ಎಲ್ಲೆಡೆ ಜನಜಾತ್ರೆ ನೋಡಿದರೆ ಭಯ ಆಗುತ್ತೆ: ಮೋದಿ ಕಳವಳ

By Suvarna NewsFirst Published Jul 10, 2021, 7:19 AM IST
Highlights

* ಎಲ್ಲೆಡೆ ಜನಜಾತ್ರೆ ನೋಡಿದರೆ ಭಯ ಆಗುತ್ತೆ: ಮೋದಿ ಕಳವಳ

* ಮಾರುಕಟ್ಟೆ, ಪ್ರವಾಸಿ ತಾಣಗಳಲ್ಲಿ ಗುಂಪುಗೂಡುವಿಕೆ ಅಪಾಯಕಾರಿ

* ಇದು ಮೂರನೇ ಅಲೆಗೆ ಆಹ್ವಾನವಲ್ಲದೆ ಮತ್ತೇನು? ಕೇಂದ್ರ ಸರ್ಕಾರ

ನವದೆಹಲಿ(ಜು.10): ದೇಶಾದ್ಯಂತ ಅನ್‌ಲಾಕ್‌ ಘೋಷಣೆಯಾಗುತ್ತಲೇ, ಜನರು ಕೋವಿಡ್‌ ಮಾರ್ಗಸೂಚಿ ಉಲ್ಲಂಘಿಸಿ ಮಾರುಕಟ್ಟೆ, ಪ್ರವಾಸಿ ತಾಣಗಳಿಗೆ ಲಗ್ಗೆ ಇಡುತ್ತಿರುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಕಳವಳ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಸುರಕ್ಷತೆ ಕುರಿತ ಜನರ ಇಂಥ ನಿರ್ಲಕ್ಷ್ಯ ಕೊರೋನಾ ವಿರುದ್ಧದ ಹೋರಾಟವನ್ನು ದುರ್ಬಲಗೊಳಿಸಲಿದೆ ಎಂದು ಮೋದಿ ದೇಶದ ಜನರಿಗೆ ಎಚ್ಚರಿಕೆ ನೀಡಿದ್ದಾರೆ. ಮತ್ತೊಂದೆಡೆ ಕೇಂದ್ರ ಆರೋಗ್ಯ ಸಚಿವಾಲಯ ಕೂಡ ಜನರ ಈ ನಡತೆಗೆ ಗಂಭೀರ ಕಳವಳ ವ್ಯಕ್ತಪಡಿಸಿದೆ.

ದೇಶಾದ್ಯಂತ ಕೇಸು, ಸಾವು ಕಡಿಮೆಯಾಗುತ್ತಲೇ ಮನಾಲಿ, ಮಸ್ಸೂರಿ, ಶಿಮ್ಲಾ ಸೇರಿದಂತೆ ಪ್ರವಾಸಿ ತಾಣಗಳಿಗೆ ಸಾವಿರಾರು ಸಂಖ್ಯೆಯಲ್ಲಿ ಜನರು ಲಗ್ಗೆ ಇಟ್ಟಫೋಟೋಗಳು ವೈರಲ್‌ ಆದ ಬೆನ್ನಲ್ಲೇ ಸರ್ಕಾರ ಮತ್ತು ಪ್ರಧಾನಿ ಅವರ ಕಡೆಯಿಂದ ಈ ಎಚ್ಚರಿಕೆ ಸಂದೇಶ ಹೊರಬಿದ್ದಿದೆ.

ಪುನಾರಚಿತ ಕೇಂದ್ರದ ಮಂತ್ರಿಮಂಡಲದ ಸಚಿವರನ್ನು ಉದ್ದೇಶಿಸಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, ‘ಕಳೆದ ಕೆಲ ದಿನಗಳಿಂದ ಭಾರೀ ಜನಸಂದಣಿಯ ಕೆಲ ಫೋಟೋ ಮತ್ತು ವಿಡಿಯೋಗಳನ್ನು ನಾವೆಲ್ಲಾ ನೋಡಿದ್ದೇವೆ. ಅದರಲ್ಲಿ ಜನರು ಮಾಸ್ಕ್‌ ಧರಿಸದೇ, ಸಾಮಾಜಿಕ ಅಂತರ ಕಾಪಾಡಿಕೊಳ್ಳದೇ ಇರುವುದು ಅಂಥ ಒಳ್ಳೆಯ ನೋಟವೇನಲ್ಲ. ಜೊತೆಗೆ ಅದು ಸಹಜವಾಗಿಯೇ ನಮ್ಮಲ್ಲಿ ಒಂದು ಆತಂಕವನ್ನು ಸೃಷ್ಟಿಸಿದೆ. ಈ ಹಂತದಲ್ಲಿ ಕೊರೋನಾ ಸೋಂಕಿನ ವಿರುದ್ಧ ಯಾವುದೇ ಅಜಾಗರೂಕತೆ ಮತ್ತು ನಿರ್ಲಕ್ಷ್ಯ ಸಲ್ಲದು. ಇಂಥ ಒಂದು ಸಣ್ಣ ತಪ್ಪು ಕೂಡಾ ದೂರಗಾಮಿ ಪರಿಣಾಮ ಹೊಂದಿರಲಿದೆ. ಜೊತೆಗೆ, ಸಾಂಕ್ರಾಮಿಕದ ವಿರುದ್ಧದ ನಮ್ಮ ಹೋರಾಟವನ್ನು ದುರ್ಬಲಗೊಳಿಸಬಲ್ಲದು’ ಎಂದು ಎಚ್ಚರಿಸಿದ್ದಾರೆ.

ಇನ್ನು ಇದೇ ವಿಷಯದ ಕುರಿತು ಶುಕ್ರವಾರ ಮಾತನಾಡಿರುವ ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ್‌ ಅಗರ್‌ವಾಲ್‌ ‘ಕೊರೋನಾ ಸಾಂಕ್ರಾಮಿಕ ಇನ್ನೂ ಮುಗಿದಿಲ್ಲ. ಆದರೂ ಪ್ರವಾಸಿ ತಾಣಗಳಿಗೆ ಜನರು ಯಾವುದೇ ಕೋವಿಡ್‌ ಮಾರ್ಗಸೂಚಿ ಪಾಲಿಸದೇ ಧಾವಿಸುತ್ತಿರುವುದು ಗಂಭೀರ ಕಳವಳದ ವಿಷಯ. ಇಂಥ ಯಾವುದೇ ನಿರ್ಲಕ್ಷ್ಯ ಸೋಂಕ ಪ್ರಸರಣದ ಅಪಾಯಕ್ಕೆ ಕಾರಣವಾಗಬಲ್ಲದು. ನಾವಿನ್ನೂ ಎರಡನೇ ಅಲೆಯನ್ನು ನಿರ್ವಹಿಸುತ್ತಿದ್ದೇವೆ. ಇಂಥ ಹಂತದಲ್ಲಿ ಕೋವಿಡ್‌ ಮುಗಿದೇ ಹೋಯಿತು ಎನ್ನುವಂಥ ತಪ್ಪು ನಂಬಿಕೆಯಲ್ಲಿನ ಬೆಳವಣಿಗೆಗಳನ್ನು ನಾವು ಎದುರಿಸಬಲ್ಲವೇ ಎಂದು ಆತ್ಮವಿಮರ್ಶೆ ಮಾಡಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಇದೇ ವೇಳೆ ಮಸ್ಸೂರಿಯಲ್ಲಿನ ಕೆಂಪ್ಟಿಜಲಪಾತದಲ್ಲಿ ಸಾವಿರಾರು ಜನ ಸೇರಿರುವ ವಿಡಿಯೋ ಪ್ರದರ್ಶಿಸಿದ ಅವರು, ಇದು 3ನೇ ಅಲೆಯನ್ನು ಮೈಮೇಲೆ ಎಳೆದುಕೊಳ್ಳುವ ಆಹ್ವಾನವಲ್ಲದೇ ಮತ್ತೇನು? ನಮ್ಮ ನಡವಳಿಕೆಗಳೇ ಸಮುದಾಯದಲ್ಲಿ ಸೋಂಕು ಹಬ್ಬುವಿಕೆಗೆ ಕಾರಣವಾಗುವುದು ಎಂದು ಗಂಭೀರ ಎಚ್ಚರಿಕೆಯನ್ನೂ ಲವ್‌ ಅಗರ್‌ವಾಲ್‌ ನೀಡಿದರು.

ಸಣ್ಣ ತಪ್ಪಿನಿಂದ ದೊಡ್ಡ ಅಪಾಯ

ಕಳೆದ ಕೆಲ ದಿನಗಳಿಂದ ಭಾರೀ ಜನಸಂದಣಿಯ ಫೋಟೋ, ವಿಡಿಯೋಗಳನ್ನು ನಾವೆಲ್ಲಾ ನೋಡಿದ್ದೇವೆ. ಜನರು ಮಾಸ್ಕ್‌ ಧರಿಸದೆ, ಸಾಮಾಜಿಕ ಅಂತರ ಕಾಪಾಡಿಕೊಳ್ಳದೆ ಇರುವುದು ಅಂಥ ಒಳ್ಳೆಯ ನೋಟವೇನಲ್ಲ. ಅದು ಸಹಜವಾಗಿಯೇ ನಮ್ಮಲ್ಲಿ ಆತಂಕ ಸೃಷ್ಟಿಸಿದೆ. ಕೊರೋನಾ ಸೋಂಕಿನ ಬಗ್ಗೆ ಅಜಾಗರೂಕತೆ, ನಿರ್ಲಕ್ಷ್ಯ ಸಲ್ಲದು. ಒಂದು ಸಣ್ಣ ತಪ್ಪು ಕೂಡಾ ದೂರಗಾಮಿ ಪರಿಣಾಮ ಹೊಂದಿರಲಿದೆ. ಜೊತೆಗೆ, ಸಾಂಕ್ರಾಮಿಕದ ವಿರುದ್ಧದ ನಮ್ಮ ಹೋರಾಟವನ್ನು ದುರ್ಬಲಗೊಳಿಸಬಲ್ಲದು.

- ನರೇಂದ್ರ ಮೋದಿ, ಪ್ರಧಾನಮಂತ್ರಿ

click me!