ಉತ್ತರಪ್ರದೇಶ ಸಿಎಂ ಆಗಿ ಇಂದು ಯೋಗಿ ಆದಿತ್ಯನಾಥ್ ಪ್ರಮಾಣ ಸ್ವೀಕಾರ

By Kannadaprabha News  |  First Published Mar 25, 2022, 7:44 AM IST

*ಮೋದಿ, ಅಮಿತ್‌ ಶಾ, ನಡ್ಡಾ, ಬೊಮ್ಮಾಯಿ ಸೇರಿ ಹಲವು ಗಣ್ಯರು ಭಾಗಿ
*ಕಾಶ್ಮೀರ್‌ ಫೈಲ್ಸ್‌ ಚಿತ್ರತಂಡ, ಉದ್ಯಮಿ, ನಟರು, ಸಂತರಿಗೂ ಆಹ್ವಾನ


ಲಖನೌ (ಮಾ. 25): ಉತ್ತರ ಪ್ರದೇಶದಲ್ಲಿ (Uttar Pradesh) ದಾಖಲೆಯ 2ನೇ ಅವಧಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿರುವ ಯೋಗಿ ಆದಿತ್ಯನಾಥ್‌ (Yogi Aditynath) ಅವರ ಪ್ರಮಾಣ ವಚನ ಸ್ವೀಕಾರ ಕಾರ‍್ಯಕ್ರಮ ಮಾ.25ರಂದು ಸಂಜೆ 4 ಗಂಟೆಗೆ ಲಖನೌನಲ್ಲಿರುವ ಅಟಲ್‌ ಬಿಹಾರಿ ವಾಜಪೇಯಿ ಇಕಾನಾ ಸ್ಟೇಡಿಯಂನಲ್ಲಿ ನಡೆಯಲಿದ್ದು, ಅದ್ಧೂರಿ ಕಾರ‍್ಯಕ್ರಮಕ್ಕೆ ವೇದಿಕೆ ಸಿದ್ಧವಾಗಿದೆ. ಮುಂದಿನ ಲೋಕಸಭಾ ಚುನಾವಣೆಯ ದಿಕ್ಸೂಚಿ ಎಂದೇ ಪರಿಗಣಿತವಾಗಿದ್ದ ಉತ್ತರ ಪ್ರದೇಶದಲ್ಲಿ ಬಿಜೆಪಿ ಅಭೂತಪೂರ್ವ ಜಯಗಳಿಸುವ ಮೂಲಕ ಎರಡನೇ ಬಾರಿಗೆ ಅಧಿಕಾರಕ್ಕೆ ಏರಿದೆ.

ಒಟ್ಟು 403 ಕ್ಷೇತ್ರಗಳ ಪೈಕಿ 273 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸುವ 37 ವರ್ಷಗಳ ರಾಜ್ಯದ ಇತಿಹಾಸದಲ್ಲಿ ಸತತ ಎರಡನೇ ಅವಧಿಗೆ ಅಧಿಕಾರಕ್ಕೆ ಬಂದ ಮೊದಲ ಆಡಳಿತಾರೂಢ ಪಕ್ಷ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

Tap to resize

Latest Videos

ಯೋಗಿ ಆಯ್ಕೆ: ಉತ್ತರಪ್ರದೇಶದ ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ ಯೋಗಿ ಆದಿತ್ಯನಾಥ್‌ ಅವರನ್ನು ಆಯ್ಕೆ ಮಾಡಲಾಗಿದೆ. ಗುರುವಾರ ನಡೆದ ಸಭೆಯಲ್ಲಿ ಯೋಗಿ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಬಳಿಕ ಯೋಗಿ ರಾಜ್ಯಪಾಲರನ್ನು ಭೇಟಿ ಮಾಡಿ ಸರ್ಕಾರ ರಚನೆಯ ಹಕ್ಕು ಮಂಡಿಸಿದರು.

ಇದನ್ನೂ ಓದಿ: ಒಂದೇ ಒಂದು ಸಲ ಬಂದು ಅಮ್ಮನನ್ನು ನೋಡಿ ಹೋಗಿ, ಸಿಎಂ ಯೋಗಿಗೆ ಅಕ್ಕನ ಮನವಿ!

ಯಾರ‍್ಯಾರು ಭಾಗಿ?:  ಪ್ರಧಾನಿ ನರೇಂದ್ರ ಮೋದಿ (PM Narendra Modi), ಗೃಹ ಸಚಿವ ಅಮಿತ್‌ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಹಲವು ಕೇಂದ್ರ ಸಚಿವರು, ಕರ್ನಾಟಕ ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ಸೇರಿದಂತೆ 15ಕ್ಕೂ ಹೆಚ್ಚು ಮುಖ್ಯಮಂತ್ರಿಗಳ ಹಲವು ಕ್ಷೇತ್ರಗಳ ಸಾಧಕರು ಮತ್ತು ಪಕ್ಷದ ಕಾರ‍್ಯಕರ್ತರು ಭಾಗಿಯಾಗಲಿದ್ದಾರೆ. ಜೊತೆಗೆ ಕಾರ‍್ಯಕ್ರಮಕ್ಕೆ ಎಲ್ಲಾ ರಾಜ್ಯಗಳ ಮಾಜಿ ಹಾಗೂ ಹಾಲಿ ಬಿಜೆಪಿ ಮುಖ್ಯಮಂತ್ರಿಗಳನ್ನು ಆಹ್ವಾನಿಸಲಾಗಿದೆ. 

ಅಲ್ಲದೆ ‘ಕಾಶ್ಮೀರ್‌ ಫೈಲ್ಸ್‌’ ಸಿನಿಮಾ ತಂಡ, ಅಕ್ಷಯ್‌ ಕುಮಾರ್‌, ಕಂಗನಾ ರಣಾವತ್‌ ಸೇರಿದಂತೆ ಹಲವು ಬಾಲಿವುಡ್‌ ನಟ-ನಟಿಯರು ಹಾಗೂ ಮುಕೇಶ್‌ ಅಂಬಾನಿ, ಗೌತಮ್‌ ಅದಾನಿ, ಆನಂದ್‌ ಮಹೀಂದ್ರಾ ಸೇರಿ ಪ್ರಮುಖ ಕೈಗಾರಿಕೋದ್ಯಮಿಗಳಿಗೂ ಆಹ್ವಾನ ನೀಡಲಾಗಿದೆ.

ಉತ್ತರಪ್ರದೇಶಕ್ಕೆ ಇಂದು ಸಿಎಂ: ಯೋಗಿ ಶಪಥ ಸಮಾರಂಭದಲ್ಲಿ ಭಾಗಿ:  ಶುಕ್ರವಾರ ನಡೆಯಲಿರುವ ಉತ್ತರ ಪ್ರದೇಶದ ನೂತನ ಮುಖ್ಯಮಂತ್ರಿಯಾಗಿ ಯೋಗಿ ಆದಿತ್ಯನಾಥ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಪಾಲ್ಗೊಳ್ಳಲಿದ್ದಾರೆ.

ಇದನ್ನೂ ಓದಿ: ಯೋಗಿ ಪದಗ್ರಹಣಕ್ಕೂ ಮುನ್ನ ಉಗ್ರ ಸಂಘಟನೆಯಿಂದ ಬೆದರಿಕೆ ಇಮೇಲ್, ಹೈಅಲರ್ಟ್‌!

ಬೆಳಗ್ಗೆ 9ಗಂಟೆಗೆ ನಗರದ ಎಚ್‌ಎಎಲ್‌ ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದಲ್ಲಿ ಪ್ರಯಾಣಿಸಲಿರುವ ಬೊಮ್ಮಾಯಿ ಅವರು 11.45ಕ್ಕೆ ಉತ್ತರ ಪ್ರದೇಶದ ರಾಜಧಾನಿ ಲಖನೌ ತಲುಪಲಿದ್ದಾರೆ. ಸಂಜೆ 4 ಗಂಟೆಗೆ ನಡೆಯಲಿರುವ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಿದ ಬಳಿಕ ರಾತ್ರಿ ಅಲ್ಲಿಂದ ನೇರವಾಗಿ ಹುಬ್ಬಳ್ಳಿಗೆ ಬಂದು ವಾಸ್ತವ್ಯ ಹೂಡಲಿದ್ದಾರೆ.

ಪರಿಷತ್‌ ಸ್ಥಾನಕ್ಕೆ ಯೋಗಿ, ಲೋಕಸಭಾ ಸ್ಥಾನಕ್ಕೆ ಅಖಿಲೇಶ್‌ ರಾಜೀನಾಮೆ:  ಇತ್ತೀಚಿನ ವಿಧಾನಸಭಾ ಚುನಾವಣೆಯಲ್ಲಿ ಗೋರಖ್‌ಪುರ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ ನಿಯೋಜಿತ ಸಿಎಂ ಯೋಗಿ ಆದಿತ್ಯನಾಥ್‌, ವಿಧಾನ ಪರಿಷತ್‌ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. 2017ರಲ್ಲಿ ಪರಿಷತ್‌ಗೆ ಆಯ್ಕೆಯಾಗಿದ್ದ ಯೋಗಿ ಅವರ ಅವಧಿ 2022ರ ಜು.6ರವರೆಗೂ ಇತ್ತು. 

ಆದರೆ ಮಾ.25ರಂದು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿರುವ ಹಿನ್ನೆಲೆಯಲ್ಲಿ ಅವರು ರಾಜೀನಾಮೆ ನೀಡಿದ್ದಾರೆ. ಇದೇ ವೇಳೆ ಕರ್ಹಾಲ್‌ ವಿಧಾನಸಭಾ ಕ್ಷೇತ್ರದಿಂದ ಜಯಗಳಿಸಿದ್ದ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್‌ ಯಾದವ್‌, ಇದುವರೆಗೂ ತಾವು ಪ್ರತಿನಿಧಿಸುತ್ತಿದ್ದ ಆಜಂಗಢ ಲೋಕಸಭಾ ಕ್ಷೇತ್ರಕ್ಕೆ ರಾಜೀನಾಮೆ ನೀಡಿದ್ದಾರೆ.

click me!