ಯುಜಿಸಿ ನಿಯಮಕ್ಕೆ ವಿರೋಧ: ಮ್ಯಾಜಿಸ್ಟ್ರೇಟ್‌, 11 ಬಿಜೆಪಿಗರ ರಾಜೀನಾಮೆ

Kannadaprabha News   | Kannada Prabha
Published : Jan 27, 2026, 04:54 AM IST
BJP Flag pic

ಸಾರಾಂಶ

 ಯುಜಿಸಿ ಕಳೆದ ಜ.13ರಂದು ಹೊರಡಿಸಿದ್ದ ಅಧಿಸೂಚನೆ ವಿವಾದಕ್ಕೀಡಾಗಿದ್ದು, ಉತ್ತರ ಪ್ರದೇಶದ ಬರೇಲಿ ಸಿಟಿ ಮ್ಯಾಜಿಸ್ಟ್ರೇಟ್‌ ಅಲಂಕಾರ್ ಅಗ್ನಿಹೋತ್ರಿ ರಾಜೀನಾಮೆ ನೀಡಿದ್ದಾರೆ. ಇದಲ್ಲದೆ, ಈ ನಿಯಮ ವಿರೋಧಿಸಿ ಲಖನೌನ ಮೇಲ್ವರ್ಗದ 11 ಬಿಜೆಪಿ ನಾಯಕರು ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ

ಲಖನೌ: ಯುಜಿಸಿ ಕಳೆದ ಜ.13ರಂದು ಹೊರಡಿಸಿದ್ದ ಅಧಿಸೂಚನೆ ವಿವಾದಕ್ಕೀಡಾಗಿದ್ದು, ಉತ್ತರ ಪ್ರದೇಶದ ಬರೇಲಿ ಸಿಟಿ ಮ್ಯಾಜಿಸ್ಟ್ರೇಟ್‌ ಅಲಂಕಾರ್ ಅಗ್ನಿಹೋತ್ರಿ ರಾಜೀನಾಮೆ ನೀಡಿದ್ದಾರೆ. ಇದಲ್ಲದೆ, ಈ ನಿಯಮ ವಿರೋಧಿಸಿ ಲಖನೌನ ಮೇಲ್ವರ್ಗದ 11 ಬಿಜೆಪಿ ನಾಯಕರು ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.ಅಧಿಸೂಚನೆ ಪ್ರಕಾರ ಕಾಲೇಜು ಮತ್ತು ವಿವಿಗಳಲ್ಲಿ ಜಾತಿ ತಾರತಮ್ಯವನ್ನು ನಿಲ್ಲಿಸಲು ಸಮಿತಿ ರಚನೆ ಕಡ್ಡಾಯವಾಗಿದೆ. ಈ ಸಮಿತಿಗೆ ಎಸ್ಸಿಎಸ್ಟಿ, ಒಬಿಸಿ ವಿದ್ಯಾರ್ಥಿಗಳು ದೂರು ನೀಡಬಹುದು. ಆದರೆ ಈ ನಿಯಮವು ಮೇಲ್ವರ್ಗದವರು ಅದರಲ್ಲೂ ಬ್ರಾಹ್ಮಣರ ವಿರುದ್ಧ ಸುಖಾಸುಮ್ಮನೇ ದೂರು ನೀಡಲು ಅನುವು ಮಾಡಿಕೊಡುತ್ತದೆ ಎಂಬುದು ರಾಜೀನಾಮೆ ನೀಡಿದವರ ಆರೋಪ.

ಸಿಪಿಎಂ ಸೇರ್ಪಡೆ ಬಗ್ಗೆ ಮಾತು ಈಗ ಸೂಕ್ತವಲ್ಲ: ತರೂರ್‌ ಮಾರ್ಮಿಕ ನುಡಿ

ತಿರುವನಂತಪುರ: ತಾವು ಕಾಂಗ್ರೆಸ್‌ ತೊರೆದು ಸಿಪಿಎಂ ಸೇರುವ ಸಾಧ್ಯತೆ ಇದೆ. ಈ ಬಗ್ಗೆ ದುಬೈನಲ್ಲಿ ಸಿಪಿಎಂ ನಾಯಕರ ಜತೆ ಮಾತುಕತೆ ನಡೆದಿದೆ ಎಂಬ ವರದಿ ಕುರಿತು ಪ್ರತಿಕ್ರಿಯಿಸಲು ಕಾಂಗ್ರೆಸ್‌ ಸಂಸದ ಶಶಿ ತರೂರ್‌ ನಿರಾಕರಿಸಿದ್ದಾರೆ.ದುಬೈಗೆ ಲಿಟ್‌ ಫೆಸ್ಟ್‌ಗಾಗಿ ತೆರಳಿರುವ ತರೂರ್‌ ಅವರನ್ನು ಸೋಮವಾರ ಪತ್ರಕರ್ತರು ಸಿಪಿಎಂ ಸೇರ್ಪಡೆ ಕುರಿತು ಪ್ರಶ್ನಿಸಿದರು. ಈ ವೇಳೆ ‘ನಾನು ಸಿಪಿಎಂ ಸೇರ್ಪಡೆ ಕುರಿತ ವರದಿಗಳನ್ನು ನೋಡಿದ್ದೇನೆ. ಆದರೆ ವಿದೇಶದಲ್ಲಿ ನಿಂತು ಈ ವಿಚಾರಗಳ ಕುರಿತು ಮಾತನಾಡುವುದು ಸರಿಯಲ್ಲ’ ಎಂದರು.

ತರೂರ್‌ ಅವರು ಇತ್ತೀಚಿನ ದಿನಗಳಲ್ಲಿ ಪಕ್ಷದಿಂದ ಕಡೆಗಣನೆ ಮತ್ತು ರಾಹುಲ್‌ ಗಾಂಧಿ ಅವರ ನಾಯಕತ್ವದಲ್ಲಿ ಬೇಸರ ಹೊಂದಿದ್ದಾರೆ ಎನ್ನಲಾಗಿದೆ.

ಹಿಂದಿ ಹಲವು ಭಾಷೆಗಳನ್ನು ಕಬಳಿಸಿದೆ: ಉದಯನಿಧಿ ಕಿಡಿ

ಚೆನ್ನೈ: ತಮಿಳುನಾಡು ಉಪ ಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್‌ ಅವರು ‘ಹಿಂದಿ’ ವಿರುದ್ಧ ಮತ್ತೆ ಕಿಡಿಕಾರಿದ್ದು, ‘ಹಿಂದಿ ಹೇರಿಕೆಯು ಭಾರತದಲ್ಲಿ ಹಲವು ಮಾತೃಭಾಷೆಗಳನ್ನು ನುಂಗಿ ನೀರು ಕುಡಿದಿದೆ’ ಎಂದು ಆರೋಪಿಸಿದ್ದಾರೆ.

ಭಾಷಾ ಹುತಾತ್ಮರ ದಿನದ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 1960ರ ಹಿಂದಿ ವಿರೋಧಿ ಹೋರಾಟದಲ್ಲಿ ಜೀವತೆತ್ತವರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಅವರು, ತ್ರಿಭಾಷಾ ಸೂತ್ರಕ್ಕೆ ಡಿಎಂಕೆ ಸರ್ಕಾರ ವಿರುದ್ಧವಾಗಿದೆ ಎಂದು ಪುನರುಚ್ಚರಿಸಿದರು.‘ಉತ್ತರ ಭಾರತದಲ್ಲಿ ಹಿಂದಿಯ ಪರಿಚಯದಿಂದಾಗಿ ಹರಿಯಾಣವಿ, ಭೋಜ್‌ಪುರಿ, ಬಿಹಾರಿ ಮತ್ತು ಛತ್ತೀಸ್‌ಗಢಿಯಂಥ ಹಲವು ಸ್ಥಳೀಯ ಮಾತೃಭಾಷೆಗಳು ಕ್ರಮೇಣ ಕಣ್ಮರೆಯಾಗಿವೆ. ಯಾವ ರೀತಿ ಭಾಷಾ ಪ್ರಾಬಲ್ಯ ಪ್ರಾದೇಶಿಕ ಗುರುತು ಮತ್ತು ಸಂಸ್ಕೃತಿ ನಾಶ ಮಾಡುತ್ತದೆ ಎಂಬುದಕ್ಕೆ ಇದು ಸಾಕ್ಷಿ’ ಎಂದರು.

‘ಯಾವ್ಯಾವ ರಾಜ್ಯಗಳಿಗೆ ಹಿಂದಿ ಪ್ರವೇಶ ಆಗಿದೆಯೋ ಅಲ್ಲೆಲ್ಲಾ ಜನ ತಮ್ಮ ಮಾತೃಭಾಷೆ ಮರೆತಿದ್ದಾರೆ. ಇದೇ ಕಾರಣಕ್ಕೆ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌ ಅವರು ಹಿಂದಿ ಹೇರಿಕೆಗೆ ಇಂದಿಗೂ ವಿರೋಧ ಮಾಡುತ್ತಲೇ ಬಂದಿದ್ದಾರೆ’ ಎಂದರು.’ತ್ರಿಭಾಷಾ ಸೂತ್ರವು ಹಿಂದಿ ಹೇರಿಕೆ ತಂತ್ರವಾಗಿದೆ. ತ್ರಿಭಾಷಾ ಸೂತ್ರಕ್ಕೆ ವಿರೋಧಿಸುತ್ತಿರುವ ಸ್ಟಾಲಿನ್‌ ಅವರ ಉದ್ದೇಶ ಕೇವಲ ತಮಿಳು ಭಾಷೆ, ಸಂಸ್ಕೃತಿ ಹಾಗೂ ಗುರುತನ್ನು ರಕ್ಷಿಸುವುದೇ ಆಗಿದೆ’ ಎಂದರು.

‘ತಮಿಳುನಾಡು ಹಿಂದಿನಿಂದಲೂ ತಮಿಳು-ಇಂಗ್ಲಿಷ್‌ ಎಂಬ ದ್ವಿಭಾಷಾ ಸೂತ್ರಕ್ಕೆ ಬದ್ಧವಾಗಿದೆ. ಇದು ರಾಜ್ಯದ ಶಿಕ್ಷಣ, ಉದ್ಯಮ, ಆರೋಗ್ಯ ಮತ್ತು ಒಟ್ಟಾರೆ ಅಭಿವೃದ್ಧಿಗೆ ಉತ್ತೇಜನ ನೀಡಿದ ಪ್ರಮಾಣಿತ ಮಾದರಿಯಾಗಿದೆ’ ಎಂದು ಹೇಳಿದರು.

ಮಾಜಿ ರಾಜ್ಯಪಾಲ ಕೋಶಿಯಾರಿಗೆ ಪದ್ಮ: ಮಹಾರಾಷ್ಟ್ರದಲ್ಲಿ ಭಾರಿ ವಿರೋಧ

ಮುಂಬೈ: ಶಿವಾಜಿ ಮಹಾರಾಜರ ಬಗ್ಗೆ ವಿವಾದಿತ ಹೇಳಿಕೆ ನೀಡಿದ್ದ ಹಾಗೂ ಉದ್ಧವ ಠಾಕ್ರೆ ಸರ್ಕಾರ ಅಸ್ಥಿರಗೊಳಿಸಿದ್ದ ಆರೋಪ ಹೊತ್ತ ಮಾಜಿ ರಾಜ್ಯಪಾಲ ಭಗತ್‌ ಸಿಂಗ್‌ ಕೋಶಿಯಾರಿಗೆ ಪದ್ಮಭೂಷಣ ಪ್ರಶಸ್ತಿ ಘೋಷಣೆ ಆಗಿರುವುದಕ್ಕೆ ಮಹಾರಾಷ್ಟ್ರದಲ್ಲಿ ಭಾರಿ ವಿರೋಧ ವ್ಯಕ್ತವಾಗಿದೆ.ಕಾಂಗ್ರೆಸ್‌ ಹಾಗೂ ಶಿವಸೇನೆ ಯುಬಿಟಿ ನಾಯಕರು, ‘ಇದು ಮರಾಠಿಗರಿಗೆ ಮಾಡಿದ ಅವಮಾನ’ ಎಂದಿದ್ದಾರೆ.

ಶಿವಾಜಿ ಹಳೆಯ ಕಾಲದ ಕಣ್ಮಣಿ. ಈಗಲ್ಲ ಎಂದು ಕೋಶಿಯಾರಿ ಮಹಾರಾಷ್ಟ್ರ ರಾಜ್ಯಪಾಲ ಆಗಿದ್ದಾಗ ಹೇಳಿದ್ದರು. ಇದು ಮರಾಠಿಗರ ಕೆಂಗಣ್ಣಿಗೆ ಗುರಿಯಾಗಿತ್ತು. ಅಲ್ಲದೆ, ಠಾಕ್ರೆ ಸರ್ಕಾರಕ್ಕೆ ಅನೇಕ ತೊಂದರೆ ನೀಡಿದ ಆರೋಪ ಅವರ ಮೇಲಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಇಂಡೋ-ಯುಎಸ್‌ ಟ್ರೇಡ್‌ ಡೀಲ್‌ಗೆ ಭಾರತದ ಅಳಿಯನೇ ಅಡ್ಡಿ : ಆರೋಪ
ವಂದೇ ಮಾತರಂಗೂ ರಾಷ್ಟ್ರಗೀತೆ ರೀತಿ ಸ್ಥಾನಕ್ಕೆ ಚಿಂತನೆ