Indian Railways: ಬಂಗಾಳದಲ್ಲಿ ಭೀಕರ ಅಪಘಾತ,  ಹಳಿ ತಪ್ಪಿದ ರೈಲು,  ಐವರ ದುರ್ಮರಣ

By Kannadaprabha NewsFirst Published Jan 14, 2022, 3:38 AM IST
Highlights


* ಬಂಗಾಳದಲ್ಲಿ ರೈಲು ಹಳಿ ತಪ್ಪಿ ದುರಂತ: 5 ಸಾವು

* ಬಿಕಾನೇರ್‌- ಗುವಾಹಟಿ ಎಕ್ಸ್‌ಪ್ರೆಸ್‌ ರೈಲಿನಲ್ಲಿ ದುರ್ಘಟನೆ, 50 ಜನರಿಗೆ ತೀವ್ರ ಗಾಯ

* ಪಶ್ಚಿಮ ಬಂಗಾಳದ ಜಲ್‌ಪೈಗುರಿ ಜಿಲ್ಲೆಯ ದೊಮಾಹನಿ
*  ಗುರುವಾರ ಸಂಜೆ 5 ಗಂಟೆ ವೇಳೆಗೆ ಅಪಘಾತ

ನವದೆಹಲಿ/ಕೋಲ್ಕತಾ(ಜ. 14): ಬಿಕಾನೇರ್‌- ಗುವಾಹಟಿ (Bikaner-Guwahati Express ) ಎಕ್ಸ್‌ಪ್ರೆಸ್‌ ರೈಲಿನ (Indian Railways) ಬೋಗಿಗಳು ಹಳಿ ತಪ್ಪಿ 5 ಜನರು (Death) ಮೃತಪಟ್ಟು, 50ಕ್ಕೂ ಹೆಚ್ಚು ಜನರು ಗಾಯಗೊಂಡ ದುರ್ಘಟನೆ ಗುರುವಾರ ಸಂಜೆ ಪಶ್ಚಿಮ ಬಂಗಾಳದ (West Bengal)ಜಲ್‌ಪೈಗುರಿ ಜಿಲ್ಲೆಯಲ್ಲಿ ನಡೆದಿದೆ. ಘಟನಾ ಸ್ಥಳದಿಂದ 150ಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದೆ. ಇನ್ನೂ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದ್ದು, ತೀವ್ರ ನಜ್ಜುಗುಜ್ಜುಗೊಂಡಿರುವ ರೈಲಿನ ಬೋಗಿಯೊಳಗೆ ಸಿಕ್ಕಿಬಿದ್ದ ಪ್ರಯಾಣಿಕರನ್ನು ಹೊರತೆಗೆಯುವ ಕೆಲಸ ನಡೆಯುತ್ತಿದೆ. ಘಟನೆಯಲ್ಲಿ ಗಾಯಗೊಂಡಿರುವವರ ಪೈಕಿ ಕೆಲವರ ಸ್ಥಿತಿ ಗಂಭೀರವಾಗಿದ್ದು ಸಾವಿನ ಸಂಖ್ಯೆ ಹೆಚ್ಚುವ ಭೀತಿ ಇದೆ.

ಘಟನೆ ನಡೆದ ವೇಳೆ ಎಲ್ಲಾ ರಾಜ್ಯಗಳ ಸಿಎಂಗಳ ಜೊತೆ ಕೋವಿಡ್‌ ಸಭೆಯಲ್ಲಿ ಭಾಗಿಯಾಗಿದ್ದ ಪ್ರಧಾನಿ ನರೇಂದ್ರ ಮೋದಿ, ತಕ್ಷಣವೇ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಜೊತೆ ಮಾತುಕತೆ ನಡೆಸಿ ಮಾಹಿತಿ ಪಡೆದುಕೊಂಡಿದ್ದಾರೆ. ಮತ್ತೊಂದೆಡೆ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ಮತ್ತು ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ. ರೈಲ್ವೆ ಇಲಾಖೆಯು ಘಟನೆಯಲ್ಲಿ ಮಡಿದವರ ಕುಟುಂಬಕ್ಕೆ ತಲಾ 5 ಲಕ್ಷ ರು., ಗಂಭೀರವಾಗಿ ಗಾಯಗೊಂಡವರಿಗೆ ತಲಾ 1 ಲಕ್ಷ ಮತ್ತು ಸಾಮಾನ್ಯ ಗಾಯಕ್ಕೆ ತುತ್ತಾದವರಿಗೆ ತಲಾ 25000 ರು. ಪರಿಹಾರ ಘೋಷಿಸಿದೆ.

ಕಳೆದ ವರ್ಷ ಮೇ ತಿಂಗಳಿನಲ್ಲಿ ಮಹಾರಾಷ್ಟ್ರದ ಔರಂಗಾಬಾದ್‌ನಲ್ಲಿ ಹಳಿ ಮೇಲೆ ಮಲಗಿದ್ದ ವಲಸೆ ಕಾರ್ಮಿಕರ ಮೇಲೆ ರೈಲು ಹರಿದು 20 ಜನರು ಸಾವನ್ನಪ್ಪಿದ ಘಟನೆ ಬಳಿಕ ನಡೆದ ದೊಡ್ಡ ರೈಲು ದುರಂತದ ಘಟನೆ ಇದಾಗಿದೆ.

ಭೀಕರ ಘಟನೆ:  ಬಿಕಾನೇರ್‌- ಗುವಾಹಟಿ ಎಕ್ಸ್‌ಪ್ರೆಸ್‌ ರೈಲಿನ 12 ಬೋಗಿಗಳು ಗುರುವಾರ ಇಲ್ಲಿ ಹಳಿ ತಪ್ಪಿದ ಕಾರಣ ದೊಡ್ಡ ಅವಘಡ ಸಂಭವಿಸಿದೆ. ಅಪಘಾತದ ತೀವ್ರತೆಗೆ ಹಲವು ಬೋಗಿಗಳು ಹಳಿಯ ಪಕ್ಕದ ಇಳಿಜಾರಿನಲ್ಲಿ  ಉರುಳಿಬಿದ್ದಿದ್ದರೆ, ಕೆಲ ಬೋಗಿಗಳು ಒಂದರ ಮೇಲೊಂದು ಬಿದ್ದು, ಭೀಕರತೆಗೆ ಸಾಕ್ಷಿಯಾಗಿವೆ. ರೈಲಿನ ಎಸ್‌ 6 ಬೋಗಿ ಹೆಚ್ಚಿನ ಹಾನಿಗೆ ಒಳಗಾಗಿದ್ದು, ಅದರೊಳಗೆ ಇನ್ನೂ ಹಲವಾರು ಪ್ರಯಾಣಿಕರು ಸಿಕ್ಕಿಬಿದ್ದಿದ್ದಾರೆ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ರೈಲ್ವೆ ಸೇರಿದಂತೆ ವಿವಿಧ ರಕ್ಷಣಾ ತಂಡಗಳ ಧಾವಿಸಿದ್ದು ಜನರನ್ನು ರಕ್ಷಿಸುವ ಕೆಲಸದಲ್ಲಿ ಭಾಗಿಯಾಗಿವೆ.

ಮುಖ್ಯ ಮಾರ್ಗದಲ್ಲೇ ಅಪಘಾತ ಸಂಭವಿಸಿರುವ ಹಿನ್ನೆಲೆಯಲ್ಲಿ ಆ ಮಾರ್ಗದಲ್ಲಿ ಸಂಚರಿಸುವ ಎಲ್ಲಾ ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ. ಪ್ರಯಾಣದ ವೇಳೆ ಏಕಾಏಕಿ ದೊಡ್ಡ ಸದ್ದಾಯಿತು. ಏನಾಗುತ್ತಿದೆ ಎಂದು ಗೊತ್ತಾಗುವುದರ ಒಳಗೆ ಮೇಲೆ ಇಟ್ಟಿದ್ದ ಸರಕು, ಬ್ಯಾಗ್‌ ಮೈ ಮೇಲೆ ಉದುರಿಬಿದ್ದವು. ಕ್ಷಣಾರ್ಧದಲ್ಲಿ ಬೋಗಿ ಉರುಳಬಿತ್ತು ಎಂದು ಪ್ರತ್ಯಕ್ಷದರ್ಶಿಯೊಬ್ಬರು ತನ್ನ ಅನುಭವ ಹೇಳಿಕೊಂಡಿದ್ದಾರೆ.

ಸಿಬ್ಬಂದಿ ರಕ್ಷಿಸಿದ್ದರು: ಮಹಾರಾಷ್ಟ್ರದ ಮುಂಬೈ (Mumbai)  ಲೋಕಲ್‌ ರೈಲುಗಳಲ್ಲಿ (Local Trains) ದಿನನಿತ್ಯ ಲಕ್ಷಾಂತರ ಜನ ಪ್ರಯಾಣಿಸುತ್ತಾರೆ. ದಿನದ 24 ಗಂಟೆಯೂ ಕಾರ್ಯನಿರತವಾಗಿರುವ ಈ ನಗರದಲ್ಲಿ ಜನದಟ್ಟಣೆ ಹೆಚ್ಚು. ಕೆಲವೊಂದು ಬಾರಿ ಲೋಕಲ್ ಟ್ರೇನ್‌ ಭೋಗಿಗಳು ಜನರಿಂದ ತುಂಬಿ ತುಳುಕುತ್ತಿರುತ್ತವೆ. ಜನರು ಈ ರೈಲುಗಳನ್ನು ಹತ್ತಲು ಹರಸಾಹಸಪಡುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಕೆಲವೊಮ್ಮೆ ವೈರಲ್‌ (Viral) ಆಗುತ್ತವೆ.  ಹಿಗೇಯೆ ಚಲಿಸುತ್ತಿರುವ ರೈಲು ಹತ್ತಲು ಹೋಗಿ ಜಾರಿ ಬಿದ್ದ ಮಹಿಳೆಯೊಬ್ಬರನ್ನು ಆರ್‌ಪಿಎಫ್‌ ಮಹಿಳಾ ಸಿಬ್ಬಂದಿ ರಕ್ಷಿಸಿದ್ದರು. . ಮುಂಬೈನ ಸೈಂಡರ್ಸ್ಟ್‌ (Sandhurst) ರೈಲು ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್‌ ಆಗಿತ್ತು. 

 

 

 

click me!