* ಕಲಬೆರಕೆ ತರಕಾರಿ ಪತ್ತೆ ಹೇಗೆ?
* ತರಕಾರಿ ತಾಜಾ ಕಾಣುವಂತೆ ಮ್ಯಾಲಕೈಟ್ ಗ್ರೀನ್ ರಸಾಯನಿಕ ಬಳಕೆ
* ಇಂಥ ತರಕಾರಿ ಸೇವನೆಯಿಂದ ಉಸಿರಾಟ ಸಮಸ್ಯೆ, ಇತರ ಕಾಯಿಲೆ
* ತರಕಾರಿ ಕಲಬೆರಕೆ ಪತ್ತೆಗೆ ಪ್ಯಾರಾಫಿನ್‌ನಲ್ಲಿ ಅದ್ದಿದ ಹತ್ತಿ ಬಳಸಿ
ನವದೆಹಲಿ(ಆ.28): ಅಚ್ಚ ಹಸಿರಾಗಿ ಕಾಣುವ ಸೊಪ್ಪು ಅಥವಾ ತರಕಾರಿಗಳೆಲ್ಲಾ ತಾಜಾ ಅಲ್ಲ. ಹೀಗಾಗಿ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ) ತರಕಾರಿಯಲ್ಲಿ ಬಳಸುವ ಹಸಿರು ರಾಸಾಯನಿಕ ಪತ್ತೆ ಹಚ್ಚುವ ಸುಲಭ ಮಾರ್ಗವನ್ನು ಕಂಡುಹಿಡಿದಿದೆ.
ಟ್ವೀಟರ್‌ನಲ್ಲಿ ವಿಡಿಯೋವೊಂದನ್ನು ಪೋಸ್ಟ್ ಮಾಡಿರುವ ಎಫ್‌ಎಸ್‌ಎಸ್‌ಎಐ, ‘ತರಕಾರಿಯನ್ನು ದ್ರವ ಪ್ಯಾರಾಫಿನ್‌ನಲ್ಲಿ ಅದ್ದಿದ ಹತ್ತಿಯಿಂದ ಒರೆಸಬೇಕು. ಆ ಹತ್ತಿ ಹಸಿರು ಬಣ್ಣಕ್ಕೆ ತಿರುಗದಿದ್ದರೆ ಅದು ರಾಸಾಯನಿಕ ಬೆರೆಸದ ತಾಜಾ ತರಕಾರಿ. ಹಸಿರಾಗಿ ಪರಿವರ್ತನೆಯಾದರೆ ಕಲಬೆರಕೆ ತರಕಾರಿ’ ಎಂದು ವಿವರಣೆ ನೀಡಿದೆ.
Detecting malachite green adulteration in green vegetable with liquid paraffin. pic.twitter.com/knomeEnbmA
— FSSAI (@fssaiindia)ಶಿಲೀಂದ್ರ ಮತ್ತು ಗ್ರಾಂ ಪಾಸಿಟಿವ್ ಬ್ಯಾಕ್ಟೀರಿಯಾಗಳ ವಿರುದ್ಧ ಬಳಸಲಾಗುವ ಮ್ಯಾಲಕೈಟ್ ಗ್ರೀನ್ ಎಂಬ ರಸಾಯನಿಕವನ್ನು ಮೀನು ತಳಿ ಉದ್ಯಮದಲ್ಲಿ ಮೊಟ್ಟೆಮತ್ತು ಎಳೆ ಮರಿಗಳ ಕೊಲ್ಲಲು ಬಳಸಲಾಗುತ್ತದೆ. ಜೊತೆಗೆ ಇದೇ ರಸಾಯನಿಕವನ್ನು ತರಕಾರಿಗಳು ತಾಜಾತನದಿಂದ ಕೂಡಿರಬೇಕೆಂದು ಮೆಣಸಿನಕಾಯಿ, ಬಟಾಣಿ ಉತ್ಪಾದನೆಯಲ್ಲಿ ಎಗ್ಗಿಲ್ಲದೆ ಬಳಸಲಾಗುತ್ತಿದೆ. ಇಂಥ ಆಹಾರ ಪದಾರ್ಥಗಳ ಸೇವನೆಯಿಂದ ಕಾರ್ಸಿನೋಜೆನೆಸಿಸ್, ಮ್ಯೂಟಾಜೆನೆಸಿಸ್, ಉಸಿರಾಟ ಸಮಸ್ಯೆ ಮುಂತಾದ ಕಾಯಿಲೆಗಳು ಕಾಣಿಸಿಕೊಳ್ಳುತ್ತವೆ ಎಂದು ಆತಂಕ ವ್ಯಕಪಡಿಸಲಾಗಿದೆ.