
ಮಧುರೈ: ಶ್ರೀಲಂಕಾದಿಂದ ಭಾರತಕ್ಕೆ ಚಿನ್ನ ಕಳ್ಳಸಾಗಣೆ ಮಾಡುತ್ತಿದ್ದ ಕಳ್ಳರು ಪೊಲೀಸರಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಕೋಟ್ಯಾಂತರ ರೂಪಾಯಿ ಮೌಲ್ಯದ ಚಿನ್ನವನ್ನು ಸಮುದ್ರಕ್ಕೆಸೆದ ಅಪರೂಪದ ಘಟನೆ ನಡೆದಿದ್ದು, ಸಮುದ್ರ ಸೇರಿದ ಈ ಚಿನ್ನವನ್ನು ವಶಕ್ಕೆ ಪಡೆಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಭಾರತೀಯ ಕೋಸ್ಟ್ ಗಾರ್ಡ್, ಚೆನ್ನೈನ ಕಂದಾಯ ಗುಪ್ತಚರ ಇಲಾಖೆ ಜಂಟಿಯಾಗಿ ಈ ಕಾರ್ಯಾಚರಣೆ ನಡೆಸಿದ್ದು, ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.
ಬಂಧಿತರನ್ನು ಮಂಡಪಮ್ (Mandapam)ನಿವಾಸಿಗಳಾದ 30 ವರ್ಷದ ನಾಗೂರ್ ಕಣಿ (Nagoor Kani), ಹಾಗೂ 22 ವರ್ಷದ ಸಾಗುಬೇರ್ ಸಾದಿಕ್ (Saguber Sadik) ಹಾಗೂ ಮರಕಾಯರ್‌ಪಟ್ಟಿನಂ (Marakayarpattinam) ನಿವಾಸಿಯಾದ 29 ವರ್ಷದ ಮೊಹಮ್ಮದ್ ಸಮೀರ್ ಎಂದು ಗುರುತಿಸಲಾಗಿದೆ. ಇವರನ್ನು ಹೆಚ್ಚಿನ ವಿಚಾರಣೆಗಾಗಿ ಮಂಡಪಂನ ಮೆರಿನ್ ಪೊಲೀಸರಿಗೆ ಒಪ್ಪಿಸಲಾಗಿದೆ. ಬಂಧಿತರಿಂದ 17,74 ಕೆಜಿ ತೂಕದ 10.5 ಕೋಟಿ ಬೆಲೆ ಬಾಳುವ ಬಂಗಾರವನ್ನು ವಶಕ್ಕೆ ಪಡೆಯಲಾಗಿದೆ.
18 ದಿನಗಳಲ್ಲಿ ಕೋಟಿ ಮೌಲ್ಯದ ಚಿನ್ನ ವಶ: ಮಂಗಳೂರು ಏರ್‌ಪೋರ್ಟ್‌ನಲ್ಲಿ ಹೆಚ್ಚಿದ ಗೋಲ್ಡ್ ಸ್ಮಗ್ಲಿಂಗ್!
ಘಟನೆ ಹಿನ್ನೆಲೆ
ಬಂಧಿತ ಮೂವರು ಆರೋಪಿಗಳು ನಾಡ ದೋಣಿ ಮೂಲಕ ಶ್ರೀಲಂಕಾದಿಂದ ಭಾರತಕ್ಕೆ ಚಿನ್ನ ಕಳ್ಳಸಾಗಣೆ ಮಾಡುತ್ತಿದ್ದರು. ರಾಮನಾಥಪುರಂ ಜಿಲ್ಲೆಯ ಮಂಡಪಂನ ಕೋಸ್ಟ್ ಗಾರ್ಡ್ ಸ್ಟೇಷನ್‌ನ ಕೋಸ್ಟ್ ಗಾರ್ಡ್ ಸಿಬ್ಬಂದಿ ಅನುಮಾನದ ಮೇರೆಗೆ ಇವರ ಬೋಟ್ ಅನ್ನು ತಡೆದಿದ್ದಾರೆ. ಈ ವೇಳೆ ಈ ಖದೀಮರು ಇಷ್ಟೊಂದು ಬೆಲೆ ಬಾಳುವ ಚಿನ್ನವನ್ನು ಸಮುದ್ರಕ್ಕೆಸೆದಿದ್ದಾರೆ. ಕೂಡಲೇ ಕೋಸ್ಟ್ ಗಾರ್ಡ್ (Cost Guard) ಸಿಬ್ಬಂದಿ ಸ್ಕೂಬಾ ಡೈವರ್‌ಗಳನ್ನು ಸಮುದ್ರಕ್ಕಿಳಿಸಿದ್ದು ಅವರು ಸಮುದ್ರದಾಳದಲ್ಲಿ ಚಿನ್ನ ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಇದಕ್ಕೂ ಮೊದಲು ಮಾರುವೇಷದಲ್ಲಿದ್ದ ಕಂದಾಯ ಗುಪ್ತಚರ ಇಲಾಖೆಯ ಅಧಿಕಾರಿಗಳಿಗೆ ಶ್ರೀಲಂಕಾದಿಂದ ಮಂಡಪಂ ಕಡಲತೀರಕ್ಕೆ ಬಂಗಾರ ಕಳ್ಳ ಸಾಗಣೆ ಆಗುತ್ತಿರುವ ಸುಳಿವು ಸಿಕ್ಕಿದೆ. ಹೀಗಾಗಿ ಸಮುದ್ರ ತೀರದಲ್ಲಿ ಕಣ್ಗಾವಲು ಹೆಚ್ಚಿಸುವಂತೆ ಅವರು ಮಂಡಪಂನ ಕೋಸ್ಟ್ ಗಾರ್ಡ್ ಸಿಬ್ಬಂದಿಗೆ ಮನವಿ ಮಾಡಿದ್ದರು. ಇಲ್ಲಿನ ಹಲವಾರು ಮರಳು ದಿಬ್ಬಗಳು ಮತ್ತು ಆಳವಿಲ್ಲದ ಸಮುದ್ರವನ್ನು ಹೊಂದಿರುವ ಸರಂಧ್ರ ಸಮುದ್ರವನ್ನು ಡ್ರಗ್ಸ್ ಮತ್ತು ಚಿನ್ನವನ್ನು ಸಾಗಿಸುವ ಕಳ್ಳಸಾಗಣೆದಾರರು ಸುಲಭವಾಗಿ ಬಳಸಿಕೊಳ್ಳುತ್ತಿದ್ದಾರೆ. ಈ ಮಧ್ಯೆ ಶ್ರೀಲಂಕಾದಲ್ಲಿ(Sri lanka) ಎದುರಾಗಿರುವ ಆರ್ಥಿಕ ಬಿಕ್ಕಟ್ಟಿನಿಂದಾಗಿ ಇತ್ತೀಚೆಗೆ ನಿಷೇಧಿತ ವಸ್ತುಗಳಲ್ಲದೇ ಬೀಡಿ ಎಲೆಗಳು, ಬಟ್ಟೆಗಳು, ಗೊಬ್ಬರ, ಔಷಧಿಯನ್ನು ಕೂಡ ಕಳ್ಳಸಾಗಣೆ ಮಾಡಲಾಗುತ್ತಿದೆ.
ದುಬೈನಿಂದ ಬಂದ 19 ವರ್ಷದ ಯುವತಿಯ ಒಳ ಉಡುಪಿನಲ್ಲಿತ್ತು 1 ಕೋಟಿ ರೂ. ಮೌಲ್ಯದ ಚಿನ್ನ..!
ಈ ಹಿನ್ನೆಲೆಯಲ್ಲಿ ಕೋಸ್ಟ್‌ಗಾರ್ಡ್ ಸಿಬ್ಬಂದಿ ಕಂದಾಯ ಗುಪ್ತಚರ ಇಲಾಖೆಯ (Department of Revenue Inteligence) ಸಹಯೋಗದೊಂದಿಗೆ ಜಂಟಿ ತಂಡವನ್ನು ರಚಿಸಿ ಕಳ್ಳಸಾಗಣೆ ನಿಯಂತ್ರಣಕ್ಕೆ ಬೋಟೊಂದನ್ನು ನಿಯೋಜಿಸಿದ್ದರು. ಬುಧವಾರ ರಾತ್ರಿ ಈ ಪ್ರತಿಬಂಧಕ ಬೋಟ್ ಅನುಮಾನಾಸ್ಪದವಾಗಿ ಕಂಡ ಬೋಟೊಂದನ್ನು ತಡೆದು ನಿಲ್ಲಿಸಿ ತಪಾಸಣೆ ಮಾಡಿದ್ದಾರೆ. ಆದರೆ ಬೋಟ್‌ನಲ್ಲಿ ಇವರಿಗೆ ಯಾವುದೇ ನಿಷೇಧಿತ ವಸ್ತುಗಳು ಕಾಣಸಿಕ್ಕಿಲ್ಲ. ಕೂಡಲೇ ಕಳ್ಳರ ಮನ ಅರಿತ ಪೊಲೀಸರು ಸಮುದ್ರಕ್ಕೆಸೆದಿರಬಹುದು ಎಂಬ ಶಂಕೆಯ ಮೇರೆಗೆ ಸ್ಕೂಬಾ ಡೈವರ್‌ಗಳನ್ನು (Scuba Divers) ಸಮುದ್ರಕ್ಕಿಳಿಸಿದ್ದಾರೆ.
ಈ ಸ್ಕೂಬಾ ಡೈವರ್‌ಗಳು ಸಮುದ್ರ ತಳದಲ್ಲಿದ್ದ, ಕಳ್ಳರು ಬಿಸಾಕಿದ್ದ ಚಿನ್ನವನ್ನು ಮರಳಿ ತರಲು ಯಶಸ್ವಿಯಾಗಿದ್ದಾರೆ. ಈ ಕಳ್ಳ ಮಾಲಿನಲ್ಲಿ ಚಿನ್ನದ ಬಾರ್‌ಗಳು, ಬಿಸ್ಕೆಟ್‌ಗಳು, ಸಣ್ಣ ಪೀಸುಗಳು ಸರಗಳು ಎಲ್ಲಾ ಸೇರಿ 17.74 ಕೆಜಿ ತೂಕದ ಚಿನ್ನವನ್ನು ವಶಕ್ಕೆ ಪಡೆಯಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ