RSS  ವಾರ್ಷಿಕ ಸಭೆ; ಕೊರೋನಾ ಮತ್ತು ರಾಮಮಂದಿರ ಅಭಿಯಾನ ತಿಳಿಸಿದ ಸಂದೇಶ

By Suvarna NewsFirst Published Mar 19, 2021, 2:52 PM IST
Highlights

ಆರ್‌ಎಸ್‌ಎಸ್ ವಾರ್ಷಿಕ ಸಭೆ/ ಕೊರೋನಾ ಮತ್ತು ರಾಮಮಂದಿರ ಅಭಿಯಾನದ ಕಾಲದ ಸೇವೆಗಳು/  92,656 ಕೇಂದ್ರಗಳಲ್ಲಿ ಸುಮಾರು 5,07,000 ಕಾರ್ಯಕರ್ತರು ಲಾಕ್ ಡೌನ್ ಸಂದರ್ಭದ ನೆರವಿಗೆ ಧಾವಿಸಿದ್ದರು/ ಬಹುತೇಕ ಶಾಖೆಗಳು ಕೆಲಸ ಮಾಡುತ್ತಲೇ ಬಂದಿವೆ

ಬೆಂಗಳೂರು(ಮಾ. 19)    ಕೊರೋನಾ ಮತ್ತು ರಾಮಮಂದಿರ ಅಭಿಯಾನ ಸಂದರ್ಭ ದೇಶದ ಸ್ಥಿತಿಸ್ಥಾಪಕತ್ವ ಮತ್ತು ಭಾರತೀಯ ಸಮಾಜದ ಸಾಂಸ್ಕೃತಿಕ ಏಕತೆ  ಎಲ್ಲರ ಅರಿವಿಗೆ ಬಂದಿದೆ ಎಂದು  ಆರ್‌ ಎಸ್‌ ಎಸ್ ಸಹ ಸರಕಾರ್ಯವಾಹ ಡಾ. ಮನಮೋಹನ ವೈದ್ಯ ಹೇಳಿದ್ದಾರೆ.

ಬೆಂಗಳೂರಿನ ಚನ್ನೇನಹಳ್ಳಿಯ ಜನಸೇವಾ ವಿದ್ಯಾಕೇಂದ್ರದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ವಾರ್ಷಿಕ ಸಭೆ ಎಬಿಪಿಎಸ್ (ಅಖಿಲ ಭಾರತೀಯ ಪ್ರತಿನಿಧಿ ಸಭಾ)  ಉದ್ಘಾಟನೆಯಲ್ಲಿ ಮಾತನಾಡಿ ಸಂಘದ ಚಟುವಟಿಕೆಗಳ ವರದಿ ನೀಡಿದರು. ಕೊರೋನಾ ಲಾಕ್ ಡೌನ್ ನ ಸಂದರ್ಭದಲ್ಲಿ ಮಾರ್ಚ್ ನಿಂದ ಜೂನ್ ವರೆಗೆ ಆರೆಸ್ಸೆಸ್ ನ ಶಾಖೆಗಳು ಸಂಪೂರ್ಣ ಬಂದ್ ಆಗಿತ್ತು. ಆದರೆ, ಲಾಕ್ ಡೌನ್ ಪ್ರಾರಂಭವಾದ ದಿನದಿಂದಲೇ ಸಂಘದ ಸ್ವಯಂಸೇವಕರು ಸೇವಾಕಾರ್ಯವನ್ನು ಪ್ರಾರಂಭಿಸಿದ್ದರು.

ಪಾಕ್ ವಿಭಜನೆ; ಭಾಗವತ್ ಹೇಳಿದ್ದಿಷ್ಟು

ಪಶ್ಚಿಮದ ದೇಶಗಳಲ್ಲಿ ವೆಲ್ ಫೇರ್ ಸ್ಟೇಟ್ ಕಲ್ಪನೆಯಿದೆ. ಅಲ್ಲಿ ಸಮಾಜದ ಅಗತ್ಯಗಳನ್ನು ಸರ್ಕಾರವೇ ಪೂರೈಸುತ್ತದೆ. ಆದರೆ, ನಮ್ಮದು ರಾಷ್ಟ್ರದ ಕಲ್ಪನೆ. ಅಂದರೆ, ಸರ್ಕಾರ ಯಾವುದೇ ಇದ್ದರೂ ಸಮಾಜದಲ್ಲಿ ಏಕತೆಯಿದೆ. ಸಮಾಜ ತನ್ನ ಜವಾಬ್ದಾರಿಯನ್ನು ತಾನೇ ತೆಗೆದುಕೊಳ್ಳುತ್ತದೆ. ಎಲ್ಲದಕ್ಕೂ ಸರ್ಕಾರದ ಮೇಲೆ ಅವಲಂಬನೆಯಿಲ್ಲ. ಕೊರೊನಾ ಸಂದರ್ಭದಲ್ಲಿ ಇದು ಅತ್ಯಂತ ಸ್ಪಷ್ಟವಾಗಿ ಎಲ್ಲರ ಗಮನಕ್ಕೆ ಬಂದಿದೆ. ಸರ್ಕಾರದ ಜೊತೆಗೆ ಸಮಾಜದ ಬೇರೆ ಬೇರೆ ಸಂಘ ಸಂಸ್ಥೆಗಳು ಸೇರಿ ಸೇವಾಕಾರ್ಯ ಮಾಡಿದವು. ಸಂಘದ ಸ್ವಯಂಸೇವಕರು, ಸ್ವತಃ ತಮಗೆ ಕೊರೋನಾ ಹರಡುವ ಅಪಾಯ ಇದ್ದರೂ ಕೂಡ ಸೇವಾ ಕಾರ್ಯದಲ್ಲಿ ತೊಡಗಿದ್ದರು ಎಂದು ತಿಳಿಸಿದರು.

92,656 ಕೇಂದ್ರಗಳಲ್ಲಿ ಸುಮಾರು 5,07,000 ಕಾರ್ಯಕರ್ತರು ಲಾಕ್ ಡೌನ್ ಸಂದರ್ಭದಲ್ಲಿ ಸಂತ್ರಸ್ತರ ನೆರವಿಗೆ ಧಾವಿಸಿದರು. 73 ಲಕ್ಷ ರೇಷನ್ ಕಿಟ್, 4.5 ಕೋಟಿ ಫುಡ್ ಪ್ಯಾಕೆಟ್, 90 ಲಕ್ಷ ಮಾಸ್ಕ್ ವಿತರಿಸಿದರು. 60,000 ಯೂನಿಟ್ ರಕ್ತದಾನ ನಡೆಯಿತು. 30 ಲಕ್ಷ ವಲಸೆ ಕಾರ್ಮಿಕರಿಗೆ ಸಹಾಯ ಮಾಡಲಾಯಿತು. ಸಂಘದ ಜತೆಗೆ ನೂರಾರು ಮಠಮಂದಿರಗಳು, ಅನೇಕ ಸಂಘ ಸಂಸ್ಥೆಗಳು ಕೊರೊನಾದಿಂದ ತೊಂದರೆಗೊಳಗಾದವರ ಸೇವೆ ಮಾಡಲು  ನೆರವು ನೀಡಿದವು ಎಂದರು.

ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.  89ರಷ್ಟು ಶಾಖೆಗಳು ಕೊರೋನಾ ಬಳಿಕ ಪುನರಾರಂಭಗೊಂಡಿವೆ. ದೇಶದ 6,495 ತಾಲೂಕುಗಳಲ್ಲಿ ಶೇ. 85 ತಾಲೂಕುಗಳಲ್ಲಿ ಸಂಘದ ಶಾಖೆಗಳು ನಡೆಯುತ್ತಿವೆ. 58,500 ಮಂಡಲಗಳಲ್ಲಿ ಶೇ. 60 ಮಂಡಲಗಳಲ್ಲಿ ಶಾಖೆ ಅಥವಾ ವಿವಿಧ ರೀತಿಯ ಸಂಘದ ಚಟುವಟಿಕೆಗಳಿವೆ. ಮುಂದಿನ ಮೂರು ವರ್ಷಗಳಲ್ಲಿ ಎಲ್ಲ ಮಂಡಲಗಳಲ್ಲಿ ಶಾಖೆಗಳನ್ನು ಪ್ರಾರಂಭಿಸುವ ಯೋಜನೆಯಿದೆ ಎಂದು ಡಾ. ವೈದ್ಯ ಅವರು ವಿವರಿಸಿದರು.

ದೇಶದಲ್ಲಿ ನಡೆಯುತ್ತಿರುವ ಒಟ್ಟು ಶೇ.  89 ಶಾಖೆಗಳಲ್ಲಿ ಯುವಕರು ಮತ್ತು ಬಾಲಕರು ಭಾಗವಹಿಸುವ ಶಾಖೆಗಳಿವೆ.  ಶೇ. 11ರನಷ್ಟು ಶಾಖೆಗಳು 40 ವರ್ಷಕ್ಕಿಂತ ಮೇಲ್ಪಟ್ಟ ಉದ್ಯೋಗಿಗಳು ಹಾಜರಿರುವ ಶಾಖೆಗಳಿವೆ ಎಂದು ಅವರು ತಿಳಿಸಿದರು.

ಎಬಿಪಿಎಸ್ ನಲ್ಲಿ ಕೈಗೊಳ್ಳಲಿರುವ ನಿರ್ಣಯ: ಕೊರೊನಾ ಸಂದರ್ಭದಲ್ಲಿ ಸಂಪೂರ್ಣ ಸಮಾಜ ಜೊತೆಗೂಡಿ ಸೇವೆಯಲ್ಲಿ ತೊಡಗಿತ್ತು. ಸಮಾಜ ತೋರಿಸಿದ ಈ ಏಕತೆ ಮತ್ತು ಸೇವಾಭಾವ ಅಭಿನಂದನೀಯವಾದದ್ದು. ಇದರ ಬಗ್ಗೆ ಚರ್ಚೆ ನಡೆದು ಸಭೆ ನಿರ್ಣಯ ಕೈಗೊಳ್ಳಲಿದೆ ಎಂಬ ಮಾಹಿತಿ ನೀಡಿದರು.

ಹಾಗೆಯೇ, ಇತ್ತೀಚೆಗೆ ದೇಶಾದ್ಯಂತ ಶ್ರೀರಾಮ ಜನ್ಮಭೂಮಿ ನಿಧಿ ಸಮರ್ಪಣಾ ಅಭಿಯಾನ ಯಶಸ್ವಿಯಾಗಿ ನಡೆದಿದೆ. ಈ ಅಭಿಯಾನದಲ್ಲಿ 5,45,737 ಗ್ರಾಮನಗರಗಳನ್ನು 20 ಲಕ್ಷ ಕಾರ್ಯಕರ್ತರು ತಲುಪಿದ್ದಾರೆ. ಈ ವಿಷಯದ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆದು ನಿರ್ಣಯ ಕೈಗೊಳ್ಳಲಿದೆ ಎಂದು ಅವರು ತಿಳಿಸಿದರು.

ರಾಮಮಂದಿರ ನಿರ್ಮಾಣ ಹೊಣೆ ಕನ್ನಡಿಗನಿಗೆ

ಇಂದು ಸಮಾಜದಲ್ಲಿ ಸಂಘದ ಬಗ್ಗೆ ಹೆಚ್ಚು ತಿಳಿದುಕೊಳ್ಳುವ ಉತ್ಸಾಹವಿದೆ. ಸಂಘದೊಂದಿಗೆ ಸೇರಿ ಕೆಲಸ ಮಾಡುವ ಯುವಸಮೂಹದ ಸಂಖ್ಯೆಯೂ ಕೂಡಾ ಹೆಚ್ಚಾಗಿದೆ. ಮುಂದಿನ ಮೂರು ವರ್ಷಗಳಲ್ಲಿ ಶಾಖೆಗಳ ಸಂಖ್ಯೆ, ಗುಣಮಟ್ಟ ಹೆಚ್ಚಿಸುವ ಬಗ್ಗೆ, ಯುವಕರನ್ನು ಜೋಡಿಸುವ ಬಗ್ಗೆ ಈ ಸಭೆಯಲ್ಲಿ ಚರ್ಚೆ ನಡೆಯಲಿದೆ.

450 ಪ್ರತಿನಿಧಿಗಳು ಇಲ್ಲಿನ ಸಭೆಯಲ್ಲಿ ಭಾಗವಹಿಸುತ್ತಿದ್ದು, ಉಳಿದ 1,000 ದಷ್ಟು ಪ್ರತಿನಿಧಿಗಳು ತಮ್ಮ ತಮ್ಮ ರಾಜ್ಯಗಳಲ್ಲಿ ಆನ್ ಲೈನ್ ನಲ್ಲಿ ಭಾಗವಹಿಸುತ್ತಿದ್ದಾರೆ ಎಂದು ಡಾ. ಮನಮೋಹನ್ ವೈದ್ಯ ಅವರು ತಿಳಿಸಿದರು.

ಆರ್‌ ಎಸ್ ಎಸ್  ಅಖಿಲ ಭಾರತೀಯ ಪ್ರಚಾರ ಪ್ರಮುಖ್ ಅರುಣ್ ಕುಮಾರ್, ಸಹ ಪ್ರಚಾರ ಪ್ರಮುಖ್ ನರೇಂದ್ರ ಠಾಕೂರ್ ಮತ್ತು ಸುನಿಲ್ ಅಂಬೇಕರ್ ಹಾಗೂ ಕರ್ನಾಟಕ ದಕ್ಷಿಣ ಪ್ರಾಂತ ಪ್ರಚಾರ ಪ್ರಮುಖ್ ಇ. ಎಸ್. ಪ್ರದೀಪ್ ಉಪಸ್ಥಿತರಿದ್ದರು.

click me!