Russia Ukraine Crisis: ಹಿಂಸಾಚಾರವನ್ನು ತಕ್ಷಣವೇ ಕೊನೆ ಮಾಡಿ, ಪುಟಿನ್ ಗೆ ಮೋದಿ ಮನವಿ!

By Suvarna NewsFirst Published Feb 24, 2022, 11:37 PM IST
Highlights

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಜೊತೆ ಪ್ರಧಾನಿ ಮೋದಿ ಮಾತುಕತೆ

ಪ್ರಮಾಣಿಕ ಹಾಗೂ ನಂಬಿಕಸ್ತ ಸಂವಾದದಿಂದ ಮಾತ್ರ ಸಮಸ್ಯೆ ಬಗೆಹರಿಸಲು ಸಾಧ್ಯ

ಉಕ್ರೇನ್ ಕುರಿತಾಗಿ ಇತ್ತೀಚಿನ ಬೆಳವಣಿಗೆಯ ಮಾಹಿತಿ ನೀಡಿದ ಪುಟಿನ್

ನವದೆಹಲಿ (ಫೆ 24): ಪ್ರಧಾನಿ ನರೇಂದ್ರ ಮೋದಿ (PM Narendra Mod) ಅವರು ಗುರುವಾರ  ರಷ್ಯಾ (Russia) ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ( Vladimir Putin) ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದರು. ಈ ವೇಳೆ ರಷ್ಯಾ ಅಧ್ಯಕ್ಷ  ಪುಟಿನ್ ಅವರು ಉಕ್ರೇನ್‌ಗೆ (Ukraine ) ಸಂಬಂಧಿಸಿದ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಿವರಣೆ ನೀಡಿದರು. ರಷ್ಯಾ ಮತ್ತು ನ್ಯಾಟೋ (NATO) ಗುಂಪಿನ ನಡುವಿನ ಭಿನ್ನಾಭಿಪ್ರಾಯಗಳನ್ನು ಪ್ರಾಮಾಣಿಕ ಮತ್ತು ನಂಬಿಕಸ್ತ ಸಂವಾದದ ಮೂಲಕ ಮಾತ್ರ ಪರಿಹರಿಸಬಹುದು ಎಂಬ ತಮ್ಮ ದೀರ್ಘಕಾಲದ ನಂಬಿಕೆಯನ್ನು ಪ್ರಧಾನಿ ಪುನರುಚ್ಚರಿಸಿದರು.

ಅದಲ್ಲದೆ, ಉಕ್ರೇನ್ ಭಾಗದಲ್ಲಿ ಆಗುತ್ತಿರುವ ವ್ಯಾಪಕ ಹಿಂಸಾಚಾರವನ್ನು (violence ) ತಕ್ಷಣವೇ ನಿಲ್ಲಿಸಿ ಎಂದು ಮನವಿ ಮಾಡಿದ್ದಲ್ಲದೆ, ರಾಜತಾಂತ್ರಿಕ ಮಾತುಕತೆ ಮತ್ತು ಮಾತುಕತೆಯ ಹಾದಿಗೆ ಮರಳಲು ಎಲ್ಲಾ ಕಡೆಯಿಂದ ಸಂಘಟಿತ ಪ್ರಯತ್ನಗಳಿಗೆ ಕರೆ ನೀಡಿದರು.

ಉಕ್ರೇನ್‌ನಲ್ಲಿರುವ ಭಾರತೀಯ ನಾಗರಿಕರ, ವಿಶೇಷವಾಗಿ ವಿದ್ಯಾರ್ಥಿಗಳ ಸುರಕ್ಷತೆಯ ಬಗ್ಗೆ ಭಾರತದ ಕಳವಳಗಳ ಬಗ್ಗೆ ಮೋದಿ ರಷ್ಯಾದ ಅಧ್ಯಕ್ಷರಿಗೆ ಮನವರಿಕೆ ಮಾಡಿದರು. ಯುದ್ಧಪೀಡಿತ ಪ್ರದೇಶದಿಂದ ಅವರ ಸುರಕ್ಷಿತ ನಿರ್ಗಮನ ಹಾಗೂ ಭಾರತಕ್ಕೆ ಮರಳುವ ನಿಟ್ಟಿನಲ್ಲಿ ದೇಶವು ಹೆಚ್ಚಿನ ಆದ್ಯತೆಯನ್ನು ನೀಡುತ್ತದೆ ಎಂದು ಮೋದಿ ಈ ವೇಳೆ ತಿಳಿಸಿದರು. ತಮ್ಮ ಅಧಿಕಾರಿಗಳು ಮತ್ತು ರಾಜತಾಂತ್ರಿಕ ತಂಡಗಳು ಸಾಮಯಿಕ ಆಸಕ್ತಿಯ ವಿಷಯಗಳ ಬಗ್ಗೆ ನಿಯಮಿತ ಸಂಪರ್ಕಗಳನ್ನು ಮುಂದುವರಿಸಲಿದೆ ಎನ್ನುವುದನ್ನು ಉಭಯ ನಾಯಕರು ಒಪ್ಪಿಕೊಂಡರು.

PM Narendra Modi speaks to Russian President Vladimir Putin

Pres Putin briefed PM about the recent developments regarding Ukraine. PM reiterated his long-standing conviction that the differences between Russia & NATO can only be resolved through honest and sincere dialogue: PMO

— ANI (@ANI)


ಎರಡನೆಯ ಮಹಾಯುದ್ಧದ ನಂತರ ಯುರೋಪ್‌ನಲ್ಲಿ ಒಂದು ರಾಜ್ಯವು ಮತ್ತೊಂದು ರಾಜ್ಯದ ಮೇಲೆ ನಡೆಸಿದ ಅತಿದೊಡ್ಡ ದಾಳಿಯಲ್ಲಿ ರಷ್ಯಾದ ಪಡೆಗಳು ಗುರುವಾರ ಉಕ್ರೇನ್ ಅನ್ನು ಆಕ್ರಮಿಸಿಕೊಂಡವು. ಉಕ್ರೇನ್ ತನ್ನ ಗಡಿಯುದ್ದಕ್ಕೂ ರಷ್ಯಾ ಮತ್ತು ಬೆಲಾರಸ್‌ನಿಂದ ಸುರಿಯುತ್ತಿರುವ ಸೈನ್ಯದ ದಾಳಿಗಳನ್ನು ವರದಿ ಮಾಡಿದೆ ಮತ್ತು ಬ್ಲ್ಯಾಕ್ ಸೀ ಮತ್ತು ಅಜೋವ್ ಸಮುದ್ರಗಳ ಕಡೆಯಿಂದಲೂ ರಷ್ಯಾ ದಾಳಿ ಮಾಡಿದ್ದಲ್ಲದೆ, ಉಕ್ರೇನ್ ನ ವಾಯುನೆಲೆಗಳು ಹಾಗೂ ಏರ್ ಪೋರ್ಟ್ ಗಳ ಮೇಲೆ ಕ್ಷಿಪಣಿಗಳ ಮಳೆಯಾಗಿದೆ. ಉಕ್ರೇನ್ ದೇಶವನ್ನು ಸಂಪೂರ್ಣವಾಗಿ ನಿಶಸ್ತ್ರೀಕರಣ ಮಾಡುವುದು ತಮ್ಮ ಗುರಿ ಎಂದು ವ್ಲಾಡಿಮಿರ್ ಪುಟಿನ್ ಹೇಳಿದ್ದಾರೆ.

ಇದಕ್ಕೂ ಮುನ್ನ ವಿದೇಶಾಂಗ ಕಾರ್ಯದರ್ಶಿ ಹರ್ಷ್ ವಿ ಶ್ರಿಂಗ್ಲಾ ಅವರು ಕ್ಯಾಬಿನೆಟ್ ಸಮಿತಿಯ ಭದ್ರತಾ ಸಭೆಯಲ್ಲಿ, ಉಕ್ರೇನ್‌ನಲ್ಲಿರುವ ವಿದ್ಯಾರ್ಥಿಗಳು ಸೇರಿದಂತೆ ಭಾರತೀಯ ಪ್ರಜೆಗಳ ಸುರಕ್ಷತೆ ಮತ್ತು ಅಧಿಕಾರಿಗಳ ಸುರಕ್ಷತೆಯು ಸರ್ಕಾರದ ಪ್ರಮುಖ ಆದ್ಯತೆಯಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ ಎಂದು ಒತ್ತಿ ಹೇಳಿದ್ದರು. "ನಾವು ಸ್ಥಳಾಂತರಿಸುವಿಕೆಯನ್ನು ಅತ್ಯಂತ ಮುನ್ನೆಚ್ಚರಿಕೆಯಿಂದ ನಿರ್ವಹಿಸುತ್ತೇವೆ. ಕೈವ್‌ನಿಂದ ಭಾರತೀಯ ಪ್ರಜೆಗಳನ್ನು ಸ್ಥಳಾಂತರಿಸಲು ಮತ್ತು ಸುರಕ್ಷಿತ ಸ್ಥಳಗಳನ್ನು ತಲುಪಲು ರಸ್ತೆಮಾರ್ಗಗಳನ್ನು ಮ್ಯಾಪ್ ಮಾಡಲಾಗಿದೆ" ಎಂದು ಶ್ರಿಂಗ್ಲಾ ಹೇಳಿದರು. "ಉಕ್ರೇನ್‌ನಲ್ಲಿ ಪರಿಸ್ಥಿತಿಯನ್ನು ಎದುರಿಸಲು ಹಲವಾರು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ನಾವು ಸುಮಾರು ಒಂದು ತಿಂಗಳ ಹಿಂದೆ ಉಕ್ರೇನ್‌ನಲ್ಲಿ ಭಾರತೀಯ ಪ್ರಜೆಗಳ ನೋಂದಣಿಯನ್ನು ಪ್ರಾರಂಭಿಸಿದ್ದೇವೆ. ಆನ್‌ಲೈನ್ ನೋಂದಣಿಯ ಆಧಾರದ ಮೇಲೆ, 20,000 ಭಾರತೀಯ ಪ್ರಜೆಗಳು ಅಲ್ಲಿರುವುದು ಕಂಡುಬಂದಿದೆ" ಎಂದು ಅವರು ಹೇಳಿದರು.

Russia Ukraine Crisis: ಕೋಡಿಮಠ ಸ್ವಾಮೀಜಿ ಹೇಳಿದ್ದ ಭವಿಷ್ಯ ನಿಜವಾಗಿ ಹೋಗಲಿದೆಯೇ?
ಉಕ್ರೇನ್ ನಲ್ಲಿರುವ ನಿಯಂತ್ರಣ ಕೊಠಡಿಯ ಕಾರ್ಯಾಚರಣೆಯನ್ನು ತೀವ್ರಗೊಳಿಸಲಾಗಿದೆ. ನಿಯಂತ್ರಣ ಕೊಠಡಿಯನ್ನು ಉಕ್ರೇನ್ ರಾಯಭಾರ ಕಚೇರಿಯಲ್ಲಿಯೂ ಸ್ಥಾಪಿಸಲಾಗಿದೆ. ಕೈವ್ ನಲ್ಲಿರುವ ರಾಯಭಾರ ಕಚೇರಿ ಇನ್ನೂ ಮುಚ್ಚಿಲ್ಲ. ನಾಗರಿಕರಿಗೆ ಅನುಕೂಲವಾಗುವಂತೆ ಹೆಚ್ಚಿನ ಸೌಲಭ್ಯಗಳನ್ನು ಅಲ್ಲಿ ಒದಗಿಸಲಾಗುತ್ತದೆ. ಈಗಾಗಲೇ ಹಲವರಿಗೆ ಉಕ್ರೇನ್‌ನ ಪಶ್ಚಿಮ ಭಾಗಕ್ಕೆ ತೆರಳಲು ಸೂಚನೆ ನೀಡಲಾಗಿದೆ. ಇದುವರೆಗೆ ಸುಮಾರು 4,000 ಜನರನ್ನು ಸ್ಥಳಾಂತರಿಸಲಾಗಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

Russia Ukraine War : 3ನೇ ವಿಶ್ವ ಯುದ್ಧದ ಆರಂಭವಾ?  ನಮ್ಮ ಮೇಲೆ ಏನ್ ಎಫೆಕ್ಟ್!
ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರನ್ನು ನಾಲ್ಕು ದೇಶಗಳ ಮೂಲಕ ಸ್ಥಳಾಂತರಿಸಲು ನಿರ್ಧರಿಸಲಾಗಿದೆ. ಹಂಗೇರಿ, ಪೋಲೆಂಡ್, ಸ್ಲೋವಾಕಿಯಾ ಮತ್ತು ರೊಮೇನಿಯಾದಲ್ಲಿ ಪ್ರಜೆಗಳನ್ನು ಸ್ಥಳಾಂತರಿಸುವ ಗುರಿಯನ್ನು ಹೊಂದಿದೆ. ಭಾರತೀಯರಿಗೆ ಸಹಾಯ ಮಾಡಲು ಈ ದೇಶಗಳಿಗೆ ತಂಡಗಳನ್ನು ಕಳುಹಿಸಲಾಗಿದೆ. ಅಧಿಕಾರಿಗಳ ದೂರವಾಣಿ ಸಂಖ್ಯೆಗಳನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಪ್ರಕಟಿಸಿದೆ.

click me!