
ನವದೆಹಲಿ (ನ.18): ನವೆಂಬರ್ 10 ರಂದು ದೆಹಲಿಯ ಕೆಂಪು ಕೋಟೆ ಬಳಿ ಆತ್ಮಹ*ತ್ಯಾ ದಾಳಿ ನಡೆಸಿದ ಭಯೋತ್ಪಾದಕ ಡಾ. ಉಮರ್ ಅವರ ಹೊಸ ವಿಡಿಯೋವೊಂದು ಬೆಳಕಿಗೆ ಬಂದಿದೆ. ಮಾಧ್ಯಮ ವರದಿಗಳ ಪ್ರಕಾರ, ಭಯೋತ್ಪಾದಕ ಸ್ಫೋಟಕ್ಕೂ ಮುನ್ನ ಈ ವಿಡಿಯೋವನ್ನು ಚಿತ್ರೀಕರಿಸಿದ್ದ. ಅದರಲ್ಲಿ, ಅವರು ಆತ್ಮಹ*ತ್ಯಾ ದಾಳಿಯ ಬಗ್ಗೆ ಚರ್ಚೆ ಮಾಡಿದ್ದಾರೆ. ಇದು ಅವರು ಆತ್ಮಹ*ತ್ಯಾ ದಾಳಿಯನ್ನು ಮುಂಚಿತವಾಗಿ ಯೋಜಿಸುತ್ತಿದ್ದರು ಎಂದು ಸೂಚಿಸಿದೆ.
ವೀಡಿಯೊದಲ್ಲಿ, ಒಮರ್ ತಮ್ಮ ಹುರುಕು ಮುರುಕು ಇಂಗ್ಲಿಷ್‌ನಲ್ಲಿ ಮಾತನಾಡಿದ್ದಾನೆ. ಇದರಲ್ಲಿ ಆತ, "ಇದು ಆತ್ಮಹತ್ಯಾ ದಾಳಿಯಲ್ಲ, ಹುತಾತ್ಮ ಕಾರ್ಯಾಚರಣೆ ಎನ್ನುವುದು ಎಲ್ಲರಿಗೂ ಅರ್ಥವಾಗಲಿ. ಇದಕ್ಕೆ ಸಂಬಂಧಿಸಿದಂತೆ ಹಲವು ವಿರೋಧಾಭಾಸಗಳಿವೆ. ವಾಸ್ತವವಾಗಿ, ಹುತಾತ್ಮ ಕಾರ್ಯಾಚರಣೆಗೆ ಒಬ್ಬ ವ್ಯಕ್ತಿಯು ನಿರ್ದಿಷ್ಟ ಸಮಯದಲ್ಲಿ ನಿರ್ದಿಷ್ಟ ಸ್ಥಳದಲ್ಲಿ ತನ್ನ ಪ್ರಾಣವನ್ನು ತೆಗೆದುಕೊಳ್ಳಬೇಕಾಗುತ್ತದೆ' ಎಂದಿದ್ದಾನೆ.
ಡಾ. ಉಮರ್ ನವೆಂಬರ್ 10 ರಂದು ದೆಹಲಿಯ ಕೆಂಪು ಕೋಟೆ ಬಳಿ ಹುಂಡೈ ಐ20 ಕಾರನ್ನು ಬಳಸಿ ಆತ್ಮಹತ್ಯಾ ಬಾಂಬ್ ದಾಳಿ ನಡೆಸಿದ್ದ. ಈ ಸ್ಫೋಟದಲ್ಲಿ 15 ಜನರು ಸಾವನ್ನಪ್ಪಿದ್ದಾರೆ ಮತ್ತು 20 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಇಲ್ಲಿಯವರೆಗೆ ಎಂಟು ಜನರನ್ನು ಬಂಧಿಸಲಾಗಿದೆ, ಅವರಲ್ಲಿ ಆರು ಮಂದಿ ವೈದ್ಯರು. ಮಾಡ್ಯೂಲ್ ಮತ್ತು ಅದರ ತಾಂತ್ರಿಕ ಬೆಂಬಲ ಜಾಲದ ಉಳಿದ ಸದಸ್ಯರನ್ನು ಗುರುತಿಸಲು ತನಿಖಾ ಸಂಸ್ಥೆಗಳು ಕೆಲಸ ಮಾಡುತ್ತಿವೆ.
ಈ ನಡುವೆ ದಾಳಿಯ ತನಿಖೆಯ ಸಮಯದಲ್ಲಿ ಸೋಮವಾರ ರಾತ್ರಿ ಒಂದು ಪ್ರಮುಖ ಸಂಗತಿ ಬಹಿರಂಗವಾಗಿದೆ. ವೈಟ್-ಕಾಲರ್ ಭಯೋತ್ಪಾದಕ ಮಾಡ್ಯೂಲ್ ಆರಂಭದಲ್ಲಿ ಡ್ರೋನ್‌ಗಳು ಮತ್ತು ರಾಕೆಟ್‌ಗಳನ್ನು ಬಳಸಿಕೊಂಡು ಹಮಾಸ್ ಶೈಲಿಯ ದಾಳಿಯನ್ನು ನಡೆಸಲು ಉದ್ದೇಶಿಸಿತ್ತು ಎಂದು NIA ಬಹಿರಂಗಪಡಿಸಿದೆ. ಈ ಯೋಜನೆಯು ಅಕ್ಟೋಬರ್ 7, 2023 ರಂದು ಇಸ್ರೇಲ್ ಮೇಲೆ ಹಮಾಸ್ ನಡೆಸಿದ ದಾಳಿಯನ್ನು ಆಧರಿಸಿದೆ.
ಆತ್ಮಹತ್ಯಾ ಬಾಂಬರ್ ಡಾ. ಉಮರ್-ಉನ್-ನಬಿಯ ಮತ್ತೊಬ್ಬ ಸಹಚರ ಜಾಸಿರ್ ಬಿಲಾಲ್ ವಾನಿ ಅಲಿಯಾಸ್ ಡ್ಯಾನಿಶ್ ಬಂಧನದ ನಂತರ NIA ಈ ಮಾಹಿತಿಯನ್ನು ಪಡೆದುಕೊಂಡಿದೆ. ಡ್ಯಾನಿಶ್ ಜಮ್ಮು ಮತ್ತು ಕಾಶ್ಮೀರದ ಅನಂತ್‌ನಾಗ್ ಜಿಲ್ಲೆಯ ಖಾಜಿಗುಂಡ್ ನಿವಾಸಿ. ನಾಲ್ಕು ದಿನಗಳ ಹಿಂದೆ ಶ್ರೀನಗರದಲ್ಲಿ NIA ಆತನನ್ನು ಬಂಧಿಸಿದ್ದು, ಸೋಮವಾರ ಬಂಧನದ ಔಪಚಾರಿಕ ಕೆಲಸವನ್ನು ಪೂರೈಸಿದೆ.
NIA ಪ್ರಕಾರ, ಡ್ಯಾನಿಶ್ ಸಣ್ಣ ಡ್ರೋನ್ ಶಸ್ತ್ರಾಸ್ತ್ರಗಳನ್ನು ತಯಾರಿಸುವ ಮತ್ತು ಮಾರ್ಪಡಿಸುವಲ್ಲಿ ತಾಂತ್ರಿಕ ಅನುಭವವನ್ನು ಹೊಂದಿದ್ದ. ಆತ ಡಾ. ಉಮರ್‌ಗೆ ತಾಂತ್ರಿಕ ನೆರವು ನೀಡಿದ್ದ ಮತ್ತು ಭಯೋತ್ಪಾದಕ ದಾಳಿಗಳನ್ನು ನಡೆಸಲು ಡ್ರೋನ್‌ಗಳು ಮತ್ತು ರಾಕೆಟ್‌ಗಳನ್ನು ಅಭಿವೃದ್ಧಿಪಡಿಸಲು ಪ್ರಯತ್ನಿಸಿದ್ದ. ಗರಿಷ್ಠ ಸಾವುನೋವುಗಳನ್ನು ಉಂಟುಮಾಡಲು ಜನದಟ್ಟಣೆಯ ಪ್ರದೇಶಗಳಲ್ಲಿ ಡ್ರೋನ್‌ಗಳಿಂದ ಬಾಂಬ್‌ಗಳನ್ನು ಹಾಕುವ ಯೋಜನೆಯಲ್ಲಿ ಡ್ಯಾನಿಶ್ ಕೆಲಸ ಮಾಡಿದ್ದ ಎಂದು ಸಂಸ್ಥೆ ತಿಳಿಸಿದೆ.
ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯವು ಸೋಮವಾರ ಸ್ಫೋಟದ ಪ್ರಮುಖ ಆರೋಪಿ ಅಮೀರ್ ರಶೀದ್ ಅಲಿಯನ್ನು 10 ದಿನಗಳ NIA ಕಸ್ಟಡಿಗೆ ನೀಡಿದೆ. ಏಜೆನ್ಸಿಯ ಪ್ರಕಾರ, ಪ್ಯಾಂಪೋರ್ ನಿವಾಸಿ ಅಮೀರ್, ಡಾ. ಉಮರ್ ಜೊತೆ ಸಂಪರ್ಕ ಹೊಂದಿದ್ದ ಕೊನೆಯ ವ್ಯಕ್ತಿಯಾಗಿದ್ದ. ಸ್ಫೋಟದಲ್ಲಿ ಬಳಸಲಾದ ಕಾರನ್ನು ಅಮೀರ್ ಹೆಸರಿನಲ್ಲಿ ನೋಂದಾಯಿಸಲಾಗಿತ್ತು ಮತ್ತು ಅದನ್ನು ಖರೀದಿಸಲು ಆತ ದೆಹಲಿಗೆ ಬಂದಿದ್ದ. ಆಮಿರ್ ನನ್ನು ಭಾನುವಾರ ದೆಹಲಿಯಲ್ಲಿ ಬಂಧಿಸಲಾಗಿದೆ. ಈ ಪ್ರಕರಣದಲ್ಲಿ ಇಲ್ಲಿಯವರೆಗೆ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಎಂಟು ಜನರನ್ನು ಬಂಧಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ