*ಹಣದುಬ್ಬರ ಏರಿಕೆ, ನಿತ್ಯವಸ್ತುಗಳ ಬೆಲೆ ಗಗನಕ್ಕೆ
*ಅಕ್ಕಿ 290 ರು, ಟೀ 100 ರು, ಹಾಲಿನ ಪುಡಿ ಕೆಜಿಗೆ 1600!
*ತಮಿಳುನಾಡಿನ ರಾಮೇಶ್ವರಂಗೆ 6 ನಿರಾಶ್ರಿತರು ಆಗಮನ
ಕೊಲೊಂಬೋ (ಮಾ. 25): ನೆರೆಯ ದ್ವೀಪರಾಷ್ಟ್ರ ಶ್ರೀಲಂಕಾದಲ್ಲಿ ಆರ್ಥಿಕತೆ ಕುಸಿತವು ಜನಸಾಮಾನ್ಯರ ನಿತ್ಯ ಜೀವನದ ಮೇಲೆ ಗಂಭೀರ ಪರಿಣಾಮ ಬೀರಿದ್ದು, ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಅವಶ್ಯಕ ವಸ್ತುಗಳಾದ ಅಕ್ಕಿ, ಹಾಲಿನ ಪುಡಿಯ ಸೇರಿದಂತೆ ಹಲವು ದಿನಬಳಕೆಯ ವಸ್ತುಗಳ ಬೆಲೆಯಲ್ಲಿ ಧಿಡೀರ್ ಏರಿಕೆಯಾಗಿದೆ. 400 ಗ್ರಾಂ ಹಾಲಿನ ಪುಡಿಯ ಬೆಲೆ 790 ಲಂಕಾ ರುಪಿಗೆ ತಲುಪಿದ್ದರೆ, 1 ಕೇಜಿ ಅಕ್ಕಿಯ ಬೆಲೆ 290 ಲಂಕಾ ರು.ನಷ್ಟಾಗಿದೆ.
ಲಂಕಾದಲ್ಲಿ ಬದುಕು ದುಸ್ತರವಾದ ಬೆನ್ನಲ್ಲೇ, ಅಲ್ಲಿನ ತಮಿಳು ಕುಟುಂಬಗಳು ಬೋಟ್ ಮಾಲೀಕರಿಗೆ 50000 ರು.ವರೆಗೂ ಹಣ ಕೊಟ್ಟು ಭಾರತಕ್ಕೆ ವಲಸೆ ಬರುತ್ತಿವೆ. ತಮಿಳುನಾಡಿನ ರಾಮೇಶ್ವರಂ ಕರಾವಳಿಯ ನಾಲ್ಕನೇ ದ್ವೀಪದಲ್ಲಿ ಸಿಲುಕಿದ್ದ ಮೂವರು ಮಕ್ಕಳು ಸೇರಿದಂತೆ ಆರು ಶ್ರೀಲಂಕಾ ಪ್ರಜೆಗಳನ್ನು ಭಾರತೀಯ ಕರಾವಳಿ ರಕ್ಷಣಾ ಪಡೆ ರಕ್ಷಿಸಿದೆ.
ನಿರಾಶ್ರಿತರಲ್ಲಿ ಒಬ್ಬ ಪುರುಷ, ಅವರ ಹೆಂಡತಿ ಮತ್ತು ಅವನ ನಾಲ್ಕು ತಿಂಗಳ ಮಗ ಮತ್ತು ಇನ್ನೊಬ್ಬ ಮಹಿಳೆ ಮತ್ತು ಅವರ ಆರು ಮತ್ತು ಹನ್ನೆರಡು ವರ್ಷ ವಯಸ್ಸಿನ ಇಬ್ಬರು ಮಕ್ಕಳು ಸೇರಿದ್ದಾರೆ.
ಇದನ್ನೂ ಓದಿ: ಲಂಕಾದಲ್ಲಿ ಬಂಕ್, ಎಲ್‌ಪಿಜಿ ಮಳಿಗೆಗಳಿಗೆ ಸೇನೆ ಭದ್ರತೆ!
ಶ್ರೀಲಂಕಾದಲ್ಲಿ ಆಹಾರ ಸಿಗದೇ ಪರದಾಡುವಂತಾಗಿದೆ ಎಂದು ನಿರಾಶ್ರಿತರು ತಿಳಿಸಿದ್ದಾರೆ. ಭಾರತೀಯ ಕೋಸ್ಟ್ ಗಾರ್ಡ್‌ನ ನಿಯಂತ್ರಣದಲ್ಲಿರುವ ಅರಿಚಲ್‌ಮುನ್ನೈನ ನಾಲ್ಕನೇ ದ್ವೀಪದಲ್ಲಿ ಬೋಟ್‌ಮ್ಯಾನ್ ಅವರನ್ನು ತಲುಪಿಸಿದರು ಎಂದು ಅವರು ತಿಳಿಸಿದ್ದಾರೆ.
ಶ್ರೀಲಂಕಾದಲ್ಲಿ ಏನಾಯ್ತು?: ಶ್ರೀಲಂಕಾಗೆ ಪ್ರವಾಸೋದ್ಯಮವೇ ಮುಖ್ಯ ಆದಾಯ ಮೂಲ. ಆದರೆ ಕೊರೋನಾದಿಂದ ಪ್ರವಾಸೋದ್ಯಮ ನೆಲಕಚ್ಚಿದ್ದು ಆದಾಯ ನಿಂತುಹೋಗಿದೆ. ವಿದೇಶಗಳಿಂದ ಅಗತ್ಯವಸ್ತು ಖರೀದಿಗೂ ದುಡ್ಡಿಲ್ಲದೆ ಬೆಲೆ ಯದ್ವಾತದ್ವಾ ಏರಿದೆ.
ಭಾರತ, ಚೀನಾ ಸೇರಿದಂತೆ ಕೆಲ ದೇಶಗಳು ಶ್ರೀಲಂಕಾಕ್ಕೆ ಈ ಸಮಸ್ಯೆಯಿಂದ ಹೊರಬರಲು ನೆರವು ಮತ್ತು ಸಾಲದ ಸೌಲಭ್ಯ ಒದಗಿಸಿದ್ದರೂ, ರಾಜಕೀಯವಾಗಿ ಅಸ್ಥಿರವಾಗಿರುವ ದೇಶದ ಮೇಲೆ ಅದು ಯಾವುದೇ ಪರಿಣಾಮ ಬೀರಿಲ್ಲ. ಹೀಗಾಗಿ ಮುಂದಿನ ದಿನಗಳಲ್ಲಿ ಪರಿಸ್ಥಿತಿ ಇನ್ನಷ್ಟುಗಂಭೀರವಾಗುವ ಆತಂಕ ಎದುರಾಗಿದೆ.
ಶ್ರೀಲಂಕಾದ ಪ್ರಮುಖ ಆದಾಯ ಮೂಲ ಪ್ರವಾಸೋದ್ಯಮ. ಆದರೆ ಕೋವಿಡ್‌ನಿಂದಾಗಿ ಕಳೆದ 3 ವರ್ಷಗಳಿಂದ ಈ ಉದ್ಯಮ ಪೂರ್ಣ ನೆಲಕಚ್ಚಿದೆ. ಮತ್ತೊಂದೆಡೆ ಶ್ರೀಲಂಕಾ ತನ್ನ ಬಹುತೇಕ ವಸ್ತುಗಳಿಗಾಗಿ ವಿದೇಶಗಳನ್ನೇ ಅವಲಂಬಿಸಿದೆ. ಪ್ರತಿಯೊಂದಕ್ಕೂ ಡಾಲರ್ ಮೂಲಕವೇ ಹಣ ಪಾವತಿ ಮಾಡಬೇಕು.
ಆದರೆ ಆದಾಯ ಮೂಲ ಬತ್ತಿಹೋದ ಕಾರಣ, ದೇಶ ಆರ್ಥಿಕ ಸಂಕಷ್ಟಕ್ಕೆ ಸಿಕ್ಕಿಹಾಕಿಕೊಂಡಿದೆ. ವಿದೇಶಿ ವಿನಿಮಯ ಪೂರ್ಣ ಕರಗಿಹೋಗಿದೆ. ವಿದೇಶಗಳಿಂದ ಅಗತ್ಯ ವಸ್ತುಗಳ ಖರೀದಿಗೂ ಹಣ ಇಲ್ಲದಾಗಿದೆ. ಹೀಗೆ ಅಗತ್ಯ ವಸ್ತು ಪೂರೈಕೆ ಕಡಿತಗೊಂಡ ಕಾರಣ ಅವುಗಳ ಬೆಲೆ ಗಗನಕ್ಕೇರಿದೆ.
ಇದನ್ನೂ ಓದಿ: ಶ್ರೀಲಂಕಾದಲ್ಲಿ ಪೇಪರ್ ಖರೀದಿಸಲು ಸರ್ಕಾರದ ಬಳಿ ಹಣವಿಲ್ಲ, ಶಾಲಾ ಪರೀಕ್ಷೆ ರದ್ದು
ಸದ್ಯ 1 ಕೆಜಿ ಅಕ್ಕಿ ಬೆಲೆ 290 ರು. ತಲುಪಿದೆ. ಇನ್ನೊಂದು ತಿಂಗಳಲ್ಲಿ ಅದು 500 ರು. ತಲುಪುವ ಭೀತಿ ಇದೆ. ಉಳಿದಂತೆ 1 ಕೆಜಿ ಹಾಲಿನ ಪುಡಿ ಬೆಲೆ 1600 ರು, ಸಕ್ಕರೆ 290 ರು, 1 ಕಪ್ ಟೀ ಬೆಲೆ 100 ರು, ಗೋಧಿ ಹಿಟ್ಟು 160 ರು., ಕಾಳುಗಳು 270 ರು, ಪೆಟ್ರೋಲ್ 285, ಎಲ್‌ಪಿಜಿ 2000 ರು. ತಲುಪಿದೆ. ಜೊತೆಗೆ ಪೇಪರ್ ದೊರೆಯದೇ ಶಾಲೆಗಳು ಪರೀಕ್ಷೆ ನಡೆಸಲಾಗುತ್ತಿಲ್ಲ.
ಡಾಲರ್ ಎದುರು ಲಂಕಾ ರುಪಾಯಿ ಮೌಲ್ಯ ಕುಸಿದಿರುವುದರಿಂದ ವಿದೇಶಿ ವಿನಿಮಯದಿಂದ ಶ್ರೀಲಂಕಾ ಹೆಚ್ಚಿನ ನಷ್ಟಅನುಭವಿಸುತ್ತಿದೆ. ಕಳೆದ ಫೆಬ್ರವರಿಯಲ್ಲಿ ಶ್ರೀಲಂಕಾದ ಹಣದುಬ್ಬರ ಶೇ.15.1ಕ್ಕೆ ಏರಿಕೆಯಾಗಿತ್ತು. ಇದು ಇಡೀ ಏಷ್ಯಾ ಖಂಡದಲ್ಲೇ ಅತಿ ಹೆಚ್ಚು ಪ್ರಮಾಣದ ಹಣದುಬ್ಬರವಾಗಿತ್ತು.
ದರಪಟ್ಟಿ(ಕೇಜಿಗೆ ಶೀಲಂಕಾ ರುಪಿಯಲ್ಲಿ)
*ಅಕ್ಕಿ 290ರು.
*ಹಾಲಿನ ಪುಡಿ 1600 ರು.
*ಸಕ್ಕರೆ 290
*ಟೀ, 1ಕಪ್‌ಗೆ 100 ರು.
*ಗೋಧಿ ಹಿಟ್ಟು 160ರು.
*ಕಾಳುಗಳು 270 ರು.
*ಪೆಟ್ರೋಲ್ 283 ರು.
*ಡೀಸೆಲ್ 254ರು.
*ಎಲ್‌ಪಿಜಿ 2000 ರು.