ಅಯೋಧ್ಯೆ ಮಹೂರ್ತ ಸರಿಯಿಲ್ಲ, ಆದ್ದರಿಂದಲೇ ಬಿಜೆಪಿಗರಿಗೆ ಕೊರೋನಾ: ದಿಗ್ಗಿ!

By Kannadaprabha NewsFirst Published Aug 4, 2020, 10:36 AM IST
Highlights

ಅಯೋಧ್ಯೆ ಮಹೂರ್ತ ಸರಿಯಿಲ್ಲ, ಆದ್ದರಿಂದಲೇ ಬಿಜೆಪಿಗರಿಗೆ ಕೊರೋನಾ: ದಿಗ್ಗಿ!  ‘ಅಮಿತ್‌ ಶಾ, ಬಿಎಸ್‌ವೈಗೆ ಸೋಂಕು ತಗಲುವುದಕ್ಕೂ ಇದೇ ಕಾರಣ’ |  ‘ರಾಮಮಂದಿರ ನಿರ್ಮಾಣ ಶಂಕು ಸ್ಥಾಪನೆ ಮುಂದೂಡಿಕೆ ಮಾಡಿ’

ಲಕ್ನೋ (ಆ. 04):  ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಶಂಕುಸ್ಥಾಪನೆಗೆ ಆಯ್ಕೆ ಮಾಡಿರುವ ಆ.5ರ ಮಹೂರ್ತ ಅಶುಭಕರವಾಗಿದೆ. ಆದರೂ ಪ್ರಧಾನಿ ನರೇಂದ್ರ ಮೋದಿ ಹಟಕ್ಕೆ ಬಿದ್ದು ಇದೇ ಮುಹೂರ್ತದಲ್ಲಿ ಶಂಕುಸ್ಥಾಪನೆ ನೆರವೇರಿಸಲು ಮುಂದಾಗುವ ಮೂಲಕ ಸನಾತನ ಧರ್ಮದ ನಂಬಿಕೆಗಳಿಗೆ ಚ್ಯುತಿ ತಂದಿದ್ದಾರೆ. ಆ ಕಾರಣದಿಂದಲೇ ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಮಧ್ಯಪ್ರದೇಶದ ಮುಖ್ಯಮಂತ್ರಿ ಹಾಗೂ ಕರ್ನಾಟಕದ ಮುಖ್ಯಮಂತ್ರಿಗೆ ಕೊರೋನಾ ಬಂದಿದೆ ಎಂದು ಕಾಂಗ್ರೆಸ್‌ ನಾಯಕ ದಿಗ್ವಿಜಯ್‌ ಸಿಂಗ್‌ ವಿವಾದಾಸ್ಪದ ಹೇಳಿಕೆ ನೀಡಿದ್ದಾರೆ.

ಕಾಂಗ್ರೆಸ್‌ ಪಕ್ಷದ ರಾಜ್ಯಸಭೆ ಸದಸ್ಯ ಹಾಗೂ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿಯೂ ಆಗಿರುವ ದಿಗ್ವಿಜಯ್‌ ಸಿಂಗ್‌ ಈ ಹಿಂದೆಯೂ ಶಂಕುಸ್ಥಾಪನೆಯ ಮುಹೂರ್ತ ಸರಿಯಿಲ್ಲ ಎಂದಿದ್ದರು. ಸೋಮವಾರ ಮತ್ತೆ ಟ್ವೀಟ್‌ ಮಾಡಿರುವ ಅವರು, ‘ಶಂಕುಸ್ಥಾಪನೆ ಮುಂದೂಡುವಂತೆ ಮೋದಿಯವರನ್ನು ಮತ್ತೊಮ್ಮೆ ಕೇಳಿಕೊಳ್ಳುತ್ತೇನೆ. ನೂರಾರು ವರ್ಷಗಳ ಹೋರಾಟದ ನಂತರ ರಾಮಮಂದಿರ ನನಸಾಗುತ್ತಿದೆ. ನಿಮ್ಮ ಅಹಂಕಾರಕ್ಕೆ ಕಟ್ಟುಬಿದ್ದು ಅದನ್ನು ಹಾಳುಗೆಡವಬೇಡಿ. ದ್ವಾರಕಾಪೀಠದ ಶಂಕರಾಚಾರ್ಯ ಜಗದ್ಗುರು ಸ್ವಾಮಿ ಸ್ವರೂಪಾನಂದ ಮಹಾರಾಜ್‌ ಅವರೇ ಆ.5ರ ಮುಹೂರ್ತ ಅಶುಭಕರವಾಗಿದೆ ಎಂದಿದ್ದಾರೆ.

ರಾಮಮಂದಿರ ಭೂಮಿಪೂಜೆಗೆ ಅಯೋಧ್ಯೆಯಲ್ಲಿ ಸಕಲ ಸಿದ್ಧತೆ; ಅಯೋಧ್ಯೆಯಿಂದ ಸುವರ್ಣ ನ್ಯೂಸ್ ಗ್ರೌಂಡ್ ರಿಪೋರ್ಟ್

ಆದರೂ ಅದೇ ದಿನ ಶಂಕುಸ್ಥಾಪನೆ ನೆರವೇರಿಸುತ್ತೀರಿ ಅಂದರೆ ಸಾವಿರಾರು ವರ್ಷಗಳ ಹಿಂದು ನಂಬಿಕೆಗಳಿಗಿಂತ ಮೋದಿ ಶ್ರೇಷ್ಠರೇ? ಇದು ಹಿಂದುತ್ವವೇ? ಸನಾತನ ಧರ್ಮದ ನಂಬಿಕೆಗಳನ್ನು ಹೀಗೆ ಉಲ್ಲಂಘಿಸಿದ್ದರಿಂದ; 1.ರಾಮಮಂದಿರದ ಎಲ್ಲ ಅರ್ಚಕರಿಗೆ ಕೊರೋನಾ ಬಂತು. 2.ಉತ್ತರ ಪ್ರದೇಶದ ಸಚಿವೆ ಕಮಲ್‌ ರಾಣಿ ವರುಣ್‌ ಕೊರೋನಾದಿಂದ ತೀರಿಕೊಂಡರು.

3.ಉತ್ತರ ಪ್ರದೇಶದ ಬಿಜೆಪಿ ಮುಖ್ಯಸ್ಥರಿಗೆ ಕೊರೋನಾ ಬಂತು. 4. ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರಿಗೆ ಕೊರೋನಾ ಬಂತು. 5.ಮಧ್ಯಪ್ರದೇಶದ ಮುಖ್ಯಮಂತ್ರಿಗೆ ಕೊರೋನಾ ಬಂತು. 6.ಕರ್ನಾಟಕದ ಮುಖ್ಯಮಂತ್ರಿಗೆ ಕೊರೋನಾ ಬಂತು. ಮೋದಿಯವರೇ, ರಾಮಮಂದಿರಕ್ಕೆ ಶಂಕುಸ್ಥಾಪನೆ ಮಾಡಿ ಇನ್ನೂ ಎಷ್ಟುಜನರನ್ನು ಆಸ್ಪತ್ರೆಗೆ ಕಳಿಸಲು ಬಯಸಿದ್ದೀರಿ. ಯೋಗಿಜೀ, ನೀವಾದರೂ ಮೋದಿಗೆ ಹೇಳಿ. ನಿಮ್ಮೆದುರೇ ಸನಾತನ ಧರ್ಮದ ನಂಬಿಕೆಗಳನ್ನು ಮುರಿಯುತ್ತೀರಾ?’ ಎಂದು ಆಕ್ಷೇಪಿಸಿದ್ದಾರೆ.

click me!