ಭಾರತ-ಪಾಕ್ ಸಂಘರ್ಷ; ಕರ್ನಾಟಕ ಗಡಿ ಭಾಗದ ಯೋಧ ಮುರುಳಿ ಹುತಾತ್ಮ, ಬೆಂಗಳೂರು ಏರ್ಪೋರ್ಟ್‌ಗೆ ಬಂದ ಪಾರ್ಥಿವ ಶರೀರ

Published : May 10, 2025, 04:02 PM ISTUpdated : May 10, 2025, 04:51 PM IST
ಭಾರತ-ಪಾಕ್ ಸಂಘರ್ಷ; ಕರ್ನಾಟಕ ಗಡಿ ಭಾಗದ ಯೋಧ ಮುರುಳಿ ಹುತಾತ್ಮ, ಬೆಂಗಳೂರು ಏರ್ಪೋರ್ಟ್‌ಗೆ ಬಂದ ಪಾರ್ಥಿವ ಶರೀರ

ಸಾರಾಂಶ

ಜಮ್ಮುವಿನಲ್ಲಿ ಪಾಕ್‌ ಡ್ರೋನ್‌ ದಾಳಿಗೆ ಬಲಿಯಾದ ಆಂಧ್ರಪ್ರದೇಶ ಮೂಲದ ಯೋಧ ಮುರುಳಿ ನಾಯಕ್‌ ಪಾರ್ಥಿವ ಶರೀರ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿತು. ದೆಹಲಿಯಿಂದ ಇಂಡಿಗೋ ವಿಮಾನದ ಮೂಲಕ ಬಂದ ಶರೀರಕ್ಕೆ ಸೇನಾ ಗೌರವ ಸಲ್ಲಿಸಲಾಯಿತು. ನಂತರ ಆಂಬುಲೆನ್ಸ್‌ ಮೂಲಕ ಆಂಧ್ರದ ಗೋರಂಟ್ಲಾಕ್ಕೆ ರವಾನಿಸಲಾಯಿತು. ಸಚಿವ ಉದಯ್‌ ಸಾಮಂತ್‌ ಸೇರಿದಂತೆ ಗಣ್ಯರು ನಮನ ಸಲ್ಲಿಸಿದರು.

ಬೆಂಗಳೂರು/ದೇವನಹಳ್ಳಿ (ಮೇ 10): ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆಯುತ್ತಿರುವ ಸಂಘರ್ಷದಲ್ಲಿ ಇದೀಗ ಕರ್ನಾಟಕ ಗಡಿ ಭಾಗದ ಗ್ರಾಮದ ಆಂಧ್ರ ಪ್ರದೇಶ ರಾಜ್ಯದ ಮೊದಲ ಯೋಧ ಮುರುಳಿ ನಾಯಕ್ ಪಾಕ್ ಸೇನೆಯ ಡ್ರೋನ್ ದಾಳಿಗೆ ತುತ್ತಾಗಿ ಹುತಾತ್ಮನಾಗಿದ್ದಾನೆ. ಮುರುಳಿಯ ಮೃತದೇಹವನ್ನು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಂದು ನಂತರ ಆಂಬುಲೆನ್ಸ್ ಮೂಲಕ ಯುವಕನ ಸ್ವಗ್ರಾಮಕ್ಕೆ ರವಾನಿಸಲಾಗಿದೆ.

ಪಾಕ್ ದಾಳಿಯಲ್ಲಿ ಹುತಾತ್ಮನಾದ ಆಂಧ್ರಪ್ರದೇಶ ಮೂಲದ ಯೋಧ ಮುರುಳಿ ಮೃತ ಶರೀರವನ್ನು ಮೊದಲು ಜಮ್ಮು ಕಾಶ್ನೀರದಿಂದ ದೆಹಲಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತರಲಾಗಿತ್ತು. ಅಲ್ಲಿಂದ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ರವಾನಿಸಲಾಗಿದೆ. ದೆಹಲಿಯಿಂದ ಇಂಡಿಗೋ ವಿಮಾನದ ಮೂಲಕ ಬೆಂಗಳೂರಿನ ಏರ್ಪೋರ್ಟ್‌ಗೆ ಬಂದ ಯೋಧನ ಶರೀರವನ್ನು ಕಾರ್ಗೋ ಟರ್ಮಿನಲ್‌ನಲ್ಲಿ ಇರಿಸಿ ಭಾರತೀಯ ಯೋಧರಿಂದ ಅಂತಿಮ ನಮನ ಸಲ್ಲಿಕೆ ಮಾಡಲಾಗಿದೆ. ಇಲ್ಲಿಂದ ಚಿಕ್ಕಬಳ್ಳಾಪುರದ ಮೂಲಕ ಮುರುಳಿ ಅವರ ಮೃತದೇಹವನ್ನು ರಸ್ತೆ ಮಾರ್ಗವಾಗಿ ಸ್ವಗ್ರಾಮ ಗೋರಂಟ್ಲಾಗೆ ರವಾನೆ ಮಾಡಲಾಗುತ್ತಿದೆ. ಇನ್ನು ಆಂಧ್ರ ಪ್ರದೇಶ ಸರ್ಕಾರದಿಂದ ಯೋಧನ ಮೃತದೇಶ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ನಂತರ ಕಾನೂನು ವಿಧಿ-ವಿಧಾನಗಳ ಮೂಲಕ ಅಂತ್ಯಕ್ರಿಯೆ ನಡೆಸಲು ಸಿದ್ಧತೆಯನ್ನು ಮಾಡಿಕೊಂಡಿದೆ.

ಜಮ್ಮುವಿನಲ್ಲಿ ಪಾಕ್ ದಾಳಿಯಲ್ಲಿ ಹುತಾತ್ಮನಾಗಿದ್ದ ಯೋಧ ಮುರಳಿ ನಾಯಕ್, ಆಂಧ್ರಪ್ರದೇಶ ಮತ್ತು ಕರ್ನಾಟಕ ಗಡಿ ಭಾಗದ ಗ್ರಾಮದ ಯೋಧನಾಗಿದ್ದಾನೆ. ಶ್ರೀ ಸತ್ಯಸಾಯಿ ಜಿಲ್ಲೆಯ ಪೆನುಕೊಂಡ ವಿಧಾನಸಭಾ ಕ್ಷೇತ್ರದ ಗೋರಂಟ್ಲಾ ಮಂಡಲದಲ್ಲಿ ಮುರುಳಿ ಜನಿಸಿದ್ದು, ಇಲ್ಲಿಯೇ ಶಿಕ್ಷಣವನ್ನೂ ಪಡೆದು ಯೋಧನಾಗಿ ಭಾರತೀಯ ಸೇನೆ ಸೇರಿದ್ದನು. ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿರುವ ಮುರುಳಿ ನಾಯಕ್ ಅವರ ತಂದೆ ಭಾರತೀಯ ಸೇನೆಯಿಂದ ಮಗನ ಮೃತದೇಹ ಸ್ವೀಕಾರ ಮಾಡಿದ್ದಾರೆ.

ವೀರ ಮರಣಹೊಂದಿದ ಯೋಧ ಮುರುಳಿ ನಾಯಕ್ ಅವರಿಗೆ ಅಂತಿಮ ನಮನ ಸಲ್ಲಿಕೆ ಮಾಡುವುದಕ್ಕೆ ಮಹಾರಾಷ್ಟ್ರದ ಸಚಿವ ಉದಯ್ ಸಾಮಂತ್ ಅವರು ಬೆಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ಇನ್ನು ಕರ್ನಾಟಕದ ಪರವಾಗಿ ದೇವನಹಳ್ಳಿ ತಹಸೀಲ್ದಾರ್ ಉಪಸ್ಥಿತರಿದ್ದು, ರಾಜ್ಯ ಸರ್ಕಾರದ ಪರವಾಗಿ ಯೋಧನಿಗೆ ಅಂತಿಮ ನಮನ ಸಲ್ಲಿಸಿದರು. ನಂತರ, ದೇವನಹಳ್ಳಿ ವಿಮಾನ ನಿಲ್ದಾಣದಿಂದ ಕರ್ನಾಟಕದ ಗಡಿ ದಾಟುವವರೆಗೂ ಟ್ರಾಫಿಕ್ ಮುಕ್ತವಾಗಿ ಪಾರ್ಥಿವ ಶರೀರವನ್ನು ರವಾನಿಸಲು ಬೇಕಾದ ವ್ಯವಸ್ಥೆಯನ್ನು ಮಾಡಿಕೊಟ್ಟಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಅಧಿಕಾರಿ ಸಾವು: ಜಮ್ಮು ಕಾಶ್ಮೀರದ ರಾಜ್ಯದ ರಾಜೌರಿ, ಪೂಂಚ್ ಮತ್ತು ಜಮ್ಮು ಜಿಲ್ಲೆಗಳಲ್ಲಿ ಶನಿವಾರ ಮುಂಜಾನೆ ಪಾಕಿಸ್ತಾನ ನಡೆಸಿದ ಭಾರೀ ಶೆಲ್ ದಾಳಿಯಲ್ಲಿ ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರು ಸೇರಿದಂತೆ ಐದು ಜನರು ಸಾವನ್ನಪ್ಪಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಅಧಿಕಾರಿ ಮತ್ತು ಹೆಚ್ಚುವರಿ ಜಿಲ್ಲಾ ಅಭಿವೃದ್ಧಿ ಆಯುಕ್ತ ರಾಜೌರಿ ರಾಜ್ ಕುಮಾರ್ ಥಾಪ ಸೇರಿ ಆವರು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಂತಾಪ:
'ಶ್ರೀ ಸತ್ಯಸಾಯಿ ಜಿಲ್ಲೆಯ ಪೆನುಕೊಂಡ ವಿಧಾನಸಭಾ ಕ್ಷೇತ್ರದ ಗೋರಂಟ್ಲಾ ಮಂಡಲದ ಮುರಳಿ ನಾಯಕ್ ಎಂಬ ಸೈನಿಕ ದೇಶ ರಕ್ಷಣೆಯಲ್ಲಿ ಪ್ರಾಣ ಕಳೆದುಕೊಂಡಿದ್ದು ದುರಂತ. ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಹುತಾತ್ಮ ಮುರಳಿ ನಾಯಕ್ ಅವರಿಗೆ ನಮನಗಳು. ಅವರ ಕುಟುಂಬ ಸದಸ್ಯರಿಗೆ ನನ್ನ ಆಳವಾದ ಸಂತಾಪವನ್ನು ವ್ಯಕ್ತಪಡಿಸುತ್ತೇನೆ' ಎಂದು ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಗಂಡ ಉಳಿಯಲಿಲ್ಲ, ಎಗ್ಸಾಂ ಬರೆಯಲಿಲ್ಲ, ಕ್ಯಾನ್ಸಲ್ ಆಗಿದ್ದು ಬರೀ ಫ್ಲೈಟ್ ಅಲ್ಲ ನೂರಾರು ಮಂದಿ ಕನಸು
ಸಿನಿಮೀಯ ಶೈಲಿಯಲ್ಲಿ ಹಿಮಾಲಯದ ಮೈನಸ್ ತಾಪಮಾನದಲ್ಲಿ ಅಂತಾರಾಷ್ಟ್ರೀಯ ಮಹಿಳಾ ಸ್ಮಗ್ಲರ್‌ ಬಂಧನ