊರಿನಲ್ಲಿರುವ ಮನೆ ಮಾರಾಟ ಮಾಡಿ, ಎರಡೂವರೆ ಲಕ್ಷ ಹಣ ಖಾತೆಗೆ ಜಮೆ ಮಾಡಿದ ನಂತರವೇ ಅಲ್ಲಿಗೆ ಬರುವೆ ಎಂದು ಹೇಳಿದ್ದಾನೆ. ತಾಯಿ, ಕುಟುಂಬಸ್ಥರು ಮತ್ತು ಗ್ರಾಮದ ಹಿರಿಯರು ಎಷ್ಟೇ ಬುದ್ಧಿವಾದ ಹೇಳಿದರೂ ಮಗ ಯಾರ ಮಾತನ್ನೂ ಕೇಳಿಲ್ಲ. 

Tap to resize

Latest Videos

ಅಂತ್ಯಕ್ರಿಯೆ ನಡೆಸಲು ಒಪ್ಪದಿದ್ದಾಗ ಮೃತ ವ್ಯಕ್ತಿಯ ಮಡದಿ ಪಾರ್ವತಿ ತಾವೇ ಎಲ್ಲಾ ಅಂತಿಮ ವಿಧಿವಿಧಾನಗಳನ್ನು ಪೂರೈಸಲು ನಿರ್ಧರಿಸಿದರು. ಶವ ಸಾಗುವ ಮಾರ್ಗದಲ್ಲಿ ತಾವೇ ಮುಂದೆ ಕೊಳ್ಳಿ ಹಿಡಿದುಕೊಂಡು ಸ್ಮಶಾನದವರೆಗೆ ಬಂದಿದ್ದಾರೆ. ಸ್ಮಶಾನಕ್ಕೆ ಬಂದ್ಮೇಲೆಯೂ ತುಂಬಾ ಸಮಯದವರೆಗೆ ಮಗನ ಆಗಮನಕ್ಕಾಗಿ ಇಡೀ ಊರು ಕಾದಿತ್ತು. ಕೊನೆಗೆ ತಾವೇ ಎಲ್ಲಾ ವಿಧಿವಿಧಾನ ಪೂರೈಸಿ ಗಂಡನ ಚಿತೆಗೆ ಅಗ್ನಿಸ್ಪರ್ಶ ಮಾಡಿದ್ದಾರೆ. ಇಡೀ ಗ್ರಾಮ ಪಾರ್ವತಿ ಅವರಿಗೆ ಸಾಥ್ ನೀಡಿತ್ತು.

ಬರೋಬ್ಬರಿ 2 ಕೋಟಿಗೆ ಹರಾಜು ಆದ ಸರಪಂಚ್‌ ಹುದ್ದೆ: ಚೆಕ್ ಕೊಟ್ಟ ಬಿಜೆಪಿ ನಾಯಕ

ಅಂತ್ಯಕ್ರಿಯೆ ಮುಗಿಸಿದ ಬಳಿಕ 10ನೇ ದಿನದ ಕಾರ್ಯವರೆಗೂ ಮಗ ಆಗಮಿಸುವ ನಿರೀಕ್ಷೆಯುಲ್ಲಿ ಮಹಿಳೆ ಇದ್ದರು. 10ನೇ ದಿನದ ಕಾರ್ಯಕ್ರಮ ಮುಗಿಸಿದ ನಂತರ ಹೆಣ್ಣು ಮಕ್ಕಳೊಂದಿಗೆ ನೇರವಾಗಿ ಪೊಲೀಸ್ ಠಾಣೆಗೆ ತೆರಳಿದ ಪಾರ್ವತಿ ಅವರು, ಮಗನ ವಿರುದ್ಧ ದೂರು ದಾಖಲಿಸಿ ಆತನ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ರಾಮ್ ಸ್ವರೂಪ್ ಬರ್ಮನ್ ಮತ್ತು ಪಾರ್ವತಿ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳು, ಓರ್ವ ಮಗನಿದ್ದಾನೆ. ಮದುವೆ ಬಳಿಕ ತಂದೆ-ತಾಯಿ ಜೊತೆ ಹಣಕಾಸಿನ ವಿಚಾರವಾಗಿ ಮಗ ಮನೋಜ್ ಜಗಳ ಮಾಡುತ್ತಿದ್ದನು. ನಂತರ ಪೋಷಕರಿಂದ ದೂರವಾಗಿ ಬ್ಯೌಹಾರಿಯ ಬಾಡಿಗೆ ಮನೆಯಲ್ಲಿ ಪತ್ನಿ ಜೊತೆ ಮನೋಜ್ ವಾಸವಾಗಿದ್ದನು. ಊರಿಗೆ ಬಂದಾಗಲೂ ಹಣದ ವಿಷಯಕ್ಕಾಗಿಯೇ ಪೋಷಕರ ಜೊತೆ ಮನೋಜ್ ಜಗಳ ಮಾಡುತ್ತಿದ್ದನು ಎಂದು ವರದಿಯಾಗಿದೆ.

ದೇಗುಲಗಳಿಂದ ಸಾಯಿಬಾಬಾ ಪ್ರತಿಮೆ ತೆರವು; ಕಾಶೀಲಿ ಶಿವನಿಗಷ್ಟೇ ಪೂಜೆ ಎಂದ ಸನಾತನ ದಳ

click me!