ರಾಬರ್ಟ್‌ ವಾದ್ರಾಗೆ ಬಿಗ್‌ ರಿಲೀಫ್‌, ಡಿಎಲ್‌ಎಫ್‌ ಲ್ಯಾಂಡ್‌ ಡೀಲ್‌ನ ದಾಖಲೆಗಳು ಪ್ರವಾಹದ ನೀರಿನಿಂದ ನಾಶ!

By Santosh Naik  |  First Published Jul 20, 2023, 12:57 PM IST

Land Deal Case: ಹರಿಯಾಣದ ಮನೋಹರ್‌ಲಾಲ್‌ ಖಟ್ಟರ್ ಸರ್ಕಾರವು ಗುರುಗ್ರಾಮ್‌ನ ಖೇರ್ಕಿ ದೌಲಾ ಪೊಲೀಸ್ ಠಾಣೆಯಲ್ಲಿ ಭೂಪಿಂದರ್ ಸಿಂಗ್ ಹೂಡಾ, ರಾಬರ್ಟ್ ವಾದ್ರಾ, ಡಿಎಲ್‌ಎಫ್, ಓಂಕಾರೇಶ್ವರ್ ಪ್ರಾಪರ್ಟೀಸ್ ಮತ್ತು ವಾದ್ರಾಸ್ ಸ್ಕೈ ಲೈಟ್ ಹಾಸ್ಪಿಟಾಲಿಟಿ ವಿರುದ್ಧ ಎಫ್‌ಐಆರ್ ದಾಖಲಿಸಿದೆ.


ಚಂಡೀಗಢ (ಜು.20): ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರ ಪತಿ ರಾಬರ್ಟ್ ವಾದ್ರಾ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ಗೆ ಸಂಬಂಧಿಸಿದ ತನಿಖೆಯಲ್ಲಿ ಎಸ್‌ಐಟಿ ಪೊಲೀಸರಿಗೆ ಅಚ್ಚರಿಯ ಮಾಹಿತಿ ಸಿಕ್ಕಿದೆ. ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಹರಿಯಾಣ ಪೊಲೀಸರ ವಿಶೇಷ ತನಿಖಾ ತಂಡಕ್ಕೆ (ಎಸ್‌ಐಟಿ) 2008 ಮತ್ತು 2012 ರ ರಾಬರ್ಟ್ ವಾದ್ರಾ ಅವರ ಕಂಪನಿಗಳ ಪ್ರಮುಖ ಹಣಕಾಸು ವಹಿವಾಟಿನ ದಾಖಲೆಗಳು ಶಾಖೆಯ ನೆಲಮಾಳಿಗೆಯಲ್ಲಿ ನೀರು ನಿಂತಿದ್ದರಿಂದ ನಾಶವಾಗಿವೆ ಎಂದು ತಿಳಿಸಿದೆ. ರಿಯಲ್ ಎಸ್ಟೇಟ್ ಡೀಲ್ ಆರೋಪದಲ್ಲಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ ಅಳಿಯ ವಾದ್ರಾ ಮತ್ತು ಹರಿಯಾಣದ ಮಾಜಿ ಸಿಎಂ ಭೂಪಿಂದರ್ ಸಿಂಗ್ ಹೂಡಾ ವಿರುದ್ಧ ದಾಖಲಾಗಿರುವ ಎಫ್‌ಐಆರ್ ಬಗ್ಗೆ ಎಸ್‌ಐಟಿ ತನಿಖೆ ನಡೆಸುತ್ತಿದೆ. 2014ರ ಸಂಸತ್ ಚುನಾವಣೆಯ ವೇಳೆ ಇದು ವಿವಾದವಾಗಿತ್ತು. ಇದೇ ವಿಷಯವನ್ನು ಬಿಜೆಪಿ, ಕಾಂಗ್ರೆಸ್‌ ವಿರುದ್ಧದ ಟೀಕೆಗೆ ಪ್ರಮುಖ ವಿಷಯವನ್ನಾಗಿಸಿಕೊಂಡಿತ್ತು.

ಮಾಹಿತಿಯ ಪ್ರಕಾರ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಗುರುಗ್ರಾಮ್‌ನ ನ್ಯೂ ಫ್ರೆಂಡ್ಸ್ ಕಾಲೋನಿ ಶಾಖೆಯಿಂದ ವಾದ್ರಾ ಅವರ ಕಂಪನಿಯ ಖಾತೆಯಲ್ಲಿನ ಹಣದ ಒಳಹರಿವಿನ (ಹಣಕಾಸಿನ ವಹಿವಾಟು) ಬಗ್ಗೆ ಮಾಹಿತಿಯನ್ನು ಎಸ್‌ಐಟಿ ಕೇಳಿತ್ತು. ಆದರೆ, ಕಳೆದ ಮೇ 26 ರಂದು ಬ್ಯಾಂಕ್‌ ಶಾಖೆಯ ನೆಲಮಾಳಿಗೆಯಲ್ಲಿ ನೀರು ನಿಂತಿದ್ದರಿಂದ 2008 ಮತ್ತು 2012 ರ ಮೇಲಿನ ಎಲ್ಲಾ ದಾಖಲೆಗಳು ನಾಶವಾಗಿವೆ ಎಂದು ಬ್ಯಾಂಕ್‌ ಎಸ್‌ಐಟಿಗೆ ತಿಳಿಸಿದೆ. ಆ ಬಳಿಕ ಬ್ಯಾಂಕ್‌ಗೆ ನೋಟಿಸ್‌ ಕಳಿಸಿರುವ ಎಸ್‌ಐಟಿ ಕೇವಲ ರಾಬರ್ಟ್‌ ವಾದ್ರಾಗೆ ಸಂಬಂಧಪಟ್ಟ ಕಂಪನಿಯ ದಾಖಲೆಗಳು ನಾಶವಾಗಿದೆಯೇ ಅಥವಾ ಇತರ ಸಂಸ್ಥೆಗಳ ದಾಖಲೆಗಳು ಕೂಡ ನಾಶವಾಗಿದೆಯೇ ಎಂದು ಪ್ರಶ್ನೆ ಮಾಡಿದೆ. ಸ್ಕೈಲೈಟ್ ಹಾಸ್ಪಿಟಾಲಿಟಿ ಮತ್ತು ಸ್ಕೈಲೈಟ್ ರಿಯಾಲ್ಟಿಗೆ ಸಂಬಂಧಿಸಿದ ಸಂಬಂಧಿತ ದಾಖಲೆಗಳ ನಾಶದ ಸುತ್ತಲಿನ ಸಂದರ್ಭಗಳನ್ನು ತನಿಖೆ ಮಾಡಲು ಜೂನ್ 20 ರಂದು ನವದೆಹಲಿಯಲ್ಲಿರುವ ಬ್ಯಾಂಕಿನ ನ್ಯೂ ಫ್ರೆಂಡ್ಸ್ ಕಾಲೋನಿ ಶಾಖೆಗೆ ನೋಟಿಸ್ ಕಳುಹಿಸಲಾಗಿದೆ.

ಈ ವಿಷಯದಲ್ಲಿ ಬ್ಯಾಂಕ್‌ನ ಪ್ರತಿಕ್ರಿಯೆಯನ್ನು ನಿರೀಕ್ಷಿಸಲಾಗುತ್ತಿದೆ. 2018ರ ಸೆಪ್ಟೆಂಬರ್ 1 ರಂದು ಹರಿಯಾಣದ ಬಿಜೆಪಿ ನೇತೃತ್ವದ ಸರ್ಕಾರವು ಹೂಡಾ, ವಾದ್ರಾ, ರಿಯಲ್ ಎಸ್ಟೇಟ್ ದೈತ್ಯರಾದ ಡಿಎಲ್‌ಎಫ್, ಓಂಕಾರೇಶ್ವರ್ ಪ್ರಾಪರ್ಟೀಸ್ ಮತ್ತು ಸ್ಕೈಲೈಟ್ ಹಾಸ್ಪಿಟಾಲಿಟಿಯನ್ನು ಭೂ ವ್ಯವಹಾರದಲ್ಲಿ ಅಕ್ರಮದಲ್ಲಿ ಹೆಸರಿಸಿ ಎಫ್‌ಐಆರ್ ದಾಖಲಿಸಿತ್ತು. ಅದರ ಬಳಿಕ ಈ ವಿಷಯದ ತನಿಖೆ ಪ್ರಾರಂಭವಾಗಿತ್ತು. ಒಪ್ಪಂದಕ್ಕೆ ಸಂಬಂಧಿಸಿದ ಆರೋಪಗಳ ಕುರಿತು ಎಸ್‌ಐಟಿ ತನಿಖೆ ನಡೆಸುತ್ತಿದೆ. ಐಎಎಸ್ ಅಧಿಕಾರಿ ಮುಕುಲ್ ಕುಮಾರ್, ಮಾಜಿ ಮುಖ್ಯ ನಗರಾಧಿಕಾರಿ ಮತ್ತು ರೇರಾ ಪಂಚಕುಲ ಸದಸ್ಯ ದಿಲ್ಬಾಗ್ ಸಿಂಗ್ ಮತ್ತು ಕಾನೂನು ಸಲಹೆಗಾರರು ಇತ್ತೀಚೆಗೆ ಈ ಪ್ರಕರಣದಲ್ಲಿ ಎಸ್‌ಐಟಿಗೆ ಸೇರ್ಪಡೆಗೊಂಡಿರುವುದು ಸಿಎಂ ಮನೋಹರ್ ಲಾಲ್ ಖಟ್ಟರ್ ಸರ್ಕಾರವು ಪ್ರಕರಣವನ್ನು ಎಷ್ಟು ಗಂಭೀರವಾಗಿ ಪರಿಗಣಿಸಿದೆ ಎನ್ನುವುದಕ್ಕೆ ಸಾಕ್ಷಿ ಎನ್ನುವ ರೀತಿ ಇದೆ.

ಹರ್ಯಾಣಿ ಸಾಂಗ್‌ಗೆ ಡಾನ್ಸ್‌ ಮಾಡಿದ ಸೋನಿಯಾ ಗಾಂಧಿ, ವಿಡಿಯೋ ವೈರಲ್‌!

ಏನಿದು ಪ್ರಕರಣ:  ವಾದ್ರಾ ಅವರ ಸ್ಕೈಲೈಟ್ ಹಾಸ್ಪಿಟಾಲಿಟಿಯು 2008ರ ಫೆಬ್ರವರಿಯಲ್ಲಿ ಓಂಕಾರೇಶ್ವರ ಪ್ರಾಪರ್ಟೀಸ್‌ನಿಂದ ಗುರುಗ್ರಾಮ್‌ನ ಶಿಕೋಹ್‌ಪುರದಲ್ಲಿ 3.5 ಎಕರೆ ಭೂಮಿಯನ್ನು ಕೇವಲ 7.5 ಕೋಟಿ ರೂಪಾಯಿಗೆ ಖರೀದಿಸಿತ್ತು ಎಂಬುದು ಪ್ರಕರಣದ ಪ್ರಮುಖ ಆರೋಪಗಳಲ್ಲಿ ಒಂದಾಗಿದೆ. ಆ ಬಳಿಕ ಈ ಭೂಮಿಗೆ ವಾಣಿಜ್ಯ ಪರವಾನಗಿಯನ್ನು ಪಡೆದ ನಂತರ, ಕಂಪನಿಯು ಅದೇ ಆಸ್ತಿಯನ್ನು ಡಿಎಲ್‌ಎಫ್‌ಗೆ 58 ಕೋಟಿ ರೂ.ಗೆ ಮಾರಾಟ ಮಾಡಿದೆ ಎಂದು ವರದಿಯಾಗಿದೆ. ಭೂ ವ್ಯವಹಾರದ ಬದಲಾಗಿ ಹೂಡಾ ಸರ್ಕಾರವು ಗುಡಗಾಂವ್‌ನ ವಜೀರಾಬಾದ್‌ನಲ್ಲಿ 350 ಎಕರೆ ಭೂಮಿಯನ್ನು ಡಿಎಲ್‌ಎಫ್‌ಗೆ ಮಂಜೂರು ಮಾಡಿದೆ ಎಂದು ಆರೋಪಿಸಲಾಗಿದೆ. ವಿಷಯವೇನೆಂದರೆ, ಸ್ಕೈಲೈಟ್ ಹಾಸ್ಪಿಟಾಲಿಟಿಯು 18 ಸೆಪ್ಟೆಂಬರ್ 2012 ರಂದು DLF ಯುನಿವರ್ಸಲ್ ಲಿಮಿಟೆಡ್‌ಗೆ 3.5 ಎಕರೆ ಭೂಮಿಯನ್ನು ಮಾರಾಟ ಮಾಡಿದೆ ಮತ್ತು ವಹಿವಾಟಿನ ಸಮಯದಲ್ಲಿ ಯಾವುದೇ ನಿಯಮಗಳು ಅಥವಾ ನಿಬಂಧನೆಗಳನ್ನು ಉಲ್ಲಂಘಿಸಿಲ್ಲ ಎಂದು ಮನೇಸರ್‌ನ ತಹಸೀಲ್ದಾರ್ ತಿಳಿಸಿದ್ದರು.

Tap to resize

Latest Videos

ಗೌತಮ್‌ ಅದಾನಿ ಜೊತೆಗೆ ರಾಬರ್ಟ್‌ ವಾದ್ರಾ ಸಂಬಂಧವೇನು? ಕಾಂಗ್ರೆಸ್‌ಗೆ ಪ್ರಶ್ನಿಸಿದ ಸ್ಮೃತಿ ಇರಾನಿ

click me!