ಡೆಲ್ಟಾದಿಂದ ಪಾರಾಗಲು ಒಂದೇ ಡೋಸ್‌ ಸಾಲಲ್ಲ!

By Kannadaprabha NewsFirst Published Jul 10, 2021, 7:26 AM IST
Highlights

* ಎರಡೂ ಡೋಸ್‌ ಪಡೆದವರಿಗೆ ಮಾತ್ರ ಸುರಕ್ಷತೆ

* ಡೆಲ್ಟಾದಿಂದ ಪಾರಾಗಲು ಒಂದೇ ಡೋಸ್‌ ಸಾಲಲ್ಲ

* ನೇಚರ್‌ ನಿಯತಕಾಲಿಕೆಯಲ್ಲಿ ಅಧ್ಯಯನ ವರದಿ

ನವದೆಹಲಿ(ಜು.10):  ಭಾರತದಲ್ಲಿ ಮೊದಲಿಗೆ ಪತ್ತೆಯಾಗಿ ಇದೀಗ ವಿಶ್ವದ 100ಕ್ಕೂ ಹೆಚ್ಚು ದೇಶಗಳಿಗೆ ಹಬ್ಬಿರುವ ಡೆಲ್ಟಾರೂಪಾಂತರಿ ಕೊರೋನಾ ವೈರಸ್‌ ಮೇಲೆ, ಆಸ್ಟ್ರಾಜೆನೆಕಾ ಹಾಗೂ ಫೈಝರ್‌ ಲಸಿಕೆಗಳ ಸಿಂಗಲ್‌ ಡೋಸ್‌ ಪರಿಣಾಮ ಬೀರದು ಎಂದು ಸಂಶೋಧನೆಯೊಂದು ಹೇಳಿದೆ. ಇದು ಕೋವಿಶೀಲ್ಡ್‌ (ಆಸ್ಟ್ರಾಜೆನಕಾ ಭಾರತದಲ್ಲಿ ಕೋವಿಶೀಲ್ಡ್‌ ಹೆಸರಲ್ಲಿ ಬಿಡುಗಡೆ) ಲಸಿಕೆಯ ಮೇಲೆಯೆ ಹೆಚ್ಚು ಅವಲಂಬಿತ ಆಗಿರುವ ಭಾರತಕ್ಕೆ ಹೊಸ ಆತಂಕಕಾರಿಯಾಗಿ ಹೊರಹೊಮ್ಮಿದೆ. ಆದರೆ ಎರಡೂ ಡೋಸ್‌ ಪಡೆದವರಿಗೆ ಲಸಿಕೆಯು ಡೆಲ್ಟಾದಿಂದ ರಕ್ಷಣೆ ನೀಡುತ್ತದೆ ಎಂದು ಅಧ್ಯಯನ ಸ್ಪಷ್ಟಪಡಿಸಿದೆ.

ಭಾರತದಲ್ಲಿ 2ನೇ ಕೊರೋನಾ ಅಲೆ ಹಬ್ಬಲು ಡೆಲ್ಟಾರೂಪಾಂತರಿ ತಳಿಯೇ ಪ್ರಮುಖವಾಗಿ ಕಾರಣವಾಗಿತ್ತು. ಈಗ ವಿಶ್ವದಲ್ಲಿ ಮತ್ತೆ 3ನೇ ಅಲೆ ಏಳಲು ಡೆಲ್ಟಾಕಾರಣವಾಗುತ್ತಿದೆ. ಮತ್ತೊಂದೆಡೆ ಭಾರತದಲ್ಲಿ ಈವರೆಗೆ ಕೇವಲ ಶೇ.5ರಷ್ಟುಜನರು ಮಾತ್ರ ಎರಡೂ ಡೋಸ್‌ ಪಡೆದವರಾಗಿದ್ದಾರೆ. ಹೀಗಾಗಿ ಬಾಕಿ ಶೇ.95 ಮಂದಿಗೆ ಡೆಲ್ಟಾತಳಿಯ ಆತಂಕ ಇದ್ದೇ ಇದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಭಾರತದ ಪಾಲಿಗೆ ಈ ಅಧ್ಯಯನ ಮಹತ್ವದ್ದಾಗಿದೆ.

ಅಮೆರಿಕದಲ್ಲೂ ಇದೀಗ ಡೆಲ್ಟಾ ನಂ.1 ರೂಪಾಂತರಿ!

ಅಧ್ಯಯನ ಹೇಳಿದ್ದೇನು?:

ಈ ಹಿಂದೆ ಕೊರೋನಾ ಸೋಂಕಿಗೆ ತುತ್ತಾಗದೇ ಇರುವವರಲ್ಲಿ ಡೆಲ್ಟಾಕೊರೋನಾ ತಳಿಯ ವಿರುದ್ಧ ಪ್ರತಿಕಾಯ ಶಕ್ತಿಗಳನ್ನು ಕೋವಿಶೀಲ್ಡ್‌ ಹಾಗೂ ಫೈಝರ್‌ ಲಸಿಕೆಗಳು ಅಷ್ಟಾಗಿ ಉತ್ಪಾದಿಸುವುದಿಲ್ಲ. ಇದು ಕೊರೋನಾ ರೂಪಾಂತರಿ ತಳಿಗಳು ಸೃಷ್ಟಿಸಿರುವ ಆತಂಕದ ಪ್ರತೀಕ ಎಂದು ‘ನೇಚರ್‌’ ಎಂಬ ವೈಜ್ಞಾನಿಕ ನಿಯತಕಾಲಿಕೆಯಲ್ಲಿ ಪ್ರಕಟವಾಗಿರುವ ಅಧ್ಯಯನ ಹೇಳಿದೆ.

ಗೋವಾಕ್ಕೆ ಹೋಗಲು ಕೊರೋನಾ ನೆಗೆಟಿವ್‌ ರಿಪೋರ್ಟ್ ಕಡ್ಡಾಯ

‘ಡೆಲ್ಟಾವೈರಸ್‌ ಸಾಕಷ್ಟುರೂಪಾಂತರಗೊಳ್ಳುತ್ತಿದೆ. ಹೀಗೆ ರೂಪಾಂತರಗೊಂಡಿರುವ ಹೊಸ ತಳಿಗಳು, ಈ ಹಿಂದೆ ಸೋಂಕಿಗೆ ಗುರಿಯಾಗದೇ ಇರುವವರಲ್ಲಿ ಅಥವಾ ಸೋಂಕಿಗೆ ಗುರಿಯಾಗಿ ಗುಣವಾದವರಲ್ಲಿನ ಪ್ರತಿಕಾಯ ಶಕ್ತಿಗಳನ್ನೂ ಭೇದಿಸುವ ಶಕ್ತಿಯನ್ನು ಹೊಂದಿವೆ. ಆದರೆ ಫೈಜರ್‌ ಹಾಗೂ ಆಸ್ಟ್ರಾಜೆನೆಕಾ ಲಸಿಕೆಯ ಎರಡೂ ಡೋಸ್‌ ಪಡೆದವರು ಡೆಲ್ಟಾತಳಿಯಿಂದ ರಕ್ಷಣೆ ಪಡೆಯುತ್ತಾರೆ’ ಎಂದು ಅಧ್ಯಯನ ಸ್ಪಷ್ಟಪಡಿಸಿದೆ.

click me!