*ಜನ ಜಾಸ್ತಿ ಸೇರಿಲ್ಲ ಅಂತ ಮೋದಿ ವಾಪಸ್ ಹೋದರು
*ದಲಿತ ಸಿಎಂ ಎದುರಿಸಲಾಗದೆ ರಾಜಕೀಯ ಕುತಂತ್ರ
*ಪಾಕಿಸ್ತಾನದ ಗಡಿಯಲ್ಲಿ ಏಕೆ ಸಮಾವೇಶ ಮಾಡಿದರು?
ಬೆಂಗಳೂರು (ಜ. 7): ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಭದ್ರತಾ ವೈಫಲ್ಯದಲ್ಲಿ (PM Modi Security Lapse) ಪಂಜಾಬ್ ಸರ್ಕಾರದಿಂದ ತಪ್ಪಾಗಿಲ್ಲ. ಇದು ಕೇಂದ್ರದ ಭದ್ರತಾ ಪಡೆಗಳ ಲೋಪವೇ ಹೊರತು ರಾಜ್ಯ ಸರ್ಕಾರದ್ದಲ್ಲ. ತಮ್ಮ ಸಮಾವೇಶಕ್ಕೆ ಜನ ಸೇರಿಲ್ಲ ಎಂಬ ಕಾರಣಕ್ಕೆ ವಾಪಸ್ ಹೋದ ಪ್ರಧಾನಿಯವರು ದಲಿತ ಮುಖ್ಯಮಂತ್ರಿ ಮೇಲೆ ಆರೋಪ ಮಾಡಿ ಪ್ರಚಾರ ಪಡೆದುಕೊಳ್ಳಲು ಯತ್ನಿಸಿದ್ದಾರೆ ಎಂದು ರಾಜ್ಯಸಭೆ ವಿರೋಧಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಕಿಡಿಕಾರಿದ್ದಾರೆ.
ಪಂಜಾಬ್ ರಾಜ್ಯದ ಮೊದಲ ದಲಿತ ಮುಖ್ಯಮಂತ್ರಿ ಚನ್ನಿ (Charanjit Singh Channi) ಅವರನ್ನು ರಾಜಕೀಯವಾಗಿ ಎದುರಿಸಲಾಗದೆ ಈ ಕುತಂತ್ರ ಮಾಡಿದ್ದಾರೆ. ತಮ್ಮ ಸಭೆಗೆ 70 ಸಾವಿರ ಜನ ಸೇರುವ ನಿರೀಕ್ಷೆ ಹೊಂದಿದ್ದ ಪ್ರಧಾನಿ 750 ಮಂದಿಯೂ ಸೇರದ ಹಿನ್ನೆಲೆಯಲ್ಲಿ ವಿಚಲಿತರಾಗಿದ್ದರು. ಆ ಸಭೆಯ ಭದ್ರತೆಗೆ ಪೊಲೀಸರೇ 4-5 ಸಾವಿರ ಮಂದಿ ನಿಯೋಜನೆಗೊಂಡಿದ್ದರು. ಆ ಸಿಟ್ಟಿನಿಂದ ರಾಜ್ಯ ಸರ್ಕಾರದ ಮೇಲೆ ಗೂಬೆ ಕೂರಿಸಿದ್ದಾರೆ ಎಂದು ಹೇಳಿದ್ದಾರೆ.
ಬಿಜೆಪಿ ಬಾಯಿಗೆ ಬಂದಂತೆ ಹೇಳಿಕೆ!
ಕೆಪಿಸಿಸಿ ಕಚೇರಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರೊಂದಿಗೆ ಜಂಟಿ ಸುದ್ದಿಗೋಷ್ಠಿ ನಡೆಸಿದ ಅವರು, ಬಿಜೆಪಿಯವರು ಬಾಯಿಗೆ ಬಂದಂತೆ ಹೇಳಿಕೆ ನೀಡಿ ಮಾಧ್ಯಮಗಳನ್ನೂ ತಪ್ಪು ದಾರಿಗೆ ಎಳೆಯುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಪಾಕಿಸ್ತಾನದ ಜತೆ ಕೈಜೋಡಿಸಿ ಪ್ರಧಾನಿ ಹತ್ಯೆ ಸಂಚು ರೂಪಿಸಿದೆ ಎಂದು ಹೇಳಿದ್ದಾರೆ. ಬಿಜೆಪಿ ಈ ರೀತಿಯ ಗಿಮಿಕ್ ರಾಜಕೀಯ ಬಿಡಬೇಕು. ಜನರಿಗೆ ಒಂದು ಅಥವಾ ಎರಡು ಬಾರಿ ಸುಳ್ಳು ಹೇಳಬಹುದು. ಸದಾಕಾಲ ಸುಳ್ಳು ಹೇಳಿಕೊಂಡೇ ಬದುಕಲು ಸಾಧ್ಯವಿಲ್ಲ ಎಂದು ಕಿಡಿಕಾರಿದರು.
ಇದನ್ನೂ ಓದಿ: Kalaburagi: ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಸಂವಿಧಾನಕ್ಕೆ ಆಪತ್ತು: ಖರ್ಗೆ ಆತಂಕ
ಜವಾಹರ್ ಲಾಲ್ ನೆಹರು, ಇಂದಿರಾ ಗಾಂಧಿ, ರಾಜೀವ್ ಗಾಂಧಿ ಸೇರಿದಂತೆ ಈ ಹಿಂದಿನ ಪ್ರಧಾನಿಗಳಿಗಿಂತ ಮೋದಿಗೆ ಅವರಿಗೆ ಹತ್ತುಪಟ್ಟು ಹೆಚ್ಚಿನ ಭದ್ರತೆ ಇದೆ. ವಿದೇಶಿ, ಬುಲೆಟ್ ಪ್ರೂಫ್ ಕಾರಿದ್ದರೂ, ಪಂಜಾಬ್ ಸರ್ಕಾರದ ಮೇಲೆ ಆರೋಪ ಮಾಡಿದ್ದಾರೆ. ಆದರೆ ಅಂತಹ ಪ್ರಧಾನಿಗಳೇ ‘ನಾನು ಪಾರಾದೆ, ಇದೇ ದೊಡ್ಡ ವಿಚಾರ, ನಿಮ್ಮ ಮುಖ್ಯಮಂತ್ರಿಗಳಿಗೆ ಧನ್ಯವಾದ ತಿಳಿಸಿ ಎಂದು ಹೇಳುವುದು ಎಷ್ಟುಸರಿ’ ಎಂದು ಪ್ರಶ್ನಿಸಿದರು.
ಕೇಂದ್ರ ಪಡೆಗಳ ವೈಫಲ್ಯ:
ಪ್ರಧಾನಮಂತ್ರಿ ಬಂದರೆ ಭದ್ರತಾಗಿ ಹತ್ತು ಬಾರಿ ಪರೀಕ್ಷೆ ಮಾಡುತ್ತಾರೆ. ಎಲ್ಲವನ್ನೂ ತಪಾಸಣೆ ನಡೆಸಿದ ಬಳಿಕವೇ ಪ್ರಧಾನಿಯನ್ನು ಬಿಡುತ್ತಾರೆ. ಗುಪ್ತಚರ, ಎಸ್‌ಪಿಜಿ ಹಾಗೂ ಕೇಂದ್ರದ ಅಧಿಕಾರಿಗಳು ಮೊದಲೇ ಅಲ್ಲಿ ಹೋಗಿ, ಪ್ರತಿ ಸ್ಥಳ ಪರಿಶೀಲಿಸಿ, ಎಲ್ಲಿ ಎಷ್ಟುಜನ ಸೇರಬೇಕು ಎಂದು ತೀರ್ಮಾನಿಸಿರುತ್ತಾರೆ. ಪ್ರಧಾನಿಗಳ ಹೆಲಿಕಾಪ್ಟರ್ ಎಲ್ಲಿ ಇಳಿಯಬೇಕು, ಅವರು ಎಲ್ಲಿ ಸಭೆ ಮಾಡುತ್ತಾರೆ, ಯಾರು ಇರಬೇಕು ಎಂಬ ಮಾರ್ಗಸೂಚಿಗಳು ಇವೆ.
ಇದನ್ನೂ ಓದಿ: Congress VS TMC: UPA ನೇತೃತ್ವ ತಿರಸ್ಕರಿಸಿದ ಮಮತಾ: ED, CBI ಭಯದಿಂದ ಈ ಹೇಳಿಕೆ ಎಂದ ಕಾಂಗ್ರೆಸ್!
ಹೆಲಿಕಾಪ್ಟರ್ ಮೂಲಕ ಹೋಗಬೇಕಾದವರು ರಸ್ತೆ ಮಾರ್ಗದಲ್ಲಿ ಹೋಗಲು ತೀರ್ಮಾನಿಸಿದ್ದು ಪ್ರಧಾನಮಂತ್ರಿಗಳು ಹಾಗೂ ಅವರ ಭದ್ರತಾ ಸಿಬ್ಬಂದಿ. ಕೇವಲ 20 ನಿಮಿಷಗಳ ಮುಂಚಿತವಾಗಿ ಪ್ರಯಾಣದ ಮಾರ್ಗ ಬದಲಿಸಿದ್ದರು. ತಮ್ಮ ಸಭೆಗೆ ಜನ ಸೇರಿಲ್ಲ ಎಂಬ ಸಿಟ್ಟಿಂದ ರಾಜ್ಯ ಸರ್ಕಾರದ ಮೇಲೆ ಕ್ಷುಲ್ಲಕ ಆರೋಪ ಮಾಡುವುದು ಸರಿಯಲ್ಲ ಎಂದು ದೂರಿದರು.
ಪಾಕಿಸ್ತಾನದ ಗಡಿಯಲ್ಲಿ ಏಕೆ ಸಮಾವೇಶ ಮಾಡಿದರು?
ಪಾಕಿಸ್ತಾನ ಗಡಿಗೆ ಹತ್ತಿರವಿರುವ ಪ್ರದೇಶ ಇದಾಗಿದ್ದು ಕ್ಷಿಪಣಿ ದಾಳಿಗೆ ಸೂಕ್ತ ಜಾಗ ಎಂಬ ಆರೋಪದ ಬಗ್ಗೆ ಕೇಳಿದ ಪ್ರಶ್ನೆಗೆ, ಪಾಕಿಸ್ತಾನ ಗಡಿ ಪ್ರದೇಶದಲ್ಲಿ ಕಾರ್ಯಕ್ರಮ ಇಟ್ಟಿದ್ದು, ಕಾಂಗ್ರೆಸ್‌ನವರಾ ಅಥವಾ ಬಿಜೆಪಿಯವರಾ? ಸುಮ್ಮನೆ ಇಂತಹ ಆರೋಪ ಯಾಕೆ ಮಾಡುತ್ತೀರಿ? ಎಂದು ಮಲ್ಲಿಕಾರ್ಜುನ ಖರ್ಗೆ ಪ್ರಶ್ನಿಸಿದರು.