
ನವದೆಹಲಿ : ಭಾರತದ ಶ್ರೀಮಂತ ಸಾಂಸ್ಕೃತಿಕ ವೈವಿಧ್ಯ, ಆರ್ಥಿಕ ಪ್ರಗತಿ ಮತ್ತು ಸೈನಿಕ ಶಕ್ತಿಯ ಅನಾವರಣದ ಮೂಲಕ 77ನೇ ಗಣರಾಜ್ಯ ದಿನ ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಸೋಮವಾರ ವಿಜೃಂಭಣೆಯಿಂದ ನಡೆಯಿತು. ಯುರೋಪಿಯನ್ ಕೌನ್ಸಿಲ್‌ನ ಅಧ್ಯಕ್ಷ ಆ್ಯಂಟೋನಿಯೋ ಕೋಸ್ಟಾ, ಯುರೋಪಿಯನ್ ಆಯೋಗದ ಅಧ್ಯಕ್ಷೆ ಉರ್ಸುಲಾ ವೊನ್ ಡೇರ್ ಲೆಯೆನ್ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಭಾರತದ ರಾಜತಾಂತ್ರಿಕ ಶಕ್ತಿಗೆ ಮೆರುಗು ನೀಡಿದರು. ರಾಷ್ಟ್ರೀಯ ಗೀತೆ ವಂದೇ ಮಾತರಂಗೆ 150 ವರ್ಷಗಳು ಪೂರ್ಣವಾದ ಹಿನ್ನೆಲೆ ಈ ಗೀತೆ ಮತ್ತು ಆಪರೇಷನ್ ಸಿಂದೂರದ ವಿಜಯಕ್ಕೆ ಹೆಚ್ಚಿನ ಪ್ರಾಮುಖ್ಯ ಕೊಟ್ಟು ಇಡೀ ಕಾರ್ಯಕ್ರಮವನ್ನು ರೂಪಿಸಲಾಗಿತ್ತು. ರಾಷ್ಟ್ರಪತಿ ದ್ರೌಪದಿ ಮುರ್ಮು, ಕೋಸ್ಟಾ ಮತ್ತು ಲೆಯೆನ್ ಕರ್ತವ್ಯಪಥಕ್ಕೆ ಆಗಮಿಸಿದ ಬಳಿಕ ಅವರಿಗೆ ಗೌರವರಕ್ಷೆ ನೀಡಲಾಯಿತು. ಆ ಬಳಿಕ ಕಾರ್ಯಕ್ರಮ ಆರಂಭವಾಯಿತು. ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇರಿದಂತೆ ಹಲವು ಕೇಂದ್ರ ಸಚಿವರು, ಉನ್ನತ ಸೇನಾಧಿಕಾರಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಬ್ರಹ್ಮೋಸ್ ಮತ್ತು ಆಕಾಶ್ ಕ್ಷಿಪಣಿ ವ್ಯವಸ್ಥೆ, ರಾಕೆಟ್ ಲಾಂಚರ್ ‘ಸೂರ್ಯಸ್ತ್ರ’, ಯುದ್ಧ ಟ್ಯಾಂಕ್ ಅರ್ಜುನ್ ಮೊದಲಾದ ಪ್ರಮುಖ ಶಸ್ತ್ರಾಸ್ತ್ರ ವ್ಯವಸ್ಥೆಗಳನ್ನು ಪ್ರದರ್ಶಿಸಲಾಯಿತು. ‘ವಿವಿಧತೆಯಲ್ಲಿ ಏಕತೆ’ ವಿಷಯದ ಮೇಲೆ ಸುಮಾರು 100 ಕಲಾವಿದರು ಪಥಸಂಚಲನವನ್ನು ಉದ್ಘಾಟಿಸಿದರು. ಈ ವೇಳೆ ದೇಶದ ಏಕತೆ ಮತ್ತು ಶ್ರೀಮಂತ ಸಾಂಸ್ಕೃತಿಕ ವೈವಿಧ್ಯವನ್ನು ಪ್ರದರ್ಶಿಸುವ ಸಂಗೀತ ವಾದ್ಯಗಳ ಭವ್ಯ ಪ್ರದರ್ಶನವಿತ್ತು. ರಾಷ್ಟ್ರಪತಿ ಮುರ್ಮು ಅವರು ಗೌರವರಕ್ಷೆ ಸ್ವೀಕರಿಸಿದ ಬಳಿಕ ಪಥಸಂಚಲನ ಆರಂಭವಾಯಿತು. ಇದನ್ನು ಲೆ.ಜ. ಭವನೀಶ್ ಕುಮಾರ್ ಮುನ್ನಡೆಸಿದರು.
ಆಪರೇಷನ್ ಸಿಂದೂರ ಸಮಯದಲ್ಲಿ ಭಾರತೀಯ ಸೇನೆ ನಿಯೋಜಿಸಿದ ಪ್ರಮುಖ ಶಸ್ತ್ರಾಸ್ತ್ರ ವ್ಯವಸ್ಥೆಗಳ ಸ್ತಬ್ಧಚಿತ್ರವು ಪ್ರಮುಖ ಆಕರ್ಷಣೆಯಾಗಿತ್ತು. ಆಕಾಶ್, ಬ್ರಹ್ಮೋಸ್, ಎಸ್-400ನಂತಹ ಕ್ಷಿಪಣಿಗಳ ಸ್ತಬ್ಧಚಿತ್ರಗಳು ಗಮನ ಸೆಳೆದವು. ಟಿ-90 ಭೀಷ್ಮ ಮತ್ತು ಪ್ರಚಂಡ ಲಘು ಯುದ್ಧವಿಮಾನಗಳ ವೈಮಾನಿಕ ಪ್ರದರ್ಶನ ನಡೆಯಿತು. ಯುರೋಪಿಯನ್ ಒಕ್ಕೂಟದ (ಇಯು) ಧ್ವಜವನ್ನು ಹೊತ್ತ ಸೇನಾ ತುಕಡಿ ಮೆರವಣಿಗೆಯಲ್ಲಿ ಕಾಣಿಸಿಕೊಂಡಿತು. ಇದು ಯುರೋಪ್‌ನ ಹೊರಗೆ ಈ ರೀತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಇದೇ ಮೊದಲು.144 ಯುವ ಸಿಬ್ಬಂದಿಯನ್ನೊಳಗೊಂಡ ಭಾರತೀಯ ನೌಕಾ ತುಕಡಿ, ‘ಬಲಿಷ್ಠ ರಾಷ್ಟ್ರಕ್ಕಾಗಿ ಬಲಿಷ್ಠ ನೌಕಾಪಡೆ’ ಎಂಬ ವಿಷಯವನ್ನು ಪ್ರತಿಬಿಂಬಿಸುವ ನೌಕಾ ಸ್ತಬ್ಧಚಿತ್ರಗಳು ಪಥಸಂಚಲನದಲ್ಲಿ ಸಾಗಿಬಂದವು.
ಈ ವೇಳೆ ಸಿಂದೂರದ ಆಕೃತಿಯಲ್ಲಿ 2 ರಫೇಲ್ ಜೆಟ್‌ಗಳು, 2 ಮಿಗ್ -29, 2 ಸು-30 ಮತ್ತು ಒಂದು ಜಾಗ್ವಾರ್ ವಿಮಾನಗಳು ಪಥಸಂಚಲನ ನಡೆಸುತ್ತಿದ್ದ ತುಕಡಿಯೊಂದಿಗೆ ರೋಮಾಂಚಕ ಹಾರಾಟ ನಡೆಸಿದವು. 17 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳು, 13 ವಿವಿಧ ಸಚಿವಾಲಯಗಳು ಮತ್ತು ಇಲಾಖೆಗಳು ಸೇರಿದಂತೆ ಒಟ್ಟು 30 ಸ್ತಬ್ಧಚಿತ್ರಗಳು ಕರ್ತವ್ಯಪಥದಲ್ಲಿ ಸಾಗಿದವು. ಇವು ವಂದೇ ಮಾತರಂನ 150 ವರ್ಷಗಳ ಸಂಭ್ರಮವನ್ನು ಪ್ರತಿಬಿಂಬಿಸಿದವು. ಕೇಂದ್ರ ಮೀಸಲು ಪೊಲೀಸ್ ಪಡೆ ಮತ್ತು ಸಶಸ್ತ್ರ ಸೀಮಾ ಬಲದ ಬೈಕ್ ಸವಾರರ ತಂಡ ಪ್ರೇಕ್ಷಕರನ್ನು ಮೋಡಿ ಮಾಡಿತು. 16 ಯುದ್ಧವಿಮಾನಗಳು,4 ಸಾರಿಗೆ ವಿಮಾನಗಳು ಮತ್ತು 9 ಹೆಲಿಕಾಪ್ಟರ್‌ಗಳು ಸೇರಿದಂತೆ ಒಟ್ಟು 29 ವಿಮಾನಗಳು ವೈಮಾನಿಕ ಹಾರಾಟ ನಡೆಸಿ ಪ್ರೇಕ್ಷಕರ ಮನಸೆಳೆದವು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ