
ನವದೆಹಲಿ: ಸೇನೆಯಲ್ಲಿ ಅಲ್ಪಾವಧಿ ಸೇವೆಗೆ (4 ವರ್ಷ) ಅವಕಾಶ ಕಲ್ಪಿಸುವ ಅಗ್ನಿವೀರರು, ನಿವೃತ್ತಿಯಾದ ಬಳಿಕ ಅವರನ್ನು ದೇಶದ ಖಾಸಗಿ ಭದ್ರತಾ ಸಂಸ್ಥೆಗಳಿಗೆ ನೇಮಕ ಮಾಡಿಕೊಳ್ಳುವ ಸಂಬಂಧ ಕೇಂದ್ರ ಗೃಹ ಸಚಿವಾಲಯ ಅಧಿಸೂಚನೆ ಹೊರಡಿಸಿದೆ.
ಯೋಜನೆ ಆರಂಭವಾದ ನಿವೃತ್ತಿ ಅವಧಿಗೆ ಬಂದವರ ಪೈಕಿ ಶೇ.25ರಷ್ಟು ಜನರನ್ನು ಸೇನೆಯಲ್ಲಿ ಖಾಯಂ ಆಗಿ ನೇಮಿಸಿಕೊಳ್ಳುವುದಾಗಿ ಕೇಂದ್ರ ಸರ್ಕಾರ ಹೇಳಿತ್ತು. ಬಳಿಕ ಈ ಪ್ರಮಾಣವನ್ನು ಶೇ.75ಕ್ಕೆ ಹೆಚ್ಚಿಸಿತ್ತು. ಆದರೆ ಇದೀಗ ದೇಶದ ಟಾಪ್ 10 ಖಾಸಗಿ ಭದ್ರತಾ ಸಂಸ್ಥೆಗಳು, ನಿವೃತ್ತಿ ಅಗ್ನಿವೀರರನ್ನು ನೇಮಕ ಮಾಡಿಕೊಳ್ಳಲಿವೆ ಎಂದು ಸರ್ಕಾರ ಹೇಳಿರುವುದು ವಿವಾದಕ್ಕೆ ಕಾರಣವಾಗಿದೆ.
ಈ ಕುರಿತು ಆಕ್ಷೇಪ ವ್ಯಕ್ತಪಡಿಸಿರುವ ವಿಪಕ್ಷ ಕಾಂಗ್ರೆಸ್, ‘ನಿವೃತ್ತ ಅಗ್ನಿವೀರರಿಗೆ ಪಿಂಚಣಿ ಬರುವಂತಹ ಸರ್ಕಾರಿ ಉದ್ಯೋಗಗಳನ್ನು ಒದಗಿಸುವ ಭರವಸೆಯನ್ನು ನೀಡಿರುವಾಗ ಈಗ ಇಂಥ ನಿರ್ಧಾರವನ್ನೇಕೆ ಮಾಡಲಾಗಿದೆ?’ ಎಂದು ಪ್ರಶ್ನಿಸಿದೆ.
ಇದನ್ನೂ ಓದಿ: ಬಿಹಾರಕ್ಕೆ ಕರ್ನಾಟಕ ಮಾಡೆಲ್ ಗ್ಯಾರಂಟಿ: ಮನೆಗೊಂದು ಉದ್ಯೋಗ, 200 ಯುನಿಟ್ ಫ್ರೀ ವಿದ್ಯುತ್
ಕಾಂಗ್ರೆಸ್‌ನ ಮಾಜಿ ಸೈನಿಕರ ವಿಭಾಗದ ಅಧ್ಯಕ್ಷ ನಿವೃತ್ತ ಕರ್ನಲ್ ರೋಹಿತ್ ಚೌಧರಿ, ‘ಆಪರೇಷನ್ ಸಿಂದೂರದಲ್ಲಿ ಅದ್ಭುತ ಪ್ರದರ್ಶನ ತೋರಿದ ಅಗ್ನಿವೀರರನ್ನು ಪ್ರೋತ್ಸಾಹಿಸಲು ಮೋದಿ ಸರ್ಕಾರಕ್ಕೆ ಸಾಧ್ಯವಾಗದಿದ್ದರೆ ಹೀಗೆ ವಂಚಿಸಬಾರದಿತ್ತು. ದೇಶದಲ್ಲಿ ಅತಿ ಕಡಿಮೆ ನುರಿತ ಸೈನಿಕರಿದ್ದು, ಮೋದಿ ಸರ್ಕಾರವು ಯೋಧರ ಪಿಂಚಣಿ ಹಣದಿಂದ ತನ್ನ ಬಂಡವಾಳಶಾಹಿ ಮಿತ್ರರ ಜೇಬನ್ನು ತುಂಬಿಸುತ್ತಿದೆ ಎಂದು ರಾಹುಲ್ ಗಾಂಧಿ ನಿರಂತರವಾಗಿ ಹೇಳುತ್ತಿದ್ದರು. ಈಗ ಅಗ್ನಿವೀರರನ್ನು ಖಾಸಗಿ ಭದ್ರತಾ ಸಂಸ್ಥೆಗಳಿಗೆ ಸೇರಿಸಲಾಗುವುದು ಎಂದು ಸರ್ಕಾರ ಹೇಳಿದೆ. ಅವರನ್ನು ಖಾಸಗಿ ಸೈನ್ಯವನ್ನಾಗಿ ಪರಿವರ್ತಿಸಿ ದೇಶ ಮತ್ತು ವಿದೇಶಗಳಲ್ಲಿ ಯುದ್ಧಗಳಿಗೆ ತಳ್ಳುವುದಕ್ಕೆ ನಮಗೆ ಒಪ್ಪಿಗೆಯಿಲ್ಲ. ಸೈನಿಕರ ಹಿತದೃಷ್ಟಿಯಿಂದ ನಾವು ಪ್ರಶ್ನೆಗಳನ್ನು ಎತ್ತುತ್ತಲೇ ಇರುತ್ತೇವೆ’ ಎಂದು ಹೇಳಿದ್ದಾರೆ. ಜತೆಗೆ, ಅಗ್ನಿವೀರ ಯೋಜನೆಯನ್ನೇ ರದ್ದುಮಾಡಲು ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಸುಳ್ಳು ಕೇಸಲ್ಲಿ ಶಿಕ್ಷೆಯಾಗಿ ಗುರಿಯಾದವರಿಗೆ ಪರಿಹಾರ ನೀಡಲು ಸಾಧ್ಯವೇ? ಸುಪ್ರೀಂ ಕೋರ್ಟ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ