ನವದೆಹಲಿ(ಜೂ.05): ಮಣ್ಣು ಸಂರಕ್ಷಣೆ ಮಾಡುವುದು ನಮ್ಮ ಬದ್ದತೆಯಾಗಿದೆ. ಇದಕ್ಕಾಗಿ ಮಣ್ಣು ಸಂರಕ್ಷಣೆ ಅಭಿಯಾನ ಆರಂಭಿಸಿ ಕಳೆದ 75 ದಿನಗಳಲ್ಲಿ 27 ರಾಷ್ಟ್ರಗಳಲ್ಲಿ ಪರ್ಯಟನೆ ಮಾಡಿದ್ದೇನೆ. ಇದೀಗ ನಮ್ಮ ಬದ್ದತೆಗೆ ಪ್ರಧಾನಿ ನರೇಂದ್ರ ಮೋದಿ ಬೆಂಬಲಿಸಿದ್ದಾರೆ ಎಂದು ಈಶಾ ಫೌಂಡೇಶನ್ ಮುಖ್ಯಸ್ಥ, ಸದ್ಗುರು ಜಗ್ಗಿವಾಸುದೇವ್ ಹೇಳಿದ್ದಾರೆ.
ವಿಶ್ವಪರಿಸರ ದಿನಾಚರಣೆ ದಿನದಂದು ಮಣ್ಣ ಉಳಿಸಿ ಅಭಿಯಾನ ಸಭೆಯನ್ನು ದೆಹಲಿಯಲ್ಲಿ ಆಯೋಜಿಸಲಾಗಿತ್ತು. ಮಣ್ಣು ಸಂರಕ್ಷಣೆಗಾಗಿ ಬೈಕ್ ನಲ್ಲಿ 20 ಸಾವಿರ ಕಿಲೋಮೀಟರ್ ಸುತ್ತಿದ್ದೇವೆ. ಮಣ್ಣನ್ನು ಉಳಿಸುವ ಕುರಿತು 2.5 ಬಿಲಿಯನ್ ಜನರು ಮಾತನಾಡಿದ್ದಾರೆ. 3.6 ಬಿಲಿಯನ್ ಜನರನ್ನು ತಲುಪುವುದು ನಮ್ಮ ಗುರಿಯಾಗಿದೆ ಎಂದು ಸದ್ಗುರು ಹೇಳಿದ್ದಾರೆ.
26 ದೇಶ ಸುತ್ತಿದ ಸದ್ಗುರು ಭಾರತ ಪ್ರವೇಶ!
ಈಗ ಎಲ್ಲಾ ರಾಷ್ಟ್ರಗಳು ಮಣ್ಣು ಸಂರಕ್ಷಣೆ ಮಾಡುವ ಬಗ್ಗೆ ಮಾತಾನಾಡುತ್ತಿವೆ. ಮಣ್ಣನ್ನು ತಾಯಿಗೆ ಹೋಲಿಕೆ ಮಾಡಬಹುದು. ಇದೀಗ ನಾವು ನಿರ್ಜೀವ ತಾಯಿಗೆ ಜೀವ ತುಂಬಬೇಕಿದೆ. ಮಣ್ಣು ಸಂರಕ್ಷಣೆ ಕುರಿತು ಹಲವು ರಾಷ್ಟ್ರಗಳು ಸಹಿ ಹಾಕಿವೆ. ಕೆರೆಬಿಯನ್ ಹಾಗು ಕಾಮನ್ ವೆಲ್ತ್ ರಾಷ್ಟ್ರಗಳು ಕೈಜೋಡಿಸಿದೆ. ಮರುಭೂಮಿ ರಾಷ್ಟ್ರಗಳಲ್ಲೂ ಕೂಡ ಮಣ್ಣು ಸಂರಕ್ಷಣೆಯ ಬಗ್ಗೆ ಹೆಚ್ಚು ಹೆಚ್ಚು ಮಾತಾಡುತ್ತಿವೆ ಎಂದು ಸದ್ಗುರು ಹೇಳಿದ್ದಾರೆ.
ಸದ್ಗುರು 100 ದಿನದ ಅಭಿಯಾನ:
ಅಳಿವಿನಂಚಿನಲ್ಲಿರುವ ಮಣ್ಣನ್ನು ಉಳಿಸಲು ಸದ್ಗುರು ಜಾಗತಿಕ ಅಭಿಯಾನ ನಡೆಸುತ್ತಿದ್ದಾರೆ. ಸದ್ಗುರು ಅವರು 100 ದಿನಗಳ ‘ಮಣ್ಣು ಉಳಿಸಿ’ ಬೈಕ್ ರಾರಯಲಿ ಅಭಿಯಾನವನ್ನು ಕಳೆದ ಮಾಚ್‌ರ್‍ನಲ್ಲಿ ಲಂಡನ್‌ನ ಸಂಸತ್ ಚೌಕದಲ್ಲಿ ಆರಂಭಿಸಿದ್ದರು. ಬಳಿಕ 27 ದೇಶ ಸುತ್ತಿ ಅಲ್ಲೆಲ್ಲ ಮಣ್ಣಿನ ಫಲವತ್ತತೆಯ ಅರಿವು ಮೂಡಿಸಿ ಭಾರತಕ್ಕೆ ಇತ್ತೀಚೆಗೆ ಪ್ರವೇಶಿಸಿದ್ದಾರೆ. ‘ಆಜಾದಿ ಕಾ ಅಮೃತ ಮಹೋತ್ಸವ’ ಭಾಗವಾಗಿ ಭಾನುವಾರ ರಾಜಧಾನಿ ದೆಹಲಿಗೆ ಸದ್ಗುರು ತೆರಳುತ್ತಿದ್ದಾರೆ. ಜೂನ್ 5ರಂದು ಅವರ ಅಭಿಯಾನದ 75ನೇ ದಿನ ಕೂಡ ಹೌದು.
ನೀವು ತಿಳಿದಿರಲೇಬೇಕಾದ 15 ಮಹತ್ವದ ಸಂಗತಿಗಳು!
ಶೇ.30 ರಷ್ಟುಮಣ್ಣು ಬಂಜರು:
‘ಭಾರತದಲ್ಲಿ, ಕೃಷಿ ಮಣ್ಣಿನಲ್ಲಿನ ಸರಾಸರಿ ಸಾವಯವ ಅಂಶವು ಶೇ.0.68 ಎಂದು ಅಂದಾಜಿಸಲಾಗಿದೆ. ಇದರಿಂದಾಗಿ ದೇಶವು ಮರುಭೂಮಿ ಮತ್ತು ಮಣ್ಣಿನ ಅಳಿವಿನ ಹೆಚ್ಚಿನ ಅಪಾಯದಲ್ಲಿದೆ. ದೇಶದಲ್ಲಿ ಸುಮಾರು ಶೇ.30 ಫಲವತ್ತಾದ ಮಣ್ಣು ಈಗಾಗಲೇ ಬಂಜರುಗಳಾಗಿ ಮಾರ್ಪಟ್ಟಿದ್ದು, ಇಳುವರಿ ಪಡೆಯಲು ಅಸಮರ್ಥವಾಗಿವೆ. ಪ್ರಸ್ತುತ ಮಣ್ಣಿನ ಅವನತಿ ದರವನ್ನು ಗಮನಿಸಿದರೆ 2050 ರ ಹೊತ್ತಿಗೆ ಭೂಮಿಯ ಶೇ.90ರಷ್ಟುಮರುಭೂಮಿಯಾಗಿ ಬದಲಾಗಬಹುದು’ ಎಂದು ವಿಶ್ವಸಂಸ್ಥೆ ಎಚ್ಚರಿಸಿದೆ ಎಂದು ಈಶಾ ಫೌಂಡೇಶನ್ ಪ್ರಕಟಣೆಯಲ್ಲಿ ತಿಳಿಸಿದೆ.
ಕಳೆದ ಜನವರಿಯಲ್ಲಿ ದಾವೋಸ್‌ನಲ್ಲಿ ನಡೆದ ವಿಶ್ವ ಆರ್ಥಿಕ ಸಮಾವೇಶದ ಅಜೆಂಡಾದಲ್ಲಿ ಪ್ರಧಾನಿ ಮೋದಿಯವರು ಹಸಿರು, ಸ್ವಚ್ಛ, ಸುಸ್ಥಿರ ಮತ್ತು ವಿಶ್ವಾಸಾರ್ಹ ಬೆಳವಣಿಗೆಯ ಕುರಿತು ಭಾರತದ ಮುಂದಿನ ಗುರಿಯನ್ನು ಉಲ್ಲೇಖಿಸಿದ್ದರು. ಸದ್ಗುರುಗಳು ತಮ್ಮ ಪ್ರಯಾಣವನ್ನು ಆರಂಭಿಸಿದಾಗಿನಿಂದ ಸುಮಾರು 10 ಲಕ್ಷಕ್ಕೂ ಹೆಚ್ಚು ಮಕ್ಕಳು ಭಾರತದ ಪ್ರಧಾನಿಗೆ ಪತ್ರ ಬರೆದು ಮಣ್ಣಿನ ಬಗ್ಗೆ ತಮ್ಮ ಕಾಳಜಿಯನ್ನು ವ್ಯಕ್ತಪಡಿಸಿದ್ದಾರೆ. ಭಾರತದಲ್ಲಿನ ಫಲವತ್ತಾದ ಭೂಮಿಗಳ ಮರುಭೂಮೀಕರಣವನ್ನು ನಿಲ್ಲಿಸಲು ತುರ್ತು ಕ್ರಮಗಳನ್ನು ಪ್ರಾರಂಭಿಸಲು ವಿನಂತಿಸಿದ್ದಾರೆ. ಇದೇ ಸಂದರ್ಭದಲ್ಲಿ ಮೋದಿ ಮತ್ತು ಸದ್ಗುರು ಇಬ್ಬರು ದೇಶದ ಪರಿಸರ ಸಂರಕ್ಷಣೆಯ ಗುರಿಗಳ ಕುರಿತು ಸಾರ್ವಜನಿಕವಾಗಿ ಮಾತನಾಡುವ ನಿರೀಕ್ಷೆಯಿದೆ.