ಪ್ರವಾಸಿಗರ ವಾಹನವನ್ನು ಓಡಿಸಿಕೊಂಡು ಹೋದ ಘೆಂಡಾಮೃಗ... ವಿಡಿಯೋ ನೋಡಿ

By Suvarna NewsFirst Published Dec 23, 2021, 1:53 PM IST
Highlights
  • ಪ್ರವಾಸಿಗರ ವಾಹನವನ್ನು ಬೆನ್ನಟ್ಟಿದ ಘೆಂಡಾಮೃಗ
  • ಅಸ್ಸಾಂನ ಮಾನಸ್‌ ರಾಷ್ಟ್ರೀಯ ಉದ್ಯಾನವನದಲ್ಲಿ ಘಟನೆ
  • ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌

ಅಸ್ಸೋಂ(ಡಿ. 23):  ಅಸ್ಸಾಂನ ಬಹ್ಬರಿ ಶ್ರೇಣಿ(Bahbari Range) ಯಲ್ಲಿ ಬರುವ ಮಾನಸ್‌ ರಾಷ್ಟ್ರೀಯ ಉದ್ಯಾನವನ(Manas National Park Assam) ದಲ್ಲಿ ದೊಡ್ಡದಾದ ಘೆಂಡಾಮೃಗವೊಂದು ಉದ್ಯಾನವನಕ್ಕೆ ಪ್ರವೇಶಿಸಿದ ಪ್ರವಾಸಿಗರ ವಾಹನವನ್ನು ಬೆನ್ನಟ್ಟಿದ ಘಟನೆಯೊಂದು ನಡೆದಿದ್ದು, ಇದರ ದೃಶ್ಯಾವಳಿಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಪ್ರವಾಸಿಗರ ಕಾರನ್ನು ಈ ಘೆಂಡಾಮೃಗ ಸುಮಾರು ದೂರದವರೆಗೆ ಬೆನ್ನಟ್ಟಿದೆ. ನಂತರ ಸ್ವಲ್ಪದರಲ್ಲೇ ಪರಿಸ್ಥಿತಿ ಅರಣ್ಯ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ  ಪರಿಸ್ಥಿತಿಯನ್ನು ನಿಭಾಯಿಸಿದ್ದಾರೆ ಎಂದು ತಿಳಿದು ಬಂದಿದೆ. 

ಅಸ್ಸಾಂನ ಮಾನಸ್‌ ರಾಷ್ಟ್ರೀಯ ಉದ್ಯಾನವನದಲ್ಲಿ ಕೋಪಗೊಂಡ ಘೆಂಡಾಮೃಗವೊಂದು ಪ್ರವಾಸಿಗರನ್ನು ಓಡಿಸುತ್ತಿರುವ ದೃಶ್ಯ ಎಂದು ಕ್ಯಾಪ್ಷನ್‌ ನೀಡಿ ಈ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ಶೇರ್‌ ಮಾಡಲಾಗಿದೆ. ಪ್ರಾಣಿಗಳು ತಮ್ಮ ವ್ಯಾಪ್ತಿಯಲ್ಲಿ ಮನುಷ್ಯರು ಪ್ರವೇಶಿಸುವುದನ್ನು ಇಷ್ಟ ಪಡುವುದಿಲ್ಲ ಎಂಬುವುದಕ್ಕೆ ಇದೊಂದು ಉದಾಹರಣೆ ಆಗಿದೆ.  2019 ರಲ್ಲಿ, ದಕ್ಷಿಣ ಆಫ್ರಿಕಾ (South African)ಕಾಡೊಂದರಲ್ಲಿ ಸಫಾರಿ ವಾಹನವನ್ನು ಕೋಪಗೊಂಡ ಬಿಳಿ ಘೇಂಡಾಮೃಗ (white rhino)ವು ಬೆನ್ನಟ್ಟಿದ್ದರಿಂದ ಪ್ರವಾಸಿಗರಿಗೆ ಭಯಾನಕ ಅನುಭವವಾಗಿತ್ತು. ಪ್ರವಾಸಿ ವಾಹನವನ್ನು ಅತಿವೇಗವಾಗಿ ಬೆನ್ನಟ್ಟಿದ ದೃಶ್ಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

An Angry rhino chasing tourist vehicle at Manas National Park Assam. pic.twitter.com/1SsmsaBGMN

— Nandan Pratim Sharma Bordoloi 🇮🇳 (@NANDANPRATIM)

 

ಪ್ರವಾಸಿಗರು ಮೊದಲು ಘೇಂಡಾಮೃಗವನ್ನು ಸಾಬಿ ಸ್ಯಾಂಡ್ಸ್( Sabi sands) ಪ್ರದೇಶದ ಸಮೀಪವಿರುವ ರಸ್ತೆಯಲ್ಲಿ ಗುರುತಿಸಿದರು. ನಂತರ ನಿಧಾನವಾಗಿ ಹೋಗಲು ಆರಂಭಿಸಿದ್ದರು. ನಂತರ ಮತ್ತೆ ಕಾಣಿಸಿಕೊಂಡ ಘೆಂಡಾಮೃಗ ಅವರನ್ನು ಬೆನ್ನಟ್ಟಲು ಶುರು ಮಾಡಿತ್ತು ಎಂದು ಚಿರತೆಗಳ ಛಾಯಾಚಿತ್ರಗಳನ್ನು ತೆಗೆದುಕೊಳ್ಳುತ್ತಿದ್ದ ಹಾಗೂ ಈ ಪ್ರವಾಸಿಗರ ಗುಂಪಿನ ಮುಂದಾಳತ್ವವನ್ನು ವಹಿಸಿದ್ದ ರಿಯಾನ್ ಬೋಶಾಫ್ ( Rian Boshoff),ಮಾಧ್ಯಮಕ್ಕೆ ಘಟನೆ ಬಗ್ಗೆ ವಿವರಿಸಿದ್ದರು.  ತೀರಾ ಇತ್ತೀಚೆಗೆ, ಕೋಪಗೊಂಡಿದ್ದ ಘೆಂಡಾಮೃಗವೊಂದು ನೀರಿನಲ್ಲಿ ಗ್ಲೈಡ್‌ ಮಾಡುತ್ತಾ ವಿಹಾರಕ್ಕೆ ಬಂದ ಪ್ರವಾಸಿಗರನ್ನು ಬೆನ್ನಟ್ಟುತ್ತಿರುವ ದೃಶ್ಯ  ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಪ್ರವಾಸಿಗರಿದ್ದ ದೋಣಿಯೊಂದನ್ನು ನಾಲ್ಕು ಘೆಂಡಾಮೃಗಗಳು ಬೆನ್ನಟ್ಟಿದ್ದವು. 

ಲಾಕ್‌ಡೌನ್‌ ವೇಳೆ ರಸ್ತೆಗಿಳಿದವನ ಅಡ್ಡಾಡಿಸಿದ ಖಡ್ಗಮೃಗ!

ಈ ಹಿಂದೆ ಲಾಕ್‌ಡೌನ್ ಸಮಯದಲ್ಲಿ ನೇಪಾಳದಲ್ಲೂ ಹೀಗೆ ಆಗಿತ್ತು.  ಚಿತ್ವಾನ್‌ ನ್ಯಾಷನಲ್‌ ಪಾರ್ಕ್‌ನಿಂದ ತಪ್ಪಿಸಿಕೊಂಡು ಬಂದ ಘೆಂಡಾಮೃಗವೊಂದು  ರಸ್ತೆಯಲ್ಲಿ ರಾಜಾರೋಷವಾಗಿ ಓಡಾಡಿತ್ತು. ಇಷ್ಟೇ ಅಲ್ಲದೇ  ವ್ಯಕ್ತಿಯೊಬ್ಬನನ್ನು ಅಟ್ಟಿಸಿಕೊಂಡು ಹೋಗಿತ್ತು. ಆದರೆ ಲಾಕ್‌ಡೌನ್‌ ಇದ್ದಿದ್ದರಿಂದ ಘೆಂಡಾಮೃಗವನ್ನು ನಿಯಂತ್ರಿಸಲು ಯಾರೂ ಇರಲಿಲ್ಲ. ಬಳಿಕ ನಗರವನ್ನು ಒಂದು ಸುತ್ತು ಹಾಕಿದ ಬಳಿಕ ಖಡ್ಗಮೃಗ ತಾನಾಗಿಯೇ ಗೂಡು ಸೇರಿಕೊಂಡಿತ್ತು.

ಮೈಸೂರು ಝೂಗೆ ವಿಮಾನದಲ್ಲಿ ಬಂದ ಬಿಳಿ ಘೇಂಡಾಮೃಗ

ರಾಷ್ಟ್ರೀಯ ಉದ್ಯಾನವನಗಳಿಗೆ ಪ್ರಾಣಿ ಸಂಗ್ರಹಾಲಯಗಳಿಗೆ ಪ್ರವಾಸ ಹೋದಾಗ ಪ್ರವಾಸಿಗರು ಕಾಡು ಪ್ರಾಣಿಗಳ ಭಯಕ್ಕೆ ಒಳಗಾಗುವುದು ಸಾಮಾನ್ಯ ದೃಶ್ಯವಾಗಿದೆ. ಸಫಾರಿ ಇತ್ಯಾದಿ ಸಮಯದಲ್ಲಿ ಪ್ರಾಣಿಗಳು ಕಾರುಗಳು ಮತ್ತು ಪ್ರವಾಸಿಗರ ಗುಂಪುಗಳನ್ನು ಹಿಂಬಾಲಿಸಿದ ಘಟನೆಗಳು ಆಗಾಗ ನಡೆಯುತ್ತಿರುತ್ತವೆ. ಸಾಮಾನ್ಯವಾಗಿ, ಈ ಘಟನೆಗಳಲ್ಲಿ ಯಾರಿಗೂ ಗಾಯಗಳಾಗದಿದ್ದರೂ, ಪ್ರವಾಸಿಗರಿಗೆ ತೊಂದರೆಯಾಗುವ ಸಂಭವ ಹೆಚ್ಚಿರುತ್ತದೆ. ಪ್ರಾಣಿಗಳು ಬೆನ್ನಟ್ಟುವುದು ಹಾಗೂ ದಾಳಿ ಮಾಡುವುದು ಎರಡೂ ಭಿನ್ನವಾದ ವಿಷಯಗಳೇ ಆಗಿವೆ. ಅಸ್ಸಾಂನ ಮಾನಸ್ ರಾಷ್ಟ್ರೀಯ ಉದ್ಯಾನವನದಲ್ಲಿ ನಡೆದ ಈ ಭಯಾನಕ ಘಟನೆಯ ದೃಶ್ಯಗಳು ನೀವು ಎಂದಾದರೂ ರಾಷ್ಟ್ರೀಯ ಉದ್ಯಾನವನಕ್ಕೆ ಹೋಗುವ ಯೋಜನೆ ರೂಪಿಸಿದ್ದರೆ ನಿಮ್ಮನ್ನು ಹೋಗಬೇಕೇ ಬೇಡವೇ ಎಂದು ಯೋಚಿಸುವಂತೆ ಮಾಡುವುದಂತೂ ಸತ್ಯ.

 

click me!