
ನಾಗ್ಪುರ (ಆ.13): ದೇಶದ ರಾಷ್ಟ್ರಧ್ವಜಕ್ಕಿಂತ ಹೆಚ್ಚಾಗಿ ಭಗವಾ ಧ್ವಜಕ್ಕೆ ಆರೆಸ್ಸೆಸ್ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತದೆ ಎಂದು ವಿರೋಧಿಗಳ ಆರೋಪಗಳ ನಡುವೆ ರಾಷ್ಟ್ರೀಯ ಸ್ವಯಂಸೇವಕ ಸಂಘ ಶನಿವಾರ ನಾಗ್ಪುರದ ತನ್ನ ಕೇಂದ್ರ ಕಚೇರಿಯಲ್ಲಿ "ಹರ್ ಘರ್ ತಿರಂಗಾ" ಅಭಿಯಾನದ ಭಾಗವಾಗಿ ತ್ರಿವರ್ಣ ಧ್ವಜವನ್ನು ಹಾರಿಸಿದೆ. ಆರೆಸ್ಸೆಸ್ ಸರಸಂಘಚಾಲಕ ಮೋಹನ್ ಭಾಗವತ್ ತ್ರಿವರ್ಣ ಧ್ವಜವನ್ನು ಹಾರಿಸಿದ ವಿಡಿಯೋವನ್ನು ಆರೆಸ್ಸೆಸ್ ತನ್ನ ಸಾಮಾಜಿಕ ಜಾಲತಾಣದ ಪುಟದಲ್ಲಿ ಬಿಡುಗಡೆ ಮಾಡಿದೆ. 'ಸ್ವಾತಂತ್ರ್ಯದ ಅಮೃತವನ್ನು ಆಚರಿಸಿ'. ಪ್ರತಿ ಮನೆಯಲ್ಲೂ ತ್ರಿವರ್ಣ ಧ್ವಜ ಹಾರಿಸಿ. ರಾಷ್ಟ್ರೀಯ ಸ್ವಾಭಿಮಾನವನ್ನು ಹೆಚ್ಚಿಸಿ' ಎಂದು ಈ ವಿಡಿಯೋ ಪೋಸ್ಟ್ ಮಾಡುವ ವೇಳೆ ಬರೆಯಲಾಗಿದೆ. ಇದಕ್ಕೂ ಮೊದಲು, ಸಂಘವು ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ತ್ರಿವರ್ಣ ಧ್ವಜದ ಡಿಸ್‌ಪ್ಲೇ ಪಿಕ್ಚರ್‌ಅನ್ನು ಹಾಕಿತ್ತು. ಇದರೊಂದಿಗೆ ಮೋಹನ್ ಭಾಗವತ್ ತಮ್ಮ ಪ್ರೊಫೈಲ್ ಫೋಟೋ ಕೂಡ ಬದಲಾಯಿಸಿ ತ್ರಿವರ್ಣ ಧ್ವಜದ ಚಿತ್ರವನ್ನು ಹಾಕಿದ್ದಾರೆ. ಹರ್ ಘರ್ ನಲ್ಲಿ ನಡೆಯುವ ತ್ರಿವರ್ಣ ಧ್ವಜ ಅಭಿಯಾನದಲ್ಲಿ ಭಾಗವಹಿಸುವಂತೆ ಸಂಘದ ಮುಖಂಡರು ಮನವಿ ಮಾಡಿದ್ದಾರೆ.
ಇದೇ ವೇಳೆ ಕಾಂಗ್ರೆಸ್ ವಕ್ತಾರ ಜೈರಾಮ್ ರಮೇಶ್ ತ್ರಿವರ್ಣ ಧ್ವಜ ಅಭಿಯಾನವನ್ನು ಗುರಿಯಾಗಿಸಿಕೊಂಡು ಟ್ವೀಟ್ ಮಾಡಿದ್ದಾರೆ. ನಮ್ಮ ಸ್ವಾತಂತ್ರ್ಯ ಹೋರಾಟಗಾರರಿಗೆ ದ್ರೋಹ ಮಾಡಿದವರು, ನಮ್ಮ ದೇಶಕ್ಕೆ ದ್ರೋಹ ಮಾಡಿದವರು, ನಮ್ಮ ಸ್ವಾತಂತ್ರ್ಯ ಹೋರಾಟ ಮತ್ತು ಕ್ವಿಟ್ ಇಂಡಿಯಾ ಚಳವಳಿಯನ್ನು ವಿರೋಧಿಸಿದವರು, ಬ್ರಿಟಿಷರಿಗಾಗಿ ಕೆಲಸ ಮಾಡಿದವರು. ಬ್ರಿಟಿಷರ ಕ್ಷಮೆ ಕೇಳಿದವರು ಇಂದು ನಮ್ಮ ರಾಷ್ಟ್ರಧ್ವಜ ತ್ರಿವರ್ಣ ಧ್ವಜ ಮಾರುತ್ತಿದ್ದಾರೆ. ತ್ರಿವರ್ಣ ಪಕ್ಷವನ್ನು ಮಾರಾಟ ಮಾಡಿ ಎಂದು ಬರೆದಿದ್ದಾರೆ.
ನಿಮಗೆ ಗೊತ್ತಾ, ಆರೆಸ್ಸೆಸ್ ಭಾರತದ ತ್ರಿವರ್ಣ ಧ್ವಜ ಹಾಗೂ ಸಂವಿಧಾನವನ್ನು ವಿರೋಧಿಸಿತ್ತು ಎಂದು ಬರೆದಿರುವ ಪೋಸ್ಟ್‌ವೊಂದನ್ನು ಕೂಡ ಜೈರಾಮ್ ರಮೇಶ್ ಹಂಚಿಕೊಂಡಿದ್ದಾರೆ. ಕೇಂದ್ರ ಸರ್ಕಾರ ಆಜಾದಿ ಕಾ ಅಮೃತ ಮಹೋತ್ಸವದ ಭಾಗವಾಗಿ ಪ್ರತಿ ಮನೆಯಲ್ಲೂ ತ್ರಿವರ್ಣ ಧ್ವಜ ಹಾರಿಸುವ ಹರ್ ಘರ್ ತಿರಂಗಾ ಅಭಿಯಾನವನ್ನು ಆರಂಭ ಮಾಡಿತ್ತು. ಈ ಅಭಿಯಾನಕ್ಕೆ ಶನಿವಾರ ಚಾಲನೆ ಸಿಕ್ಕಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡಡ ತಮ್ಮ ಮನೆಯ ಮೇಲ್ಛಾವಣಿಯಿಂದ ತ್ರಿವರ್ಣ ಧ್ವಜವನ್ನು ಹಾರಿಸುತ್ತಿರುವ ವಿಡಿಯೋವನ್ನು ಕೂಡ ಬಿಡುಗಡೆ ಮಾಡಿದ್ದಾರೆ. ಈ ವೇಳೆ ಅವರ ಪತ್ನಿ ಸೋನಲ್ ಕೂಡ ಕಾಣಿಸಿಕೊಂಡಿದ್ದಾರೆ. ಅದರೊಂದಿಗೆ ದೇಶದೆಲ್ಲೆಡೆ ತಿರಂಗಾ ಯಾತ್ರೆಯನ್ನೂ ಆರಂಭ ಮಾಡಲಾಗಿದೆ.
ಆರೆಸ್ಸೆಸ್ ಕಚೇರಿಯಲ್ಲೂ ರಾಷ್ಟ್ರಧ್ವಜ ಹಾರಿಸುತ್ತೇವೆ: ಸಚಿವ ಸುನಿಲ್ ಕುಮಾರ್
ಪ್ರಧಾನಿ ಮೋದಿ ಕರೆ ನೀಡಿದ್ದರು: ಪ್ರಧಾನಿ ಮೋದಿಯವರ ಕರೆ ಮೇರೆಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಮೋಹನ್ ಭಾಗವತ್ ಕೂಡ ತಮ್ಮ ಟ್ವಿಟರ್ ಖಾತೆಯಲ್ಲಿ ತ್ರಿವರ್ಣ ಧ್ವಜದ ಫೋಟೋ ಹಾಕಿದ್ದಾರೆ. ವಾಸ್ತವವಾಗಿ, ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳು ಸಂಘವು ರಾಷ್ಟ್ರಧ್ವಜಕ್ಕೆ ಗೌರವ ನೀಡುವುದಿಲ್ಲ ಎನ್ನುವ ಟೀಕೆಗಳ ನಡುವೆಯೇ ಆರೆಸ್ಸೆಸ್‌ನ ಪ್ರಮುಖ ನಾಯಕ ತಮ್ಮ ಡಿಪಿಯಲ್ಲಿ ತಿರಂಗಾದ ಚಿತ್ರವನ್ನು ಹಾಕಿದ್ದಾರೆ. 52 ವರ್ಷಗಳಿಂದ ನಾಗ್ಪುರದ ತನ್ನ ಪ್ರಧಾನ ಕಚೇರಿಯಲ್ಲಿ ರಾಷ್ಟ್ರಧ್ವಜವನ್ನು ಹಾರಿಸದ ಸಂಘಟನೆಯು ತ್ರಿವರ್ಣ ಧ್ವಜವನ್ನು ಹಾಕುವ ಪ್ರಧಾನಿಯ ಮನವಿಯನ್ನು ಪಾಲಿಸುತ್ತದೆಯೇ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಈ ತಿಂಗಳ ಆರಂಭದಲ್ಲಿ ಕೇಳಿದ್ದರು. ಆದರೆ, ಸಂಘವು ತ್ರಿವರಣ ಧ್ವಜವನ್ನು ಹಾರಿಸುವುದರೊಂದಿಗೆ ತನ್ನ ಸಾಮಾಜಿಕ ಖಾತೆಗಳ ಡಿಪಿಯಲ್ಲೂ ತಿರಂಗಾವನ್ನು ಪ್ರದರ್ಶನ ಮಾಡಿದೆ.
ನಕಲಿ ದೇಶಪ್ರೇಮಿಗಳ ಬಾಯಿ ಮುಚ್ಚಿಸಬೇಕಿದೆ: RSS ವಿರುದ್ಧ ಗುಡುಗಿದ ಸಿದ್ದರಾಮಯ್ಯ
ಆರ್‌ಎಸ್‌ಎಸ್ ಪ್ರಚಾರ ವಿಭಾಗದ ಸಹ-ಪ್ರಭಾರಿ ನರೇಂದ್ರ ಠಾಕೂರ್ ಶುಕ್ರವಾರ ಮಾತನಾಡಿ, ಸಂಘವು ತನ್ನ ಎಲ್ಲಾ ಕಚೇರಿಗಳಲ್ಲಿ ರಾಷ್ಟ್ರಧ್ವಜವನ್ನು ಹಾರಿಸುವ ಮೂಲಕ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುತ್ತಿದೆ. ಸಂಘವು ತನ್ನ ಸಂಘಟನೆಯ ಧ್ವಜವನ್ನು ತೆಗೆದು ಮತ್ತು ಅದರ ಸಾಮಾಜಿಕ ಮಾಧ್ಯಮ ಖಾತೆಯ ಪ್ರೊಫೈಲ್ ಚಿತ್ರದಲ್ಲಿ ರಾಷ್ಟ್ರಧ್ವಜವನ್ನು ಹಾಕಿತು. ಆರೆಸ್ಸೆಸ್ ಕಾರ್ಯಕರ್ತರು ‘ಹರ್ ಘರ್ ತಿರಂಗ’ ಅಭಿಯಾನದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದಾರೆ ಎಂದು ಠಾಕೂರ್ ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ