
ಸೌದಿ ಅರೇಬಿಯಾದಲ್ಲಿ ಭಾರತೀಯ ಮೆಕ್ಕಾ ಮದೀನಾ ಉಮ್ರಾ ಯಾತ್ರಿಗಳಿದ್ದ ಬಸ್ ದುರಂತದಲ್ಲಿ ಮೃತಪಟ್ಟ 45 ಭಾರತೀಯರ ಶವಗಳನ್ನು ಭಾರತಕ್ಕೆ ತರಲಾಗುವುದಿಲ್ಲ ಎಂದು ತಿಳಿದು ಬಂದಿದೆ. ಮೃತರ ಶವಗಳನ್ನು ಅಲ್ಲೇ ಅಂತ್ಯಸಂಸ್ಕಾರ ನಡೆಸಲಾಗುತ್ತದೆ ಎಂದು ವರದಿಯಾಗಿದೆ. ನಿನ್ನೆ ನಸುಕಿನ ಜಾವ 1.30ರ ಸುಮಾರಿಗೆ ಭಾರತೀಯ ಮೆಕ್ಕಾ ಯಾತ್ರಿಗಳನ್ನು ಕರೆದೊಯ್ಯುತ್ತಿದ್ದ ಬಸ್ ಡೀಸೆಲ್ ಟ್ಯಾಂಕರ್‌ಗೆ ಡಿಕ್ಕಿ ಹೊಡೆದ ಬಳಿಕ ಬಸ್‌ನಲ್ಲಿದ್ದ ಓರ್ವನನ್ನು ಹೊರತುಪಡಿಸಿ 45 ಪ್ರಯಾಣಿಕರು ಸಾವನ್ನಪ್ಪಿದ್ದರು. ಇವರ ಶವಗಳನ್ನು ಭಾರತಕ್ಕೆ ತರದಿರಲು ನಿರ್ಧರಿಸಲಾಗಿದೆ ಎಂದು ವರದಿಯಾಗಿದೆ.
ಈ ದುರಂತದಲ್ಲಿ ಮೃತಪಟ್ಟವರ ಅಂತ್ಯಕ್ರಿಯೆಯನ್ನು ಸೌದಿ ಅರೇಬಿಯಾದಲ್ಲಿ ಧಾರ್ಮಿಕ ಪದ್ಧತಿಗಳ ಪ್ರಕಾರವೇ ನಡೆಸಲು ತೆಲಂಗಾಣ ಸಚಿವ ಸಂಪುಟ ನಿನ್ನೆ ನಿರ್ಧರಿಸಿದೆ. ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಪ್ರತಿ ಕುಟುಂಬದಿಂದ ಇಬ್ಬರು ಸದಸ್ಯರನ್ನು ಸೌದಿ ಅರೇಬಿಯಾಕ್ಕೆ ಕಳುಹಿಸಲಾಗುವುದು ಎಂದು ತೆಲಂಗಾಣ ಸರ್ಕಾರ ಹೇಳಿದೆ. ಶವಗಳ ಹಸ್ತಾಂತರದ ವಿಚಾರದಲ್ಲಿ ಸೌದಿ ಅರೇಬಿಯಾ ಕಠಿಣ ಕಾನೂನುಗಳನ್ನು ಹೊಂದಿರುವುದರಿಂದ ಶವಗಳನ್ನು ಹೊರತರುವುದು ಬಹಳ ಕಷ್ಟಕರವಾಗಿದೆ. ಎಲ್ಲ ಕಾನೂನು ಪ್ರಕ್ರಿಯೆಗಳನ್ನು ಮುಗಿಸುವುದಕ್ಕೆ ಹಲವು ತಿಂಗಳುಗಳೇ ಹಿಡಿಯಬಹುದು ಈ ಹಿನ್ನೆಲೆಯಲ್ಲಿ ಅಲ್ಲೇ ಶವಗಳಿಗೆ ಅಂತ್ಯಸಂಸ್ಕಾರ ಮಾಡುವುದಕ್ಕೆ ನಿರ್ಧರಿಸಲಾಗಿದೆ ಎಂದು ವರದಿಯಾಗಿದೆ.
ಸೌದಿ ಸರ್ಕಾರದಿಂದ ಮೃತರಿಗೆ ಪರಿಹಾರವೂ ಸಿಗಲ್ಲ:
ಕೆಲವು ಮಾಧ್ಯಮ ವರದಿಗಳ ಪ್ರಕಾರ, ದುರಂತದಲ್ಲಿ ಮೃತರಾದವರ ಸಂಬಂಧಿಕರಿಗೆ ತೆಲಂಗಾಣ ಸರ್ಕಾರವೂ ಎರಡು ಆಯ್ಕೆಗಳನ್ನು ನೀಡಲಿದೆ. ಒಂದು ಶವಗಳನ್ನು ಭಾರತಕ್ಕೆ ತರುವ ಅಥವಾ ಮದೀನಾದಲ್ಲೇ ಹೂಳುವ ಆಯ್ಕೆಯನ್ನು ನೀಡಲಾಗುತ್ತದೆ ಎಂದು ವರದಿಯಾಗಿದೆ. ಇದರ ಜೊತೆಗೆ ಸೌದಿ ಅರೇಬಿಯಾದಲ್ಲಿ ರಸ್ತೆ ಅಪಘಾತಗಳಿಗೆ ಸರ್ಕಾರವೂ ನೇರವಾಗಿ ಸರ್ಕಾರಿ ಪರಿಹಾರವನ್ನು ನೀಡುವುದಿಲ್ಲ, ಈ ಹಿನ್ನೆಲೆಯಲ್ಲಿ ಮೃತರ ಕುಟುಂಬದವರಿಗೆ ತಕ್ಷಣ ಪರಿಹಾರ ಪಡೆಯುವುದು ಸಹ ಕಷ್ಟಕರವಾಗಿದೆ. ಪೊಲೀಸ್ ತನಿಖೆಯಲ್ಲಿ ಟ್ಯಾಂಕರ್ ಚಾಲಕನದ್ದೇ ಅಥವಾ ಕಂಪನಿಯದ್ದೇ ತಪ್ಪೆಂದು ಸಾಬೀತಾದಲ್ಲಿ ಮಾತ್ರ ಕುಟುಂಬಗಳು ಕಾನೂನು ಕೇಸ್ ಹಾಕಿದರೆ ಮಾತ್ರ ಪರಿಹಾರವನ್ನು ಪಡೆಯಬಹುದು. ಈ ಪ್ರಕ್ರಿಯೆಯು ಹಲವಾರು ತಿಂಗಳುಗಳನ್ನು ತೆಗೆದುಕೊಳ್ಳಬಹುದು.
ಮೃತರ ಶವ ಸ್ವದೇಶಕ್ಕೆ ತರಲ್ಲ ಯಾಕೆ?
ಸೌದಿ ಅರೇಬಿಯಾದ ಹಜ್ ಮತ್ತು ಉಮ್ರಾ ಸಚಿವಾಲಯದ ಪ್ರಕಾರ, ಯಾತ್ರಿಕರು ಪ್ರಯಾಣ ಆರಂಭಿಸುವ ಮೊದಲೇ ಕೆಲವು ಘೋಷಣೆಗಳಿರುವ(declaration) ಪೇಪರ್‌ಗಳಿಗೆ ಸಹಿ ಹಾಕಬೇಕಾಗುತ್ತದೆ. ಇದರ ಪ್ರಕಾರ ಸೌದಿ ಅರೇಬಿಯಾದ ನೆಲದಲ್ಲಿ (ಮೆಕ್ಕಾ, ಮದೀನಾ ಅಥವಾ ಬೇರೆಡೆ) ಯಾತ್ರಿಕರು ಸತ್ತರೆ, ಅವರ ದೇಹವನ್ನು ಅಲ್ಲಿಯೇ ಸಮಾಧಿ ಮಾಡಲಾಗುತ್ತದೆ ಎಂದು ಸ್ಪಷ್ಟವಾಗಿ ಹೇಳಲಾಗಿದೆ.
ಭಾರತ ಸರ್ಕಾರದ ಪ್ರಕಾರ, ಯಾತ್ರಿಕರಲ್ಲದ ಭಾರತೀಯರು ಸೌದಿ ಅರೇಬಿಯಾದಲ್ಲಿ ಮರಣ ಹೊಂದಿದರೆ, ಮೃತರ ಕಾನೂನುಬದ್ಧ ಉತ್ತರಾಧಿಕಾರಿಗಳ ಇಚ್ಛೆಗೆ ಅನುಗುಣವಾಗಿ ಶವವನ್ನು ಭಾರತಕ್ಕೆ ತರಬಹುದು ಅಥವಾ ಸೌದಿ ಅರೇಬಿಯಾದಲ್ಲಿ ಸಮಾಧಿ ಮಾಡಬಹುದು. ಆದರೆ ಮೆಕ್ಕಾ ಮದೀನಾ ಉಮ್ರಾಗೆಂದು ಹೋದವರು ಅಲ್ಲೇ ಸಾವನ್ನಪ್ಪಿದ್ದರೆ ಯಾವುದೇ ಕಾರಣಕ್ಕೂ ಅವರ ಶವವನ್ನು ಸ್ವದೇಶಕ್ಕೆ ಹಿಂತಿರುಗಿಸಲಾಗುವುದಿಲ್ಲ, ಯಾತ್ರೆಯ ಆರಂಭಕ್ಕೂ ಮೊದಲೇ ಯಾತ್ರಿಕರು ಇದರ ಬಗ್ಗೆ ಘೋಷಣೆ ಮಾಡಿ ಪೇಪರ್‌ಗಳಿಗೆ ಸಹಿ ಹಾಕಿರುತ್ತಾರೆ.
ದುರಂತ ನಡೆದಿದ್ದು ಹೇಗೆ?
ಮೆಕ್ಕಾದಿಂದ ಮದೀನಾಕ್ಕೆ ಭಾರತೀಯ ಉಮ್ರಾ ಯಾತ್ರಿಕರನ್ನು ಕರೆದೊಯ್ಯುತ್ತಿದ್ದ ಬಸ್ ರಸ್ತೆಯ ಬದಿಯಲ್ಲಿ ನಿಂತಿದ್ದಾಗ ವೇಗವಾಗಿ ಬಂದ ಡೀಸೆಲ್ ಟ್ಯಾಂಕರ್ ಹಿಂದಿನಿಂದ ಬಸ್‌ಗೆ ಡಿಕ್ಕಿ ಹೊಡೆದಿತ್ತು. ಈ ದುರಂತದಲ್ಲಿ ಮೃತರಾದ ಬಹುತೇಕರು ಹೈದರಾಬಾದ್‌ನವರು. ಮದೀನಾದಿಂದ ಸುಮಾರು 25 ಕಿಲೋಮೀಟರ್ ದೂರದಲ್ಲಿರುವ ಮುಹ್ರಾಸ್ ಎಂಬಲ್ಲಿ ಭಾನುವಾರ ಭಾರತೀಯ ಕಾಲಮಾನ ಬೆಳಗಿನ ಜಾವ 1:30 ರ ಸುಮಾರಿಗೆ ಈ ದುರಂತ ಸಂಭವಿಸಿದೆ. ಆ ಸಮಯದಲ್ಲಿ ಅನೇಕ ಪ್ರಯಾಣಿಕರು ನಿದ್ರೆಯಲ್ಲಿದ್ದರು. ಮೃತರಲ್ಲಿ 18 ಮಹಿಳೆಯರು, 17 ಪುರುಷರು ಮತ್ತು 10 ಮಕ್ಕಳು ಸೇರಿದ್ದಾರೆ.
ಅಪಘಾತದಲ್ಲಿ ಒಬ್ಬ ವ್ಯಕ್ತಿ ಮಾತ್ರ ಬದುಕುಳಿದಿದ್ದಾರೆ. ಆತನನ್ನು ಚಾಲಕನ ಪಕ್ಕದಲ್ಲಿ ಕುಳಿತಿದ್ದ ಮೊಹಮ್ಮದ್ ಅಬ್ದುಲ್ ಶೋಯೆಬ್ (24) ಎಂದು ಗುರುತಿಸಲಾಗಿದೆ. ಶೋಯೆಬ್ ಕೂಡ ಭಾರತೀಯನಾಗಿದ್ದಾನೆ. ಅಪಘಾತದಲ್ಲಿ ಶೋಯೆಬ್ ಗಾಯಗೊಂಡಿದ್ದು, ದುರಂತ ನಡೆದ ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸೌದಿಯ ಸರ್ಕಾರಿ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಹಾಗೆಯೇ ಈ ದುರಂತದಲ್ಲಿ ಬಲಿಯಾದವರಲ್ಲಿ 18 ಜನ ಹೈದರಾಬಾದ್‌ನ ಒಂದೇ ಕುಟುಂಬಕ್ಕೆ ಸೇರಿದ್ದಾರೆ. ಶನಿವಾರ ಅವರು ಭಾರತಕ್ಕೆ ಮರಳಬೇಕಿತ್ತು ಅಷ್ಟರಲ್ಲಿ ಈ ದುರಂತ ಸಂಭವಿಸಿದೆ.
ಹೈದರಾಬಾದ್ ಪೊಲೀಸರ ಪ್ರಕಾರ, ನವೆಂಬರ್ 9 ರಂದು 54 ಜನರು ಉಮ್ರಾಗಾಗಿ ಹೈದರಾಬಾದ್‌ನಿಂದ ಸೌದಿ ಅರೇಬಿಯಾಕ್ಕೆ ಹೋಗಿದ್ದರು. ಅವರು ನವೆಂಬರ್ 23 ರಂದು ಹಿಂತಿರುಗಬೇಕಿತ್ತು. ಈ ಪೈಕಿ 4 ಜನರು ಭಾನುವಾರ ಕಾರಿನಲ್ಲಿ ಮದೀನಾಕ್ಕೆ ಪ್ರತ್ಯೇಕವಾಗಿ ಹೋಗಿದ್ದು, ಅವರು ಬದುಕುಳಿದಿದ್ದಾರೆ. ಮೆಕ್ಕಾದಲ್ಲಿ ಅಪಘಾತಕ್ಕೀಡಾದ ಬಸ್‌ನಲ್ಲಿ 46 ಜನರಿದ್ದರು.
ಈ ವಿಚಾರಕ್ಕೆ ಸಂಬಂಧಿಸಿದಂತೆ ರಿಯಾದ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯೊಂದಿಗೆ ಸಂಪರ್ಕದಲ್ಲಿದೆ ಎಂದು ತೆಲಂಗಾಣ ಸರ್ಕಾರ ತಿಳಿಸಿದೆ. ರಾಜ್ಯ ಸರ್ಕಾರ ಮೃತರ ಸಂಬಂಧಿಗಳಿಗೆ ತಲಾ 5 ಲಕ್ಷ ರೂ. ಪರಿಹಾರ ಘೋಷಿಸಿದೆ. ಸಂತ್ರಸ್ತರ ಗುರುತಿಸುವಿಕೆ ಮತ್ತು ಇತರ ಔಪಚಾರಿಕತೆಗಳಲ್ಲಿ ಸಹಾಯ ಮಾಡಲು ರಾಯಭಾರ ಕಚೇರಿಯೊಂದಿಗೆ ನಿಕಟವಾಗಿ ಸಮನ್ವಯ ಸಾಧಿಸುವಂತೆ ಮುಖ್ಯಮಂತ್ರಿ ರೇವಂತ್ ರೆಡ್ಡಿ ದೆಹಲಿಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಇದನ್ನೂ ಓದಿ: ಸ್ಯಾಂಡ್‌ವಿಚ್‌ನಲ್ಲಿ ಸೀಗಡಿ: ಬೆಂಗಳೂರಿನ ಗ್ರಾಹಕಿ 1 ಲಕ್ಷ ನೀಡುವಂತೆ ಪ್ಯಾರಿಸ್ ಪಾಣಿನಿ, ಸ್ವಿಗ್ಗಿಗೆ ಕೋರ್ಟ್ ಆದೇಶ
ಇದನ್ನೂ ಓದಿ: ವೇದಿಕೆಯಲ್ಲಿ ಮಾತು ಮುಗಿಸುತ್ತಿದ್ದಂತೆ ಕುಸಿದು ಬಿದ್ದು ವೆಬ್ ಡೆವಲಪರ್ ಸಾವು: ಕೊನೆಕ್ಷಣ ವೈರಲ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ