
ವಸೈ: ಮಕ್ಕಳ ದಿನಾಚರಣೆಯಂದು ಶಾಲೆಗೆ ತಡವಾಗಿ ಬಂದಿದ್ದಕ್ಕೆ ಶಿಕ್ಷಕಿ ನೀಡಿದ ಕಠಿಣ ಶಿಕ್ಷೆಯಿಂದಾಗಿ ಆರನೇ ತರಗತಿ ವಿದ್ಯಾರ್ಥಿನಿ ಸಾವನ್ನಪ್ಪಿದ್ದಾಳೆ. ಮಹಾರಾಷ್ಟ್ರದ ವಸೈನಲ್ಲಿರುವ ಶ್ರೀ ಹನುಮಂತ್ ವಿದ್ಯಾಮಂದಿರ ಪ್ರೌಢಶಾಲೆಯಲ್ಲಿ ಶುಕ್ರವಾರ 12 ವರ್ಷದ ಬಾಲಕಿ ಮೃತಪಟ್ಟಿದ್ದಾಳೆ.
ಕಾಜಲ್ ಗೊಂಡ್ ಮೃತ ಬಾಲಕಿ. ಆರನೇ ತರಗತಿಯಲ್ಲಿ ಓದುತ್ತಿದ್ದ ಬಾಲಕಿ. ಶಾಲೆಗೆ ತಡವಾಗಿ ಬಂದಿದ್ದಕ್ಕೆ ಶಿಕ್ಷಕಿ 100 ಸಿಟಪ್ಸ್ ಮಾಡಲು ಹೇಳಿದ್ದರು. ಶಿಕ್ಷೆ ಮುಗಿದ ನಂತರ ವಿದ್ಯಾರ್ಥಿನಿ ಬೆನ್ನು ನೋವಿನ ಬಗ್ಗೆ ದೂರು ನೀಡಿದ್ದಳು. ನಂತರ ಕುಸಿದು ಬಿದ್ದಳು. ತಕ್ಷಣವೇ ವಿದ್ಯಾರ್ಥಿನಿಯನ್ನು ಸಮೀಪದ ನಲಸೋಪಾರ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಆರೋಗ್ಯ ಸ್ಥಿತಿ ಹದಗೆಟ್ಟಿದ್ದರಿಂದ ವಿದ್ಯಾರ್ಥಿನಿಯನ್ನು ಮುಂಬೈನ ಜೆಜೆ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಕಾಜಲ್ ಮೃತಪಟ್ಟಿದ್ದಾಳೆ.
ಶಿಕ್ಷಕಿ ನೀಡಿದ ಶಿಕ್ಷೆಯಿಂದಲೇ ಮಗಳು ಮೃತಪಟ್ಟಿದ್ದಾಳೆ. ನೂರು ಸಿಟಪ್ಸ್ ಮಾಡುವಾಗಲೂ ಶಿಕ್ಷಕಿ ಮಗುವಿನ ಹೆಗಲಿನಿಂದ ಸ್ಕೂಲ್ ಬ್ಯಾಗ್ ತೆಗೆಯಲು ಬಿಡಲಿಲ್ಲ ಎಂದು ಬಾಲಕಿಯ ಪೋಷಕರು ಆರೋಪಿಸಿದ್ದಾರೆ. ಮಗು ಸಾವನ್ನಪ್ಪಿದ ನಂತರ ಪೋಷಕರು ಮತ್ತು ಸಂಬಂಧಿಕರು ಶಾಲೆಗೆ ಬಂದು ಪ್ರತಿಭಟನೆ ನಡೆಸಿದರು.
ಶಿಕ್ಷಕಿ ಮತ್ತು ಶಾಲೆಯ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ನಡೆದ ಪ್ರತಿಭಟನೆಯನ್ನು ಪೊಲೀಸರು ಮಧ್ಯಪ್ರವೇಶಿಸಿ ನಿಲ್ಲಿಸಿದರು. ಈ ಘಟನೆಗೆ ಸಂಬಂಧಿಸಿದಂತೆ ಕ್ರಿಮಿನಲ್ ಪ್ರಕರಣ ದಾಖಲಾಗುವವರೆಗೂ ಶಾಲೆ ತೆರೆಯಲು ಬಿಡುವುದಿಲ್ಲ ಎಂದು ಮಹಾರಾಷ್ಟ್ರ ನವನಿರ್ಮಾಣ ಸೇನೆ ಎಚ್ಚರಿಕೆ ನೀಡಿದೆ. ವಿದ್ಯಾರ್ಥಿನಿ ಹತ್ತು ನಿಮಿಷ ತಡವಾಗಿ ಬಂದಿದ್ದಕ್ಕೆ ಶಿಕ್ಷಕಿ ಈ ಶಿಕ್ಷೆ ನೀಡಿದ್ದರು. ಘಟನೆ ಕುರಿತು ಶಿಕ್ಷಣ ಇಲಾಖೆ ತನಿಖೆಗೆ ಆದೇಶಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ