* ಪಾಕ್, ಚೀನಾ ಆಕ್ರಮಿತ ಕಾಶ್ಮೀರ ವಾಪಸ್ ಪಡೆಯಿರಿ: ಭಾಗವತ್
* ಯಾವ ರೀತಿ ಪಡೆಯಬೇಕೆಂಬುದು ಸರ್ಕಾರಕ್ಕೆ ಬಿಟ್ಟದ್ದು
* ಕಿವಿಯನ್ನಾದರೂ ಹಿಂಡಲಿ, ಚರ್ಚೆಯನ್ನಾದರೂ ಮಾಡಲಿ
* ಯುದ್ಧ ಕುರಿತ ಭಾರತ ಹೇಳಿಕೆಗೆ ಚೀನಾ ಗರಂ
ಕಲಬುರಗಿ (ಜ. 14) ಪಾಕಿಸ್ತಾನ ಮತ್ತು ಚೀನಾ ಆಕ್ರಮಿತ ಕಾಶ್ಮೀರದ ಭೂಭಾಗವನ್ನು ಭಾರತ ಮರಳಿ ಪಡೆಯಲೇಬೇಕು. ಕಿವಿ ಹಿಂಡಿಯಾದರೂ ಸರಿ, ಮಾತುಕತೆ ಮೂಲಕವಾದರೂ ಸರಿ. ಸರ್ಕಾರವೇ ಸೂಕ್ತ ಮಾರ್ಗೋಪಾಯ ರೂಪಿಸಿ, ಸಮಯ ಸಂದರ್ಭ ನೋಡಿಕೊಂಡು ಈ ನಿಟ್ಟಿನಲ್ಲಿ ಮುಂದಡಿಯಿಡಬೇಕು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ (RSS) ಸರಸಂಘಚಾಲಕ ಮೋಹನ್ ಭಾಗವತ್ (Mohan Bhagwat)ಅವರು ಕೇಂದ್ರ ಸರ್ಕಾರಕ್ಕೆ (Union Govt) ಸಲಹೆ ನೀಡಿದ್ದಾರೆ.
ಆರೆಸ್ಸೆಸ್ ಕರ್ನಾಟಕ ಉತ್ತರ ಪ್ರಾಂತದ ಪ್ರಮುಖರ 3 ದಿನಗಳ ಬೈಠಕ್‌ನಲ್ಲಿ ಪಾಲ್ಗೊಳ್ಳಲು ಕಲಬುರಗಿಯಲ್ಲಿ ತಂಗಿರುವ ಮೋಹನ್ ಭಾಗವತ್ ಬುಧವಾರ ರಾತ್ರಿ ಜೇವರ್ಗಿ ರಸ್ತೆಯ ಖಮೀತ್ಕರ್‌ನಲ್ಲಿ ನಡೆದ ಗಣ್ಯರೊಂದಿಗಿನ ಸಂವಾದ ಗೋಷ್ಠಿಯಲ್ಲಿ ಈ ಸಲಹೆ ನೀಡಿದರು. ಯಾವ ರೀತಿ ಪಾಕ್, ಚೀನಾ ಕೈಯಲ್ಲಿರುವ ನಮ್ಮ ಕಾಶ್ಮೀರದ ಭೂಭಾಗವನ್ನು ಪಡೆಯಬೇಕು ಎಂಬುದು ಸರ್ಕಾರಕ್ಕೆ ಬಿಟ್ಟವಿಚಾರ ಎಂದರು.
ಪಾಕ್, ಚೀನಾ ಆಕ್ರಮಿತ ನಮ್ಮ ಕಾಶ್ಮೀರದ ಭೂಭಾಗಗಳನ್ನು ಮರಳಿ ಪಡೆಯುವುದು ಸಹಜ ನ್ಯಾಯ ಎಂದ ಅವರು, ಬೆದರಿಸಿಯೋ ಅಥವಾ ನಮ್ಮ ಗುಂಡಿಗೆಗೆ ಚಾಕು-ತಲವಾರು ಚುಚ್ಚಿಯೋ ಈ ಭೂಭಾಗಗಳನ್ನು ಕಿತ್ತುಕೊಳ್ಳಲಾಗಿದೆ. ಅವನ್ನು ನಾವು ಮರಳಿ ಪಡೆಯಲೇಬೇಕು. ಇದಕ್ಕೆ ಪ್ರಸ್ತುತ ಸರ್ಕಾರವೇ ಮಾರ್ಗೋಪಾಯಗಳನ್ನು ಹುಡುಕಬೇಕು. ಇದು ಅತ್ಯಂತ ಸೂಕ್ಷ್ಮ ಹಾಗೂ ಸಂಕೀರ್ಣ ವಿಚಾರ. ಆದಾಗ್ಯೂ ಇಂತಹ ವಿಚಾರದಲ್ಲಿ ಸಂಘದಿಂದ ನಾವು ಯಾವುದೇ ಗಡುವು ನೀಡುವುದಿಲ್ಲ. ಸೂಕ್ತ ಸಮಯ ಕಂಡಾಗ ಸರ್ಕಾರ ಕಾರ್ಯೋನ್ಮುಖವಾಗಲಿ ಎಂದರು.
Hindutva: 'ಹಿಂದೂಗಳ ಶಕ್ತಿ ಕುಂದಿದೆ, ನಾವು ಹಿಂದೂಗಳಾಗಬೇಕಾದರೆ...' RSS ಮುಖ್ಯಸ್ಥನ ಹೊಸ ಹೇಳಿಕೆ!
ಪೂರ್ಣ ಕಾಶ್ಮೀರ ಇಲ್ಲದ ಭಾರತ ಮಾತೆ ಸರ್ವಾಂಗ ಸುಂದರ ಆಗುವುದಿಲ್ಲ, ಸುಜಲಾಂ, ಸುಫಲಾಂ, ಮಲಯಜ ಶೀತಲಾಂ, ಸಸ್ಯ ಶ್ಯಾಮಲಾಂ ಮಾತರಂ... ಎಂಬಂತೆ ವಂದೇ ಮಾತರಂ ಗೀತೆಯಲ್ಲಿನ ಭಾರತ ಮಾತೆಯನ್ನು ನಾವೆಲ್ಲರೂ ಮತ್ತೆ ಕಾಣಬೇಕಾದಲ್ಲಿ ಪಾಕ್, ಚೀನಾ ಆಕ್ರಮಿಸಿರುವ ಕಾಶ್ಮೀರದ ಭೂಭಾಗಗಳನ್ನು ನಾವು ಮರಳಿ ಪಡೆಯಬೇಕು ಎಂದರು.
ಕಾಶ್ಮೀರದಲ್ಲಿರುವ ಹಿಂದೂಗಳಿಗೆ ಅಸ್ತ್ರಗಳನ್ನು ನೀಡುವ ಮೂಲಕ ಅವರ ಸ್ವಯಂ ರಕ್ಷಣೆಗೆ ಸರ್ಕಾರ ಯಾಕೆ ಮುಂದಾಗಬಾರದು ಎಂಬ ಪ್ರಶ್ನೆಗೆ ಉತ್ತರಿಸಿದ ಭಾಗವತ್, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರಿಗೆ ಅಸ್ತ್ರಗಳನ್ನು ನೀಡುತ್ತಾ ಹೋದರೆ ಅಮೆರಿಕದಂತಹ ದೇಶದಲ್ಲಿ ಯಾವ ರೀತಿಯ ಅನಾಹುತಗಳು ಆಗುತ್ತಿವೆ ಎಂಬುದನ್ನು ನಾವು ನೋಡುತ್ತಿದ್ದೇವೆ. ಅಂಥ ಅವಾಂತರಗಳಿಗೆ ಭಾರತ ಗುರಿಯಾಗಬೇಕೇ? ಪ್ರಗತಿಯೆಂಬುದು ಶಾಂತಿ-ಸಂಯಮದೊಂದಿಗೆ ಮೂಡಬೇಕೇ ಹೊರತು ಅಸ್ತ್ರ- ಶಸ್ತ್ರಗಳಿಂದಲ್ಲ ಎಂದು ಪ್ರತಿಪಾದಿಸಿದರು.
ಜನಸಂಖ್ಯೆ ನಿಯಂತ್ರಣಕ್ಕೆ ರಾಷ್ಟ್ರೀಯ ನೀತಿ: ಜನಸಂಖ್ಯಾ ನಿಯಂತ್ರಣಕ್ಕೆ ರಾಷ್ಟ್ರೀಯ ನೀತಿಯನ್ನು ಪ್ರತಿಪಾದಿಸಿದ ಮೋಹನ್ ಭಾಗವತ್, ಈ ವಿಚಾರದಲ್ಲಿ ಮೊದಲು ಸಮಾಜದಲ್ಲಿರುವ ಎಲ್ಲರಿಗೂ ಜಾಗೃತಿ ಮೂಡಿಸುವ ಅಗತ್ಯವಿದೆ. ಇದರೊಂದಿಗೆ ಸಮಾನ ನಾಗರಿಕ ಸಂಹಿತೆ ಜಾರಿಗೂ ಸರ್ವಸಮ್ಮತ ಅಭಿಪ್ರಾಯ ಸಮಾಜದಲ್ಲಿ ಮೂಡುವಂತೆ ಮಾಡುವ ಅಗತ್ಯವಿದೆ ಎಂದು ತಿಳಿಸಿದರು.
ಭಾರತ ಹಿಂದೂ ರಾಷ್ಟ್ರವಾದರೂ ಹಿಂದೂಗಳ ಜನಸಂಖ್ಯೆ ಶೇ.100ರಷ್ಟುಇದ್ದದ್ದು, ಇಂದು ಶೇ.78ಕ್ಕೆ ಇಳಿದಿದೆಯಲ್ಲ ಎಂಬ ಗಣ್ಯರೊಬ್ಬರ ಪ್ರಶ್ನೆ ಮೇಲೆ ವಿಸ್ತೃತ ಉತ್ತರ ನೀಡಿದ ಅವರು, ಇದು ಎಲ್ಲರೂ ವಿಚಾರ ಮಾಡುವ ಸಂಗತಿ. ಇದರಲ್ಲಿ ರಾಷ್ಟ್ರೀಯತೆ ಅಡಗಿದೆ. ರಾಷ್ಟ್ರದ ಪ್ರಗತಿಗೆ ಜನಸಂಖ್ಯೆ ಮಾರಕ. ಆದಾಗ್ಯೂ ಯಾವುದೇ ಘಟಕ, ಉಪ ಘಟಕಗಳ ಜನಸಂಖ್ಯೆ ಕುಗ್ಗದಂತೆ ನೋಡಿಕೊಂಡು ರಾಷ್ಟ್ರಕ್ಕೂ ಹಿತವಾಗಿರುವಂಥ ಹೊಸ ರಾಷ್ಟ್ರೀಯ ಜನಸಂಖ್ಯೆ ನೀತಿ ಇಂದಿನ ಅಗತ್ಯ. ಈ ವಿಚಾರವಾಗಿ ಸಮಾಜದಲ್ಲಿ ಚರ್ಚೆ ನಡೆಯಲಿ ಎಂದರು.
ಭಾರತದಲ್ಲಿ ಹಿಂದೂಗಳ ಜನಸಂಖ್ಯೆ ತಗ್ಗಿದೆ ಎಂದು ಆತಂಕ ಪಡಬೇಕಾಗಿಲ್ಲ, ಮತಾಂತರ ಹಾಗೂ ಒಳ ನುಸುಳುವಿಕೆಗೆ ಮೂಗುದಾರ ಹಾಕಿದರೆ ಸಾಕು. ಎಲ್ಲ ಸಮಸ್ಯೆಗೆ ತಾನಾಗಿಯೇ ಪರಿಹಾರ ದೊರಕುತ್ತದೆ ಎಂದ ಭಾಗವತ್, ಈ ವಿಷಯದಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆಯಾದರೂ ಅವು ಇನ್ನೂ ಪರಿಣಾಮಕಾರಿಯಾಗಿ ಮೂಡಿ ಬರಬೇಕೆಂದರು.