* 75 ಲಕ್ಷ ಬಹುಮಾನ ಘೋಷಿಸಿದ್ದ ಎಸ್‌ಎಫ್‌ಜೆ
* ಮೋದಿ ಸಮಾವೇಶ ವಿಫಲಕ್ಕೆ ಖಲಿಸ್ತಾನಿ ಉಗ್ರ ಸಂಚು
* ಪಾಕ್ ಗಡಿಯಲ್ಲಿ ಆತಂಕಕಾರಿ ಘಟನೆ, ಮೋದಿ ಎಲ್ಲ ಕಾರ್ಯಕ್ರಮ ರದ್ದು
ನವದೆಹಲಿ(ಜ.07): ಪಂಜಾಬ್‌ನ ಫಿರೋಜ್‌ಪುರ ರ‍್ಯಾಲಿ ವಿಫಲಗೊಳಿಸಲು ಖಲಿಸ್ತಾನಿ ಉಗ್ರರು ಸಂಚು ನಡೆಸಿದ್ದ ವಿಷಯ ಬೆಳಕಿಗೆ ಬಂದಿದೆ. ಈ ಸಂಬಂಧ ರ‍್ಯಾಲಿಗೂ ಎರಡು ದಿನ ಮೊದಲು ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದ ಸಿಖ್ ಫಾರ್ ಜಸ್ಟಿಸ್ ಸಂಘಟನೆಯ ಮುಖ್ಯಸ್ಥ ಗುರುಪಾವತ್‌ಸಿಂಗ್ ಪನ್ನು, ಮೋದಿ ರ‍್ಯಾಲಿ ವಿಫಲಗೊಳಿಸುವಂತೆ ಕರೆ ಕೊಟ್ಟಿದಲ್ಲದೆ, ಹೀಗೆ ಮಾಡಿದವರಿಗೆ 1 ಲಕ್ಷ ಡಾಲರ್ (75 ಲಕ್ಷ ರು.) ಬಹುಮಾನ ಘೋಷಿಸಿದ್ದ ವಿಡಿಯೋವೊಂದು ಇದೀಗ ಬಹಿರಂಗವಾಗಿದೆ.
ಜೊತೆಗೆ ಮೋದಿ ಕಾರಿಗೆ ಪ್ರತಿಭಟನಾಕಾರರು ಅಡ್ಡಗಟ್ಟಿದ ಬಳಿಕವೂ ವಿಡಿಯೋ ಬಿಡುಗಡೆ ಮಾಡಿರುವ ಪನ್ನು, ಇದು ಖಲಿಸ್ತಾನಿ ಸ್ವಾತಂತ್ರ್ಯಕ್ಕಾಗಿ ರೈತರು ಆರಂಭಿಸಿದ ಸ್ವಾತಂತ್ರ್ಯ ಹೋರಾಟ ಎಂದು ಘೋಷಿಸಿದ್ದಾನೆ. ಅಲ್ಲದೆ ಈ ಹಿಂದೆ ಶಸಾಸ್ತ್ರ ಹಿಡಿದು ಬಂದ ಪ್ರಧಾನಿ ಇಂದಿರಾಗಾಂಧಿಗೆ ಶಸ್ತ್ರಾಸ್ತ್ರದ ಮೂಲಕವೇ ಉತ್ತರ ನೀಡಿದ್ದೆವು. ಈಗ ನೀವು ಪಂಜಾಬ್ ಜನರಲ್ಲಿ ಭೀತಿ ಹುಟ್ಟುಹಾಕುತ್ತಿದ್ದೀರಿ. ನಿಮಗೆ ನಾವು ಶಾಂತಿಯುತವಾಗಿ ಮತಗಳ ಮೂಲಕವೇ ಉತ್ತರ ನೀಡಲಿದ್ದೇವೆ ಎಂದು ಪ್ರಧಾನಿ ಮೋದಿಗೆ ಎಚ್ಚರಿಸಿದ್ದಾನೆ.
ಏನಿದು ಘಟನೆ?
ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಪಂಜಾಬ್‌ಗೆ ತೆರಳಿದ್ದ ಪ್ರಧಾನಿ ನರೇಂದ್ರ ಮೋದಿ ಅವರನ್ನು ರೈತರ ತಂಡವೊಂದು ಫ್ಲೈಓವರ್‌ವೊಂದರ ಮೇಲೆ ತಡೆಗಟ್ಟಿದ ಆತಂಕಕಾರಿ ಘಟನೆ ಬುಧವಾರ ನಡೆದಿತ್ತು. ಪರಿಣಾಮ, ಅತ್ಯಂತ ಬಿಗಿಭದ್ರತೆ ವ್ಯವಸ್ಥೆ ಹೊಂದಿರುವ ಪ್ರಧಾನಿ, ಫ್ಲೈಓವರ್ ಮೇಲೇ 20 ನಿಮಿಷಗಳನ್ನು ಅತಂತ್ರರಾಗಿ ಕಳೆದಿದ್ದರು. ಇದು ಪ್ರಧಾನಿಯಂತಹ ಅತಿಗಣ್ಯರ ವಿಷಯದಲ್ಲಿ ಕಂಡು ಕೇಳರಿಯದ ಭದ್ರತಾ ಲೋಪ ಎನ್ನಿಸಿಕೊಂಡಿದೆ.
ಇದರ ಬೆನ್ನಲ್ಲೇ ಮೋದಿ ಅವರು ತಮ್ಮ ಎಲ್ಲಾ ಕಾರ್ಯಕ್ರಮಗಳನ್ನು ರದ್ದುಗೊಳಿಸಿ ದೆಹಲಿಗೆ ಮರಳಿದ್ದರು. ಘಟನೆಯನ್ನು ಅತ್ಯಂತ ಗಂಭೀರ ಎಂದಿರುವ ಕೇಂದ್ರ ಗೃಹ ಸಚಿವಾಲಯ, ಈ ಕುರಿತು ಪಂಜಾಬ್ ಸರ್ಕಾರದಿಂದ ವಿಸ್ತೃತ ವರದಿ ಕೇಳಿದ್ದು, ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮಕ್ಕೆ ತಾಕೀತು ಮಾಡಿದೆ. ಈ ನಡುವೆ, ಭಾರತೀಯ ಕಿಸಾನ್ ಯೂನಿಯನ್ (ಕ್ರಾಂತಿಕಾರಿ) ಎಂಬ ಸಂಘಟನೆ ಈ ಘಟನೆಯ ಹೊಣೆ ಹೊತ್ತಿದೆ.
ಈ ನಡುವೆ, ಪ್ರಧಾನಿಗೆ ಸೂಕ್ತ ಭದ್ರತೆ ಕಲ್ಪಿಸುವಲ್ಲಿ ವಿಫಲವಾದ ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಚನ್ನಿ ನೇತೃತ್ವದ ಕಾಂಗ್ರೆಸ್ ಸರ್ಕಾರದ ವಿರುದ್ಧ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಆದರೆ, ‘ಕೊನೆಯ ಕ್ಷಣದಲ್ಲಿ ಪ್ರಧಾನಿ ಸಂಚಾರವು ವಾಯು ಮಾರ್ಗದಿಂದ ರಸ್ತೆ ಮಾರ್ಗಕ್ಕೆ ಬದಲಾಯಿತು. ಆದರೂ ಪ್ರಧಾನಿಗಳ ಭದ್ರತೆಯಲ್ಲಿ ಲೋಪವಾಗಿಲ್ಲ. ಪ್ರತಿಭಟನಾಕಾರರು ಧರಣಿ ಕುಳಿತಿದ್ದ ಸ್ಥಳಕ್ಕಿಂತ ದೂರವೇ ಪ್ರಧಾನಿ ಬೆಂಗಾವಲು ವಾಹನ ನಿಲ್ಲಿಸಲಾಗಿತ್ತು’ ಎಂದು ಚನ್ನಿ ಸ್ಪಷ್ಟನೆ ನೀಡಿದ್ದಾರೆ.
ಈ ನಡುವೆ ಪ್ರಧಾನಿ ಮೋದಿ ಕಾರ್ಯಕ್ರಮ ಹಾಳುಗೆಡವಲು ಕಾಂಗ್ರೆಸ್ ಸರ್ಕಾರ ಎಲ್ಲಾ ತಂತ್ರ ಅನುಸರಿಸುತ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಆರೋಪಿಸಿದ್ದರೆ, ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಿಗೆ ಪಂಜಾಬ್‌ನ ಮಾಜಿ ಸಿಎಂ ಅಮರೀಂದರ್ ಸಿಂಗ್ ಒತ್ತಾಯಿಸಿದ್ದಾರೆ.
ಭದ್ರತಾ ಲೋಪ?:
ಪಾಕ್ ಗಡಿಗೆ ಹೊಂದಿಕೊಂಡ ಫಿರೋಜ್‌ಪುರದಲ್ಲಿ ರ‍್ಯಾಲಿ ಮತ್ತು ಹುಸೇನಿವಾಲಾದಲ್ಲಿನ ರಾಷ್ಟ್ರೀಯ ಹುತಾತ್ಮರ ಸ್ಮಾರಕಕ್ಕೆ ನಮನ ಸಲ್ಲಿಸುವ ಕಾರ್ಯಕ್ರಮದಲ್ಲಿ ಭಾಗಿಯಾಗುವ ಸಲುವಾಗಿ ಮೋದಿ ಬುಧವಾರ ಬೆಳಗ್ಗೆ ಪಂಜಾಬ್‌ನ ಬಠಿಂಡಾಕ್ಕೆ ಬಂದಿಳಿದಿದ್ದರು. ಅಲ್ಲಿಂದ ಅವರು ಮೊದಲಿಗೆ ಹುಸೇನಿವಾಲಾಕ್ಕೆ ಕಾಪ್ಟರ್ ಮೂಲಕ ತೆರಳಬೇಕಿತ್ತು. ಆದರೆ ಪ್ರತಿಕೂಲ ವಾತಾವರಣ ಇದ್ದ ಹಿನ್ನೆಲೆಯಲ್ಲಿ ಸ್ಥಳದಲ್ಲೇ 20 ನಿಮಿಷ ಕಾದ ಪ್ರಧಾನಿ, ಬಳಿಕ 2 ಗಂಟೆ ಸಮಯ ತೆಗೆದುಕೊಳ್ಳುವ ರಸ್ತೆ ಮಾರ್ಗದಲ್ಲೇ ತೆರಳಲು ನಿರ್ಧರಿಸಿದ್ದರು. ರಸ್ತೆ ಸಂಚಾರಕ್ಕೆ ಎಲ್ಲಾ ಅಗತ್ಯ ಭದ್ರತಾ ಕ್ರಮ ಕೈಗೊಂಡ ಬಗ್ಗೆ ಪಂಜಾಬ್ ಡಿಜಿಪಿ ಕೂಡ ಖಚಿತಪಡಿಸಿದ್ದರು.
ಹೀಗೆ ಪ್ರಯಾಣ ಆರಂಭಿಸಿದ ಮೋದಿ, ಹುತಾತ್ಮರ ಸ್ಮಾರಕದಿಂದ 30 ಕಿ.ಮೀ ದೂರದಲ್ಲಿನ ಪ್ಯಾರೇನಾ ಗ್ರಾಮದ ಫ್ಲೈಓವರ್ ಒಂದರ ಮೇಲೆ ಸಂಚರಿಸುತ್ತಿದ್ದ ವೇಳೆ ಏಕಾಏಕಿ ಎದುರಿನಲ್ಲಿ 20ಕ್ಕೂ ಹೆಚ್ಚು ಪ್ರತಿಭಟನಾಕಾರರ ತಂಡವೊಂದು ವಾಹನಗಳನ್ನು ಅಡ್ಡಗಟ್ಟಿನಿಲ್ಲಿಸಿದ್ದು ಕಂಡುಬಂದಿದೆ. ಕೂಡಲೇ ಪ್ರಧಾನಿ ಬೆಂಗಾವಲು ವಾಹನಗಳು ಸ್ಥಳದಲ್ಲೇ ವಾಹನ ನಿಲ್ಲಿಸಿದವು. ಬಳಿಕ ಸುಮಾರು 20 ನಿಮಿಷ ಪ್ರಧಾನಿ ಸೇರಿದಂತೆ ಹಿರಿಯ ಅಧಿಕಾರಿಗಳ ತಂಡ ಸ್ಥಳದಲ್ಲೇ ಆತಂಕದ ಪರಿಸ್ಥಿತಿ ಎದುರಿಸಿದರು. ಆಗ ಸ್ಥಳದಲ್ಲಿನ ಭಾರೀ ಭದ್ರತಾ ಲೋಪ ವಿಶ್ಲೇಷಿಸಿದ ಪ್ರಧಾನಿಗಳ ಭದ್ರತೆಯ ಉಸ್ತುವಾರಿ ಹೊತ್ತಿರುವ ಎಸ್‌ಪಿಜಿ ತಂಡ, ಮೋದಿ ಅವರನ್ನು ಮರಳಿ ವಿಮಾನ ನಿಲ್ದಾಣಕ್ಕೆ ವಾಪಸ್ ಕರೆತಂದಿತು. ಪರಿಣಾಮ ತಮ್ಮೆಲ್ಲ ಕಾರ‍್ಯಕ್ರಮ ರದ್ದು ಮಾಡಿ ಮೋದಿ ನವದೆಹಲಿಗೆ ಮರಳಿದರು.
ಭಾರೀ ಲೋಪ:
ಘಟನೆ ಕುರಿತು ತೀವ್ರ ದಿಗ್ಭ್ರಮೆ ವ್ಯಕ್ತಪಡಿಸಿರುವ ಕೇಂದ್ರ ಗೃಹ ಸಚಿವಾಲಯ, ‘ಫೈಓವರ್ ಮೇಲೆ ಪ್ರಧಾನಿ 15-20 ನಿಮಿಷ ಸಿಕ್ಕಿಹಾಕಿಕೊಂಡಿದ್ದರು. ಪ್ರಧಾನಿ ಸಂಚಾರ ಕಾರ್ಯಕ್ರಮದ ಕುರಿತು ಮೊದಲೇ ಮಾಹಿತಿ ನೀಡಿದ್ದರೂ ಅವರ ಸಂಚಾರಕ್ಕೆ ಅಗತ್ಯವಾದ ವ್ಯವಸ್ಥೆ ಮತ್ತು ಪರ್ಯಾಯ ವ್ಯವಸ್ಥೆಯನ್ನು ರಾಜ್ಯ ಸರ್ಕಾರ ಮಾಡಿಕೊಂಡಿಲ್ಲ. ಶಿಷ್ಟಾಚಾರದ ಪ್ರಕಾರ, ವೈಮಾನಿಕ ಪ್ರವಾಸ ರದ್ದಾದರೆ, ರಸ್ತೆ ಸಂಚಾರಕ್ಕೆ ಸುಗಮ ವ್ಯವಸ್ಥೆ ಕಲ್ಪಿಸಲು ಹೆಚ್ಚುವರಿ ಭದ್ರತಾ ಸಿಬ್ಬಂದಿ ನಿಯೋಜಿಸಿ ಪರ್ಯಾಯ ವ್ಯವಸ್ಥೆ ಸಿದ್ಧ ಮಾಡಿಟ್ಟುಕೊಳ್ಳಬೇಕು. ಆದರೆ ಅದು ಆಗಿಲ್ಲ. ಇದು ಪ್ರಧಾನಿಗಳ ಭದ್ರತೆಯಲ್ಲಿನ ಭಾರೀ ಲೋಪ. ಘಟನೆ ಕುರಿತು ತಕ್ಷಣವೇ ವರದಿಗೆ ಹಾಗೂ ಭದ್ರತಾ ಲೋಪಕ್ಕೆ ಕಾರಣರಾದವರ ವಿರುದ್ಧ ಸೂಕ್ತ ಕ್ರಮಕ್ಕೆ ಸೂಚಿಸಲಾಗಿದೆ’ ಎಂದಿದೆ.