
4 ವರ್ಷದ ಹಾಗೂ 3 ವರ್ಷದ ಅಕ್ಕ ತಮ್ಮ ಮನೆಯಲ್ಲಿ ಹೊಟ್ಟೆನೋವು ಎಂದು ಅಳಲು ಶುರು ಮಾಡಿದಾಗ ಪೋಷಕರು ಜಂತು ಹುಳುವಿನ ಸಮಸ್ಯೆ ಎಂದು ಆರಂಭದಲ್ಲಿ ಸುಮ್ಮನಾಗಿದ್ದರು. ಆದರೆ ಹೊಟ್ಟೆ ಹುಳುವಿಗೆ ಔಷಧಿ ನೀಡಿದ ನಂತರವೂ ಈ ಅಕ್ಕ ತಮ್ಮನ ಹೊಟ್ಟೆನೋವು ಕಡಿಮೆ ಆಗದೇ ಹೋದಾಗ ದಂಪತಿ ತಮ್ಮ ಮಕ್ಕಳನ್ನು ವೈದ್ಯರ ಬಳಿ ಕರೆದೊಯ್ದರು. ಅಲ್ಲಿ ವೈದ್ಯರು ಮಕ್ಕಳನ್ನು ಸ್ಕ್ಯಾನ್ ಮಾಡಿ ನೋಡಿದಾಗ ಪೋಷಕರಿಗೆ ಆಘಾತ ಕಾದಿತ್ತು. ಕೆಲ ಗಂಟೆಗಳಲ್ಲಿ ಈ ಅಕ್ಕ ತಮ್ಮನನ್ನು ಶಸ್ತ್ರಚಿಕಿತ್ಸೆಗಾಗಿ ಟೇಬಲ್ ಮೇಲೆ ಮಲಗುವಂತಹ ಸ್ಥಿತಿ ತಂದುಕೊಟ್ಟಿದ್ದರು ಈ ಪುಟ್ಟ ಮಕ್ಕಳು. ಹಾಗಿದ್ದರೆ ಆಗಿದ್ದೇನು ಇಲ್ಲಿದೆ ಡಿಟೇಲ್ ಸ್ಟೋರಿ...
ಆಟವಾಡುತ್ತಾ ಆಯಸ್ಕಾಂತ ನುಂಗಿದ ಮಕ್ಕಳು:
ವೃಂದಾವನ ನಿವಾಸಿಗಳಾದ 3 ವರ್ಷದ ಪ್ರಜ್ಞಾನ್ ಮತ್ತು ಆತನ ಅಕ್ಕ 4 ವರ್ಷದ ಹಿತಾಂಶಿ ಈ ತಿಂಗಳ ಆರಂಭದಲ್ಲಿ ಹೊಟ್ಟೆ ನೋವು ಎಂದು ಪೋಷಕರಿಗೆ ಹೇಳುವುದಕ್ಕೆ ಆರಂಭಿಸಿದ್ದರು. ಈ ವೇಳೆ ಪೋಷಕರು ಇದು ಕೇವಲ ಹೊಟ್ಟೆಹುಳುವಿನ ಕಾರಣವಿರಬಹುದು ಎಂದು ಅಂದುಕೊಂಡರು. ಇದಾಗಿ 48 ಗಂಟೆಗಳ ಒಳಗೆ ಈ ಇಬ್ಬರೂ ಮಕ್ಕಳನ್ನು ಶಸ್ತ್ರಚಿಕಿತ್ಸೆಗಾಗಿ ಪೋಷಕರು ಫರಿದಾಬಾದ್‌ನ ಆಸ್ಪತ್ರೆಗೆ ದಾಖಲಿಸಿದರು. ಅಲ್ಲಿ ವೈದ್ಯರು ಮಕ್ಕಳನ್ನು ಸ್ಕ್ಯಾನ್ ಮಾಡಿದಾಗ ಮಕ್ಕಳಿಬ್ಬರು ಆಟಿಕೆಯ ಆಯಸ್ಕಾಂತವನ್ನು ನುಂಗಿರುವುದು ಕಂಡು ಬಂತು. ಫರಿದಾಬಾದ್‌ನ ಅಮೃತಾ ಆಸ್ಪತ್ರೆಯ ವೈದ್ಯರು ಅವರನ್ನು ಉಳಿಸಲು ಸತತ ಶಸ್ತ್ರಚಿಕಿತ್ಸೆಗಳನ್ನು ಮಾಡಿದರು. 3 ವರ್ಷದ ತಮ್ಮ ಪ್ರಜ್ಞಾನ್‌ನ ಕರುಳಿನಲ್ಲಿ 10 ಆಯಸ್ಕಾಂತಗಳು ಆಂಟಿಕೊಂಡು ನಿಂತಿದ್ದಲ್ಲದೇ 8 ಸ್ಥಳಗಳಲ್ಲಿ ರಂಧ್ರಗಳನ್ನು ಮಾಡಿದ್ದವು, ಇತ್ತ ಆತನ ಸೋದರಿ ಹಿತಾಂಶಿಯ ಹೊಟ್ಟೆಯಲ್ಲಿಯೇ ಆರು ಆಯಸ್ಕಾಂತಗಳು ಸ್ಟಕ್ ಆಗಿದ್ದವು. ಇವು ಅಂಗಾಂಶಗಳಿಗೆ ನೋವು ರಂಧ್ರಗಳಿಗೆ ಕಾರಣ ಆಗುತ್ತಿದ್ದವು.
ಸೈಲೆಂಟ್ ಕಿಲ್ಲರ್ ಈ ಆಯಸ್ಕಾಂತಗಳು
ಇದು ನಾವು ಎದುರಿಸಿದ ಅತ್ಯಂತ ಕಠಿಣ ವೈದ್ಯಕೀಯ ಪ್ರಕರಣಗಳಲ್ಲಿ ಒಂದಾಗಿದೆ ಎಂದು ಫರಿದಾಬಾದ್‌ನ ಅಮೃತ ಆಸ್ಪತ್ರೆಯ ಮಕ್ಕಳ ಶಸ್ತ್ರಚಿಕಿತ್ಸೆಯ ಹಿರಿಯ ಸಲಹೆಗಾರ ಡಾ. ನಿತಿನ್ ಜೈನ್ ಹೇಳಿದರು. ಇಬ್ಬರೂ ಮಕ್ಕಳ ಶಸ್ತ್ರಚಿಕಿತ್ಸೆಯನ್ನು ನಿರ್ವಹಿಸಿದ ಅವರು ಈ ಆಯಸ್ಕಾಂತಗಳು ಸೈಲೆಂಟ್ ಕಿಲ್ಲರ್‌ಗಳು ಎಂದರು. ಸಾಮಾನ್ಯವಾಗಿ ತೊಂದರೆ ಉಂಟುಮಾಡುವ ನಾಣ್ಯಗಳು ಅಥವಾ ಗುಂಡಿಗಳಿಗಿಂತ(buttons)ಭಿನ್ನವಾಗಿ ಈ ಆಯಸ್ಕಾಂತಗಳು ಒಳಗಿನಿಂದ ಅಂಗಾಂಶವನ್ನು ಸದ್ದಿಲ್ಲದೇ ಹಾನಿಗೊಳಿಸುತ್ತವೆ. ಒಂದು ಸಣ್ಣ ಆಯಸ್ಕಾಂತವು ದೇಹದ ಮೂಲಕ ಯಾವುದೇ ಸಮಸ್ಯೆಯಿಲ್ಲದೆ ಹಾದು ಹೋಗುತ್ತದೆ. ಆದರೆ ಹಲವು ಆಯಸ್ಕಾಂತಗಳನ್ನು ಒಟ್ಟಿಗೆ ನುಂಗಿದಾಗ, ಅವು ಕರುಳಿನ ವಿವಿಧ ಭಾಗಗಳಿಗೆ ಹೋಗಬಹುದು ಮತ್ತು ಕರುಳಿನ ಒಳಭಾಗದಲ್ಲಿ ಒಟ್ಟಿಗೆ ಅಂಟಿಕೊಳ್ಳಬಹುದು. ಇವುಗಳ ನಡುವೆ ಸಿಲುಕಿರುವ ಅಂಗಾಂಶಕ್ಕೆ ರಕ್ತ ಪೂರೈಕೆ ನಿಲ್ಲುತ್ತದೆ. ಇದರಿಂದ ಅಲ್ಲಿ ರಂಧ್ರಗಳಾಗುತ್ತವೆ. ಇದು ಮಾರಣಾಂತಿಕ ಸೋಂಕುಗಳಿಗೆ ಕಾರಣವಾಗುತ್ತದೆ ಎಂದು ಡಾ. ಜೈನ್ ಹೇಳಿದರು.
ಈ ಮ್ಯಾಗ್ನೆಟ್ ಆಟಿಕೆಗಳು ಇಷ್ಟೊಂದು ಅಪಾಯಕಾರಿಯೇ?
ಮಗು ಪ್ರಗ್ಯಾನ್ ಪ್ರಕರಣದಲ್ಲಿ, ಆಯಸ್ಕಾಂತಗಳು ಅವನ ಡ್ಯುವೋಡೆನಮ್ ಅಂದರೆ ಸಣ್ಣ ಕರುಳಿನ ಮೊದಲಿನ ಭಾಗವನ್ನು ನಾಶಮಾಡಿದ್ದವು. ಇದಕ್ಕೆ ಅತ್ಯಂತ ಸಂಕೀರ್ಣವಾದ ಪುನ ರ್ನಿರ್ಮಾಣ ಶಸ್ತ್ರಚಿಕಿತ್ಸೆಯ ಅಗತ್ಯವಿತ್ತು. ಹಾಗೇಯೇ ಹಿತಾಂಶಿಗೂ ಇದೇ ರೀತಿಯ ಜೀವ ಉಳಿಸುವ ಚಿಕಿತ್ಸೆಯ ಅಗತ್ಯವಿತ್ತು. ಈ ಆಟಿಕೆಗಳು ಸುರಕ್ಷಿತವೆಂದು ನಂಬಿ ನಾವು ಖರೀದಿಸಿದ್ದೇವೆ, ಅವು ನಮ್ಮ ಇಬ್ಬರು ಮಕ್ಕಳನ್ನು ಕಳೆದುಕೊಳ್ಳುವಷ್ಟು ಹಾನಿ ಮಾಡುತ್ತವೆ ಎಂದು ನಾವು ಎಂದಿಗೂ ಭಾವಿಸಿರಲಿಲ್ಲಎಂದು ಪ್ರಗ್ಯಾನ್ ಮತ್ತು ಹಿತಾಂಶಿ ಅವರ ಪೋಷಕರು ಹೇಳಿದ್ದಾರೆ. ಆಯಸ್ಕಾಂತವನ್ನು ನುಂಗುವುದರಿಂದ ಮಕ್ಕಳು ಹೆಚ್ಚಾಗಿ ವಾಂತಿ, ಹೊಟ್ಟೆ ನೋವು ಅಥವಾ ಹೊಟ್ಟೆ ಉಬ್ಬುವಿಕೆಯಿಂದ ಬಳಲುತ್ತಾರೆ, ಈ ಲಕ್ಷಣಗಳನ್ನು ಸಾಮಾನ್ಯ ಹೊಟ್ಟೆಯ ಸೋಂಕುಗಳೆಂದು ತಪ್ಪಾಗಿ ಗ್ರಹಿಸಲಾಗುತ್ತದೆ. ಕೆಲವೊಮ್ಮೆ ಈ ಲಕ್ಷಣಗಳು ತಕ್ಷಣ ಕಾಣಿಸಿಕೊಳ್ಳದಿರಬಹುದು ಎಂದು ವೈದ್ಯರು ಹೇಳುತ್ತಾರೆ.
ಇಂತಹ ಪ್ರಕರಣಗಳು ಇದೇ ಮೊದಲಲ್ಲ:
ಈ ರೀತಿ ಆಟವಾಡುತ್ತಾ ಈ ಆಯಸ್ಕಾಂತವನ್ನು ಒಡಹುಟ್ಟಿದವರು ಜೊತೆಗೆ ನುಂಗಿರುವುದು ಇದೇ ಮೊದಲಲ್ಲ, ಜಾಗತಿಕವಾಗಿ ಹೀಗೆ ಆಯಸ್ಕಾಂತ ನುಂಗಿದ ಮಕ್ಕಳ ಸಂಖ್ಯೆ ಬಹಳ ಹೆಚ್ಚಿದೆ. 2002 ರಿಂದ 2024ರ ನಡುವೆ ವಿಶ್ವದಾದ್ಯಂತ ದಾಖಲಾದ ಪ್ರಕರಣಗಳು ಸಾವಿರಾರು. ಕೇವಲ ಅಮೆರಿಕಾವೊಂದರಲ್ಲಿ 23,756 ಪ್ರಕರಣಗಳು ವರದಿಯಾಗಿವೆ. ಇದು ವಿಶ್ವದಲ್ಲೇ ಅತೀ ಹೆಚ್ಚು ಪ್ರಕರಣ ದಾಖಲಾದ ದೇಶ ಎನಿಸಿದೆ. ಕತಾರ್, ಯುಎಇ, ಸೌದಿ ಅರೇಬಿಯಾ, ಟುನೀಶಿಯಾ ಮತ್ತು ಟರ್ಕಿಯಾದ್ಯಂತ ನಡೆದ ಬಹುರಾಷ್ಟ್ರೀಯ ಅಧ್ಯಯನವು ಬಹು ಆಯಸ್ಕಾಂತಗಳನ್ನು ಸೇವಿಸುವ ಮಕ್ಕಳು ಕರುಳಿನ ರಂಧ್ರಗಳು ಮತ್ತು ಮಾರಣಾಂತಿಕ ಸೋಂಕುಗಳು ಸೇರಿದಂತೆ ತೀವ್ರ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಾರೆ ಎಂಬ ಮಾಹಿತಿ ಇದೆ.
ಇದನ್ನೂ ಓದಿ: ಹಾವು ಹಿಡಿಯಲು ಹೋಗಿ ಉಸಿರೇ ನಿಲ್ತಿತ್ತು: ಸಡನ್ ಅಟ್ಯಾಕ್ ಮಾಡಿದ ಕಿಂಗ್ ಕೋಬ್ರಾ ಭಯಾನಕ ವೀಡಿಯೋ
ಇದನ್ನೂ ಓದಿ: ಮಳೆಗೆ ಮನೆಯೇ ಬಿದ್ದರೂ ದೃಢವಾಗಿ ನಿಂತ ಫ್ಯಾನ್: ಕೊಚ್ಚಿ ಹೋಗ್ತಿದ್ದ ನಾಯಿಯ ರಕ್ಷಣೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ