ಆ.5 ರಂದು ನಡೆಯಲಿರುವ ರಾಮಮಂದಿರ ಭೂಮಿಪೂಜೆಗೆ 135 ಯತಿಗಳು ಸೇರಿದಂತೆ 175 ಜನರನ್ನು ಮಾತ್ರವೇ ಆಹ್ವಾನಿಸಲಾಗಿದೆ ಎಂದು ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ತಿಳಿಸಿದೆ. ಬಿಜೆಪಿಯ ಹಿರಿಯ ನಾಯಕರಾದ ಎಲ್.ಕೆ.ಅಡ್ವಾಣಿ, ಮುರಳಿ ಮನೋಹರ್ ಜೋಶಿ, ಹಿರಿಯ ವಕೀಲ ಕೆ. ಪರಾಶರನ್ ಮತ್ತು ಇತರೆ ಹಲವು ನಾಯಕರ ಜೊತೆ ಸಮಾಲೋಚನೆ ನಡೆಸಿದ ಬಳಿಕವೇ ಪಟ್ಟಿತಯಾರಿಸಲಾಗಿದೆ ಎಂದು ಅದು ಸ್ಪಷ್ಟಪಡಿಸಿದೆ.
ಅಯೋಧ್ಯೆ (ಆ. 04): ಆ.5 ರಂದು ನಡೆಯಲಿರುವ ರಾಮಮಂದಿರ ಭೂಮಿಪೂಜೆಗೆ 135 ಯತಿಗಳು ಸೇರಿದಂತೆ 175 ಜನರನ್ನು ಮಾತ್ರವೇ ಆಹ್ವಾನಿಸಲಾಗಿದೆ ಎಂದು ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ತಿಳಿಸಿದೆ. ಬಿಜೆಪಿಯ ಹಿರಿಯ ನಾಯಕರಾದ ಎಲ್.ಕೆ.ಅಡ್ವಾಣಿ, ಮುರಳಿ ಮನೋಹರ್ ಜೋಶಿ, ಹಿರಿಯ ವಕೀಲ ಕೆ. ಪರಾಶರನ್ ಮತ್ತು ಇತರೆ ಹಲವು ನಾಯಕರ ಜೊತೆ ಸಮಾಲೋಚನೆ ನಡೆಸಿದ ಬಳಿಕವೇ ಪಟ್ಟಿತಯಾರಿಸಲಾಗಿದೆ ಎಂದು ಅದು ಸ್ಪಷ್ಟಪಡಿಸಿದೆ.
ಕೋವಿಡ್ ನಿಯಮಗಳು ಜಾರಿ ಇರುವ ಹಿನ್ನೆಲೆಯಲ್ಲಿ ಅಡ್ವಾಣಿ, ಜೋಷಿ, ಪರಾಶರನ್, ಕಲ್ಯಾಣ್‌ಸಿಂಗ್, ಉಮಾ ಭಾರತಿ ಸೇರಿದಂತೆ ಕೆಲ ಗಣ್ಯರು ಕಾರ್ಯಕ್ರಮದಲ್ಲಿ ಭಾಗಿಯಾಗಲು ಸಾಧ್ಯವಾಗುತ್ತಿಲ್ಲ. ಉಳಿದಂತೆ ಭಾರತ ಮತ್ತು ನೇಪಾಳದ ಹಲವು ಸಾಧು, ಸಂತರು, ಯತಿಗಳು, ಕೆಲ ಪ್ರಮುಖ ನಗರಗಳ ಖ್ಯಾತನಾಮರಿಗೆ ಆಹ್ವಾನ ನೀಡಲಾಗಿದೆ. ಅಲ್ಲದೆ ರಾಮಜನ್ಮಭೂಮಿ ಹೋರಾಟದಲ್ಲಿ ಸಕ್ರಿಯರಾಗಿ ಭಾಗಿಯಾಗಿದ್ದ ಕೊಠಾರಿ ಸೋದರರು ಸೇರಿದಂತೆ ಕರಸೇವಕರ ಕುಟುಂಬ ಸದಸ್ಯರಿಗೆ ಆಹ್ವಾನ ನೀಡಲಾಗಿದೆ ಎಂದು ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ತಿಳಿಸಿದ್ದಾರೆ.
1989-90ರ ದಶಕದಲ್ಲಿ ನಡೆದ ರಾಮ ಜನ್ಮಭೂಮಿ ಆಂದೋಲನದ ನಂಟು ಹೊಂದಿದ್ದ 9 ಶಿಲೆಗಳಿಗೆ ಭೂಮಿಪೂಜೆಯ ದಿನ ಪ್ರಧಾನಿ ನರೇಂದ್ರ ಮೋದಿ ಅವರು ಪೂಜೆ ಸಲ್ಲಿಸಲಿದ್ದಾರೆ. ಈ ಪೈಕಿ ಒಂದು ಶಿಲೆಯನ್ನು ಮಂದಿರದ ಗರ್ಭಗುಡಿಯಲ್ಲಿ ಇಡಲಾಗುವುದು. ಉಳಿದ ಶಿಲೆಗಳನ್ನು ಮಂದಿರ ಸಮುಚ್ಛಯದ ಬೇರೆ ಕಡೆ ಇಡಲಾಗುವುದು ಎಂದು ರಾಯ್ ತಿಳಿಸಿದ್ದಾರೆ.
ಭೂಮಿಪೂಜೆ ದೂರದರ್ಶನದಲ್ಲಿ ನೇರ ಪ್ರಸಾರ!
100 ನದಿಗಳ ಪವಿತ್ರ ಜಲ:
ಭೂಮಿಪೂಜೆ ವೇಳೆ ಬಳಸಲು ದೇಶಾದ್ಯಂತ ಇರುವ 100 ನದಿಗಳ ಪವಿತ್ರ ಜಲವನ್ನು ಸಂಗ್ರಹಿಸಿದ್ದು, ಅದು ಈಗಾಗಲೇ ಅಯೋಧ್ಯೆ ತಲುಪಿದೆ. ಒಟ್ಟಾರೆ 2000ಕ್ಕೂ ಹೆಚ್ಚು ಸ್ಥಳಗಳ ಜಲ, ಮಣ್ಣು ಅಯೋಧ್ಯೆ ತಲುಪಿದೆ ಎಂದು ಟ್ರಸ್ಟ್ ತಿಳಿಸಿದೆ.
ಇಂದಿನಿಂದ ಡಿಡಿಯಲ್ಲಿ ಅಯೋಧ್ಯೆ ಕಾರ‍್ಯಕ್ರಮ ನೇರಪ್ರಸಾರ
ಅಯೋಧ್ಯೆಯಲ್ಲಿ ರಾಮಮಂದಿರ ಭೂಮಿಪೂಜೆ ವಿಧಿವಿಧಾನಗಳ ಕುರಿತ ಕಾರ್ಯಕ್ರಮಗಳ ನೇರಪ್ರಸಾರವನ್ನು ದೂರದರ್ಶನ ವಾಹಿನಿ ಮಂಗಳವಾರದಿಂದ ಆರಂಭಿಸಲಿದೆ. ಜು.4ರ ಮಂಗಳವಾರ ಸಂಜೆ 7 ಗಂಟೆಯಿಂದ 8 ಗಂಟೆವರೆಗೆ ದೀಪಾಲಂಕಾರದಿಂದ ಶೃಂಗಾರಗೊಂಡ ಅಯೋಧ್ಯೆ ಬಗ್ಗೆ ವಿಶೇಷ ಕಾರ್ಯಕ್ರಮ ಹಾಗೂ ಬುಧವಾರ ಬೆಳಗ್ಗೆ 5 ಗಂಟೆಯಿಂದಲೇ ದೇವಸ್ಥಾನದ ಶಂಕು ಸ್ಥಾಪನೆಗೆ ಸಂಬಂಧಿಸಿದ ಸರಣಿ ಕಾರ್ಯಕ್ರಮಗಳು ಪ್ರಸಾರವಾಗಲಿವೆ.
ಅದರಂತೆ, ಮಂದಿರದ ಬಗ್ಗೆ ವಿಶ್ವಾದ್ಯಂತ ಜನರ ನಿರೀಕ್ಷೆಗಳು, ಭಕ್ತರ ಅಭಿಪ್ರಾಯ ಮತ್ತು ಹರ್ಷೋದ್ಘಾರಗಳು, ಮಧ್ಯಾಹ್ನ 12 ಗಂಟೆಯಿಂದ ಭೂಮಿ ಪೂಜೆ ನೇರ ಪ್ರಸಾರವಾಗಲಿದೆ. ಈ ವೇಳೆ ಹನುಮಾನ್‌ಗಡಿ, ರಾಮಲಲ್ಲಾ ಸೇರಿ ಅಯೋಧ್ಯೆಯಲ್ಲಿರುವ ಇನ್ನಿತರ ಸ್ಥಳಗಳಲ್ಲಿನ ಸಂಭ್ರಮ-ಸಡಗರದ ದೃಶ್ಯಾವಳಿಗಳು ವಾಹಿನಿಯಲ್ಲಿ ಮೂಡಿಬರಲಿವೆ.