
ನವದೆಹಲಿ: ದೆಹಲಿ ಹೈಕೋರ್ಟ್‌ನ ಹಾಲಿ ನ್ಯಾಯಾಧೀಶ ನ್ಯಾ। ಯಶವಂತ್ ವರ್ಮಾ ಅವರ ಮನೆಯಲ್ಲಿ ಕಂತೆ ಕಂತೆ ಹಣ ಪತ್ತೆಯಾಗಿದೆ ಎಂಬ ಆರೋಪದ ತನಿಖೆ ನಡೆಸಲು ಭಾರತದ ಮುಖ್ಯ ನ್ಯಾಯಾಧೀಶರು ತ್ರಿಸದಸ್ಯ ಆಂತರಿಕ ತನಿಖಾ ಸಮಿತಿ ರಚಿಸಿದ್ದಾರೆ. ಇದಲ್ಲದೆ ಆರೋಪಿ ನ್ಯಾಯಾಧೀಶ ನ್ಯಾ। ವರ್ಮಾ ಅವರಿಗೆ ಯಾವುದೇ ಕರ್ತವ್ಯ ವಹಿಸಬಾರದು ಎಂದು ಸಿಜೆಐ ಸೂಚಿಸಿದ್ದಾರೆ.
ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನ ಮುಖ್ಯ ನ್ಯಾಯಾಧೀಶರಾದ ನ್ಯಾಯಮೂರ್ತಿ ಶೀಲ್ ನಾಗು, ಹಿಮಾಚಲ ಪ್ರದೇಶ ಹೈಕೋರ್ಟ್‌ನ ಮುಖ್ಯ ನ್ಯಾ। ಜಿ.ಎಸ್. ಸಂಧವಾಲಿಯಾ ಮತ್ತು ಕರ್ನಾಟಕ ಹೈಕೋರ್ಟ್ ನ್ಯಾ। ಅನು ಶಿವರಾಮನ್ ಅವರು ಸಮಿತಿಯಲ್ಲಿದ್ದಾರೆ. ನ್ಯಾ। ವರ್ಮಾ ಬಗ್ಗೆ ಆಂತರಿಕ ತನಿಖಾ ವರದಿಯನ್ನು ದೆಹಲಿ ಹೈ ಕೋರ್ಟ್ ಮುಖ್ಯ ನ್ಯಾ। ಡಿ.ಕೆ. ಉಪಾಧ್ಯಾಯ್ ಅವರು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾ। ಸಂಜೀವ್ ಖನ್ನಾ ಅವರಿಗೆ ಶುಕ್ರವಾರ ಸಲ್ಲಿಸಿದ್ದರು. ಈ ವರದಿ ಆಧರಿಸಿ ಕ್ರಮ ಜರುಗಿಸಲಾಗಿದೆ.
ಮಾ.14ರಂದು ವರ್ಮಾ ಅವರ ಮನೆಗೆ ಬಿದ್ದ ಬೆಂಕಿ ನಂದಿಸಲು ತೆರಳಿದ್ದ ಅಗ್ನಿಶಾಮಕ ಸಿಬ್ಬಂದಿಗೆ ನೋಟಿನ ಕಂತೆಗಳು ಕಂಡುಬಂದಿದ್ದವು ಎಂದು ವರದಿಯಾಗಿತ್ತು. ಇದರ ಬೆನ್ನಲ್ಲೇ ವರ್ಮಾ ಅವರನ್ನು ಅಲಹಾಬಾದ್ ಹೈಕೋರ್ಟ್‌ಗೆ ವರ್ಗ ಮಾಡಲಾಗಿತ್ತು.
ಇದನ್ನೂ ಓದಿ: ಕೇಂದ್ರ ಸರ್ಕಾರದ ಪ್ರಸ್ತಾವಿತ ಲೋಕಸಭಾ ಕ್ಷೇತ್ರ ಮರು ವಿಂಗಡಣೆ ವಿರುದ್ಧ ದಕ್ಷಿಣ ರಾಜ್ಯಗಳ ರಣಕಹಳೆ
ನ್ಯಾ। ವರ್ಮಾ ವಿರುದ್ಧ 2018ರಲ್ಲೂ ಕೇಸ್ ಆಗಿತ್ತು
ಮನೆಯಲ್ಲಿ ಕಂತೆ ಕಂತೆ ನೋಟು ಪತ್ತೆ ಪ್ರಕರಣದಲ್ಲಿ ವಿವಾದದಿಂದ ಸುದ್ದಿಯಾಗಿರುವ ದೆಹಲಿ ಹೈಕೋರ್ಟ್ ನ್ಯಾಯಾಧೀಶ ಯಶವಂತ್ ವರ್ಮಾ ಅವರ ಮೇಲೆ, 2018ರಲ್ಲಿ ಹಣಕಾಸು ಅಕ್ರಮಕ್ಕೆ ಸಂಬಂಧಿಸಿದಂತೆ ಸಿಬಿಐ ಎಫ್‌ಐಆರ್ ಹಾಕಿತ್ತು ಎಂದು ತಿಳಿದುಬಂದಿದೆ.ಉತ್ತರ ಪ್ರದೇಶದ ಸಿಂಭೋಲಿ ಶುಗರ್ ಮಿಲ್ ಸಂಸ್ಥೆಯು ರೈತರಿಗೆ ನೀಡಬೇಕಿದ್ದ 97.85 ಕೋಟಿ ರು. ಸಾಲದ ಪ್ರಯೋಜನಗಳನ್ನು ಬೇರೆ ಉದ್ದೇಶಕ್ಕೆ ದುರುಪಯೋಗಪಡಿಸಿಕೊಂಡಿದೆ ಎಂದು ಆರೋಪಿಸಿ ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ 2018ರಲ್ಲಿ ದೂರು ನೀಡಿತ್ತು. ಈ ಸಂಬಂಧ ಸಿಬಿಐ ತನಿಖೆ ಆರಂಭಿಸಿತ್ತು. ಶಿಂಭೋಲಿ ಶುಗರ್ಸ್‌ನಲ್ಲಿ ಆ ಸಮಯದಲ್ಲಿ ನಾನ್-ಎಕ್ಸಿಕ್ಯೂಟಿವ್ ಡೈರೆಕ್ಟರ್ ಆಗಿದ್ದ ನ್ಯಾ. ವರ್ಮಾ ಅವರನ್ನು ಆರೋಪಿ ನಂ.10 ಎಂದು ಸಿಬಿಐ ಹೆಸರಿಸಿತ್ತು.
ಕೃಷಿ ಉಪಕರಣಗಳ ಖರೀದಿಸಿ ರೈತರಿಗೆ ವಿತರಿಸಲು ಕಂಪನಿಯು ಸಾಲಪಡೆದಿದ್ದು, ಬಳಿಕ ಆ ಹಣವನ್ನು ಬೇರೆ ಖಾತೆಗೆ ವರ್ಗಾಯಿಸಿತ್ತು ಎಂಬ ಆರೋಪ ಅದಾಗಿತ್ತು.ಇಷ್ಟಾದರೂ ಸಿಬಿಐ ತನಿಖೆ ಪ್ರಗತಿ ಕಂಡಿರಲಿಲ್ಲ. 2024ರಲ್ಲಿ ಅಲಹಾಬಾದ್ ಹೈಕೋರ್ಟ್, ಕಂಪನಿ ವಿರುದ್ಧ ಮರು ತನಿಖೆಗೆ ಸೂಚಿಸಿತ್ತು. ಕಂಪನಿಯು ಸಾಲ ಮರುಪಾವತಿಸುವಲ್ಲಿ ವಿಫಲವಾಗಿದ್ದರೂ ಏಕೆ ಹಲವು ಬ್ಯಾಂಕ್‌ಗಳು ಈ ಸಂಸ್ಥೆಗೆ ಸಾಲ ಮುಂದುವರಿಸಿವೆ ಎಂದು ಪತ್ತೆ ಹಚ್ಚಲು ನಿರ್ದೇಶಿಸಿತ್ತು. ಆದರೆ ನಂತರ ಸುಪ್ರೀಂ ಕೋರ್ಟು ತನಿಖೆ ಸ್ಥಗಿತಕ್ಕೆ ಆದೇಶಿಸಿ ಬಿ-ರಿಪೋರ್ಟ್‌ಗೆ ಸೂಚಿಸಿತ್ತು. ಹೀಗಾಗಿ ತನಿಖೆ ಇಲ್ಲದೇ ನ್ಯಾ। ವರ್ಮಾ ಬಚಾವಾಗಿದ್ದರು
ಇದನ್ನೂ ಓದಿ: ಮಣಿಪುರಕ್ಕೆ ಸುಪ್ರೀಂ ಜಡ್ಜ್ ಭೇಟಿ; ದೇಶಭ್ರಷ್ಟ ಚೋಕ್ಸಿ ಬೆಲ್ಜಿಯಂನಲ್ಲಿ ಪ್ರತ್ಯಕ್ಷ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ