
ಕೋಲ್ಕತಾ: ಕೋಲ್ಕತಾ ಆರ್‌ಜಿ ಕಾರ್ ಆಸ್ಪತ್ರೆಯಲ್ಲಿ ನಡೆದ ವೈದ್ಯೆಯ ಕೊಲೆ ಪ್ರಕರಣದ ಆರೋಪಿ ಸಂಜಯ್ ರಾಯ್ ಈಗ ತನ್ನ ವರಸೆ ಬದಲಿಸಿದ್ದು, ತಾನು ಆಕೆಯನ್ನು ನೋಡಿದಾಗಲೇ ಆಕೆ ಸತ್ತು ಹೋಗಿದ್ದಳು ಎಂದು ಹೇಳಿದ್ದಾನೆ. ಸುಳ್ಳು ಪತ್ತೆ ಪರೀಕ್ಷೆ ವೇಳೆ ಈತ ಹೀಗೆ ಹೇಳಿದ್ದಾನೆ ಎನ್ನಲಾಗಿದ್ದು, ಇದು ಪ್ರಕರಣಕ್ಕೆ ಹೊಸ ಟ್ವಿಸ್ಟ್ ನೀಡುವ ಸಾಧ್ಯತೆ ಇದೆ. ಸುಳ್ಳು ಪರೀಕ್ಷೆಯಲ್ಲಿ ಸಂಜಯ್ ರಾಯ್ ಈ ಉತ್ತರ ನೀಡಿದ್ದು, ಹೀಗಾಗಿ ಈ ರೇಪ್ ಪ್ರಕರಣದ ಹಿಂದೆ ಬೇರೆ ಯಾರದ್ದೋ ಕೈವಾಡಗಳಿವೆಯೋ ಎಂಬ ಪ್ರಶ್ನೆ ಮೂಡಿದೆ. ತಾನು ಆರ್ ಜಿ ಕರ್ ಆಸ್ಪತ್ರೆಯ ಸೆಮಿನಾರ್ ಹಾಲ್ ತಲುಪುವ ವೇಳೆಗಾಗಲೇ ಆಕೆ ಸತ್ತು ಹೋಗಿದ್ದಳು ಎಂದು ಸಂಜಯ್ ರಾಯ್ ಹೇಳಿದ್ದಾನೆ ಎನ್ನಲಾಗಿದೆ.
ಈ ಕೊಲೆ ಪ್ರಕರಣದಲ್ಲಿ ತಾನು ನಿರ್ದೋಷಿ ನನ್ನ ತಪ್ಪಿಲ್ಲ ಎಂದು ಸಂಜಯ್ ರಾಯ್ ಹೇಳಿದ್ದ. ಹೀಗಾಗಿ ಈತನಿಗೆ ಸುಳ್ಳು ಪರೀಕ್ಷೆ ಮಾಡುವುದಕ್ಕೆ ತನಿಖಾಧಿಕಾರಿಗಳು ಮುಂದಾಗಿದ್ದರು. ಆದರೆ ಈ ಸುಳ್ಳು ಪರೀಕ್ಷೆ ಈಗ ಹಲವಾರು ತಪ್ಪು ಹಾಗೂ ಒಪ್ಪಿಕೊಳ್ಳಲಾಗದಂತಹ ಉತ್ತರ ನೀಡಿದೆ ಎಂದು ಬಲ್ಲಮೂಲಗಳನ್ನು ಉಲ್ಲೇಖಿಸಿ ಅಂಗ್ಲ ಮಾಧ್ಯಮವೊಂದು ವರದಿ ಮಾಡಿದೆ.
ಆಸ್ಪತ್ರೆಯ ಅದೊಂದು ಡೋರ್ ಸರಿ ಇರ್ತಿದ್ರೆ ಬದುಕುಳಿತಿದ್ರ ಕೋಲ್ಕತಾ ಟ್ರೈನಿ ವೈದ್ಯೆ
ಸತ್ಯ ಪತ್ತೆ ಪರೀಕ್ಷೆ ವೇಳೆ ಸಂಜಯ್ ರಾಯ್ ಆತಂಕದಲ್ಲಿ ಇರುವಂತೆ ಕಾಣುತ್ತಿದ್ದ. ಸಿಬಿಐ ಅಧಿಕಾರಿಗಳು ಹಲವು ಸಾಕ್ಷ್ಯಗಳನ್ನು ಎದುರಿಟ್ಟುಕೊಂಡು ಆತನನ್ನು ಒಂದಾದ ಮೇಲೊಂದರಂತೆ ಪ್ರಶ್ನೆ ಕೇಳಿದ್ದರು. ಆದರೆ ಆತ ತಾನು ಆ ಪ್ರದೇಶದಲ್ಲಿ ಆಗ ಇರಲಿಲ್ಲ ಎಂಬುದಕ್ಕೆ ಸಾಕಷ್ಟು ಸಾಕ್ಷ್ಯ ಹೇಳಿದ್ದಾನೆ ಎನ್ನಲಾಗಿದೆ. ಅಲ್ಲದೇ ತಾನು ಆಕೆಯನ್ನು ನೋಡುವ ವೇಳೆ ಆಕೆ ಸತ್ತು ಹೋಗಿದ್ದಳು. ಆದರೆ ಭಯಗೊಂಡು ನಾನು ಆ ಪ್ರದೇಶದಿಂದ ಓಡಿ ಹೋಗಿದ್ದೆ ಎಂದು ಆತ ಹೇಳಿದ್ದಾನೆ.
ಕೋಲ್ಕತ್ತಾ ಪೊಲೀಸರು ಹೇಳುವ ಪ್ರಕಾರ, ಘಟನೆ ನಡೆದ ನಂತರ ಸಂಜಯ್ ರಾಯ್ ತಾನು ಈ ಅತ್ಯಾಚಾರ ಹಾಗೂ ಕೊಲೆ ಪ್ರಕರಣವನ್ನು ಮಾಡಿದ್ದಾಗಿ ಒಪ್ಪಿಕೊಂಡಿದ್ದ ಎನ್ನಲಾಗಿದೆ. ಆದರೆ ನಂತರದಲ್ಲಿ ಆತ ತನ್ನ ಪ್ಲೇಟ್ ಬದಲಿಸಿದ್ದು, ನನ್ನನ್ನು ಈ ಪ್ರಕರಣದಲ್ಲಿ ಸಿಲುಕಿಸಲಾಗಿದೆ, ನಾನೊಬ್ಬ ನಿರಪರಾಧಿ ಎಂದು ಹೇಳಿದ್ದ.
ಜೈಲು ಗಾರ್ಡ್‌ಗಳ ಬಳಿ ಆರೋಪಿ ಸಂಜಯ್ ರಾಯ್ ಹೇಳಿದ್ದೇನು
ತನಗೆ ಈ ಅತ್ಯಾಚಾರ ಪ್ರಕರಣದ ಬಗ್ಗೆ ಏನೇನೂ ಗೊತ್ತಿಲ್ಲ ಎಂದು ಆರೋಪಿ ಸಂಜಯ್ ರಾಯ್ ಜೈಲು ಸಿಬ್ಬಂದಿ ಬಳಿ ಹೇಳಿದ್ದಾನೆ ಎನ್ನಲಾಗಿದೆ. ಕಳೆದ ವಾರದ ಶುಕ್ರವಾರ ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ಆತ ಸೀಲ್ದಾಹ್‌ನಲ್ಲಿರುವ ಜ್ಯುಡಿಶೀಯಲ್ ಮ್ಯಾಜಿಸ್ಟ್ರೇಟ್ ನ್ಯಾಯಾಧೀಶರ ಬಳಿ ಈ ಪ್ರಕರಣದಲ್ಲಿ ನಾನು ನಿರಪರಾಧಿ, ತಾನು ನಿರಪರಾಧಿ ಎಂದು ಸಾಬೀತುಪಡಿಸಲು ಪರೀಕ್ಷೆಗೆ ಒಪ್ಪಿಕೊಂಡಿದ್ದಾನೆ ಎಂದು ಹೇಳಿದ್ದ. ಆದರೆ ಪೊಲೀಸರು ಹಾಗೂ ಸಿಬಿಐ ಅಧಿಕಾರಿ ಮಾತ್ರ ಆತನ ಈ ನಿರಪರಾಧಿ ಹೇಳಿಕೆಯಲ್ಲಿ ಯಾವುದೇ ಸತ್ಯತೆ ಇಲ್ಲ ಎಂಬುದನ್ನು ಕಂಡುಕೊಂಡಿದ್ದಾರೆ ಎನ್ನಲಾಗಿದೆ.
ಗೇಮ್ ಆಡಲು ಬಿಡದಕ್ಕೆ ಮನೆಯಲ್ಲಿದ್ದ ಚಾಕು ಕೀ ಬಂಚ್, ನೈಲ್ ಕಟ್ಟರ್ ನುಂಗಿದ ಯುವಕ
ಏಕೆಂದರೆ ಆತನ ಮುಖದಲ್ಲಿ ಇರುವ ಗಾಯದ ಗುರುತುಗಳಿಗೆ ಆತ ಯಾವುದೇ ಸರಿಯಾದ ವಿವರಣೆ ನೀಡಿಲ್ಲ, ಅಲ್ಲದೇ ಘಟನೆ ನಡೆಯುವ ವೇಳೆ ಆತ ಆಸ್ಪತ್ರೆಯ ಕಟ್ಟಡದಲ್ಲಿ ಇದ್ದಿದ್ದು ಏಕೆ ಎಂಬುದಕ್ಕೂ ಆತ ಸರಿಯಾದ ಕಾರಣ ನೀಡಿಲ್ಲ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ. ಆಗಸ್ಟ್ 9 ರಂದು ಮುಂಜಾನೆ ಆರ್‌ಜಿ ಕರ್ ಆಸ್ಪತ್ರೆಯ ಸೆಮಿನರ್ ಹಾಲ್‌ನಲ್ಲಿ 31 ವರ್ಷದ ಟೈನಿ ವೈದ್ಯೆಯ ಶವ ನಿಗೂಢ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಆಕೆಯ ದೇಹದಲ್ಲಿ ಖಾಸಗಿ ಭಾಗ ಸೇರಿದಂತೆ 25 ಕಡೆ ಗಾಯಗಳಾಗಿದ್ದವು.
36 ಗಂಟೆಗಳ ನಿರಂತರ ಡ್ಯೂಟಿಯ ನಂತರ ವೈದ್ಯೆ ವಿಶ್ರಾಂತಿ ಪಡೆಯುವುದಕ್ಕಾಗಿ ಸೆಮಿನಾರ್ ಹಾಲ್‌ಗೆ ಹೋಗಿದ್ದರು. ಸೆಮಿನಾರ್ ಹಾಲ್ ಹೊರಗಿದ್ದ ಸಿಸಿಟಿವಿ ವೀಡಿಯೋದಲ್ಲಿ ಕಾಣುವಂತೆ ಆರೋಪಿ ಮುಂಜಾನೆ 4 ಗಂಟೆ ಸುಮಾರಿಗೆ ಆಸ್ಪತ್ರೆಯ ಸೆಮಿನಾರ್ ಹಾಲ್ ಬಳಿ ಬಂದಿದ್ದ. ಅಲ್ಲದೇ ಅಲ್ಲೇ ಆತನ ಬ್ಲೂಟೂತ್ ಹೆಡ್‌ಸೆಟ್ ಸಿಕ್ಕಿತ್ತು. ಹೀಗಾಗಿ ಆತನ ಪಾತ್ರದ ಬಗ್ಗೆ ಈ ಬ್ಲೂಟುಥ್ ದೊಡ್ಡ ಪುರಾವೆ ನೀಡಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ