
ಹೈದರಾಬಾದ್ (ಆ.15): 'ಅಲ್ಪಸಂಖ್ಯಾತ (ಮುಸ್ಲಿಂ) ವಿದ್ಯಾರ್ಥಿಗಳು ರಫೇಲ್ ಯುದ್ಧ ವಿಮಾನವನ್ನೇ ಬಿಚ್ಚಿ ಮತ್ತೆ ಯಶಸ್ವಿಯಾಗಿ ಜೋಡಿಸುವಷ್ಟು ಪ್ರಾವೀಣ್ಯ ಹೊಂದಿದ್ದಾರೆ. ಆದರೆ, ಪುಸ್ತಕಗಳಲ್ಲಿ ಓದಿದ ವಿಷಯ ನೆನಪಿನಲ್ಲಿಟ್ಟುಕೊಳ್ಳಲು ಹೆಣಗಾಡುತ್ತಾರೆ' ಎಂದು ತೆಲಂಗಾಣ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಹೇಳಿದ್ದಾರೆ. ಅಲ್ಪಸಂಖ್ಯಾತರ ಶ್ರೇಷ್ಠತಾ ಸಮಾವೇಶದಲ್ಲಿ ಮಾತನಾಡಿದ ಅವರು, 'ಅಲ್ಪಸಂಖ್ಯಾತ ಯುವಕರು ಅತ್ಯಂತ ನುರಿತ ಕೌಶಲ್ಯದ ಕಾರ್ಮಿಕರಾಗಿದ್ದಾರೆ. ಅವರು ಬಯಸಿದರೆ ರಫೇಲ್ ಯುದ್ಧ ವಿಮಾನವನ್ನೇ ಬಿಚ್ಚಿ ಮತ್ತೆ ಯಶಸ್ವಿ ಯಾಗಿ ಜೋಡಿಸಬಲ್ಲರು. ಆದರೆ, ಪುಸ್ತಕಗಳಲ್ಲಿ ತಾವು ಓದಿದ ವಿಷಯ ನೆನಪಿನಲ್ಲಿಟ್ಟುಕೊಳ್ಳಲು ಹೆಣಗಾಡುತ್ತಾರೆ ಅಥವಾ ಮರೆತುಬಿಡುತ್ತಾರೆ' ಎಂದರು.
'ಅಲ್ಪಸಂಖ್ಯಾತ ಸಮುದಾಯದವರು ವಿದ್ಯುತ್ ಕಳ್ಳತನ ಮಾಡುತ್ತಾರೆ ಮತ್ತು ಬಿಲ್ ಪಾವತಿಸಲ್ಲ ಎಂದು ಶಾಸಕರು ಸೇರಿ ಅನೇ ಕರು ಆಗಾಗ್ಗೆ ದೂರು ನೀಡುತ್ತಾರೆ. ಆದರೆ ತೆಲಂಗಾಣದಲ್ಲಿ ಕಾಂಗ್ರೆಸ್ ಸರ್ಕಾರವು ಉಚಿತವಾಗಿ ನೀಡುತ್ತಿರುವ 200 ಯೂನಿಟ್ ವಿದ್ಯುತ್ ನಮ್ಮ ಅಲ್ಪಸಂಖ್ಯಾತ ಸಮುದಾಯದ ಸಹೋದರ-ಸಹೋದರಿಯರಿಗೆ ಹೆಚ್ಚು ಉಪಯುಕ್ತವಾಗಿದೆ' ಎಂದಿದ್ದಾರೆ.
ಇದೇ ವೇಳೆ ಸರ್ಕಾರದ ಇತರ ಜನಪ್ರಿಯ ಯೋಜನೆಗಳಾದ ಶಾದಿ ಮುಬಾರಕ್, ಕಲ್ಯಾಣ ಲಕ್ಷ್ಮಿ, ಇಂದಿರಮ್ಮ ಇಂಡ್ಲು (ವಸತಿ ಯೋಜನೆ), ಮಹಾಲಕ್ಷ್ಮಿ (ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ) ಹಾಗೂ ರೈತ ಭರೋಸಾ ಯೋಜನೆಗಳ ಬಗ್ಗೆ ಮಾತನಾಡಿದ್ದಾರೆ.
ತಮ್ಮ ಸರ್ಕಾರವು ಜಾತ್ಯತೀತತೆಗೆ ಬದ್ಧವಾಗಿದೆ ಎಂದ ರೇವಂತ್ ರೆಡ್ಡಿ, ನನಗೆ ಹಿಂದೂ ಮತ್ತು ಮುಸ್ಲಿಮರು ಬೇರೆ ಬೇರೆಯಲ್ಲ, ಅವರಿಬ್ಬರೂ ನನ್ನ ಎರಡು ಕಣ್ಣುಗಳಿದ್ದಂತೆ. ಹಿಂದೂಗಳಿಗೆ ಸಿಗುವ ಎಲ್ಲಾ ಸೌಲಭ್ಯಗಳು ಮುಸ್ಲಿಮರಿಗೂ ತಲುಪುವಂತೆ ಮಾಡುವುದು ನಮ್ಮ ಸರ್ಕಾರದ ಗುರಿ ಎಂದರು.
ಹಿಂದಿನ ಕಾಂಗ್ರೆಸ್ ಆಡಳಿತಾವಧಿಯಲ್ಲಿ ಮಾಜಿ ಸಿಎಂ ವೈ.ಎಸ್. ರಾಜಶೇಖರ ರೆಡ್ಡಿ, ಮಾಜಿ ಸಚಿವ ಮೊಹಮ್ಮದ್ ಅಲಿ ಶಬ್ಬೀರ್ ಮತ್ತಿತರ ನಾಯಕರು ಅಲ್ಪಸಂಖ್ಯಾತರಿಗೆ ನೀಡಿದ ಕೊಡುಗೆ ಹಾಗೂ ಶೇ. 4 ರಷ್ಟು ಮೀಸಲಾತಿಯನ್ನು ಜಾರಿಗೆ ತಂದಿದ್ದನ್ನು ಅವರು ಸ್ಮರಿಸಿದರು. ಯಾವುದೇ ನಿರ್ದಿಷ್ಟ ಪಕ್ಷ ಅಥವಾ ವ್ಯಕ್ತಿಯ ಹೆಸರು ಹೇಳದೆ, ಕೆಲವರು ಅಲ್ಪಸಂಖ್ಯಾತರ ಪರವಾಗಿ ಮಾತನಾಡಿದರೆ ಇಡೀ ಸಮುದಾಯವನ್ನು 'ದೇಶವಿರೋಧಿ' ಎಂಬಂತೆ ಬಿಂಬಿಸುವ ವಾತಾವರಣ ನಿರ್ಮಿಸುತ್ತಿದ್ದಾರೆ. ಇದು ಸಮಾಜವನ್ನು ಒಡೆಯುವ ತಂತ್ರ ಎಂದು ಕಿಡಿಕಾರಿದರು.
ಸಿಎಂ ರೇವಂತ್ ರೆಡ್ಡಿ ಅವರ ಈ ಹೇಳಿಕೆಗಳ ವಿರುದ್ಧ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ತೆಲಂಗಾಣ ಬಿಜೆಪಿ ಕಾರ್ಯದರ್ಶಿ ಸೋಶಿಯಲ್ ಮೀಡಿಯಾದಲ್ಲಿ (X) ಪ್ರತಿಕ್ರಿಯಿಸಿ, ಸರ್ಕಾರವು ಕಾನೂನನ್ನು ಎಲ್ಲರಿಗೂ ಸಮಾನವಾಗಿ ಜಾರಿಗೊಳಿಸಬೇಕೆ ಹೊರತು ಒಂದು ನಿರ್ದಿಷ್ಟ ಸಮುದಾಯಕ್ಕೆ ವಿಶೇಷ ಆದ್ಯತೆ ನೀಡಬಾರದು. ನಿಮ್ಮಿಂದ ಕಾನೂನು ಪಾಲನೆ ಮಾಡಲು ಸಾಧ್ಯವಾಗದಿದ್ದರೆ ರಾಜೀನಾಮೆ ನೀಡಿ ನಿರ್ಗಮಿಸಿ, ಆದರೆ ಕರಾರಿಗೆ ಶರಣಾಗಬೇಡಿ ಎಂದು ಸವಾಲು ಹಾಕಿದ್ದಾರೆ.
ಓಲ್ಡ್ ಸಿಟಿಯ ವಿದ್ಯುತ್ ಬಿಲ್ ವಿಚಾರಕ್ಕೆ ಕೌಂಟರ್ ನೀಡಿದ ಗೌಡ್, "ಬಾಕಿ ವಿದ್ಯುತ್ ಬಿಲ್ ಪಾವತಿಸದಿದ್ದಾಗ ಕಾನೂನು ಪ್ರಕಾರ ಕ್ರಮ ಕೈಗೊಳ್ಳುವುದನ್ನು ಬಿಟ್ಟು, ಬಿಲ್ ಕಟ್ಟಿಲ್ಲ ಎಂಬ ಒಂದೇ ಕಾರಣಕ್ಕೆ ಯೋಜನೆಗಳ ಹೆಸರಿನಲ್ಲಿ ಉಚಿತ ವಿದ್ಯುತ್ ನೀಡುವುದು ಸಂವಿಧಾನಬಾಹಿರ. ವಿದ್ಯುತ್ ಬಿಲ್ ವಸೂಲಿ ಮಾಡಲು ಸಾಧ್ಯವಾಗದ ಸರ್ಕಾರ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹೇಗೆ ಕಾಪಾಡುತ್ತದೆ?" ಎಂದು ಪ್ರಶ್ನೆ ಮಾಡಿದ್ದಾರೆ. ಅಲ್ಲದೆ, "ಕಾಂಗ್ರೆಸ್ ಎಂದರೆ ಮುಸ್ಲಿಂ, ಮುಸ್ಲಿಂ ಎಂದರೆ ಕಾಂಗ್ರೆಸ್ ಎಂದಾದರೆ, ನೀವು ರೇವಂತ್ ರೆಡ್ಡಿನೋ ಅಥವಾ 'ರೇವಂತ್ ಉದ್ದೀನ್'ನೋ?" ಎಂದು ತೀವ್ರವಾಗಿ ಟೀಕಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ